ಪದ್ಯ ೨೯: ಯಾರು ಮನ್ನಣೆಗೆ ಅರ್ಹರು?

ತಾನಿದಿರು ಹಗೆ ಕೆಳೆ ವಿವೇಕ
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ತದಲಿ
ದಾನ ಧರ್ಮ ಪರೋಪಕಾರ ವಿ
ಧಾನ ದೀಕ್ಷಾಕರ್ಮನಿಷ್ಠರು
ಮಾನನೀಯರಲೇ ಮಹೀಪತಿ ಕೇಳು ನೀನೆಂದ (ಉದ್ಯೋಗ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಜೀವಿತಾವದಿಯಲ್ಲಿ ನಾನು, ಇನ್ನೊಬ್ಬರು, ಶತ್ರು, ಮಿತ್ರ, ವಿವೇಕ, ಜ್ಞಾನ, ಅಜ್ಞಾನ, ಇಹ ಪರಲೋಕಗಳ ಹಾನಿ, ವೃದ್ಧಿ ಇವುಗಳಲ್ಲಿ ಒಂದೇ ಮನಸ್ಸಿನಿಂದ ದಾನ, ಧರ್ಮ, ಪರೋಪಕಾರ, ಸತ್ಕರ್ಮ, ದೀಕ್ಷೆ ನಿಷ್ಠೆಯಿಂದಿರುವವರು ಮನ್ನಣೆಗೆ ಪಾತ್ರರಾಗುತ್ತಾರೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ಹೇಳಿದರು.

ಅರ್ಥ:
ತಾನು: ನಾನು; ಇದಿರು: ಎದುರು; ಹಗೆ: ದ್ವೇಷ; ಕೆಳೆ:ಸ್ನೇಹ, ಗೆಳೆತನ, ಮೈತ್ರಿ; ವಿವೇಕ: ಯುಕ್ತಾಯುಕ್ತ ವಿಚಾರ; ಜ್ಞಾನ: ತಿಳಿವಳಿಕೆ, ಅರಿವು; ಅಜ್ಞಾನ: ಅರಿವಿಲ್ಲದಿರುವಿಕೆ, ಅವಿದ್ಯೆ; ಇಹಪರ: ಈ ಲೋಕ ಮತ್ತು ಪರಲೋಕ; ಹಾನಿ: ನಷ್ಟ; ವೃದ್ಧಿ: ಹೆಚ್ಚಳ, ಅಭ್ಯುದಯ; ಮಾರ್ಗ: ದಾರಿ; ಚಿತ್ತ:ಮನಸ್ಸು; ಏಕಚಿತ್ತ: ಒಂದರೆಡೆಗೆ ಮನಸ್ಸನ್ನು ಕೇಂದ್ರೀಕರಿಸುವುದು; ದಾನ: ನೀಡುವಿಕೆ; ಧರ್ಮ: ಸನ್ನಡತೆ; ಪರೋಪಕಾರ: ಇತರರಿಗೆ ಸಹಾಯ; ವಿಧಾನ: ರೀತಿ; ದೀಕ್ಷೆ: ವ್ರತ, ನಿಯಮ; ಕರ್ಮ: ಕಾರ್ಯ; ನಿಷ್ಠ: ಶ್ರದ್ಧೆಯುಳ್ಳವನು; ಮಾನನೀಯರು: ಗೌರವಾನ್ವಿತರು; ಮಹೀಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಾನ್+ಇದಿರು +ಹಗೆ +ಕೆಳೆ+ ವಿವೇಕ
ಜ್ಞಾನವ್+ಅಜ್ಞಾನಂಗಳ್+ಇಹಪರ
ಹಾನಿ +ವೃದ್ಧಿಯ +ಮಾರ್ಗದಲಿ +ತಾನೇಕ +ಚಿತ್ತದಲಿ
ದಾನ +ಧರ್ಮ +ಪರೋಪಕಾರ+ ವಿ
ಧಾನ +ದೀಕ್ಷಾ+ಕರ್ಮ+ನಿಷ್ಠರು
ಮಾನನೀಯರಲೇ +ಮಹೀಪತಿ +ಕೇಳು +ನೀನೆಂದ

ಅಚ್ಚರಿ:
(೧) ತಾನು, ಇದಿರು; ಹಗೆ,ಕಳೆ; ಜ್ಞಾನ, ಅಜ್ಞಾನ; ಇಹ, ಪರ; ಹಾನಿ, ವೃದ್ಧಿ – ವಿರುದ್ಧ ಪದಗಳ ಬಳಕೆ
(೨) ದಾನ, ಧರ್ಮ, ಪರೋಪಕಾರ – ಮೂರರಲ್ಲಿ ನಿಷ್ಠೆ ಹೊಂದಿರುವವರು ಮಾನನೀಯರು

ಪದ್ಯ ೨೮: ಎಲ್ಲವು ವಿಷ್ಣುಮಯವೆನ್ನಲು ಕಾರಣವೇನು?

