ಪದ್ಯ ೪೦: ಸ್ವರ್ಗದ ಪರಿಕಲ್ಪನೆ ಏನು?

ಸುಲಭನತಿ ಸಾಹಿತ್ಯ ಮಂಗಳ
ನಿಲಯನಗಣಿತ ಮಹಿಮನನ್ವಯ
ತಿಲಕನನುಪಮಚರಿತ ದೈವಾಪರನು ಪುಣ್ಯನಿಧಿ
ಕುಲಯುತನು ಕೋವಿದನು ಕರುಣಾ
ಜಲಧಿ ಕೌತುಕ ಯುಕ್ತಿವಿದನೆಂ
ದಿಳೆಹೊಗಳುತಿರಲದುವೆ ಕೇಳೈ ಸ್ವರ್ಗ ತಾನೆಂದ (ಉದ್ಯೋಗ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಯಾರನ್ನು ಈ ಭೂಮಿಯಲ್ಲಿ ಇವನು ಸುಲಭ, ಸಹಿತ್ಯಾಸಕ್ತನು, ಮಂಗಳ ಕಾರ್ಯ ನಿರತ, ಅಪಾರಮಹಿಮನು, ವಂಶಕ್ಕೆ ತಿಲಕದಂತಿರುವವನು; ಇವನ ನಡೆ ನುಡಿಗಳಿಗೆ ಯಾವ ಹೋಲಿಕೆಯೂ ಇಲ್ಲ; ದೈವ ನಿಷ್ಠನು, ಪುಣ್ಯಕಾರ್ಯಗಳ ಸಾಗರ, ಸತ್ಕುಲವಂತನು, ವಿದ್ಯಾವಂತನು, ಕರುಣಾಸಾಗರನು, ಆಶ್ಚರ್ಯಕರವಾದ ಯುಕ್ತಿಯುಳ್ಳವನು ಎಂದು ಜಗತ್ತು ಹೊಗಳುತ್ತಿದ್ದರೆ ಅದೇ ಸ್ವರ್ಗ.

ಅರ್ಥ:
ಸುಲಭ: ಷ್ಟವಲ್ಲದುದು, ಸಲೀಸು; ಸಾಹಿತ್ಯ: ಕಾವ್ಯ, ನಾಟಕ ಮುಂತಾದ ಸೃಜನಾತ್ಮಕ ಬರವಣಿಗೆ; ಮಂಗಳ: ಶುಭ; ನಿಲಯ: ಆವಾಸ, ಸ್ಥಾನ; ಅಗಣಿತ: ಎಣಿಕೆಗೆ ಸಿಲುಕದ; ಮಹಿಮ: ಹಿರಿಮೆ ಯುಳ್ಳವನು; ಅನ್ವಯ:ವಂಶ; ತಿಲಕ: ಶ್ರೇಷ್ಠ; ಅನುಪಮ: ಉತ್ಕೃಷ್ಟವಾದುದು; ಚರಿತ: ಇತಿಹಾಸ; ದೈವಾಪರ: ದೇವರ ಬಗ್ಗೆ ನಿಷ್ಠೆಯುಳ್ಳವನು; ಪುಣ್ಯ: ಸದಾಚಾರ, ಸದ್ವರ್ತನೆ; ನಿಧಿ: ಸಂಪತ್ತು, ಹುದುಗಿಟ್ಟ ಧನ; ಕುಲ:ವಂಶ; ಕೋವಿದ: ವಿದ್ವಾಂಸ; ಕರುಣ: ದಯೆ; ಜಲಧಿ: ಸಾಗರ; ಕೌತುಕ: ಆಶ್ಚರ್ಯಕರವಾದ ಸಂಗತಿ; ಯುಕ್ತಿ: ಬುದ್ಧಿ; ಇಳೆ: ಭೂಮಿ; ಹೊಗಳು: ಪ್ರಶಂಶಿಸು; ಸ್ವರ್ಗ: ನಾಕ;

ಪದವಿಂಗಡಣೆ:
ಸುಲಭನ್+ಅತಿ +ಸಾಹಿತ್ಯ+ ಮಂಗಳ
ನಿಲಯನ್+ಅಗಣಿತ+ ಮಹಿಮನ್+ಅನ್ವಯ
ತಿಲಕನ್+ಅನುಪಮಚರಿತ+ ದೈವಾಪರನು+ ಪುಣ್ಯನಿಧಿ
ಕುಲಯುತನು +ಕೋವಿದನು +ಕರುಣಾ
ಜಲಧಿ +ಕೌತುಕ+ ಯುಕ್ತಿವಿದನ್+ಎಂದ್
ಇಳೆ+ಹೊಗಳುತಿರಲ್+ಅದುವೆ +ಕೇಳೈ +ಸ್ವರ್ಗ +ತಾನೆಂದ

