ಪದ್ಯ ೩೩: ಕೌರವನು ಹೊರಟ ರೀತಿ ಹೇಗಿತ್ತು?

ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ (ವಿರಾಟ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಅಲಂಕಾರಮಾಡಿದ ರಥದ ಮಧ್ಯದಲ್ಲಿ ಆಸೀನನಾದನು. ಅವನಿಗೆ ಆರತಿ, ಉಪ್ಪಾರತಿಗಳನ್ನು ಬೆಳಗಿದರು. ಘಟ್ಟರು ಅವನ ಬಿರುದುಗಳನ್ನು ಘೋಷಿಸುತ್ತಿರಲು, ನಗಾರಿ, ಕಹಳೆಗಳ ಸದು ಜಯಕಾರಗಳ ನಡುವೆ ಕೌರವನು ಹೊರಟನು.

ಅರ್ಥ:
ಆರತಿ:ನೀರಾಜನ; ಎತ್ತು: ಬೆಳಗು; ಉಪ್ಪಾರತಿ: ಉಪ್ಪಿನ ಆರತಿ, ಉಪ್ಪನ್ನು ನೀವಾಳಿಸುವುದು; ಸೂಸು:ಎರಚು, ಚಲ್ಲು; ಘನ: ಶ್ರೇಷ್ಠ; ರಥ: ಬಂಡಿ; ತೋರಣ: ಬಾಗಿಲಿನ ಅಲಂಕಾರ; ಮಧ್ಯ: ನಡುಭಾಗ; ರಾಯ: ರಾಜ; ಕುಳ್ಳಿರು: ಆಸೀನನಾದ; ಸಾರು: ಹರಡು, ಹಬ್ಬು; ಭಟ್ಟ: ಸೇವಕ, ಸೈನಿಕ; ನಾಗಾರಿ: ಒಂದು ಬಗೆಯ ಚರ್ಮ ವಾದ್ಯ; ಬಿರುದು: ; ಆವಳಿ: ಸಾಲು; ಜಯರವ: ಜಯಘೋಷ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೂಳೈಸು: ಧ್ವನಿ ಮಾಡು; ಓರಣ: ಕ್ರಮ, ಸಾಲು;

ಪದವಿಂಗಡಣೆ:
ಆರತಿಗಳ್+ಎತ್ತಿದವು +ತಳಿದ್
ಉಪ್ಪಾರತಿಯ +ಸೂಸಿದರು +ಘನರಥದ್
ಓರಣದ +ಮಧ್ಯದಲಿ +ಕೌರವರಾಯ ಕುಳ್ಳಿರಲು
ಸಾರಿದರು+ ಭಟ್ಟರು +ಮಹಾನಾ
ಗಾರಿಗಳು +ಬಿರುದಾವಳಿಯ +ಕೈ
ವಾರಿಸುವ +ಜಯರವದೊಡನೆ +ನಿಸ್ಸಾಳ +ಸೂಳೈಸೆ

ಅಚ್ಚರಿ:
(೧) ಆರತಿ, ಉಪ್ಪಾರತಿ – ಪ್ರಾಸ ಪದಗಳು

ಪದ್ಯ ೩೧: ದುರ್ಯೋಧನನು ವಿರಾಟದೇಶದ ಮೇಲೆ ಆಕ್ರಮಣಮಾಡಲು ಹೇಗೆ ತಯಾರಿ ನಡೆಸಿದನು?

ಮೋಹರವ ಮೇಳೈಸಿದನು ನಿ
ರ್ವಾಹವನು ನಿಶ್ಚೈಸಿದನು ಮ
ತ್ತೂಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ
ಸಾಹಸರನಟ್ಟಿದನು ವೈರಿಗ
ಳಾಹವಕೆ ನೆಲನಗಲದಲಿ ಬಲ
ಮೋಹಿಸಿತು ನೆರಸಿದನು ಬಹಳಾಕ್ಷೋಹಿಣೀ ಬಲವ (ವಿರಾಟ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿರಾಟ ದೇಶದ ಮೇಲೆ ದಾಳಿ ಮಾಡಲು ಬೇಕಾದ ಸೈನ್ಯವನ್ನು ಸೇರಿಸಿದನು. ಏನು ಮಾಡಬೇಕೆಂದು ನಿಶ್ಚೈಸಿದನು, ಊಹೆಕಾರರ, ಗುಪ್ತಚರರ ಮನಸ್ಸನ್ನು ಅರ್ಥೈಸಿಕೊಂಡು, ಶತ್ರುಸೈನ್ಯದ ತಾಗುಬಾಗುಗಳನ್ನು ಅಳೆದು ಗೋವುಗಳನ್ನು ಹಿಡಿದುಕೊಂಡು ಬರಬಲ್ಲ ಸಾಹಸಿಕರನ್ನು ಮುಂದೆ ಕಳಿಸಿದನು. ಶತ್ರುಗಳನ್ನೆದುರಿಸಲು ಅವನ ಅನೇಕ ಅಕ್ಷೋಹಿಣಿ ಸೈನ್ಯವು ನೆಲದಗಲಕ್ಕೆ ನೆರೆಯಿತು.

