ಪದ್ಯ ೪೪: ವಿದ್ವಾಂಸರ ಮಹತ್ವವೇನು?

ತನ್ನ ಮನೆಯೊಳು ಮೂರ್ಖನತಿ ಸಂ
ಪನ್ನ ಪೂಜ್ಯನು ಭೂಮಿಪಾಲನು
ತನ್ನ ದೇಶದೊಳಧಿಕನೈ ಗ್ರಾಮದೊಳು ಧನಿ ಪೂಜ್ಯ
ಭಿನ್ನವಿಲ್ಲದೆ ಹೋದ ಠಾವಿನೊ
ಳನ್ಯರೆನಿಸದೆ ವಿಶ್ವದೊಳು ಸಂ
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಮೂರ್ಖನಾಗಿದ್ದರೂ ಮನೆಯಲ್ಲಿ ಪೂಜಿಸಲ್ಪಡುತ್ತಾನೆ, ರಾಜನು ತನ್ನ ದೇಶದಲ್ಲಿ ಪ್ರಮುಖ, ಗ್ರಾಮದಲ್ಲಿ ಹಣವಂತನೇ ಶ್ರೇಷ್ಠ, ಆದರೆ ವಿದ್ವಾಂಸನು ವಿಶ್ವದಲ್ಲಿ ಎಲ್ಲಿ ಹೋದರೂ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ವಿದ್ವಾಂಸರ ಮಹತ್ವವನ್ನು ಸನತ್ಸುಜಾತರು ತಿಳಿಸಿದರು.

ಅರ್ಥ:
ತನ್ನ: ಅವನ; ಮನೆ: ಆಲಯ, ಗೃಹ; ಮೂರ್ಖ: ಮೂಢ; ಸಂಪನ್ನ: ಶ್ರೇಷ್ಠವಾದ, ಅರ್ಹವಾದ; ಪೂಜ್ಯ: ಗೌರವಾನ್ವಿತ; ಭೂಮಿ: ಇಳೆ; ಭೂಮಿಪಾಲನು: ರಾಜ; ದೇಶ: ರಾಷ್ಟ್ರ; ಅಧಿಕ: ಹೆಚ್ಚು; ಗ್ರಾಮ: ಹಳ್ಳಿ, ಊರು; ಧನಿ: ಧನಿಕ, ಸಾಹುಕಾರ; ಭಿನ್ನ: ಚೂರು, ತುಂಡು, ವ್ಯತ್ಯಾಸ, ಭೇದ; ಠಾವು: ಎಡೆ, ಸ್ಥಳ, ತಾಣ; ಅನ್ಯರು: ಬೇರೆ; ವಿಶ್ವ: ಜಗತ್ತು; ಪಾತ್ರರು: ಭಾಗಿಯಾಗಿರುವಿಕೆ, ಸಕ್ರಿಯವಾಗಿರುವಿಕೆ; ವಿದ್ವಾಂಸ: ಕೋವಿದ;

ಪದವಿಂಗಡಣೆ:
ತನ್ನ +ಮನೆಯೊಳು +ಮೂರ್ಖನ್+ಅತಿ +ಸಂ
ಪನ್ನ +ಪೂಜ್ಯನು +ಭೂಮಿಪಾಲನು
ತನ್ನ +ದೇಶದೊಳ್+ಅಧಿಕನೈ +ಗ್ರಾಮದೊಳು +ಧನಿ +ಪೂಜ್ಯ
ಭಿನ್ನವಿಲ್ಲದೆ +ಹೋದ +ಠಾವಿನೊಳ್
ಅನ್ಯರ್+ಎನಿಸದೆ+ ವಿಶ್ವದೊಳು +ಸಂ
ಪನ್ನ +ಪೂಜಾಪಾತ್ರರೈ +ವಿದ್ವಾಂಸರುಗಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತನ್ನ ಮನೆಯೊಳು ಮೂರ್ಖನತಿ ಸಂಪನ್ನ ಪೂಜ್ಯನು; ಭೂಮಿಪಾಲನು ತನ್ನ ದೇಶದೊಳಧಿಕನೈ; ಗ್ರಾಮದೊಳು ಧನಿ ಪೂಜ್ಯ;
(೨) ತನ್ನ, ಸಂಪನ್ನ, ಭಿನ್ನ – ಪ್ರಾಸ ಪದ
(೩) ಸಂಪನ್ನ – ೧, ೫ ಸಾಲಿನ ಕೊನೆಯ ಪದ

ಪದ್ಯ ೪೩: ಗುರುಕೃಪೆಯ ಮಹತ್ವವೇನು?