ಅಚ್ಚರಿ:
(೧) ಜಲಧಿ, ನಿಧಿ – ಪ್ರಾಸ ಪದ
(೨) ‘ಕ’ಕಾರದ ನಾಲ್ಕು ಪದಗಳು – ಕುಲಯುತನು, ಕೋವಿದನು, ಕರುಣಾಜಲಧಿ, ಕೌತುಕ

ಪದ್ಯ ೩೯: ಧೃತರಾಷ್ಟ್ರನು ಯಾವ ಪ್ರಶ್ನೆಯನ್ನು ಕೇಳಿದನು?

ಸ್ವರ್ಗವಾವುದು ನರಕವಾವುದು
ವಿಗ್ರಹದೊಳಹ ಸಿದ್ಧಿಯಾವುದ
ನುಗ್ರಹದೊಳೇನಹುದು ಪಾತ್ರಾಪಾತ್ರವೆಂದೇನು
ಉಗ್ರವಾವುದು ದೈವದೊಳಗೆ ಸ
ಮಗ್ರವಾವುದು ಧರ್ಮದೊಳಗ
ವ್ಯಗ್ರದಿಂದುಪದೇಶಿಸಲು ಬೇಕೆಂದನಾ ಭೂಪ (ಉದ್ಯೋಗ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸ್ವರ್ಗವಾವುದು? ನರಕವಾವುದು? ಈ ದೇಹದಿಂದಾಗುವ ಸಿದ್ಧಿಯಾವುದು? ಅನುಗ್ರಹದಿಂದೇನಾಗುತ್ತದೆ? ಪಾತ್ರ ಅಪಾತ್ರಗಳಾವುವು? ದೈವದಲ್ಲಿ ಉಗ್ರವಾವುದು? ಧರ್ಮದಲ್ಲಿ ಸಮಗ್ರವಾವುದು? ಇವೆಲ್ಲವನ್ನು ನೀವು ಸಂತೋಷದಿಂದ ಉಪದೇಶಿಸಬೇಕೆಂದು ಧೃತರಾಷ್ಟ್ರನು ಸನತ್ಸುಜಾತರಲ್ಲಿ ಬಿನ್ನವಿಸಿದನು.

ಅರ್ಥ:
ಸ್ವರ್ಗ: ನಾಕ, ದೇವಲೋಕ; ನರಕ: ಅಧೋಲೋಕ; ವಿಗ್ರಹ: ದೇಹ; ಸಿದ್ಧಿ:ಸಾಧನೆ; ಅನುಗ್ರಹ: ಕೃಪೆ, ದಯೆ; ಪಾತ್ರ: ಪಾತರದವ, ನಟನೆಯವ, ಯೋಗ್ಯತೆ; ಅಪಾತ್ರ: ಅಯೋಗ್ಯ; ಉಗ್ರ: ಪ್ರಚಂಡತೆ, ಕೋಪಿಷ್ಠ; ದೈವ: ದೇವತೆ; ಸಮಗ್ರ: ಸಂಪೂರ್ಣವಾದುದು; ಧರ್ಮ: ಧಾರಣೆ ಮಾಡುವುದು, ನಿಯಮ, ಆಚಾರ; ಅವ್ಯಗ್ರ: ಶಾಂತ; ಉಪದೇಶ: ಬೋಧಿಸುವುದು; ಭೂಪ: ರಾಜ;

ಪದವಿಂಗಡಣೆ:
ಸ್ವರ್ಗವಾವುದು +ನರಕವಾವುದು
ವಿಗ್ರಹದೊಳಹ+ ಸಿದ್ಧಿಯಾವುದ್
ಅನುಗ್ರಹದೊಳ್+ಏನಹುದು +ಪಾತ್ರ+ಅಪಾತ್ರವೆಂದೇನು
ಉಗ್ರವಾವುದು +ದೈವದೊಳಗೆ +ಸ
ಮಗ್ರವಾವುದು +ಧರ್ಮದೊಳಗ್
ಅವ್ಯಗ್ರದಿಂದ್+ಉಪದೇಶಿಸಲು+ ಬೇಕೆಂದನಾ +ಭೂಪ

ಅಚ್ಚರಿ:
(೧) ಸ್ವರ್ಗ, ನರಕ; ಪಾತ್ರ, ಅಪಾತ್ರ; ಉಗ್ರ, ಅವ್ಯಗ್ರ – ವಿರುದ್ಧ ಪದ
(೨) ಉಗ್ರ, ಸಮಗ್ರ, ಅವ್ಯಗ್ರ; ವಿಗ್ರಹ, ಅನುಗ್ರಹ – ಪ್ರಾಸ ಪದಗಳು

ಪದ್ಯ ೩೮: ಧೃತರಾಷ್ಟ್ರನು ಸನತ್ಸುಜಾತರಿಗೆ ಏನು ಹೇಳಿದನು?