ಅರ್ಥ:
ಮೋಹರ: ಸೈನ್ಯ, ದಂಡು; ಮೇಳೈಸು: ಕೂಡಿಸು, ಸೇರಿಸು; ನಿರ್ವಾಹ: ನಿವಾರಣೋಪಾಯ, ಬೇರೆಯ ದಾರಿ; ನಿಶ್ಚೈಸು: ನಿರ್ಧರಿಸು; ಊಹೆಕಾರ: ಊಹೆ/ಅಂದಾಜು ಮಾಡುವವನು; ಮನ: ಮನಸ್ಸು; ಸೋದಿಸು: ತುರುಗು: ತುಂಬ; ಸಾಹಸ: ಶೂರ; ಅಟ್ಟು: ಮುಂದೆ ಕಳಿಸು; ವೈರಿ: ಶತ್ರು; ಆವಹ: ಗುಂಪು; ನೆಲನಗಲ: ಎಲ್ಲಾ ಕಡೆ; ಬಲ: ಸೈನ್ಯ; ಮೋಹಿಸು: ಇಷ್ಟಪಡು; ನೆರಸು: ಅಕ್ಷೋಹಿಣಿ: ಸೈನ್ಯದ ಬಲ; ಬಲ: ಶಕ್ತಿ;

ಪದವಿಂಗಡಣೆ:
ಮೋಹರವ +ಮೇಳೈಸಿದನು +ನಿ
ರ್ವಾಹವನು +ನಿಶ್ಚೈಸಿದನು +ಮತ್
ಊಹೆಕಾರರ +ಮನವ +ಸೋದಿಸಿಕೊಂಡು +ತುರುಗೊಂಬ
ಸಾಹಸರನ್+ಅಟ್ಟಿದನು +ವೈರಿಗಳ್
ಆಹವಕೆ +ನೆಲನಗಲದಲಿ +ಬಲ
ಮೋಹಿಸಿತು +ನೆರಸಿದನು +ಬಹಳ+ಅಕ್ಷೋಹಿಣೀ +ಬಲವ

ಅಚ್ಚರಿ:
(೧) ನಿರ್ವಾಹ, ನಿಶ್ಚೈಸು, ನೆರಸು, ನೆಲನಗಲ – ‘ನ’ ಕಾರದ ಪದಗಳು
(೨) ಜೋಡಿ ಪದಗಳು: ‘ಮ’ – ಮೋಹರವ ಮೇಳೈಸಿದನು; ‘ನಿ’ – ನಿರ್ವಾಹವನು ನಿಶ್ಚೈಸಿದನು; ‘ಮ’ – ಮತ್ತೂಹೆಕಾರರ ಮನವ

ಪದ್ಯ ೩೦: ವಿರಾಟ ದೇಶಕ್ಕೆ ಯಾರು ಪ್ರಯಾಣ ಮಾಡಿದರು?

ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವಂಟರೊಗ್ಗಿನಲಿ (ವಿರಾಟ ಪರ್ವ, ೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅವತ್ತಿನ ಆಸ್ಥಾನ ಮುಗಿಯಿತು. ಮರುದಿನ ಒಳ್ಳೆಯ ಗಳಿಗೆಯಲ್ಲಿ ಸುಶರ್ಮನೇ ಮೊದಲಾದವರೊಡನೆ ರಾಜನು ಹೊರಟನು. ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪಾಚಾರ್ಯ, ಕರ್ಣ ಮೊದಲಾದ ಪ್ರಮುಖರು ಚತುರಂಗ ಸೈನ್ಯದ ಪದಾತಿಗಳೊಡನೆ ಹೊರಟರು.

ಅರ್ಥ:
ಹರಿದು: ಚದುರು; ಓಲಗ: ದರ್ಬಾರು; ಮರುದಿವಸ: ಮಾರನೆಯ ದಿನ;ದಿವಸ: ವಾರ; ಗುಡಿ: ಕುಟೀರ, ಮನೆ; ಹೊರಗೆ: ಆಚೆಗೆ; ಹೊಯ್ದ: ಹೊಡೆದ; ಮುಹೂರ್ತ: ಗಳಿಗೆ; ಅರಸ: ರಾಜ; ಹೊರವಂಟು: ಹೊರಟು; ಆದಿ: ಮುಂತಾದ; ಗಡಣ:ಸಮೂಹ; ಸುರ: ದೇವತೆ; ನದಿ: ಸರೋವರ; ಸುತ: ಮಗ; ಸುರನದಿ: ಗಂಗೆ; ಸುತ: ಪುತ್ರ; ಪ್ರಧಾನ: ಮುಖ್ಯ; ಕರಿ: ಆನೆ; ತುರಗ: ಕುದುರೆ; ರಥ: ಬಂಡಿ; ಪತ್ತಿ: ಪದಾತಿ, ಕಾಲು ನಡಗೆಯವನು; ಒಗ್ಗು: ಗುಂಪು;

ಪದವಿಂಗಡಣೆ:
ಹರಿದುದ್+ಓಲಗ +ಮರುದಿವಸ +ಗುಡಿ
ಹೊರಗೆ +ಹೊಯ್ದವು +ಸನ್+ಮುಹೂರ್ತದೊಳ್
ಅರಸ +ಹೊರವಂಟನು +ಸುಶರ್ಮಾದಿಗಳ+ ಗಡಣದಲಿ
ಸುರನದೀಸುತ+ ಕರ್ಣ +ಕೃಪ +ಗುರು
ಗುರುಸುತಾದಿ +ಮಹಾ+ಪ್ರಧಾನರು
ಕರಿ+ತುರಗ +ರಥ+ಪತ್ತಿಯಲಿ +ಹೊರವಂಟರ್+ಒಗ್ಗಿನಲಿ