ಗರುಡ ಪಂಚಾಕ್ಷರಿಯೊಳಲ್ಲದೆ
ಗರಳಭಯವಡಗುವುದೆ ವಿಷ್ಣು
ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ
ಹಿರಿದು ಸಂಸಾರಾಂಬುಧಿಯನು
ತ್ತರಿಸುವೊಡೆ ಗುರುಮುಖದೊಳಲ್ಲದೆ
ನಿರತಿಶಯವಿನ್ನಾವುದೈ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ವಿಷದ ಭಯವು ಗರುಡ ಪಂಚಾಕ್ಷರೀ ಮಂತ್ರದ ಸಿದ್ಧಿಯಿಂದಲ್ಲದೆ ಅಡಗಲು ಸಾಧ್ಯವೇ? ಮಹಾಪಾಪಗಳು ವಿಷ್ಣುವಿನ ನಾಮಸ್ಮರಣೆಯಿಂದಲ್ಲದೆ ಬೇರೆಯ ರೀತಿಯಿಂದ ನಾಶವಾಗುವುದೇ? ಸಂಸಾರ ಸಮುದ್ರವನ್ನು ದಾಟಲು ಗುರುಕೃಪೆಗಿಂತ ಹೆಚ್ಚಿನದು ಇನ್ನಾವುದಿದೆ ಎಂದು ಸನತ್ಸುಜಾತರು ಧೃತರಾಷ್ಟ್ರನನ್ನು ಪ್ರಶ್ನಿಸಿದರು.

ಅರ್ಥ:
ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ, ವಿಷ್ಣುವಿನ ವಾಹನ; ಪಂಚಾಕ್ಷರಿ: “ಕೃಷ್ಣಾಯ ನಮಃ, ಶಿವಾಯ ನಮ:”, ಎಂಬ ಐದಕ್ಷರಗಳ ಮಂತ್ರ; ಗರಳ:ವಿಷ; ಅಭಯ: ಭಯವಿಲ್ಲದ; ಅಡಗು: ಅವಿತುಕೊಳ್ಳು; ಸ್ಮರಣೆ: ನೆನಪು; ಮಹಾ: ದೊಡ್ಡ; ಪಾತಕ: ಪಾಪ; ಕಡೆ: ಕೊನೆ; ಹಿರಿದು:ದೊಡ್ಡ; ಸಂಸಾರ: ಹುಟ್ಟು, ಜನ್ಮ, ಲೌಕಿಕ ಜೀವನ; ಅಂಬುಧಿ: ಸಾಗರ; ಉತ್ತರಿಸು: ದಾಟಿಸು, ದೂರಮಾಡು; ಗುರು: ಆಚಾರ್ಯ; ನಿರತಿಶಯ: ಅತಿಶಯವಲ್ಲದ, ಸಾಟಿಯಿಲ್ಲದ; ಹೇಳು: ತಿಳಿಸು;

ಪದವಿಂಗಡಣೆ:
ಗರುಡ +ಪಂಚಾಕ್ಷರಿಯೊಳ್+ಅಲ್ಲದೆ
ಗರಳ+ಭಯವಡಗುವುದೆ+ ವಿಷ್ಣು
ಸ್ಮರಣೆಯಿಂದಲ್ಲದೆ +ಮಹಾಪಾತಕಕೆ +ಕಡೆಯಹುದೆ
ಹಿರಿದು +ಸಂಸಾರ+ಅಂಬುಧಿಯನ್
ಉತ್ತರಿಸುವೊಡೆ +ಗುರುಮುಖದೊಳ್+ಅಲ್ಲದೆ
ನಿರತಿಶಯ+ವಿನ್ನಾವುದೈ +ಹೇಳೆಂದನಾ+ ಮುನಿಪ

ಅಚ್ಚರಿ:
(೧) ಉಪಮಾನತಗಳ ಪ್ರಯೋಗ – ಗರುಡ ಪಂಚಾಕ್ಷರಿಯೊಳಲ್ಲದೆ ಗರಳಭಯವಡಗುವುದೆ; ವಿಷ್ಣು ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ;

ಪದ್ಯ ೪೨: ದೇಹದ ಮಹತ್ವವೇನು?

