ಪದ್ಯ ೪೦: ದುರ್ಯೋಧನನು ಯಾವ ತಂತ್ರವನ್ನು ಹೇಳಿದನು?

ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತರನು ಕಳುಹೆ
ಹುರಿಯೊಡೆದು ಹದಿನಾರು ಸಾವಿರ
ವರಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ದಾಳಿಯಿಟ್ಟನು ತೆಂಕದೆಸೆಗಾಗಿ (ವಿರಾಟ ಪರ್ವ, ೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ದುರ್ಯೋಧನನು ಒಂದು ತಂತ್ರವನ್ನು ಮಾಡಿದನು. ಸೈನ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಿದನು. ತ್ರಿಗರ್ತರಿನ್ನು ದಕ್ಷಿಣದಿಕ್ಕಿನಿಂದ ಗೋಗ್ರಹಣ ಮಾಡಲು ಹೇಳಿ,ತಾನೆ ಒಂದು ಸೈನ್ಯದ ಭಾಗವನ್ನು ಉತ್ತರದ ದಿಕ್ಕಿನತ್ತ ಮುನ್ನುಗ್ಗಿಸಲು ಮುಂದಾದನು. ತ್ರಿಗರ್ತರ ಮುಖ್ಯಸ್ಥನಾದ ಸುಧರ್ಮನು ಹದಿನಾರು ಸಾವಿರ ಜನ ಮಹಾರಥರೊಡನೆ ದಕ್ಷಿಣ ದಿಕ್ಕಿನಲ್ಲಿ ದಾಳಿಯಿಟ್ಟನು.

ಅರ್ಥ:
ಎರಡು: ದ್ವಿ, ದ್ವಂದ್ವ; ಮೋಹರ: ಸೈನ್ಯ, ದಂಡು; ತೆಂಕಣ:ದಕ್ಷಿಣ ದಿಕ್ಕು; ಹರಿದು: ದಾಳಿ ಮಾಡು; ತುರುಗಲ: ಸಮೂಹ; ತಡೆ: ನಿಲ್ಲು; ಉತ್ತರ: ಮೇಲಿನ; ನೃಪ: ರಾಜ; ಕಳುಹು: ಕಳುಹಿಸು, ಆಜ್ಞಾಪಿಸು; ಹುರಿ:ಕೆಚ್ಚು, ಬಲ; ಸಾವಿರ: ಸಹಸ್ರ; ವರ: ಶ್ರೇಷ್ಠ; ಮಹಾರಥ: ಬಲಶಾಲಿ, ಕಲಿ; ದಾಳಿ: ಯುದ್ಧ; ದೆಸೆ: ದಿಕ್ಕು;ದುರ್ಧರ: ತಾಳಲು ಅಸಾಧ್ಯವಾದ

ಪದವಿಂಗಡಣೆ:
ಎರಡು+ ಮೋಹರವಾಗಿ +ತೆಂಕಲು
ಹರಿದು +ತುರುಗಳ+ ತಡೆಯಿ+ ನಾವ್
ಉತ್ತರದಲ್+ಆನುವೆವ್+ಎನುತ +ನೃಪತಿ +ತ್ರಿಗರ್ತರನು+ ಕಳುಹೆ
ಹುರಿಯೊಡೆದು+ ಹದಿನಾರು+ ಸಾವಿರ
ವರಮಹಾರಥರ್+ಒಗ್ಗಿನಲಿ +ದು
ರ್ಧರ +ಸುಶರ್ಮನು +ದಾಳಿಯಿಟ್ಟನು +ತೆಂಕ+ದೆಸೆಗಾಗಿ

ಅಚ್ಚರಿ:
(೧) ತೆಂಕ – ೧, ೬ ಸಾಲಿನ ಕೊನೆಯ ಪದ

ಪದ್ಯ ೩೯: ಕೌರವ ಸೈನ್ಯದ ಬಲ ಎಂತಹುದು?

ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳೀ ಯೀ ಕಳ
ಕಳಿಕೆ ಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ (ವಿರಾಟ ಪರ್ವ, ೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಕುರುಸೈನ್ಯವು ಮುನ್ನುಗ್ಗಲು, ಪ್ರಳಯ ಕಾಲದ ಜಲರಾಶಿ ಬಂದಿತೋ ಎಂಬಂತೆ ತೋರುತ್ತಿತ್ತು, ಸೇನು ಸಾಲುಗಳಿಗೆ ಕೊನೆಯೇ ಇಲ್ಲವೇನೋ ಎಂಬಂತ್ತಿತ್ತು, ಇಂದ್ರ, ಯಮ ರಾದರೂ ಈ ಸೈನ್ಯವನ್ನು ಎದುರಿಸಬಹುದೇ? ಇನ್ನು ಸಾಮಾನ್ಯ ರಾಜರು ಇದರ ಮುಂದೆ ನಿಲ್ಲಬಹುದೆ ಎನ್ನುವಂತೆ ಕುರುಸೈನ್ಯ ಮುನ್ನುಗ್ಗುತ್ತಿತ್ತು.

ಅರ್ಥ:
ಪ್ರಳಯ: ನಾಶ, ಅಳಿವು; ಜಲ: ನೀರು; ರಾಶಿ: ಹೆಚ್ಚಿನದ್ದು; ಜರಿ:ಅಳುಕು, ಹಿಂಜರಿ, ಪತನವಾಗು; ತಳಿತ: ಚಿಗುರಿದ; ಸಂದಣಿ: ಗುಂಪು; ದಳ: ಸೈನ್ಯ; ಮಾರ್ಮಾಲೆ: ಗರ್ವದಿಂದ ಬೀಳು, ಎದುರಿಸು; ನಿಲು: ಎದುರು ನಿಲ್ಲು; ಇಂದ್ರ: ಶಕ್ರ; ಯಮ: ಜವ; ಹುಲು:ಅಲ್ಪ; ನೃಪ: ರಾಜ; ಗಡ: ಅಲ್ಲವೆ; ತ್ವರಿತವಾಗಿ; ಬಲುಹು: ಶಕ್ತಿ; ಹೊದರು: ಪೊದೆ, ಹಿಂಡಲು; ಹೊರಳು: ತಿರುವು, ಬಾಗು; ಕಳಕಳಿ: ಉತ್ಸಾಹ, ಆಸ್ಥೆ; ನೂಕು: ತಳ್ಳು; ದಟ್ಟ: ಒತ್ತಾದ, ಸಾಂದ್ರ;

ಪದವಿಂಗಡಣೆ:
ಪ್ರಳಯ+ಪಟು +ಜಲರಾಶಿ+ ಜರಿದುದೊ
ತಳಿತ +ಸಂದಣಿಗಿಲ್ಲ +ಕಡೆ+ಯೀ
ದಳಕೆ +ಮಾರ್ಮಲೆತ್ +ಆರು+ ನಿಲುವವರ್+ಇಂದ್ರ +ಯಮರೊಳಗೆ
ಹುಲು +ನೃಪರಿಗ್+ಈ+ ಯೊಡ್ಡು +ಗಡ +ಈ
ಬಲುಹು +ಹೊದರಿನ+ ಹೊರಳೀ+ ಯೀ +ಕಳ
ಕಳಿಕೆ +ಯೇಕೆನೆ+ ನೂಕಿದುದು +ಕುರುಸೇನೆ +ದಟ್ಟೈಸಿ

ಅಚ್ಚರಿ:
(೧) ಈ ಕಾರದ ಪದ ೫ ಬಾರಿ ಪ್ರಯೋಗ
(೨) ಜೋಡಿ ಪದಗಳು – ಪ್ರಳಯ ಪಟು, ಜಲರಾಶಿ ಜರಿದುದು, ಹೊದರಿನ ಹೊರಳಿ

ಪದ್ಯ ೩೮: ಸೈನ್ಯದ ನಡೆ ಯಾವ ರಭಸದಲ್ಲಿತ್ತು?

ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆವರೆಗಳಲಿ
ಕಡಲು ಮೊಗೆದುದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ (ವಿರಾಟ ಪರ್ವ, ೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ದುರ್ಯೋಧನನ ಸೈನ್ಯವು ಮುನ್ನುಗ್ಗಲು, ಭೂಮಿಯು ಕುಗ್ಗಿತು, ಹಾವಿನ (ಆಸಿಶೇಷನ) ಹೆಡೆಗಳು ಬಾಗಿದವು, ದಿಗ್ಗಜಗಳು ತಲೆತಗ್ಗಿಸಿದವು, ಕಡಲಿನ ಅಡಿಯಲ್ಲಿದ್ದ ರತುನಗಳು ಹೊರಬಂದವು, ಸಮುದ್ರವು ಬತ್ತಿತು, ಭೂಮಿ ಒಡೆಯಿತು, ಕಾಲುಧೂಳು ಸೂರ್ಯಮಂಡಲವನ್ನು ಮುಸುಕಿತು.

ಅರ್ಥ:
ಪೊಡವಿ: ಭೂಮಿ; ಜಡಿ: ಕುಗ್ಗು; ಫಣಿ: ಹಾವು; ಹೆಡೆ: ಪೆಡೆ, ಹಾವಿನ ಬಿಚ್ಚಿದ ತಲೆ, ಫಣಿ; ಮಡಿ: ತಗ್ಗಿಸು ಸಾವು; ಆಶಾದಂತಿ: ದಿಗ್ಗಜ; ತಲೆಗೊಡು: ಸಿದ್ಧನಾಗು; ಬಲ: ಶಕ್ತಿ; ಮೊಳಗು: ಹೊರಹೊಮ್ಮು; ಲಗ್ಗೆ:ಮುತ್ತಿಗೆ, ಆಕ್ರಮಣ; ಕಡಲು: ಸಮುದ್ರ; ಮೊಗೆ: ಹೊರಹಾಕು, ಹೊರಹೊಮ್ಮಿಸು; ರತುನ: ರತ್ನ, ಮಣಿ; ನೆಲ: ಭೂಮಿ; ಅಗ್ಗ:ಕಡಿಮೆ ಬೆಲೆ, ಶ್ರೇಷ್ಠ; ಸೇನೆ: ಸೈನ್ಯ; ವಹಿಲ: ಭೂಮಿ; ನಡೆ: ಮುನ್ನುಗ್ಗು; ಧೂಳು: ಮಣ್ಣಿನ ಪುಡಿ; ಮುಸುಕು: ಆವರಿಸು; ರವಿ: ಭಾನು; ಮಂಡಲ: ವರ್ತುಲಾಕಾರ;

ಪದವಿಂಗಡಣೆ:
ಪೊಡವಿ +ಜಡಿದುದು +ಫಣಿಯ +ಹೆಡೆಗಳು
ಮಡಿದವ್+ಆಶಾದಂತಿಗಳು +ತಲೆ
ಗೊಡಹಿದವು +ಬಲದೊಳಗೆ +ಮೊಳಗುವ +ಲಗ್ಗೆವರೆಗಳಲಿ
ಕಡಲು +ಮೊಗೆದುದು +ರತುನವನು +ನೆಲ
ನೊಡೆಯಲ್+ಅಗ್ಗದ +ಸೇನೆ +ವಹಿಲದಿ
ನಡೆದು +ಬರಲಾ +ಧೂಳಿ +ಮುಸುಕಿತು +ರವಿಯ +ಮಂಡಲವ

ಅಚ್ಚರಿ:
(೧) ಸಮುದ್ರದ ನೀರು ಕಡಿಮೆಯಾಯಿತು (ಉಕ್ಕಿತು) ಎಂದು ಹೇಳಲು – ಕಡಲು ಮೊಗೆದುದು ರತುನವನು