ಪದ್ಯ ೨೦: ಕರ್ಣ ಮತ್ತು ಶಲ್ಯರು ಯಾವ ಜವಾಬ್ದಾರಿಯನ್ನು ವಹಿಸಿದರು?

ಅರಸ ಕೇಳೈ ಬಳಿಕ ಪೃಥ್ವೀ
ಶ್ವರರಿಗಭಿನವಗಜ ರಥಾವಳಿ
ತುರಗ ಶಸ್ತ್ರಾಸ್ತ್ರಗಳನೀವ ನಿಯೋಗ ಕರ್ಣನದು
ಕರೆಕರೆದು ಯೋಗ್ಯಾತಿಶಯವರಿ
ದಿರದೆ ಯೋಷಿಜ್ಜನಕೆ ಮದ್ರೇ
ಶ್ವರನು ಕೊಡುವವನಾದರಧಿಕೋತ್ಸವದ ಸಿರಿಮಿಗಿಲು (ಸಭಾ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬಂದ ಎಲ್ಲಾ ರಾಜರುಗಳಿಗೆ ಕುದುರೆ, ಆನೆ, ರಥ ಶಸ್ತ್ರಾಸ್ತ್ರಗಳನ್ನು ಕೊಡುವವನು ಕರ್ಣನು. ಯಾಗಕ್ಕೆ ಬಂದ ಎಲ್ಲಾ ಸ್ತ್ರೀಯರಿಗೆ ಯೋಗ್ಯತಾನುಸಾರವಾಗಿ ಸತ್ಕರಿಸುವವನು ಶಲ್ಯ.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಅಭಿನವ: ಹೊಸದಾದ; ಗಜ: ಆನೆ; ರಥ: ಬಂಡಿ; ಆವಳಿ: ಸಾಲು, ಗುಂಪು; ತುರಗ: ಕುದುರೆ; ಶಸ್ತ್ರಾಸ್ತ್ರ: ಆಯುಧ; ನಿಯೋಗ: ಸಮಿತಿ; ಕರೆ: ಬರೆಮಾಡು; ಯೋಗ್ಯ:ಅರ್ಹತೆ ; ಯೋಷಿಜನ: ಸ್ತ್ರೀ; ಆದರ: ಸತ್ಕಾರ; ಅಧಿಕ: ಹೆಚ್ಚು; ಉತ್ಸವ: ಹಬ್ಬ; ಸಿರಿ: ಐಶ್ವರ್ಯ; ಮಿಗಿಲು: ಹೆಚ್ಚು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಪೃಥ್ವೀ
ಶ್ವರರಿಗ್+ಅಭಿನವ+ಗಜ +ರಥಾವಳಿ
ತುರಗ+ ಶಸ್ತ್ರಾಸ್ತ್ರಗಳನೀವ+ ನಿಯೋಗ +ಕರ್ಣನದು
ಕರೆಕರೆದು +ಯೋಗ್ಯ +ಅತಿಶಯವರ್
ಇದಿರದೆ +ಯೋಷಿಜ್ಜನಕೆ+ ಮದ್ರೇ
ಶ್ವರನು+ ಕೊಡುವವನ್+ಆದರ್+ಅಧಿಕ್+ಉತ್ಸವದ+ ಸಿರಿ+ಮಿಗಿಲು

ಅಚ್ಚರಿ:
(೧) ಅರಸ, ಪೃಥ್ವೀಶ್ವರ – ಸಮನಾರ್ಥಕ ಪದ
(೨) ಶ್ವರ – ೨, ೬ ಸಾಲಿನ ಮೊದಲ ಪದ

ಪದ್ಯ ೧೯: ಯಾಗಕ್ಕೆ ಬಂದವರಿಗೆ ಏನನ್ನು ನೀಡಲಾಯಿತು?