ಲೇಸ ಮಾದಿದಿರೆನ್ನ ಚಿತ್ತದ
ಬೇಸರಿಕೆ ಬಯಲಾಯ್ತು ನಿಮ್ಮುಪ
ದೇಶದಿಂದೆ ಕೃತಾರ್ಥನಾದೆನು ಗೆಲಿದೆನಿಹಪರವ
ಗಾಸಿಯಾದುದು ರಾಗಲೋಭದ
ಮೀಸಲಳಿದುದು ನಿಮ್ಮ ಕೃಪೆಯಿಂ
ದೇಸುಧನ್ಯನೊತಾನು ಚಿತ್ತೈಸೊಂದು ಬಿನ್ನಪವ (ಉದ್ಯೋಗ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸನತ್ಸುಜಾತರ ಮಾತುಗಳನ್ನು ಆಲಿಸಿದ ಧೃತರಾಷ್ಟ್ರನು, ಮುನಿವರ್ಯರೇ, ನೀವು ನೀಡಿದ ಉಪದೇಶ ಒಳ್ಳೆಯದಾಯಿತು, ನನ್ನ ಮನಸ್ಸಿನ ಬೇಸರ ಹೋಯಿತು, ನಿಮ್ಮ ಉಪದೇಶದಿಂದ ನಾನು ಕೃತಾರ್ಥನಾದೆ. ಇಹಪರಗಳೆರಡನ್ನೂ ನಾನು ಗೆದ್ದೆ, ಮೋಹ ನಾಶವಾಯಿತು, ಲೋಭವಿಲ್ಲದಾಯಿತು, ನಿಮ್ಮ ಕೃಪೆಯಿಂದ ಧನ್ಯನಾದೆ. ನನ್ನ ಒಂದು ಮನವಿಯನ್ನು ಸ್ವೀಕರಿಸಿ ಎಂದು ಹೇಳಿದನು.

ಅರ್ಥ:
ಲೇಸು: ಒಳ್ಳೆದು; ಮಾಡು: ನಡೆಸು; ಚಿತ್ತ: ಮನಸ್ಸು; ಬೇಸರ: ನೋವು, ತೊಳಲಾಟ; ಬಯಲಾಯ್ತು: ಹೊರಹೊಮ್ಮಿತು; ಉಪದೇಶ: ಬೋಧಿಸುವುದು, ಬುದ್ಧಿವಾದ; ಕೃತಾರ್ಥ: ಮಾಡಬೇಕಾದ ಕೆಲಸವನ್ನು ಮಾಡಿ ಸಫಲತೆಯನ್ನು ಹೊಂದಿದವ, ಧನ್ಯ; ಗೆಲಿದೆ: ಗೆದ್ದೆ, ಜಯ; ಇಹಪರ: ಈ ಲೋಕ ಮತ್ತು ಪರಲೋಕ; ಗಾಸಿ:ಆಯಾಸ, ದಣಿವು; ರಾಗ: ಪ್ರೀತಿ, ಮೋಹ; ಲೋಭ: ಅತಿಯಾಸೆ, ದುರಾಸೆ; ಮೀಸಲು: ಮುಡಿಪು, ಪ್ರತ್ಯೇಕತೆ; ಕೃಪೆ: ಕರುಣೆ, ದಯೆ; ಧನ್ಯ: ಕೃತಾರ್ಥ; ಚಿತ್ತೈಸು: ಗಮನವಿಡು; ಬಿನ್ನಹ: ಮನವಿ;

ಪದವಿಂಗಡಣೆ:
ಲೇಸ +ಮಾದಿದಿರ್+ಎನ್ನ +ಚಿತ್ತದ
ಬೇಸರಿಕೆ +ಬಯಲಾಯ್ತು +ನಿಮ್ಮ್+ಉಪ
ದೇಶದಿಂದೆ +ಕೃತಾರ್ಥನಾದೆನು+ ಗೆಲಿದೆನ್+ಇಹಪರವ
ಗಾಸಿಯಾದುದು +ರಾಗ+ಲೋಭದ
ಮೀಸಲ್+ಇಳಿದುದು +ನಿಮ್ಮ +ಕೃಪೆಯಿಂದ್
ಏಸು+ಧನ್ಯನೊ+ತಾನು+ ಚಿತ್ತೈಸ್+ಒಂದು +ಬಿನ್ನಪವ

ಅಚ್ಚರಿ:
(೧) ಕೃಪೆ, ಕೃತಾರ್ಥ – ಸಾಮ್ಯಾರ್ಥ ನೀಡುವ ಪದ

ಪದ್ಯ ೩೭: ಮನುಷ್ಯ ಸುಖಿಯಾಗಿರುವುದು ಹೇಗೆ?