ಅಚ್ಚರಿ:
(೧) ಗುರು ಗುರುಸುತ – ಗುರು ಪದದ ಬಳಕೆ
(೨) ಭೀಷ್ಮರನ್ನು ಸುರನದೀಸುತ ಎಂದು ಕರೆದಿರುವುದು – ೨ ಪದ ‘ರ’ ಕಾರದಲ್ಲಿ ಬರುವಹಾಗೆ

ಪದ್ಯ ೨೯: ವಿರಾಟ ದೇಶಕ್ಕೆ ಹೋಗಲು ಯಾವ ರೀತಿ ತಯಾರಿ ನಡೆಯಿತು?

ಬೀಡು ನಡೆಯಲಿ ಮುಂದೆ ಮತ್ಸ್ಯನ
ನಾಡಿನೊಳು ಕಟಕಾಳಿ ದೂತರು
ಕೂಡೆ ಸಾರಲಿ ಕರೆಯಲಕ್ಷೋಹಿಣಿಯ ನಾಯಕರ
ಜೋಡಿಸಲಿ ಗುಡಿ ದಡ್ಡಿ ಚಂಪೆಯ
ಗೂಡಿ ಕೊಟ್ಟಿಗೆ ಬಂಡಿ ನಡೆಯಲಿ
ನಾಡ ಬಿಟ್ಟಿಗಳೆಂದು ಕೌರವರಾಯ ನೇಮಿಸಿದ (ವಿರಾಟ ಪರ್ವ, ೫ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸೈನ್ಯವು ಮುಂದೆ ಹೋಗಿ ವಿರಾಟ ದೇಶದಲ್ಲಿ ಬೀಡು ಬಿಡಲಿ. ಸೈನ್ಯವೂ, ಗುಪ್ತಚರರೂ ಮುಂದೆ ಹೋಗಲಿ, ಅಕ್ಷೋಹಿಣಿಯ ನಾಯಕರಿಗೆ ಬರಲು ಹೇಳಿ, ಜನರು ಅವರ ಪಾಳೆಯದ ಬಾಗಿಲುಗಳು, ಡೇರೆಗಳು, ದನಗಳು ಕೊಟ್ಟಿಗೆಗಳು, ಬಂಡಿಗಳು ಸಿದ್ಧವಾಗಿಸಿ ಹೊರಡಲಿ. ಪರಿಚಾರಿಕೆಗೆ ಬಿಟ್ಟಿ ಕೂಲಿಯವರನ್ನು ಜೋಡಿಸಿರಿ ಎಂದು ದುರ್ಯೋಧನ ಆಜ್ಞಾಪಿಸಿದ.

ಅರ್ಥ:
ಬೀಡು: ಆವಾಸ, ನೆಲೆ; ನಡೆ: ನಡಗೆ, ನಡೆಯುವಿಕೆ; ಮುಂದೆ: ಎದುರು; ಮತ್ಸ್ಯ: ಮೀನು, ವಿರಾಟ ದೇಶ; ನಾಡು: ದೇಶ; ಕಟಕಾಳಿ: ಸೈನ್ಯಸಮೂಹ; ದೂತ: ಸೇವಕ; ಕೂಡೆ: ಜೊತೆ; ಸಾರಲಿ: ಹೋಗಲಿ; ಕರೆ: ಬರೆಮಾಡು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನಾಯಕ: ಮುಂದಾಳು, ಮುಖ್ಯಸ್ಥ; ಜೋಡಿಸು: ಕೂಡಿಸು; ಗುಡಿ:ಗುಂಪು, ಸಮೂಹ,ಕುಟೀರ, ಮನೆ; ಚಂಪೆಯ: ಒಂದು ಬಗೆಯ ಡೇರೆ; ಕೊಟ್ಟಿಗೆ: ಹೊರೆ ಹೊರುವ ಎತ್ತು; ಬಂಡಿ: ರಥ; ನಾಡು: ದೇಶ; ಬಿಟ್ಟಿ: ಉಚಿತ, ಸಂಬಳವಿಲ್ಲದೆ ಮಾಡುವ ಕೆಲಸ; ನೇಮಿಸು: ಗೊತ್ತು ಮಾಡು; ರಾಯ; ರಾಜ;

ಪದವಿಂಗಡಣೆ:
ಬೀಡು+ ನಡೆಯಲಿ +ಮುಂದೆ +ಮತ್ಸ್ಯನ
ನಾಡಿನೊಳು +ಕಟಕಾಳಿ +ದೂತರು
ಕೂಡೆ +ಸಾರಲಿ +ಕರೆಯಲ್+ಅಕ್ಷೋಹಿಣಿಯ +ನಾಯಕರ
ಜೋಡಿಸಲಿ +ಗುಡಿ +ದಡ್ಡಿ +ಚಂಪೆಯ
ಗೂಡಿ +ಕೊಟ್ಟಿಗೆ +ಬಂಡಿ +ನಡೆಯಲಿ
ನಾಡ +ಬಿಟ್ಟಿಗಳೆಂದು +ಕೌರವರಾಯ +ನೇಮಿಸಿದ

ಅಚ್ಚರಿ:
(೧) ನಡೆಯಲಿ, ಸಾರಲಿ, ಜೋಡಿಸಲಿ – ಪ್ರಾಸ ಪದಗಳ ಬಳಕೆ
(೨) ಗುಡಿ, ಗೂಡಿ – ಪದಗಳ ಬಳಕೆ

ಪದ್ಯ ೨೮: ದ್ರೋಣರು ಯಾವ ಅಭಿಪ್ರಾಯವನ್ನು ನೀಡಿದರು?