ಧರಣಿ ಪತಿ ಕೇಳ್ ಶೂದ್ರ ಮೊದಲಾ
ಗಿರೆ ಸಮಸ್ತ ಪ್ರಜೆ ವಿಧಾವಂ
ತರಿಗೆ ಭೋಜನ ಗಂಧಮಾಲ್ಯಾಂಬರ ವಿಲೇಪನದ
ಉರು ನಿಯೋಗಿಗಳಿಂದ್ರ ಸೇನನು
ವರ ವಿಶೋಕನು ರುಕ್ಮನತಿ ಬಂ
ಧುರ ಸಮೀರ ಪತಾಕಸೇನನು ಸೂತರೈವರಿಗೆ (ಸಭಾ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಸಮಸ್ತ ಪ್ರಜೆಗಳಿಗೂ ಪ್ರಮುಖರಿಗೂ ಭೋಜನ, ಗಂಧ, ಪುಷ್ಪಮಾಲೆ, ವಸ್ತ್ರಗಳನ್ನು ಕೊಡಲು ಸಾರಥಿಗಳಾದ ಇಂದ್ರಸೇನ, ವಿಶೋಕ, ರುಕ್ಮ, ಸಮೀರ ಮತ್ತು ಪತಾಕಸೇನ ಎಂಬೈವರಿಗೆ ವಹಿಸಲಾಯಿತು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಶೂದ್ರ:ಚತುರ್ವರ್ಣಗಳಲ್ಲಿ ನಾಲ್ಕನೆಯದು; ಮೊದಲಾಗಿರೆ: ಮುಂತಾದ; ಸಮಸ್ತ: ಎಲ್ಲಾ; ಪ್ರಜೆ: ಜನ; ವಿಧಾವಂತ: ಧಾರ್ಮಿಕ ವಿಧಿಗಳನ್ನು ಬಲ್ಲವ; ಭೋಜನ: ಊಟ; ಗಂಧ: ಚಂದನ; ಮಾಲೆ: ಹಾರ; ಅಂಬರ: ವಸ್ತ್ರ; ವಿಲೇಪನ: ಸುಗಂಧದ್ರವ್ಯ; ಉರು: ವಿಶೇಷ; ನಿಯೋಗಿ:ನೇಮಿಸುವುದು, ಆಚರಣೆ; ವರ: ಶ್ರೇಷ್ಠ; ಬಂಧುರ:ಚೆಲುವಾದುದು; ಸೂತ: ಸಾರಥಿ;

ಪದವಿಂಗಡಣೆ:
ಧರಣಿ ಪತಿ +ಕೇಳ್ +ಶೂದ್ರ +ಮೊದಲಾ
ಗಿರೆ +ಸಮಸ್ತ +ಪ್ರಜೆ +ವಿಧಾವಂ
ತರಿಗೆ+ ಭೋಜನ +ಗಂಧಮಾಲ್ಯ+ಅಂಬರ+ ವಿಲೇಪನದ
ಉರು +ನಿಯೋಗಿಗಳ್+ಇಂದ್ರ ಸೇನನು
ವರ+ ವಿಶೋಕನು +ರುಕ್ಮನ್+ಅತಿ+ ಬಂ
ಧುರ+ ಸಮೀರ +ಪತಾಕಸೇನನು+ ಸೂತರ್+ಐವರಿಗೆ

ಅಚ್ಚರಿ:
(೧) ಸೂತರ ಹೆಸರು: ಇಂದ್ರಸೇನ, ವಿಶೋಕ, ರುಕ್ಮ, ಸಮೀರ ಮತ್ತು ಪತಾಕಸೇನ

ಪದ್ಯ ೧೮: ಪಾಕಶಾಲೆಯ ದೃಶ್ಯ ಹೇಗಿತ್ತು?

