ಪದ್ಯ ೫೫: ಸುಶರ್ಮನ ಸೇನೆಯು ಹೇಗೆ ಭಂಗಹೊಂದಿತು?

ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲುದಳ ಕವಿದುದು ಮಹಾರಥ
ರೇಳುಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು (ವಿರಾಟ ಪರ್ವ, ೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ಮುಂಭಾಗದ ಸೈನ್ಯವನ್ನು ನಾಶವಾಗಿ, ನಾಯಕರು ಯುದ್ಧಕ್ಕಿಳಿದರು. ರಥಗಳು ಯುದ್ಧಕ್ಕೆ ನುಗ್ಗಿದವು. ಏಳು ಸಾವಿರ ಮಹಾ ಪರಾಕ್ರಮಶಾಲಿಗಳು ಕಾಳಗದಲ್ಲಿ ಹಿಮ್ಮೆಟ್ಟಲು ಸುಶರ್ಮನ ಸೈನ್ಯವು ಭಂಗ ಹೊಂದಿತು.

ಅರ್ಥ:
ಚೂಳಿಕೆ: ಮುಡಿಗೆ ಸಿಕ್ಕಿಸುವ ಹೂವಿನ ಅಥವ ಮುತ್ತಿನ ಗೊಂಡೆ; ಬಲ: ಶಕ್ತಿ; ಮುರಿ: ಸೀಳು; ದೊರೆ: ರಾಜ; ಬಿದ್ದು: ಬೀಳು, ಆಕ್ರಮಣ ಮಾಡು; ಬವರ:ಕಾಳಗ, ಯುದ್ಧ; ಬಳಿಕ: ನಂತರ; ಕೆಚ್ಚು: ಧೈರ್ಯ, ಸಾಹಸ; ಹೊಕ್ಕು: ಸೇರು, ಓತ; ದುವ್ವಾಳಿ:ತೀವ್ರಗತಿ, ವೇಗವಾದ ನಡೆ, ಓಟ; ನಿಜ: ತನ್ನ; ರಥ: ಬಂಡಿ; ಮೇಲು: ಅಗ್ರಭಾಗ; ಕವಿ: ಮುಸುಕು; ಮಹಾ: ಶ್ರೇಷ್ಠ; ಭೂಪ: ರಾಜ; ಕಾಳಗ: ಯುದ್ಧ; ತೆಗೆ: ಹೊರತರು; ಸೇನೆ: ಸೈನ್ಯ; ಮುರಿ:ಬಗ್ಗು;

ಪದವಿಂಗಡಣೆ:
ಚೂಳಿಕೆಯ +ಬಲ +ಮುರಿದು +ದೊರೆಗಳ
ಮೇಲೆ +ಬಿದ್ದುದು +ಬವರ +ಬಳಿ+ಕೆ
ಚ್ಚಾಳು+ತನದಲಿ+ ಹೊಕ್ಕು +ದುವ್ವಾಳಿಸುವ +ನಿಜರಥದ
ಮೇಲುದಳ+ ಕವಿದುದು +ಮಹಾರಥರ್
ಏಳುಸಾವಿರ+ ಮತ್ಸ್ಯಭೂಪನ
ಕಾಳಗಕೆ+ ತೆಗೆದರು+ ತ್ರಿಗರ್ತರ +ಸೇನೆ +ಮುರಿವಡೆದು

ಅಚ್ಚರಿ:
(೧) ‘ಬ’ ಕಾರದ ಜೋಡಿ ಪದ – ಬಿದ್ದುದು ಬವರ ಬಳಿಕೆ
(೨) ನಿಜರಥ, ಮಹಾರಥ – ರಥ ಪದದ ಬಳಕೆ

ಪದ್ಯ ೫೪: ರಣರಂಗದ ಚಿತ್ರಣ ಹೇಗಿತ್ತು?