ಪರಿಗಣಿಸಿ ನೋಡಿದೊಡೆ ಮಾಡಿದ
ವರುಷ ತತಿಯೊಳು ಹೆಚ್ಚು ಕುಂದುಂ
ಟುರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ
ಅರಿಯಲೇ ಬೇಕಾದ ಪರಿಯಿಂ
ದರಿದೆವಾದೊಡೆಯುತ್ತರೋತ್ತರ
ಧರಣಿ ಕುರುಪತಿಗೆಂದರಾ ದ್ರೋಣಾದಿ ನಾಯಕರು (ವಿರಾಟ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ವಿಚಾರಮಾಡಿ ನೋಡಿದರೆ ಈ ಸಲಹೆಯು ಸಮ್ಮತವಾಗಿದೆ, ವರುಷವೆಂದು ನಾವು ಕರೆಯುವ ಅವಧಿಯಲ್ಲಿ ಹೆಚ್ಚು ಕಡಿಮೆಗಳಿರುತ್ತವೆ. ಆದುದರಿಂದ ಈ ರಾಜಕಾರ್ಯವನ್ನು ಬೇಗ ನಡೆಸಬೇಕು. ಹೇಗಾದರು ಮಾಡಿ ಪಾಂಡವರ ಇರುವಿಕೆಯನ್ನು ಪತ್ತೆಹಚ್ಚಲೇ ಬೇಕು. ಆಗ್ ಅಈ ಭೂಮಿಯ ಒಡೆತನವು ಇನ್ನು ಮುಂದೆಯೂ ಕೌರವರ ಬಳಿಯೇ ಉಳಿಯುತ್ತದೆ, ಎಂದು ದ್ರೋಣಾದಿ ನಾಯಕರು ಹೇಳಿದರು.

ಅರ್ಥ:
ಪರಿಗಣಿಸು: ಎಣಿಸು; ನೋಡಿ: ವೀಕ್ಷಿಸಿ; ವರುಷ: ಸಂವತ್ಸರ; ತತಿ: ಸಮೂಹ, ಗುಂಪು; ಹೆಚ್ಚು: ಜಾಸ್ತಿ; ಕುಂದು: ಕಡಿಮೆ; ಉರವಣಿಸು: ದುಡುಕು, ಆತುರಗೊಳಿಸು; ನೆಗಳು: ಮಾಡು; ರಾಜಕಾರಿಯ: ರಾಜ್ಯಕೆಲಸ; ಅರಿ: ತಿಳಿ; ಬೇಕು: ಬೇಡಿಕೆ; ಪರಿ: ರೀತಿ; ಉತ್ತರೋತ್ತರ: ಯಾವಾಗಲು, ಹೆಚ್ಚು; ಧರಣಿ: ಭೂಮಿ; ನಾಯಕ: ದುರಣಿ, ಮುಖ್ಯಸ್ಥ;

ಪದವಿಂಗಡಣೆ:
ಪರಿಗಣಿಸಿ +ನೋಡಿದೊಡೆ +ಮಾಡಿದ
ವರುಷ+ ತತಿಯೊಳು +ಹೆಚ್ಚು +ಕುಂದುಂಟ್
ಉರವಣಿಸಿ +ಮಾಡುವುದು +ನೆಗಳಿದ+ ರಾಜಕಾರಿಯವ
ಅರಿಯಲೇ +ಬೇಕಾದ +ಪರಿಯಿಂದ್
ಅರಿದೆವಾದೊಡೆ+ಉತ್ತರೋತ್ತರ
ಧರಣಿ +ಕುರುಪತಿಗೆಂದರಾ+ ದ್ರೋಣಾದಿ +ನಾಯಕರು

ಅಚ್ಚರಿ:
(೧) ಅರಿ: ೪,೫ ಸಾಲಿನ ಮೊದಲ ಪದ, ತಿಳಿ ಎನ್ನು ಅರ್ಥದಲ್ಲಿ ರಚಿತವಾಗಿದೆ

ಪದ್ಯ ೨೭: ದುರ್ಯೋಧನನ ಸಲಹೆಗೆ ಭೀಷ್ಮರ ವಿಚಾರವೇನು?

ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ (ವಿರಾಟ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತಿಗೆ ಭೀಷ್ಮರು, “ವಿರಾಟನ ಗೋವುಗಳನ್ನು ಹಿಡಿದು ಪಾಂಡವರನ್ನು ಕಂಡು ಹಿಡಿಯುವ ಉಪಾಯವು ನೀತಿ ಸಮ್ಮತವಾಗಿದೆ, ಆದರೆ ಈಗಾಗಲೇ ಬಹಳ ಅವಧಿ ಮುಗಿದಿದೆ, ಇನ್ನೇನು ೫-೬ ದಿನಗಳಲ್ಲಿ ಇವರ ಅಜ್ಞಾತವಾಸದ ಕಾಲವು ಮುಗಿಯುತ್ತದೆ ಆನಂತರ ಪಾಂಡವರು ತಮ್ಮ ರಾಜ್ಯಕ್ಕೆ ಅಧಿಕಾರಿಗಳಾಗಿ ಬಿಡುತ್ತಾರೆ”, ಎಂದರು.

ಅರ್ಥ:
ಮತ: ಅಭಿಪ್ರಾಯ ;ತಪ್ಪಲ್ಲ: ಸರಿಯಾದುದು; ಅಹುದು: ಒಪ್ಪಿಗೆ, ಸರಿ; ಗತಿ:ಇರುವ ಸ್ಥಿತಿ; ಅರಿ: ತಿಳಿ; ಮಾರ್ಗ: ದಾರಿ; ಸಮ್ಮತ: ಒಪ್ಪು; ನಿರ್ಮಳ: ಶುಭ್ರ; ನೀತಿ: ನ್ಯಾಯ; ಮನ: ಮನಸ್ಸು, ಚಿತ್ತ; ಅತಿ: ಬಹಳ; ಗಳಿತ: ಬಿದ್ದು ಹೋದುದು ; ಅವಧಿ: ಕಾಲ; ದಿವಸ: ದಿನ, ವಾರ; ಸ್ಥಿತಿ: ; ಬಳಿಕ: ನಂತರ; ಕ್ಷಿತಿ: ಭೂಮಿ; ಉತ್ತರಾಯಿ: ಜವಾಬುದಾರಿ;

ಪದವಿಂಗಡಣೆ:
ಮತವಹುದು +ತಪ್ಪಲ್ಲ +ಪಾಂಡವ
ಗತಿಯನ್+ಅರಿವೊಡೆ +ಮಾರ್ಗವಿದು +ಸ
ಮ್ಮತವು +ನಿರ್ಮಳ +ನೀತಿಕಾರರ +ಮನಕೆ +ಮತವಹುದು
ಅತಿ +ಗಳಿತವಾಯ್ತ್+ಅವಧಿ +ದಿವಸ
ಸ್ಥಿತಿಯೊಳ್+ಐದ್+ಆರ್+ಆಗೆ +ಬಳಿಕ+ಈ
ಕ್ಷಿತಿಗೆ +ಪಾಂಡವರ್+ಉತ್ತರಾಯಿಗಳೆಂದನಾ +ಭೀಷ್ಮ

ಅಚ್ಚರಿ:
(೧) ಮತ, ಸಮ್ಮತ; ಗತಿ, ಅತಿ, ಸ್ಥಿತಿ, ಕ್ಷಿತಿ – ಪ್ರಾಸ ಪದಗಳು
(೨) ಜೋಡಿ ಪದಗಳು ‘ನ’, ‘ಮ’ – ನಿರ್ಮಳ ನೀತಿಕಾರರ ಮನಕೆ ಮತವಹುದು

ಪದ್ಯ ೨೬: ಸುಶರ್ಮನು ದುರ್ಯೋಧನನ ನಿರ್ಣಯಕ್ಕೆ ಏನಂದನು?

ಗುರುವಿನಭಿಮತವಹಡೆ ಕೃಪ ಮೊಗ
ದಿರುಹದಿದ್ದೊಡೆ ಭೀಷ್ಮ ಮನದಲಿ
ಮುರಿಯದಿರ್ದೊಡೆ ಗುರುಕುಮಾರನ ಮತಕೆ ಸೇರುವೊಡೆ
ವರ ಶಕುನಿಯಹುದೆಂದೊಡಾ ಸೋ
ದರರು ತಪ್ಪಲ್ಲೆಂದರಾದೊಡೆ
ಅರಸನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು (ವಿರಾಟ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸುಶರ್ಮನು ದುರ್ಯೋಧನನ ಮಾತನ್ನು ಕೇಳಿ ಅದಕ್ಕೆ ಅನುಮೋದಿಸುವ ಹಾಗೆ, ಈ ರೀತಿ ತನ್ನ ಅಭಿಪ್ರಾಯವನ್ನು ಹೇಳಿದನು. ಗುರುವರ್ಯರಾದ ದ್ರೋಣರ ಮನಸ್ಸು ಒಪ್ಪಿದರೆ, ಕೃಪಾಚಾರ್ಯರು ತಮ್ಮ ಮುಖವನ್ನು ತಿರುಗಿಸದಿದ್ದರೆ, ಭೀಷ್ಮರ ಮನಸ್ಸಲಿ ಇದು ತಪ್ಪು ಎನಿಸದಿದ್ದರೆ, ಅಶ್ವತ್ಥಾಮನಿಗೆ ಇದು ಸಮ್ಮತಿಸಿದ್ದರೆ, ಶಕುನಿಗೆ ಇದು ಒಳೆತೆಂದರೆ, ಕೌರವನ ತಮ್ಮಂದಿರು ಇದಕ್ಕ ಸಹಮತ ವ್ಯಕ್ತಪಡಿಸಿದರೆ ದೊರೆಯು ಹೇಳಿದುದೆ ಸರಿ ಎಂದು ಪರಿಗಣಿಸಬೇಕೆಂದು ಹೊಗಳಿದನು.

