ಪದ್ಯ ೬೦: ಯುಧಿಷ್ಠಿರನು ಭೀಮನನ್ನು ಹೇಗೆ ಎಚ್ಚರಿಸಿದನು?

ಹೆಮ್ಮರವನಿದ ಕಿತ್ತು ವೈರಿಸು
ಶರ್ಮಕನನೊರಸುವೆನು ಬವರವ
ನೆಮ್ಮಿದರೆ ಮೋಹರವನರಿವೆನು ಜೀಯ ಚಿತ್ತೈಸು
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು (ವಿರಾಟ ಪರ್ವ, ೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೀಮನು ಆಲದ ಮರವನ್ನು ನೋಡಿ, ಅಣ್ಣ ಈ ಮರವನ್ನು ಕಿತ್ತು ಸುಧರ್ಮನನ್ನು ನಾಶಮಾಡುತ್ತೇನೆ, ಶತ್ರು ಸೈನ್ಯಕ್ಕೆ ಏನು ಮಾಡಬೇಕೆಂಬುದು ನಾನು ತಿಳಿದಿರುವೆ, ಎನ್ನಲು, ಯುಧಿಷ್ಠಿರನು, ಭೀಮ ಸಮಾಧಾನಿಯಾಗು, ಮರವನ್ನು ಮುರಿಯಬೇಡ, ನಮಗೆ ಕೆಟ್ಟ ಹೆಸರು ಬಂದೀತು, ಎಂದನು.

ಅರ್ಥ:
ಹೆಮ್ಮರ: ದೊಡ್ಡದಾದ ವೃಕ್ಷ; ಕಿತ್ತು: ಹೊರೆಗೆಳೆದು; ವೈರಿ: ಶತ್ರು; ಒರಸು: ನಾಶಮಾಡು; ಬವರ:ಕಾಳಗ, ಯುದ್ಧ; ಮೋಹರ: ಸೈನ್ಯ, ದಂಡು, ಯುದ್ಧ; ಅರಿ: ತಿಳಿ; ಜೀಯ: ಒಡೆಯ; ಚಿತ್ತೈಸು: ಲಕ್ಷಿಸು, ಗಮನಿಸು; ಸೈರಿಸು: ಸಮಾಧಾನ; ಮರ: ವೃಕ್ಷ; ಮುರಿ: ಸೀಳು; ಮಾತು: ವಾಣಿ; ಕೇಳು: ಆಲಿಸು; ಹೊಲ್ಲೆಹ:ದೋಷ; ತಾಗು: ಅಂಟಿಸು; ಮಾಣ: ಮಾಡಬೇಡ; ನೆಮ್ಮು: ನಂಬು;

ಪದವಿಂಗಡಣೆ:
ಹೆಮ್ಮರವನ್+ಇದ+ ಕಿತ್ತು+ ವೈರಿ+ಸು
ಶರ್ಮಕನನ್+ಒರಸುವೆನು +ಬವರವ
ನೆಮ್ಮಿದರೆ +ಮೋಹರವನ್+ಅರಿವೆನು +ಜೀಯ +ಚಿತ್ತೈಸು
ತಮ್ಮ +ಸೈರಿಸು +ಮರನ +ಮುರಿಯದಿರ್
ಎಮ್ಮ +ಮಾತನು +ಕೇಳು +ಹೊಲ್ಲೆಹವ್
ಎಮ್ಮ +ತಾಗದೆ+ ಮಾಣದ್+ಎಂದನು+ ಧರ್ಮನಂದನನು

ಅಚ್ಚರಿ:
(೧) ಬವರ, ಮೋಹರ – ಸಮನಾರ್ಥಕ ಪದ
(೨) ವೈರಿಸು, ಚಿತ್ತೈಸು – ಪ್ರಾಸ ಪದ

ಪದ್ಯ ೫೯: ಯುಧಿಷ್ಠಿರನು ಭೀಮನಿಗೆ ಯಾವ ಆದೇಶವನ್ನು ನೀಡಿದನು?