ದಿಂಡುಗೆಡೆದವು ದಂತಿಘಟೆ ಶತ
ಖಂಡವಾದವು ತುರಗದಳ ಮುಂ
ಕೊಂಡಿರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ
ತುಂಡಿಸಿತು ರಥ ವಾಜಿ ಮಿದುಳಿನ
ಜೊಂಡಿನಲಿ ರಣಭೂಮಿ ರಕುತದ
ಗುಂಡಿಗೆಗಳೊಗ್ಗಾಯ್ತು ಶಾಕಿನಿ ಡಾಕಿನೀ ಜನಕೆ (ವಿರಾಟ ಪರ್ವ, ೫ ಸಂಧಿ, ೫೪ ಪದ್ಯ)

ತಾತ್ಪರ್ಯ:
ಆನೆಗಳು ಬಿದ್ದುವು, ಕುದುರೆಗಳ ಸೈನ್ಯವು ನೂರು ಚೂರಾದವು, ಕಾಲಾಳುಗಳು ಮುನ್ನುಗ್ಗಿ ಹೊಡೆದಾಡಿ ಸಾಲು ಸಾಲಾಗಿ ಬಿದ್ದರು. ರಥಕ್ಕೆ ಕಟ್ಟಿದ ಕುದುರೆಗಳು ತುಂಡಾದವು. ಮಿದುಳು ರಕ್ತಗಳನ್ನು ತಿನ್ನಲು ಕ್ಷುದ್ರದೇವತೆಗಳಾದ ಶಾಕಿನಿ, ಡಾಕಿನಿಯರು ಗುಂಪಾಗಿ ಬಂದರು.

ಅರ್ಥ:
ದಿಂಡು: ದಪ್ಪ, ಸ್ಥೂಲ, ಬಲ, ಶಕ್ತಿ; ದಂತಿ: ಆನೆ; ಘಟೆ; ಗುಂಪು; ಗಡೆದವು: ಬಿದ್ದವು; ಶತ: ನೂರು; ಖಂಡ: ಚೂರು; ತುರಗ: ಕುದುರೆ; ದಳ: ಗುಂಪು; ಮುಂಕೊಂಡು: ಮುಂದಕ್ಕೆ ನಿಂತ; ಇರಿದು: ತಿವಿದು; ಕಾಲಾಳು: ಸೈನ್ಯ; ಕೆಡೆ: ಬೀಳು, ಕುಸಿ; ತಾರು:ಒಣಗು, ಬಾಡು; ಥಟ್ಟು:ಗುಂಪು, ಸಮೂಹ; ತುಂಡಿಸು: ಸೀಳು; ರಥ: ಬಂಡಿ; ವಾಜಿ: ಕುದುರೆ; ಮಿದುಳು: ಮಸ್ತಿಷ್ಕ; ಜೋಂಡು: ನೀರಿನಲ್ಲಿ ಬೆಳೆಯುವ ಹುಲ್ಲು; ರಣಭೂಮಿ: ಯುದ್ಧಸ್ಥಳ; ರಕುತ: ನೆತ್ತರು; ಗುಂಡಿ: ಹಳ್ಳ; ಗುಂಡಿಗೆ: ಎದೆ; ಶಾಕಿನಿ, ಡಾಕಿನಿ:ಒಂದು ಕ್ಷುದ್ರ ದೇವತೆ; ಜನ: ಜನರು, ಮನುಷ್ಯರು, ಗುಂಪು;

ಪದವಿಂಗಡಣೆ:
ದಿಂಡು+ಗೆಡೆದವು+ ದಂತಿ+ಘಟೆ +ಶತ
ಖಂಡವಾದವು +ತುರಗ+ದಳ +ಮುಂ
ಕೊಂಡ್+ಇರಿದು +ಕಾಲಾಳು +ಕೆಡೆದವು +ತಾರು+ಥಟ್ಟಿನಲಿ
ತುಂಡಿಸಿತು +ರಥ +ವಾಜಿ +ಮಿದುಳಿನ
ಜೊಂಡಿನಲಿ +ರಣಭೂಮಿ+ ರಕುತದ
ಗುಂಡಿಗೆಗಳ್+ಒಗ್ಗಾಯ್ತು +ಶಾಕಿನಿ +ಡಾಕಿನೀ +ಜನಕೆ

ಅಚ್ಚರಿ:
(೧) ದಿಂಡುಗೆಡು, ಖಂಡವಾದವು, ಇರಿದು, ಕೆಡೆದವು, ತುಂಡಿಸಿತು – ಯುದ್ಧವನ್ನು ವರ್ಣಿಸುವ ಪದಗಳು
(೨) ತುರಗ, ವಾಜಿ – ಸಮನಾರ್ಥಕಪದ
(೩) ರಕ್ತಸಿಕ್ತ ಹೆಣಗಳನ್ನು ತಿನ್ನಲು ಶಾಕಿನಿ, ಡಾಕಿನಿ – ಕ್ಷುದ್ರದೇವತೆಗಳ ಪದ ಪ್ರಯೋಗ

ಪದ್ಯ ೫೩: ಕಾಳಗದ ದೃಶ್ಯ ಹೇಗಿತ್ತು?