ದೇಹವಿಡಿದಿಹ ಧರ್ಮವದು ನಿ
ರ್ದೇಹದಲಿ ದೊರಕುವುದೆ ಮಾನವ
ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ
ಐಹಿಕಾಮುಷ್ಮಿಕದ ಗತಿ ಸಂ
ಮೋಹಿಸುವುದು ಶರೀರದಲಿ ಸಂ
ದೇಹವೇ ಧೃತರಾಷ್ಟ್ರ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಮನುಷ್ಯ ದೇಹವು ಎಷ್ಟು ಅಮೂಲ್ಯವೆಂದು ತಿಳಿಸುವ ಪದ್ಯ. ಮನುಷ್ಯ ದೇಹವನ್ನು ಆಶ್ರಯಿಸಿ ಧರ್ಮವನ್ನು ಆಚರಿಸಬೇಕು. ದೇಹವು ಬಿದ್ದಮೇಲೆ ಯಾವ ಧರ್ಮವನ್ನು ತಾನೆ ಆತ ಮಾಡಲು ಸಾಧ್ಯ. ಆದ್ದರಿಂದ ಮನುಷ್ಯ ದೇಹವೇ ಪುರುಷಾರ್ಥಗಳನ್ನು ಸಾಧಿಸಲು ಸಾಧನ. ದೇಹದಿಂದಲೇ ಇಹಪರಲೋಕಗಳ ಗತಿಯು ಸಾಧ್ಯ. ಇದಕ್ಕೆ ಅನುಮಾನವಿಲ್ಲ ರಾಜ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ದೇಹ: ತನು, ಕಾಯ, ಶರೀರ; ಹಿಡಿ: ಬಂಧನ; ಧರ್ಮ: ಧಾರಣೆ ಮಾಡುವುದು, ನಿಯಮ, ಆಚಾರ; ನಿರ್ದೇಹ: ದೇಹ ವಿಲ್ಲದ; ದೊರಕು: ಪಡೆ; ಮಾನವ: ಮನುಷ್ಯ; ಸಾಧನ: ಗುರಿಮುಟ್ಟುವ ಪ್ರಯತ್ನ; ಸಕಲ: ಎಲ್ಲಾ; ಪುರುಷಾರ್ಥ: ಮನುಷ್ಯನು ಸಾಧಿಸಬೇಕಾದ ಧರ್ಮ; ಐಹಿಕ: ಇಹಲೋಕ; ಆಮುಷ್ಮಿಕ: ಪರಲೋಕ; ಗತಿ: ಗಮನ, ಸಂಚಾರ; ಸಂಮೋಹಿಸು: ಅತಿಶಯವಾದ ಮೋಹವನ್ನು ಹೊಂದು; ಸಂದೇಹ: ಸಂಶಯ, ಅನುಮಾನ; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ;

ಪದವಿಂಗಡಣೆ:
ದೇಹವ್ +ಇಡಿದಿಹ +ಧರ್ಮವದು +ನಿ
ರ್ದೇಹದಲಿ +ದೊರಕುವುದೆ +ಮಾನವ
ದೇಹವೇ +ಸಾಧನ +ಸಕಲ +ಪುರುಷಾರ್ಥಶೀಲರಿಗೆ
ಐಹಿಕ+ಆಮುಷ್ಮಿಕದ+ ಗತಿ +ಸಂ
ಮೋಹಿಸುವುದು +ಶರೀರದಲಿ+ ಸಂ
ದೇಹವೇ +ಧೃತರಾಷ್ಟ್ರ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಐಹಿಕ, ಆಮುಷ್ಮಿಕ; ದೇಹ, ನಿರ್ದೇಹ; – ಜೋಡಿ ಪದಗಳು (ವಿರುದ್ಧ ಪದವೂ ಕೂಡ)
(೨) ದೇಹ – ೧ – ೩ ಸಾಲಿನ ಮೊದಲ ಪದ;
(೩) ದೇಹ, ಸಂದೇಹ – ಪದಗಳ ಬಳಕೆ
(೪) ಧ್ಯೇಯ ವಾಕ್ಯದ ರಚನೆ – ಮಾನವ ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ

ಪದ್ಯ ೪೧: ಭೂಮಿಯಲ್ಲೇ ನರಕದ ಕಲ್ಪನೆ ಯಾವಾಗವಾಗುತ್ತದೆ?