ಬಲವನಾಯಕವಾಯ್ತು ಮತ್ಸ್ಯನ
ಕುಲಕೆ ಬಂದುದು ಕೇಡು ಸುಮ್ಮನೆ
ನಿಲುವುದನುಚಿತ ಭೀಮ ಬಿಡಿಸು ವಿರಾಟ ಭೂಪತಿಯ
ಗೆಲವು ಪರಬಲಕಾಯಿತೆನೆ ರಿಪು
ಕುಲದವಾನಲನಣ್ಣನಾಜ್ಞೆಯ
ತಲೆಯೊಳಾಂತನು ಮುಂದಣಾಲದ ಮರನ ನೋಡಿದನು (ವಿರಾಟ ಪರ್ವ, ೫ ಸಂಧಿ, ೫೯ ಪದ್ಯ)

ತಾತ್ಪರ್ಯ:
ವಿರಾಟನ ಸೈನ್ಯವು ಒಡೆಯನಿಲ್ಲದಂತಾಯಿತು, ಇದು ಮತ್ಸ್ಯನ ವಂಶವನ್ನು ಹಾಳುಮಾಡುತ್ತದೆ, ಈಗ ಸುಮ್ಮನಿರುವುದು ಉಚಿತವಲ್ಲ ಎಂದು ಯುಧಿಷ್ಠಿರನು ಅಭಿಪ್ರಾಯಪಟ್ಟು, ವೈರಿಗಳಿಗೆ ಗೆಲುವಾಯಿತೆಂದು ತಿಳಿದರೆ, ವೈರಿಗಳ ಒಡಲ ಅಗ್ನಿಸಿಡಿದೇಳುತ್ತದೆ, ಅದಕ್ಕೆ ಮುಂಚೆ ವಿರಾಟನನ್ನು ಬಿಡಿಸು ಎಂದು ಯುಧಿಷ್ಠಿರನು ಆದೇಶಿಸಿದನು, ಭೀಮನು ಈ ಆದೇಶವನ್ನು ಶಿರಸಾವಹಿಸಿ ಪಾಲಿಸಲು ಮುಂದಾಗಿ, ಅವನ ಎದುರಿದ್ದ ಆಲದ ಮರವನ್ನು ನೋಡಿದನು.

ಅರ್ಥ:
ಬಲ: ಶಕ್ತಿ, ಸೈನ್ಯ; ನಾಯಕ: ಮುಂದಾಳು, ಒಡೆಯ; ಕುಲ: ವಂಶ; ಕೇಡು: ಕೆಟ್ಟಕಾಲ; ಸುಮ್ಮನೆ: ಕಾರಣವಿಲ್ಲದೆ; ನಿಲುವು: ನಿಂತಿರುವುದು; ಬಿಡಿಸು: ಸಡಿಲಿಸು; ಭೂಪತಿ: ರಾಜ; ಗೆಲವು: ಜಯ; ಪರಬಲ: ವೈರಿ; ರಿಪು: ವೈರಿ; ದವಾನಳ: ಬಡಬಾಗ್ನಿ; ಅಣ್ಣ: ಸಹೋದರ; ಆಜ್ಞೆ: ಆದೇಶ; ತಲೆ: ಶಿರ; ಮುಂದ: ಎದುರು; ಆಲ:ವಟವೃಕ್ಷ; ಮರ: ವೃಕ್ಷ;

ಪದವಿಂಗಡಣೆ:
ಬಲವ್+ಅನಾಯಕ+ವಾಯ್ತು +ಮತ್ಸ್ಯನ
ಕುಲಕೆ +ಬಂದುದು +ಕೇಡು +ಸುಮ್ಮನೆ
ನಿಲುವುದ್+ಅನುಚಿತ +ಭೀಮ +ಬಿಡಿಸು +ವಿರಾಟ +ಭೂಪತಿಯ
ಗೆಲವು+ ಪರಬಲಕ್+ಆಯಿತೆನೆ +ರಿಪು
ಕುಲ+ದವಾನಲನ್ +ಅಣ್ಣನ +ಆಜ್ಞೆಯ
ತಲೆಯೊಳಾಂತನು+ ಮುಂದಣ್+ಆಲದ+ ಮರನ+ ನೋಡಿದನು