ಅರಸ ಕೇಳೈ ಪಾಕಶಾಲೆಯ
ಹಿರಿಯ ಹಂತಿಗಳಲಿ ಚತುರ್ದಶ
ಕರಿಘಟೆಗಳೆಡೆಯಾಡುವುವು ಸಂಭಾರವನು ಹೇರಿ
ಹರಿವ ರಜತ ದ್ರೋಣಿಯಲಿ ಸುರಿ
ಸುರಿದು ಸೇದುವ ರಾಟಳಂಗಳೊ
ಳೆರೆವ ಘೃತ ಮಧು ತೈಲ ಧಾರಾರಚನೆ ಚೆಲುವಾಯ್ತು (ಸಭಾ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಯಾಗಕ್ಕೆ ಬೇಕಾದ ತಿನಿಸುಗಳನ್ನು ಪಾಕಶಾಲೆಯು ನಿರ್ವಹಿಸುತ್ತಿತ್ತು. ಜನಮೇಜಯ ಕೇಳು, ಪಾಕಶಾಲೆಗಳ ಪಂಕ್ತಿಯಲ್ಲಿ ಅಡಿಗೆಗೆ ಬೇಕಾದ ಸಾಮಗ್ರಿಗಳನ್ನು ಹದಿನಾಲ್ಕು ಆನೆಗಳು ಹೊತ್ತು ತಿರುಗಾಡುತ್ತಿದ್ದವು. ರಾಟೆಗಳಿಂದ ತುಪ್ಪ, ಎಣ್ಣೆ, ಜೇನುತುಪ್ಪಗಳನ್ನು ಬೆಳ್ಳಿಯ ಕೊಳವೆಗಳಿಂದ ಹಾಯಿಸುತ್ತಿದ್ದ ನೋಟ ಮನೋಹರವಾಗಿತ್ತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪಾಕಶಾಲೆ: ಅಡುಗೆಮನೆ;; ಹಿರಿಯ: ಶ್ರೇಷ್ಠ ; ಹಂತಿ: ಪಂಕ್ತಿ, ಸಾಲು; ಚತುರ್ದಶ: ಹದಿನಾಲ್ಕು; ಕರಿ: ಆನೆ; ಘಟೆ: ಗುಂಪು; ಸಂಭಾರ:ಸಾಮಗ್ರಿ, ಸಲಕರಣೆ; ಹೇರು: ಹೊರುವಂತೆ ಮಾಡು; ಹರಿ: ಹರಿವು; ‍ಚಲಿಸು; ರಜತ: ಬೆಳ್ಳಿ; ದ್ರೋಣಿ:ದೊನ್ನೆ, ತೊಟ್ಟಿ; ಸುರಿ: ಹಾಕು; ಸೇದು: ಮೇಲಕ್ಕೆ ಇತ್ತು; ರಾಟಳ: ರಾಟೆ, ಗಾಲಿ; ರಾಟೆ: ಯಂತ್ರದಲ್ಲಿನ ಚಕ್ರ; ಎರೆ: ಸುರಿ, ಹೊಯ್ಯು; ಘೃತ: ತುಪ್ಪ; ಮಧು: ಜೇನು; ತೈಲ: ಎಣ್ಣೆ; ಧಾರ:ಪ್ರವಾಹ, ಮೇಲಿನಿಂದ ಹರಿದುಬರುವ; ಚೆಲುವು: ಸುಂದರ; ರಚನೆ: ವಿನ್ಯಾಸ;

ಪದವಿಂಗಡಣೆ:
ಅರಸ +ಕೇಳೈ +ಪಾಕಶಾಲೆಯ
ಹಿರಿಯ +ಹಂತಿಗಳಲಿ +ಚತುರ್ದಶ
ಕರಿಘಟೆಗಳ್+ಎಡೆಯಾಡುವುವು +ಸಂಭಾರವನು +ಹೇರಿ
ಹರಿವ+ ರಜತ +ದ್ರೋಣಿಯಲಿ +ಸುರಿ
ಸುರಿದು +ಸೇದುವ +ರಾಟಳಂಗಳೊಳ್
ಎರೆವ+ ಘೃತ+ ಮಧು +ತೈಲ +ಧಾರಾ+ರಚನೆ +ಚೆಲುವಾಯ್ತು

ಅಚ್ಚರಿ:
(೧) ಜೋಡಿ ಪದಗಳು – ಹಿರಿಯ ಹಂತಿಗಳಲಿ, ಸುರಿಸುರಿದು ಸೇದುವ