ಒಂದು ಭೂಪಿಂಡದಲಿ ನಾನಾ
ಚಂದದಿಂ ಪ್ರಾಣಿಗಳು ಜನಿಸುವು
ವೊಂದು ತೇಜಸ್ಸಿನಲಿ ನಾನಾ ಜ್ಯೋತಿಯುದಯಿಪವು
ಒಂದು ಪರವಸ್ತುವಿನ ಬಳಿಯೊಳು
ಬಂದುವಬುಜಭವಾಂಡ ಕೋಟಿಗ
ಳೆಂದೊಡವು ಬೇರಲ್ಲ ಸರ್ವವು ವಿಷ್ಣುಮಯವೆಂದ (ಉದ್ಯೋಗ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಂದೇ ಭೂಪಿಂಡದಿಂದ ನಾನಾ ಪ್ರಾಣಿಗಳು ಜನಿಸಿದವು. ಒಂದೇ ತೇಜಸ್ಸಿನಿಂದ ನಾನಾ ಜ್ಯೋತಿಗಳು ಹುಟ್ಟುತ್ತವೆ. ಒಂದೇ ಪರವಸ್ತುವಿನಿಂದ ಕೋಟಿ ಬ್ರಹ್ಮಾಂಡ ಬಂದವೆಂದ ಮೇಲೆ ಅವು ಬೇರೆಯಾಗಲು ಹೇಗೆ ಸಾಧ್ಯ, ಎಲ್ಲವೂ ವಿಷ್ಣುಮಯವೆಂದೆ ತಿಳಿ ಎಂದು ಸನತ್ಸುಜಾತ ಮುನಿಗಳು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಒಂದು: ಏಕ; ಭೂಪಿಂಡ: ಮಣ್ಣಿನ ಉಂಡೆ, ಭೂಮಂಡಲ; ನಾನಾ: ಹಲವಾರು; ಚಂದ: ಸುಂದರವಾದ; ಪ್ರಾಣಿ: ಪಶು; ಜನಿಸು: ಹುಟ್ಟು;ತೇಜಸ್ಸು: ಕಾಂತಿ, ಪ್ರಕಾಶ; ಜ್ಯೋತಿ: ಬೆಳಕು; ಉದಯಿಸು: ಜನಿಸು, ಹುಟ್ಟು; ಪರವಸ್ತು: ಪರಮಾತ್ಮ; ಬಳಿ: ಹತ್ತಿರ; ಬಂದು: ಆಗಮಿಸು; ಅಬುಜ: ತಾವರೆ; ಅಬುಜಭವಾಂಡ:ಬ್ರಹ್ಮಾಂಡ; ಕೋಟಿ: ಬಹಳ; ಒಡವು: ಜೊತೆ; ಬೇರೆ:ಅನ್ಯ; ಸರ್ವ: ಎಲ್ಲಾ; ವಿಷ್ಣು: ನಾರಾಯಣ; ಮಯ: ತುಂಬಿದ, ವ್ಯಾಪ್ತವಾದ;

ಪದವಿಂಗಡಣೆ:
ಒಂದು +ಭೂಪಿಂಡದಲಿ+ ನಾನಾ
ಚಂದದಿಂ +ಪ್ರಾಣಿಗಳು +ಜನಿಸುವುವ್
ಒಂದು +ತೇಜಸ್ಸಿನಲಿ +ನಾನಾ +ಜ್ಯೋತಿ+ಉದಯಿಪವು
ಒಂದು +ಪರವಸ್ತುವಿನ+ ಬಳಿಯೊಳು
ಬಂದುವ್+ಅಬುಜಭವಾಂಡ +ಕೋಟಿಗಳ್
ಎಂದೊಡವು+ ಬೇರಲ್ಲ+ ಸರ್ವವು+ ವಿಷ್ಣುಮಯವೆಂದ