ಪಾತಕನು ಪತಿತನು ಕೃತಘ್ನನು
ಘಾತುಕನು ದುರ್ಮತಿ ದುರಾತ್ಮನು
ಭೀತಕನು ದೂಷಕನು ದುರ್ಜನನ ಪ್ರಯೋಜಕನು
ನೀತಿಹೀನನು ಜಾತಿಧರ್ಮಸ
ಮೇತ ದೈವದ್ರೋಹಿಯೆನಲದು
ಭೂತಳದೊಳೇ ನರಕ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ನರಕದ ಪರಿಕಲ್ಪನೆಯನ್ನು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು. ಯಾರು ಭೂಮಿಯಲ್ಲಿ ನಿಂದಿಸುತ್ತಾ, ಇವನು ಪಾಪಿ, ಈತ ನೀಚ, ತನ್ನ ಕರ್ಮಗಳಿಂದ ಕೆಳಗೆಬಿದ್ದವ, ಈತ ತನಗೆ ಮಾಡಿದ ಉಪಕಾರವನ್ನು ಮರೆತವ, ಈತನು ಪರರನ್ನು ಮರ್ದಿಸುವವನು, ದುರ್ಬುದ್ಧಿಯುಳ್ಳವ, ಈತ ಕೆಟ್ಟ ಮನಸ್ಸುಳ್ಳವನು, ದುರಾತ್ಮ, ಈತ ಭೀತಿಯನ್ನು ಹುಟ್ಟಿಸುವವನು, ನಿಂದಕ, ದುಷ್ಟ, ಅಪ್ರಯೋಜಕ, ನೀತಿಗೆಟ್ಟವನು, ಜಾತಿ, ಧರ್ಮ ದೈವಗಳಿಗೆ ದ್ರೋಹ ಬಗೆಯುವವನು ಎಂದು ಜನರು ಯಾರನ್ನಾದರೂ ನಿಂದಿಸಿದರೆ ಅದು ಭೂಮಿಯಲ್ಲಿ ನರಕವನ್ನು ಸೃಷ್ಟಿಸಿದಂತೆ ಎಂದು ಮುನಿಗಳು ಉಪದೇಶಿಸಿದರು.

ಅರ್ಥ:
ಪಾತಕ: ಪಾಪಿ, ದೋಷ; ಪತಿತ:ನೀಚ, ದುಷ್ಟ; ಕೃತಘ್ನ:ಉಪಕಾರವನ್ನು ಮರೆಯುವವನು; ಘಾತುಕ: ನೀಚ, ಕೊಲೆಗೆಡುಕ; ದುರ್ಮತಿ: ಕೆಟ್ಟಬುದ್ಧಿಯುಳ್ಳವ; ದುರಾತ್ಮ: ಕೆಟ್ಟ ಮನಸ್ಸುಳ್ಳವನು, ದುಷ್ಟ; ಭೀತಕ: ಭಯ, ಹೆದರಿಕೆಯನ್ನು ಮೂಡಿಸುವವ; ದೂಷಕ: ನಿಂದಕ; ದುರ್ಜನ: ಕೆಟ್ಟ ಜನ, ದುಷ್ಟ; ಪ್ರಯೋಜಕ: ಉಪಯೋಗ; ನೀತಿ: ಒಳ್ಳೆಯ ನಡತೆ; ನೀತಿಹೀನನು: ಕೆಟ್ಟನಡತೆಯುಳ್ಳವನು; ಜಾತಿ: ಕುಲ; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಸಮೇತ: ಜೊತೆ; ದೈವ: ದೇವರು; ದ್ರೋಹಿ:ಕೇಡನ್ನು ಬಗೆಯುವವನು, ವಂಚಕ; ಭೂತಳ: ಭೂಮಿ; ನರಕ: ಅಧೋಲೋಕ; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ;

ಪದವಿಂಗಡಣೆ:
ಪಾತಕನು +ಪತಿತನು +ಕೃತಘ್ನನು
ಘಾತುಕನು +ದುರ್ಮತಿ +ದುರಾತ್ಮನು
ಭೀತಕನು +ದೂಷಕನು +ದುರ್ಜನನ್+ಅಪ್ರಯೋಜಕನು
ನೀತಿಹೀನನು +ಜಾತಿ+ಧರ್ಮ+ಸ
ಮೇತ +ದೈವ+ದ್ರೋಹಿಯೆನಲ್+ಅದು
ಭೂತಳದೊಳೇ +ನರಕ+ ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಪಾತಕ, ಪತಿತ – ‘ಪ’ಕಾರದ ಜೋಡಿ ಪದಗಳು
(೨) ‘ದು’ಕಾರದ ಪದಗಳ ಬಳಕೆ – ದುರ್ಮತಿ, ದುರಾತ್ಮ, ದೂಷಕ, ದುರ್ಜನ, ದ್ರೋಹಿ