ಪದ್ಯ ೧೨: ಕುಮಾರವ್ಯಾಸರು ದತ್ತಾತ್ರೇಯರನ್ನು ಹೇಗೆ ಆರಾಧಿಸುತ್ತಾರೆ?

ವಂದಿತಾಮಳಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದ ನತಸಂಸಾರ ಕಾನನ ಘನ ದವಾನಳನು
ನಂದನಂದನ ಸನ್ನಿಭಯ ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲುಹುಗೆ ದೇವ ಜಗದಾರಾಧ್ಯ ಗುರುರಾಯ (ಆದಿ ಪರ್ವ, ೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಗುರುವರ್ಯರಿಗೆ ರಾಜನಾಗಿರುವ, ಎಲ್ಲರಿಂದಲು ವಂದಿಸಲ್ಪಡುವ, ಉತ್ತಮ ಚರಿತ್ರವುಳ್ಳವನು, ಅತ್ರಿಮಹರ್ಷಿಯ ಪುತ್ರನೂ, ನಮಸ್ಕರಿಸುವವರ ಪಾಪಗಳೆಂಬ ಅರಣ್ಯಗಳನ್ನು ಸುಡುವ ದಾವಾಗ್ನಿಯೂ ಶ್ರೀಕೃಷ್ಣ ಸದೃಶನೂ ಆದ, ಜಗತ್ತಿನಿಂದ ಪೂಜೆಗೊಳ್ಳುವ ಗುರುಶ್ರೇಷ್ಠನಾದ ದತ್ತಾತ್ರೇಯನು ನಮ್ಮನ್ನು ಕೃಪೆಯಿಂದ ಸಲಹಲಿ.

ಅರ್ಥ:
ವಂದಿತ: ನಮಸ್ಕರಿಸಲ್ಪಟ್ಟ; ಅಮಳ: ನಿರ್ಮಲ; ಚರಿತ: ಚರಿತ್ರೆ, ಕಥೆ; ಅಮರ: ದೇವತೆ; ನಂದ: ಕಂದ; ಕುಲ: ವಂಶ; ಚಕ್ರವರ್ತಿ: ರಾಜ; ಕಂದ: ಮಗ; ನತ:ನಮಸ್ಕಾರ ಮಾಡಿದವನು; ಸಂಸಾರ: ಭವಸಾಗರ; ಕಾನನ: ಕಾಡು; ಘನ: ಶ್ರೇಷ್ಠ; ದವ: ಕಾಡುಗಿಚ್ಚು; ನಂದನಂದನ: ಕೃಷ್ಣ; ಸನ್ನಿಭ: ಪ್ರಕಾಶಿತ;ಸಾನಂದ: ಸಂತೋಷ; ಕೃಪೆ: ದಯೆ; ಸಲಹು: ಕಾಪಾಡು; ದೇವ: ಭಗವಂತ; ಜಗತ್: ಪ್ರಪಂಚ; ಆರಾಧ್ಯ: ಪೂಜಿಸಲ್ಪಡುವ; ಗುರು: ಆಚಾರ್ಯ; ರಾಯ: ರಾಜ;

ಪದವಿಂಗಡಣೆ:
ವಂದಿತ+ಅಮಳ+ಚರಿತನ್+ಅಮರ
ಆನಂದ +ಯದುಕುಲ +ಚಕ್ರವರ್ತಿಯ
ಕಂದ +ನತ+ಸಂಸಾರ +ಕಾನನ +ಘನ +ದವಾನಳನು
ನಂದನಂದನ +ಸನ್ನಿಭಯ +ಸಾ
ನಂದದಿಂದಲೆ+ ನಮ್ಮುವನು +ಕೃಪೆ
ಯಿಂದ +ಸಲುಹುಗೆ+ ದೇವ +ಜಗದಾರಾಧ್ಯ +ಗುರುರಾಯ

ಅಚ್ಚರಿ:
(೧) ನಂದ, ಕಂದ – ಪ್ರಾಸ ಪದಗಳು
(೨) ನಂದ – ೨, ೪, ೫ ಸಾಲಿನ ಮೊದಲ ಪದ
(೩) ಕೃಷ್ಣನನ್ನು ನಂದನಂದನ ಎಂದು ಕರೆದಿರುವುದು