ಅರ್ಥ:
ಗುರು: ಆಚಾರ್ಯ; ಅಭಿಮತ: ಅಭಿಪ್ರಾಯ; ಮೊಗ: ಮುಖ, ಆನನ; ದಿರುಹ: ತಿರುಗಿಸು; ಮನ: ಚಿತ್ತ; ಮುರಿ: ಸೀಳು; ಕುಮಾರ: ಮಗ; ಮತ: ಅಭಿಪ್ರಾಯ; ಸೇರು: ಜೊತೆಗೂಡು; ವರ: ಶ್ರೇಷ್ಠ; ಅಹುದು: ಸಮ್ಮತಿಸು; ಸೋದರ: ಅಣ್ಣ ತಮ್ಮ; ತಪ್ಪು: ಸರಿಯಿಲ್ಲದ; ಅರಸ: ರಾಜ; ಎಗಳ್ದುದು: ಹೇಳಿದುದು; ಮಂತ್ರ: ಪವಿತ್ರವಾದ ಮಾತು;

ಪದವಿಂಗಡಣೆ:
ಗುರುವಿನ್+ಅಭಿಮತವಹಡೆ+ ಕೃಪ+ ಮೊಗದ್
ಇರುಹದಿದ್ದೊಡೆ +ಭೀಷ್ಮ +ಮನದಲಿ
ಮುರಿಯದಿರ್ದೊಡೆ +ಗುರು+ಕುಮಾರನ +ಮತಕೆ+ ಸೇರುವೊಡೆ
ವರ+ ಶಕುನಿ+ ಅಹುದೆಂದೊಡಾ +ಸೋ
ದರರು +ತಪ್ಪಲ್ಲೆಂದರ್+ಆದೊಡೆ
ಅರಸನ್+ಎಗಳ್ದುದೆ +ಮಂತ್ರವೆಂದು +ಸುಶರ್ಮ +ಹೊಗಳಿದನು

ಅಚ್ಚರಿ:
(೧) ಅಭಿಮತವನ್ನು ಸೂಚಿಸಲು ಬಳಸಿದ ಪದಗಳೂ – ಅಭಿಮತವಹಡೆ, ಮೊಗದಿರುಹದಿದ್ದೊಡೆ, ಮನದಲಿ ಮುರಿಯದಿದ್ದೊಡೆ, ಮತಕೆ ಸೇರುವೊಡೆ, ಅಹುದೆಂದೊಡೆ, ತಪ್ಪಲ್ಲೆಂದೊಡೆ

ಪದ್ಯ ೨೫: ಕರ್ಣನು ದುರ್ಯೋಧನನ ಸಲಹೆಗೆ ಸಹಮತವಿತ್ತನೆ?

ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯೆಯನರಿವುಪಾಯಕೆ ಬೇರೆಠಾವಿಲ್ಲ
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲಿಯೂ ಹಿರಿದಿಲ್ಲ ನಿಶ್ಚಯವೆಂದನಾ ಕರ್ಣ (ವಿರಾಟ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನ, ನೀನು ಮಾಡಿರುವ ನಿರ್ಧಾರ ಒಳಿತಾಗಿದೆ, ಇದರಲ್ಲಿ ಯಾವ ದೋಷವೂ ಇಲ್ಲ. ಇದನ್ನು ಎಲ್ಲಾರು ಒಪ್ಪುತ್ತಾರೆ, ಎಲ್ಲರ ಅಭಿಮತವೂ ಇದಾಗಿದೆ, ಶತ್ರುಗಳ ದುರ್ವಿದ್ಯೆಯನ್ನು ತಿಳಿಯಲಿ ವಿರಾಟನಗರವನ್ನು ಬಿಟ್ಟರೆ ಬೇರೆ ಜಾಗವಿಲ್ಲ. ಆ ದೇಶದಲ್ಲಿ ಈಗ ಸಮೃದ್ಧಿ ಐಶ್ವರ್ಯ ಹೆಚ್ಚಿದಂತೆ ಬೇರೆಲ್ಲಿಯೂ ಇಲ್ಲವಾದುದರಿಂದ ಪಾಂಡವರು ಅಲ್ಲಿರುವುದರಲ್ಲಿ ಅನುಮಾನವಿಲ್ಲ, ಎಂದು ಕರ್ಣನು ದುರ್ಯೋಧನನ ಮಾತನ್ನು ಅನುಮೋದಿಸಿದನು.