ಅಚ್ಚರಿ:
(೧) ಕುಲ – ೨, ೫ ಸಾಲಿನ ಮೊದಲ ಪದ
(೨) ತನ್ನ ಒಳಿತಿಗಿಂತ ರಾಜ್ಯದ ಒಳಿತು ಮುಖ್ಯ ಎಂದು ಯುಧಿಷ್ಠಿರನು ತೋರಿಸುವುದು – ಸುಮ್ಮನೆ ನಿಲುವುದನುಚಿತ, ಭೀಮ ಬಿಡಿಸು ವಿರಾಟ ಭೂಪತಿಯ
(೩) ಪರಬಲ, ರಿಪು – ಸಮನಾರ್ಥಕ ಪದ

ಪದ್ಯ ೫೮: ವಿರಾಟನ ಸಹೋದರರ ಅಳಲೇನು?

ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಿಲೀಸುವನೇ ವಿರಾಟನನೆನುತ ಬಲ ಬೆದರೆ
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು (ವಿರಾಟ ಪರ್ವ, ೫ ಸಂಧಿ, ೫೮ ಪದ್ಯ)

ತಾತ್ಪರ್ಯ:
ಮತ್ಸ್ಯದೇಶದ ಸೈನ್ಯವು, “ಕ್ಷುಲ್ಲಕರಾದವರು ದೊರೆಯನ್ನು ಶತ್ರುವಿಗೆ ಒಪ್ಪಿಸಿದರು. ದೊರೆಯು ಸೆರೆ ಸಿಕ್ಕನು. ಕೀಚನನು ಬೇಡ, ಅವನ ನೆರಳಿದ್ದರೂ ಸಾಕಿರುತ್ತಿತ್ತು, ದೊರೆಯನ್ನು ಬಿಟ್ಟು ಕೊಡುತ್ತಿದ್ದರು ಎಂದು ಹೇಳುತ್ತಾ ಅಳುತ್ತಿದ್ದರು, ವಿರಾಟನ ತಮ್ಮಂದಿರು ತನ್ನ ಬಲದಳತೆಯನ್ನು ಮರೆತು ನುಗ್ಗಿದರೆ ಭುಜಭಂಗವಾಗುತ್ತದೆ, ಯುದ್ಧಕ್ಕೆ ಹೋಗೆ ಸೆರೆ ಸಿಕ್ಕನಲ್ಲಾ ಇದೆಂಥ ಹುಡುಗಾಟ, ವಿರಾಟನು ಯುದ್ಧಕ್ಕೆ ಏಕೆ ಹೋದನು ಎಂದು ಹೇಳುತ್ತಾ ಅಳಲಿದರು.

ಅರ್ಥ:
ಸಿಕ್ಕು: ಸೆರೆಯಾಗು; ದೊರೆ: ರಾಜ; ಒಪ್ಪು: ಸಮ್ಮತಿಸು; ಚುಕ್ಕಿ: ಚಿಕ್ಕ; ನೆಳಲು: ನೆಅರ್ಳು
ಈಸು:ಬಾಳು; ಬಲ: ಶಕ್ತಿ, ಸೈನ್ಯ; ಬೆದರೆ: ಭಯ, ಅಂಜಿಕೆ; ಉಕ್ಕು: ಮೇಲಕ್ಕೆ ಉಬ್ಬು, ಹಿಗ್ಗು; ಹೆಗಲು: ಭುಜ; ಬೇವುದು: ಮರೆತು; ಮಕ್ಕಳು: ಕಂದ; ಆಟಿಕೆ: ಆಟದ ವಸ್ತು; ಒದರು: ಹೇಳು; ಸಹೋದರ: ತಮ್ಮ;

ಪದವಿಂಗಡಣೆ:
ಸಿಕ್ಕಿದನು +ದೊರೆ+ ಒಪ್ಪುಗೊಟ್ಟರು
ಚುಕ್ಕಿಗಳು+ ಕೀಚಕನ+ ನೆಳಲಿರೆ
ಸಿಕ್ಕಿಲ್+ಈಸುವನೇ +ವಿರಾಟನನ್+ಎನುತ +ಬಲ +ಬೆದರೆ
ಉಕ್ಕಿದಾತನ+ ಹೆಗಲು +ಬೇವುದು
ಮಕ್ಕಳಾಟಿಕೆಯಾಯ್ತು +ತಾ +ಕೈ
ಯಿಕ್ಕಲ್+ಏಕೆಂದ್+ಒದರಿದರು +ಮತ್ಸ್ಯನ +ಸಹೋದರರು