ಹತ್ತು ಮುಖದೊಳು ಲೋಕದೊಳಗು
ತ್ಪತ್ತಿಯಾದ ಚರಾಚರಂಗಳೊ
ಳುತ್ತಮಾಧಮವೆನ್ನದೇ ಹರಿಸರ್ವಗತನಾಗಿ
ಸುತ್ತುವನು ನಾನಾ ತೆರದೊಳು ವಿ
ಚಿತ್ರಚರಿತನು ಕಪಟ ನಾಟಕ
ಸೂತ್ರಧಾರಕನೆಂದರಿದು ಸುಖಿಯಾಗು ನೀನೆಂದ (ಉದ್ಯೋಗ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಲೋಕದಲ್ಲಿ ಸೃಷ್ಟಿಯಾದ ಅನಂತ ಚರಾಚರಗಳಲ್ಲಿ ಇದು ಉತ್ತಮ, ಇದು ಅಧಮವೆಂದ ಬೇರ್ಪಡಿಸದೇ, ಹರಿಯು ಎಲ್ಲದರಲ್ಲಿಯೂ ಇರುವವನು ಅವನು ನಾನಾ ರೀತಿಯಲ್ಲಿ ವರ್ತಿಸುವನು, ಅವನ ನಡೆ, ಅತಿ ವಿಚಿತ್ರ ಅವನು ಕಪಟ ನಾಟಕ ಸೂತ್ರಧಾರ ಎಂದರಿತು ನೀನು ಸುಖಿಯಾಗಿರು ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ಹೇಳಿದರು.

ಅರ್ಥ:
ಹತ್ತು: ದಶ, ಅನಂತ; ಮುಖ: ಆನನ; ಲೋಕ:ಜಗತ್ತು; ಉತ್ಪತ್ತಿ: ಹುಟ್ಟು; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಉತ್ತಮ: ಶ್ರೇಷ್ಠ; ಅಧಮ: ಕೀಳು, ನೀಚ; ಹರಿ: ವಿಷ್ಣು; ಸರ್ವಗತ: ಎಲ್ಲಾ, ಎಲ್ಲದರಲ್ಲೂ; ಸುತ್ತು: ತಿರುಗು; ನಾನಾ: ಹಲವಾರು; ತೆರದೊಳು: ಪದ್ಧತಿ, ರೀತಿ; ವಿಚಿತ್ರ: ಆಶ್ಚರ್ಯಕರವಾದುದು; ಚರಿತ: ಇತಿಹಾಸ; ನಾಟಕ: ರೂಪಕ, ಲೀಲೆ; ಸೂತ್ರಧಾರ: ನಿರ್ದೇಶಕ, ಪರಮಾತ್ಮ; ಅರಿ: ತಿಳಿ; ಸುಖಿ: ಸಂತೋಷ, ನೆಮ್ಮದಿ;

ಪದವಿಂಗಡಣೆ:
ಹತ್ತು +ಮುಖದೊಳು +ಲೋಕದೊಳಗ್+
ಉತ್ಪತ್ತಿಯಾದ +ಚರಾಚರಂಗಳೊಳ್
ಉತ್ತಮ+ಅಧಮವೆನ್ನದೇ +ಹರಿ+ಸರ್ವಗತನಾಗಿ
ಸುತ್ತುವನು+ ನಾನಾ +ತೆರದೊಳು +ವಿ
ಚಿತ್ರ+ಚರಿತನು +ಕಪಟ +ನಾಟಕ
ಸೂತ್ರಧಾರಕನೆಂದ್+ಅರಿದು +ಸುಖಿಯಾಗು +ನೀನೆಂದ

ಅಚ್ಚರಿ:
(೧) ಉತ್ತಮ, ಅಧಮ – ವಿರುದ್ಧ ಪದ
(೨) ವಿಷ್ಣುವಿನ ಗುಣವಿಶೇಷಗಳು – ವಿಚಿತ್ರ ಚರಿತನು, ಕಪಟ ನಾಟಕ ಸೂತ್ರಧಾರಕ, ಸರ್ವಗತನು
(೩) ಚರಾಚರ, ವಿಚಿತ್ರ ಚರಿತ – ಪದಗಳ ಬಳಕೆ