ಅರ್ಥ:
ಒಳ್ಳಿತು: ಸರಿಯಾಗಿಹುದು; ನಿರ್ದೋಷ: ತಪ್ಪುಮಾಡದ; ನಿರ್ಣಯ: ; ಎಲ್ಲರ: ಸಕಲ, ಸರ್ವ; ಅಭಿಮತ: ವಿಚಾರ; ರಿಪು: ವೈರಿ; ಖುಲ್ಲ: ಅಲ್ಪತನ, ಕ್ಷುದ್ರತೆ; ವಿದ್ಯೆ: ಜ್ಞಾನ; ಅರಿ: ತಿಳಿ; ಉಪಾಯ: ಯುಕ್ತಿ; ಬೇರೆ: ಇತರ; ಠಾವು:ಎಡೆ, ಸ್ಥಳ, ತಾಣ; ಇಹರು: ಇರುವರು; ಸಂಶಯ: ಅನುಮಾನ ; ದೇಶ: ರಾಷ್ಟ್ರ; ಸೊಂಪು: ಸೊಗಸು, ಹಿಗ್ಗು; ಸಿರಿ: ಐಶ್ವರ್ಯ; ಹಿರಿದು: ಹೆಚ್ಚು; ನಿಶ್ಚಯ: ದಿಟ, ಸತ್ಯ;

ಪದವಿಂಗಡಣೆ:
ಒಳ್ಳಿತಿದು +ನಿರ್ದೋಷ +ನಿರ್ಣಯವ್
ಎಲ್ಲರ+ಅಭಿಮತವಹುದು +ರಿಪುಗಳ
ಖುಲ್ಲ+ವಿದ್ಯೆಯನ್+ಅರಿವ್+ಉಪಾಯಕೆ +ಬೇರೆ+ಠಾವಿಲ್ಲ
ಅಲ್ಲಿ +ಪಾಂಡವರ್+ಇಹರು +ಸಂಶಯ
ವಿಲ್ಲ +ದೇಶದ +ಸೊಂಪು +ಸಿರಿ+ ಮ
ತ್ತೆಲಿಯೂ +ಹಿರಿದಿಲ್ಲ +ನಿಶ್ಚಯವೆಂದನಾ+ ಕರ್ಣ

ಅಚ್ಚರಿ:
(೧) ಪಾಂಡವರಿರುವಲ್ಲಿ ಸಂಪತ್ತು ಹೆಚ್ಚಿರುತ್ತದೆ ಎಂದು ಹೇಳಲು – ದೇಶದ ಸೊಂಪು ಸಿರಿ ಮತ್ತೆಲ್ಲಿಯೂ ಹಿರಿದಿಲ್ಲ
(೨) ನಿರ್ದೋಷ, ನಿರ್ಣಯ, ನಿಶ್ಚಯ – ‘ನಿ’ ಕಾರದ ಪದಗಳು

ಪದ್ಯ ೨೪: ಪಾಂಡವರನ್ನು ಹುಡುಕಲು ದುರ್ಯೋಧನನ ಉಪಾಯವೇನು?

ಅರಿ ವಿರಾಟನ ಪುರಕೆ ಹಾಯಿದು
ತುರುಸೆರೆಯ ತೆಗೆಸುವೆವು ಪಾಂಡವ
ರಿರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು
ಅರವರಿಸದಂಗೈಸುವರು ನಾ
ವರಿದುಕೊಂಬೆವು ಬಳಿಕ ವನದಲಿ
ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ (ವಿರಾಟ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶತ್ರುವಾದ ವಿರಾಟನ ರಾಜನ ನಗರಕ್ಕೆ ದಾಳಿಮಾಡಿ ಅಲ್ಲಿ ಗೋಗ್ರಹಣ ಮಾಡೋಣ, ಧರ್ಮದ ರೀತಿಯನ್ನು ಅರಿತ ಪಾಂಡವರು ಅಲ್ಲಿದ್ದರೆ ಅವರು ಗೋವುಗಳನ್ನು ಬಿಡಿಸಲು ಬಂದೇ ಬರುತ್ತಾರೆ. ಅವರನ್ನು ಗುರುತಿಸಿ ಮತ್ತೆ ಅವರನ್ನು ಹದಿಮೂರುವರ್ಷ ವನವಾಸಕ್ಕೆ ಕಳಿಸಲು ವೀಳೆಯನ್ನು ನೀಡೋಣ ಎಂದು ದುರ್ಯೋಧನನು ತನ್ನ ಉಪಾಯವನ್ನು ಹೇಳಿದನು.

ಅರ್ಥ:
ಅರಿ: ವೈರಿ, ತಿಳಿ; ಪುರ: ಊರು; ಹಾಯಿದು: ದಾಳಿ; ತುರು: ಗೋವು; ಸೆರೆ: ಬಂಧನ; ತೆಗೆಸು: ಹೊರತರು; ಇರಲು: ವಾಸಿಸುತ್ತಿರುವ; ಧರ್ಮ: ಧಾರಣ ಮಾಡಿದುದು, ನಿಯಮ; ಮೇರೆ:ಎಲ್ಲೆ, ಗಡಿ; ಮರ್ಯಾದೆ:ಪದ್ಧತಿ, ಕ್ರಮ;ಬಲ್ಲವರು: ತಿಳಿದವರು; ಅರವರಿಸು: ವಿಚಾರಿಸು; ಐಸು: ಅಷ್ಟು; ಅರಿದು: ತಿಳಿದು; ಬಳಿಕ: ನಂತರ; ವನ: ಕಾಡು; ವರುಷ: ಸಂವತ್ಸರ; ಕೊಡು: ನೀಡು; ವೀಳೆ: ಆಮಂತ್ರಣ;