ಅಚ್ಚರಿ:
(೧) ಒಂದು – ೩ ಬಾರಿ ಪ್ರಯೋಗ ೧, ೩, ೪ ಸಾಲಿನ ಮೊದಲ ಪದ
(೨) ಒಂದು, ಬಂದು – ಪ್ರಾಸ ಪದಗಳು
(೩) ಅಬುಜಭವಾಂದ, ಭೂಪಿಂಡ – ಪದಗಳ ಪ್ರಯೋಗ
(೪) ನಾನಾ – ೨ ಬಾರಿ ಪ್ರಯೋಗ

ಪದ್ಯ ೨೭: ಪುಣ್ಯಪಾಪವು ಎಷ್ಟು ಸಮಯದೊಳಗೆ ಫಲವನ್ನು ಸೂಚಿಸುತ್ತವೆ?

ವರುಷ ಮೂರಾ ಮಾಸ ಮೇಣ್ಮೂ
ರರೊಳು ಪಕ್ಷತ್ರಯಗೊಳಗೆ ಬಂ
ದರುಹುವುದು ದಿನ ಮೂರರಲಿ ಸಂದೇಹ ಬೇಡಿದಕೆ
ಧರೆಯೊಳುತ್ಕಟ ಪುಣ್ಯ ಪಾಪೋ
ತ್ಕರದ ಫಲವಿಹದಲ್ಲಿ ಸೂಚಿಸಿ
ಮರಳುವುದು ಪರಲೋಕದೆಡೆಗವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಲೋಕದಲ್ಲಿ ಮಾಡಿದ ಅತಿ ಹೆಚ್ಚಿನ ಪುಣ್ಯವಾಗಲಿ ಪಾಪವಾಗಲಿ ಮೂರುವರ್ಷ, ಮೂರು ತಿಂಗಳು, ಮೂರುಪಕ್ಷ, ಮೂರುದಿನಗಳೊಳಗಾಗಿ ತಮ್ಮ ಫಲವನ್ನು ಸೂಚಿಸಿ ಪರಲೋಕಕ್ಕೆ ಹಿಂದಿರುಗುತ್ತವೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ವರುಷ: ಸಂವತ್ಸರ; ಮೂರು: ತ್ರಿ; ಮಾಸ: ತಿಂಗಳು; ಮೇಣ್: ಮತ್ತು; ಪಕ್ಷ: ಹದಿನೈದು ದಿನಗಳ ಕಾಲ; ಬಂದು: ಆಗಮಿಸು; ಅರುಹು:ತಿಳಿಸು, ಹೇಳು; ದಿನ: ವಾರ; ಸಂದೇಹ: ಸಂಶಯ, ಅನುಮಾನ; ಬೇಡ: ಸಲ್ಲದು, ಕೂಡದು; ಧರೆ: ಭೂಮಿ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಪುಣ್ಯ: ಸದಾಚಾರ, ಪರೋಪಕಾರ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಪಾಪ: ಕೆಟ್ಟ ಕೆಲಸ; ಉತ್ಕರ: ರಾಶಿ, ಸಮೂಹ ; ಫಲ: ಫಲಿತಾಂಶ, ಪ್ರಯೋಜನ; ಸೂಚಿಸು: ತೋರಿಸು; ಮರಳು: ಹಿಂದಿರುಗು; ಪರಲೋಕ: ಬೇರೆಯಲೋಕ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ವರುಷ +ಮೂರ್ +ಆ+ ಮಾಸ +ಮೇಣ್
ಮೂರರೊಳು +ಪಕ್ಷ+ತ್ರಯಗೊಳಗೆ+ ಬಂದ್
ಅರುಹುವುದು +ದಿನ +ಮೂರರಲಿ+ ಸಂದೇಹ +ಬೇಡಿದಕೆ
ಧರೆಯೊಳ್+ಉತ್ಕಟ +ಪುಣ್ಯ +ಪಾಪ+ಉತ್
ಕರದ +ಫಲವಿಹದಲ್ಲಿ+ ಸೂಚಿಸಿ
ಮರಳುವುದು +ಪರಲೋಕದ್+ಎಡೆಗ್+ಅವನೀಶ +ಕೇಳೆಂದ

ಅಚ್ಚರಿ:
(೧) ಮೂರು ತ್ರಯ – ಸಮನಾರ್ಥಕ ಪದ
(೨) ಮೂರು – ೩ ಬಾರಿ ಪ್ರಯೋಗ
(೩) ಉತ್ಕಟ, ಉತ್ಕರ – ಪದಗಳ ಬಳಕೆ