ಅಚ್ಚರಿ:
(೧) ಸಿಕ್ಕಿ, ಉಕ್ಕಿ, ಚುಕ್ಕಿ – ಪ್ರಾಸ ಪದಗಳು

ಪದ್ಯ ೫೭: ಸುಶರ್ಮ ಮತ್ತು ವಿರಾಟನ ಯುದ್ಧ ಹೇಗಿತ್ತು?

ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ (ವಿರಾಟ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಬಾಣಗಳ ಯುದ್ಧವಾದಮೇಲೆ, ಚಿಕ್ಕ ಕತ್ತಿಯನ್ನು ತಿರುಗಿಸುತ್ತಾ ಯುದ್ಧ ಮಾಡಿದರು, ಇದಾದನಂತರ ಗದೆಯಿಂದ ಕಾದಾಡಿದರು, ಗದೆಯ ನಂತರ ಕತ್ತಿ, ಗುರಾಣಿಗಳಿಂದ ಇಬ್ಬರು ವೀರಾವೇಶದಿಂದ ಕಾದಿದರು. ವಿರಾಟನ ಶಸ್ತ್ರ ಕೌಶಲ್ಯವನ್ನು ಹೊಗಳುತ್ತಾ ಸುಶರ್ಮನು ವಿರಾಟ್ನ ಪೆಟ್ಟನು ಸಹಿಸಿಕೊಂಡು ಅವನನ್ನು ಬಂಧಿಸಿದನು.

ಅರ್ಥ:
ಸರಳು:ಬಾಣ, ಅಂಬು; ತೀರಲು: ಮುಗಿಯಲು; ಕಿತ್ತು: ತೆಗೆದು; ಸುರಗಿ: ಸಣ್ಣ ಕತ್ತಿ, ಚೂರಿ; ತಿರುಹಿ: ತಿರುಹಿಸು; ಹೊಯ್ದಾಡು: ಮೇಲೆ ಬಿದ್ದು ಹೊಡೆದಾಡು; ಮುರಿ: ಬಾಗು, ಸೀಳು; ಪರಿಘ:ಗದೆ; ಕಾದಿದರು: ಹೋರಾಡಿದರು; ಹೊಕ್ಕು: ಸೇರು; ಹಲಗೆ:ಒಂದು ಬಗೆಯ ಗುರಾಣಿ; ಖಡ್ಗ: ಕತ್ತು; ಬೆರಸು: ಮಿಶ್ರಮಾಡು; ತಿವಿದು: ಚೂಪಾದ ಆಯುಧದಿಂದ ಚುಚ್ಚು; ಭರವ:ವೇಗ, ಉದ್ರೇಕ; ಹೊಗಳು: ಪ್ರಶಂಸೆ; ಕಲಿ: ವೀರ; ಉರವಣಿಸು: ಆತುರಿಸು; ಗಾಯ: ಪೆಟ್ಟು; ಹಿಡಿ: ಬಂಧಿಸು;

ಪದವಿಂಗಡಣೆ:
ಸರಳು +ತೀರಲು +ಕಿತ್ತು +ಸುರಗಿಯ
ತಿರುಹಿ +ಹೊಯ್ದಾಡಿದರು +ಮುರಿದೊಡೆ
ಪರಿಘದಲಿ +ಕಾದಿದರು +ಹೊಕ್ಕರು +ಹಲಗೆ +ಖಡ್ಗದಲಿ
ಬೆರಸಿ +ತಿವಿದಾಡಿದರು +ಮತ್ಸ್ಯನ
ಭರವ +ಹೊಗಳುತ +ಕಲಿ +ಸುಶರ್ಮಕನ್
ಉರವಣಿಸಿದನು +ಗಾಯವಡೆದು +ವಿರಾಟನನು +ಹಿಡಿದ

ಅಚ್ಚರಿ:
(೧) ಸರಳು, ಸುರಗಿ, ಪರಿಘ, ಖಡ್ಗ – ಆಯುಧಗಳ ವಿವರಣೆ
(೨) ಹೊಯ್ದಾಡಿದರು, ಕಾದಿದರು, ತಿವಿದಾಡಿದರು – ಯುದ್ಧವನ್ನು ವಿವರಿಸುವ ಪದಗಳು

ಪದ್ಯ ೫೬: ಸುಶರ್ಮನು ವಿರಾಟನನ್ನು ಹೇಗೆ ಎದುರಿಸಿದನು?

ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರಸುಶರ್ಮನಂಬಿನ
ಮಳೆಯ ಕರೆಯುತ ರಿಪು ವಿರಾಟನ ರಥವ ತರುಬಿದನು
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ (ವಿರಾಟ ಪರ್ವ, ೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಸುಶರ್ಮನ ಸೈನ್ಯವು ಭಂಗವಾಗಿ ಹಿಂತಿರುಗುತ್ತಿರಲು, ಕೋಪಗೊಂಡ ಸುಶರ್ಮನು ವೀರಾವೇಶದಿಂದ ಬಾಣಗಳೆ ಸುರಿಮಳೆಯನ್ನು ಕರೆಯುತ್ತಾ ಶತ್ರುವಾದ ವಿರಾಟನ ರಥವನ್ನು ನಿಲ್ಲಿಸಿದನು. ನಂತರ ಅವನನ್ನುದ್ದೇಶಿಸಿ, ಎಲವೋ ಹುಲು ಮಾಂಡಲಿಕನಾದ ವಿರಾಟ, ನಿನಗೇಕೆ ಯೋಧನೆಂಬ ಕೂಗು” ಎಂದು ಹೇಳಿ ವಿರಾಟನೊಡನೆ ಯುದ್ಧಮಾಡಲು ಆರಂಭಿಸಿದ.

ಅರ್ಥ:
ಬಲ: ಶಕ್ತಿ; ಮುರಿ: ಬಾಗು, ಚೂರುಮಾಡು; ಬರುತಿರಲು: ಆಗಮಿಸುತಿರಲು; ಖಾತಿ:ಕೋಪ; ತಳೆದು: ತೋರಿ; ವೀರ: ಕಲಿ, ಶೌರ್ಯ; ಅಂಬು: ಬಾಣ; ಮಳೆ: ವರ್ಷ; ಕರೆ: ಬರೆಮಾಡು; ರಿಪು: ಶತ್ರು; ರಥ: ಬಂಡಿ; ತರುಬು:ತಡೆ, ನಿಲ್ಲಿಸು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹುಲು: ಕ್ಷುದ್ರ, ಅಲ್ಪ; ಮಂಡಳಿಕ: ಚಿಕ್ಕ ಜಾಗದ (ಮಂಡಲ) ಒಡೆಯ; ಆಳು: ಯೋಧ; ಉಲಿ: ಕೂಗು; ಕಾದಿದನು: ಹೋರಾಡಿದನು;

ಪದವಿಂಗಡಣೆ:
ಬಲ +ಮುರಿದು +ಬರುತಿರಲು +ಖಾತಿಯ
ತಳೆದು +ವೀರ+ಸುಶರ್ಮನ್+ಅಂಬಿನ
ಮಳೆಯ +ಕರೆಯುತ +ರಿಪು +ವಿರಾಟನ+ ರಥವ+ ತರುಬಿದನು
ಎಲವೊ +ಫಡ +ಫಡ +ಮತ್ಸ್ಯ +ಹುಲು+ಮಂ
ಡಳಿಕ+ ನಿನಗೇಕ್+ಆಳುತನವೆಂದ್
ಉಲಿದು+ ಕೈಕೊಂಡೆಚ್ಚು +ಕಾದಿದನಾ +ವಿರಾಟನಲಿ

ಅಚ್ಚರಿ:
(೧) ವಿರಾಟನನ್ನು ಕರೆದ ಪರಿ – ಫಡ ಫಡ, ಮತ್ಸ್ಯ ಹುಲು ಮಂಡಲಿಕ