ಪದವಿಂಗಡಣೆ:
ಅರಿ +ವಿರಾಟನ +ಪುರಕೆ +ಹಾಯಿದು
ತುರು+ಸೆರೆಯ +ತೆಗೆಸುವೆವು +ಪಾಂಡವರ್
ಇರಲು +ಧರ್ಮದ +ಮೇರೆ +ಮರ್ಯಾದೆಗಳ+ ಬಲ್ಲವರು
ಅರವರಿಸದಂಗ್+ಐಸುವರು+ ನಾವ್
ಅರಿದುಕೊಂಬೆವು+ ಬಳಿಕ +ವನದಲಿ
ವರುಷ +ಹದಿಮೂರಕ್ಕೆ +ಕೊಡುವೆವು +ಮತ್ತೆ +ವೀಳೆಯವ

ಅಚ್ಚರಿ:
(೧) ತುರುಸೆರೆಯ ತೆಗೆಸುವೆವು – ಗೋವುಗಳನ್ನು ಸಾಯಿಸುವೆವು ಎಂದು ಹೇಳುವ ಬಗೆ
(೨) ಅರಿ – ೧, ೫ ಸಾಲಿನ ಮೊದಲ ಪದ

ಪದ್ಯ ೨೩: ದುರ್ಯೋಧನನ ಭೀಷ್ಮರ ಸಲಹೆಗೆ ಹೇಗೆ ಉತ್ತರಿಸಿದ?

ನನ್ನಿ ನಿಮ್ಮಯ ನುಡಿಯ ಕೈಕೊಂ
ಡೆನ್ನ ಭೂಮಿಯ ನೀಯೆನಯ್ಯನ
ಬನ್ನಣೆಯ ಮಾತಿನ್ನು ಕೊಳ್ಳದು ಸಾಕು ಸಂಧಿಯನು
ಮನ್ನಿಸುತ ಮರುಳಾದೆ ನೀ ನಿ
ಷ್ಪನ್ನತೆಯ ಬೀಳ್ಕೊಂಡ ಪಾಂಡವ
ಗುನ್ನಿಗಳ ಗರುವಾಯ ಮಾಡುವಿರೆಂದು ಖಳ ನುಡಿದ (ವಿರಾಟ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
“ನಿಮ್ಮ ಮಾತಿಗೆ ನಾನು ಮಣಿದು ಈ ಭೂಮಿಯನ್ನು ಪಾಂಡವರಿಗೆ ನಾನು ಕೊಡುವುದಿಲ್ಲ. ನನ್ನ ಅಪ್ಪನ ಮಾತು ನನ್ನ ಹತ್ತಿರ ನಡೆಯುವುದಿಲ್ಲ. ನೀವು ಹೇಳಿದ ಸಂಧಿಯ ಮಾತನ್ನು ಕೇಳಿ ಹುಚ್ಚನಾದೆ. ಹೊರಗಿನವರಾದ ಪಾಂಡವರೆಂಬ ನಾಯಿಕುನ್ನಿಗಳಿಗೆ ನೀವು ಗೌರವವನ್ನು ಕೊಡುತ್ತಿರುವಿರಿ” ಎಂದು ದುರ್ಯೋಧನನು ಹೇಳಿದನು.

ಅರ್ಥ:
ನುಡಿ: ಮಾತು; ಭೂಮಿ: ಧರಿತ್ರಿ; ನೀಯೆನು: ಕೊಡೆನು; ಬನ್ನಣೆ:ವರ್ಣನೆ; ಕೊಳ್ಳದು: ಸ್ವೀಕರಿಸೆನು; ಸಾಕು: ತಡೆ; ಸಂಧಿ: ಮಾತುಕತೆ; ಮನ್ನಿಸು: ಗೌರವಿಸು; ಮರುಳು: ಹುಚ್ಚು; ನಿಷ್ಪನ್ನತೆ ಬೀಳ್ಕೊಂಡು: ವಂಶದಲ್ಲಿ ಸರಿಯಾಗಿ ಜನಿಸದ; ಕುನ್ನಿ:ನಾಯಿ; ಗರುವು: ಶ್ರೇಷ್ಠತೆ; ಖಳ: ದುಷ್ಟ;

ಪದವಿಂಗಡಣೆ:
ನನ್+ಈ +ನಿಮ್ಮಯ +ನುಡಿಯ +ಕೈಕೊಂಡ್
ಎನ್ನ +ಭೂಮಿಯ +ನೀಯ್+ಎನ್+ಅಯ್ಯನ
ಬನ್ನಣೆಯ +ಮಾತಿನ್ನು +ಕೊಳ್ಳದು +ಸಾಕು +ಸಂಧಿಯನು
ಮನ್ನಿಸುತ+ ಮರುಳಾದೆ +ನೀ +ನಿ
ಷ್ಪನ್ನತೆಯ +ಬೀಳ್ಕೊಂಡ +ಪಾಂಡವ
ಗುನ್ನಿಗಳ+ ಗರುವಾಯ +ಮಾಡುವಿರೆಂದು +ಖಳ +ನುಡಿದ

ಅಚ್ಚರಿ:
(೧) ಪಾಂಡವರನ್ನು ತೆಗಳುವ ರೀತಿ – ನಿಷ್ಪನ್ನತೆಯ ಬೀಳ್ಕೊಂಡ, ಕುನ್ನಿಗಳು
(೨) ‘ನ’ ಕಾರದ ತ್ರಿವಳಿ ಪದ – ನನ್ನಿ ನಿಮ್ಮಯ್ ನುಡಿ