ಕುದುರೆ ಹೊಕ್ಕವು ದಂತಿ ಘಟೆ ತೂ
ಳಿದವು ರಥ ವಾಜಿಗಳು ಸೇನೆಯ
ಹೊದರ ಹೊಯ್ದವು ಕೂಡೆ ಕಾಲಾಳಿರಿದು ಕಾದಿದರು
ಕದಡಿತಾ ದಳ ಮೈಯೊಳೊಕ್ಕವು
ಬಿದಿರಿದೆಲುಗಳು ಮುರಿದು ನೆತ್ತಿಯ
ಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ (ವಿರಾಟ ಪರ್ವ, ೫ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕುದುರೆಗಳು ಮುನ್ನುಗ್ಗಿದವು, ಆನೆಗಳ ಗುಂಪು ಜೋರಾಗಿ ನಡೆದವು, ಕುದುರೆಗಳ ರಥಗಳು ಸೇನೆಯನ್ನು ಭಾಗಮಾಡಿ ಮುನ್ನಡೆದವು. ಕಾಲಾಳುಗಳು ಯುದ್ಧ ನಿರತರಾದರು. ಸೈನ್ಯವು ಕದಡಿತು. ಮೈಯೆಲುಬುಗಳು ಹೊರಕಾಣಿಸಿದವು. ನೆತ್ತಿಯ ಚಿಪ್ಪು ಮುರಿದು ಮಿದುಳು ಹೊರಕ್ಕೆ ಬಿದ್ದವು. ರಕ್ತವು ಉಕ್ಕಿ ಹರಿಯಿತು.

ಅರ್ಥ:
ಕುದುರೆ: ಅಶ್ವ, ಹಯ; ಹೊಕ್ಕು: ತೂರು, ಸೇರು; ದಂತಿ: ಆನೆ; ಘಟೆ: ಗುಂಪು; ತೂಳು:ಬೆನ್ನಟ್ಟು, ಹಿಂಬಾಲಿಸು; ರಥ: ಬಂಡಿ; ವಾಜಿ:ಕುದುರೆ; ಸೇನೆ: ಸೈನ್ಯ; ಹೊದರು:ಗುಂಪು, ಸಮೂಹ; ಹೊಯ್ದು: ಹೊಡೆದು; ಕೂಡು: ಸೇರಿ; ಕಾಲಾಳು: ಸೈನ್ಯ; ಇರಿದು: ಚುಚ್ಚು; ಕಾದಿದರು: ಹೊಡೆದಾಡಿದರು; ಕದಡು: ಕಲುಕು; ದಳ: ಸೈನ್ಯ; ಮೈ: ಅಂಗ, ದೇಹ; ಬಿದಿರು: ಚೆದರು, ಹರಡು; ಎಲುಬು: ಮೂಳೆ; ಮುರಿ: ಸೀಳು; ನೆತ್ತಿ: ತಲೆ; ಮಿದುಳು: ತಲೆಯ ಭಾಗ, ಮಸ್ತಿಷ್ಕ; ಸುರಿ: ಹರಿ; ನೆತ್ತರು: ರಕ್ತ; ಉಬ್ಬರಿಸು: ಜೋರಾಗಿ, ಹೆಚ್ಚಳ; ನೆರೆ: ಗುಂಪು; ಮಸಗು:ಹರಡು;

ಪದವಿಂಗಡಣೆ:
ಕುದುರೆ+ ಹೊಕ್ಕವು +ದಂತಿ +ಘಟೆ +ತೂ
ಳಿದವು +ರಥ +ವಾಜಿಗಳು +ಸೇನೆಯ
ಹೊದರ +ಹೊಯ್ದವು +ಕೂಡೆ +ಕಾಲಾಳ್+ಇರಿದು +ಕಾದಿದರು
ಕದಡಿತಾ +ದಳ +ಮೈಯೊಳ್+ಒಕ್ಕವು
ಬಿದಿರಿದ್+ಎಲುಗಳು +ಮುರಿದು +ನೆತ್ತಿಯ
ಮಿದುಳು +ಸುರಿದುದು +ನೆತ್ತರ್+ಉಬ್ಬರಿಸಿದುದು +ನೆರೆ +ಮಸಗಿ

ಅಚ್ಚರಿ:
(೧) ಕುದುರೆ, ವಾಜಿ – ಸಮನಾರ್ಥಕ ಪದ
(೨) ಹೊಕ್ಕು, ಇರಿದು, ತೂಳು, ಕಾದು, ಒಕ್ಕವು, ಮುರಿದು, ಸುರಿದು, ಉಬ್ಬರಿಸು – ಯುದ್ಧವನ್ನು ಚಿತ್ರಿಸಲು ಬಳಸಿದ ಪದಗಳು

ಪದ್ಯ ೫೨: ಕೌರವರು ವಿರಾಟನ ಸೈನ್ಯವನ್ನು ಹೇಗೆ ಅಣಕಿಸಿದರು?

ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕುದು ಕೂಡೆ ಕುರುಸೇನೆ (ವಿರಾಟ ಪರ್ವ, ೫ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೌರವರ ಸೈನ್ಯವು ವಿರಾಟನ ಸೈನ್ಯವನ್ನು ನೋಡಿ ಚಪ್ಪಾಳೆ ತಟ್ಟಿ ನಗುತ್ತಾ, “ನೀಚ ವಿರಾಟರಾಜನ ಸೈನಿಕರೇ, ನಿಮ್ಮ ಕೀಚಕನು ವೀರಾಛಿವೀರರಿಗೆ ಹೆಡತಲೆಯ ಹಾವಿನಂತಿದ್ದವನು, ಅವನು ಸತ್ತು ಹೋದ. ಇನ್ನು ನಿಮ್ಮನ್ನು ಕೇಳುವವರಾರು. ನರಿಯು ದಂಡನ್ನು ಹೊಕ್ಕು ಹಲ್ಲು ಹಲ್ಲು ಬಿಡುವ ಹಾಗೆ, ಈಗ ವಿರಾಟನು ಕೆಟ್ಟು ಹೋದ” ಎಂದು ಅಣಕಿಸಿದರು.

ಅರ್ಥ:
ಫಡ:ಬೆಳೆದು ನಿಂತ ಜೋಳ, ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು, ಎತ್ತರವಾದ ಬೆಳೆ; ಚುಕ್ಕಿ: ಬಿಂದು; ಗಡಸು: ಗಟ್ಟಿ; ಸಾಯು: ಸಾವು; ಗಡಿ: ಎಲ್ಲೆ; ಬಿರು: ಕಠೋರವಾದ; ಹೆಡತಲೆ: ಹಿಂದಲೆ; ಅಳಿ: ಸಾವು; ಮಿಡುಕು: ಅಲುಗಾಟ, ಚಲನೆ; ಕಟಕ:ಕಡಗ,ರಾಜಧಾನಿ, ಗುಂಪು; ಹೊಕ್ಕು: ಸೇರು; ಹಲು: ಹಲ್ಲು, ದಂತ; ಬಿಡುವ: ತೋರುವ; ವೈರಿ: ಶತ್ರು; ಕಡೆಗೆ: ಕೊನೆ; ಕೈ: ಕರ, ಹಸ್ತ; ವೊಯ್ದು: ಹಾರಾಡು; ನಕ್ಕು: ನಗು; ಸೇನೆ: ಸೈನ್ಯ; ಇರವು: ಇರುವಿಕೆ; ಹಾವು: ಉರಗ;

ಪದವಿಂಗಡಣೆ:
ಫಡ+ ವಿರಾಟನ +ಚುಕ್ಕಿಗಳ್+ಇರವ
ಗಡಿಸದಿರಿ+ ಸಾಯದಿರಿ +ಬಿರುದರ
ಹೆಡತಲೆಯ +ಹಾವಾದ +ಕೀಚಕನ್+ಅಳಿದನ್+ಇನ್ನೇನು
ಮಿಡುಕಿ +ಕಟಕವ +ಹೊಕ್ಕು +ನರಿ +ಹಲು
ಬಿಡುವವೊಲು +ವೈರಾಟ+ಕೆಟ್ಟನು
ಕಡೆಗೆನುತ +ಕೈವೊಯ್ದು +ನಕ್ಕುದು +ಕೂಡೆ+ ಕುರುಸೇನೆ

ಅಚ್ಚರಿ:
(೧) ಹೇಗೆ ನಕ್ಕರು ಎಂದು ಹೇಳಲು – ಕೈವೊಯ್ದು ನಕ್ಕರು
(೨) ವಿರಾಟನ ಸೈನ್ಯವನ್ನು ಹೋಲಿಸುವ ಬಗೆ – ಮಿಡಿಕಿ ಕಟಕವ ಹೊಕ್ಕು ನರಿ ಹಲು ಬಿಡುವವೊಲು