ಪದ್ಯ ೧೭: ದುಶ್ಯಾಸನ, ವಿಕರ್ಣ ಮತ್ತು ಸಾತ್ಯಕಿ ಯಾವ ಕೆಲಸವನ್ನು ವಹಿಸಿಕೊಂಡರು?

ನೆರೆದ ಭೂಸುರ ತತಿಯ ನೋಟಕೆ
ಕರೆಸಿ ಕುಳ್ಳಿರಿಸುವನು ಸಾತ್ಯಕಿ
ಭರದಿ ನೆಂಜಲ ತೆಗೆಸಿ ಸಾರಿಸುವುದು ವಿಕರ್ಣಂಗೆ
ಅರಸಕೇಳ್ಭೋಜನದ ಸಮನಂ
ತರದ ವೀಳೆಯಗಂಧಮಾಲ್ಯಾಂ
ಬರವನೀವಧಿಕಾರ ದುಶ್ಯಾಸನನ ವಶವಾಯ್ತು (ಸಭಾ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬ್ರಾಹ್ಮಣರನ್ನು ಕರೆದು ಯಜ್ಞವಾಟಿಕೆಯಲ್ಲಿ ಕುಳ್ಳಿರಿಸುವವನು ಸಾತ್ಯಕಿ, ಭೋಜನಾನಂತರ ಎಲೆಗಳನ್ನು ತೆಗೆಸಿ ಸಾರಿಸುವ ಕೆಲಸದ ವಿಚಾರಣೆ ವಿಕರ್ಣನಿಗೆ, ಭೋಜನಾನಂತರ ತಾಂಬೂಲ, ಗಂಧ, ಹೂವು, ವಸ್ತ್ರಗಳನ್ನು ಕೊಡುವ ಅಧಿಕಾರ ದುಶ್ಯಾಸನದ್ದು.

ಅರ್ಥ:
ನೆರೆದ: ಸೇರಿದ್ದ; ಭೂಸುರ: ಬ್ರಾಹ್ಮಣ; ತತಿ:ಸಮೂಹ; ನೋಟ: ನೋಡುವಿಕೆ; ಕರೆಸು: ಬರೆಮಾಡು; ಕುಳ್ಳಿರಿಸು: ಕೂರಿಸು, ಆಸನ; ಭರ: ಜೋರು; ಎಂಜಲು: ಊಟವಾದ ಎಲೆ; ತೆಗೆಸು: ಹೊರತರು; ಸಾರಿಸು: ಒರಿಸು, ಸ್ವಚ್ಛಮಾಡು; ಅರಸ: ರಾಜ; ಭೋಜನ: ಊಟ; ಸಮನಂತರ: ಆದಮೇಲೆ; ವೀಳೆ: ತಾಂಬೂಲ; ಗಂಧ: ಸುಗಂಧದ ದ್ರವ್ಯ; ಮಾಲ: ಹೂವಿನ ಮಾಲೆ; ಅಂಬರ: ವಸ್ತ್ರ; ಅಧಿಕಾರ: ಕಾರ್ಯನಿರ್ವಾಹಕ ಸ್ಥಾನ; ವಶ: ಒಳಪಟ್ಟ;

ಪದವಿಂಗಡಣೆ:
ನೆರೆದ +ಭೂಸುರ +ತತಿಯ +ನೋಟಕೆ
ಕರೆಸಿ+ ಕುಳ್ಳಿರಿಸುವನು +ಸಾತ್ಯಕಿ
ಭರದಿನ್+ ಎಂಜಲ +ತೆಗೆಸಿ+ ಸಾರಿಸುವುದು +ವಿಕರ್ಣಂಗೆ
ಅರಸ+ಕೇಳ್+ಭೋಜನದ +ಸಮನಂ
ತರದ+ ವೀಳೆಯ+ಗಂಧ+ಮಾಲ್ಯ
ಅಂಬರವನೀವ್+ಅಧಿಕಾರ +ದುಶ್ಯಾಸನನ+ ವಶವಾಯ್ತು

ಅಚ್ಚರಿ:
(೧) ಸಾತ್ಯಕಿ, ವಿಕರ್ಣ, ದುಶ್ಯಾಸನ ಜವಾಬ್ದಾರಿಯನ್ನು ವಿವರಿಸುವ ಪದ್ಯ

ಪದ್ಯ ೧೬: ಕೃಪಾಚಾರ್ಯ ಅಶ್ವತ್ಥಾಮ ಮತ್ತು ವಿದುರರು ಯಾವ ಕೆಲಸವನ್ನು ವಹಿಸಿಕೊಂಡರು?

ವಿತತ ಭೂಸುರ ದಕ್ಷಿಣೆಗೆ ಗುರು
ಸುತ ನಿಯೋಗ ಸಮಸ್ತರತ್ನ
ಪ್ರತತಿಗಳನಾರೈದು ತರಿಸುವನಾ ಕೃಪಾಚಾರ್ಯ
ಘೃತವು ದಧಿ ಮಧು ತೈಲ ಕತ್ತುರಿ
ಸಿತಲವಣ ಸಂಭಾರ ಶಾಕೋ
ಚಿತ ಸುವಸ್ತುವ ಕೊಡು ಕೊಂಬಾರೈಕೆ ವಿದುರಂಗೆ (ಸಭಾ ಪರ್ವ, ೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಯಾಗವು ಸುಸೂತ್ರದಲ್ಲಿ ನಡೆಯಲು ಬೇಕಾದ ಉಳಿದ ಕೆಲಸಗಳ ಮೇಲ್ವಿಚಾರವನ್ನು ಉಳಿದವರು ವಹಿಸಿಕೊಂಡರು. ಅಶ್ವತ್ಥಾಮನು ಬ್ರಾಹ್ಮಣರಿಗೆ ದಕ್ಷಿಣೆ ಕೊಡಿಸುವುದು, ರತ್ನಗಳನ್ನು ಆಯ್ಕೆಮಾಡಿ ತರಿಸುವ ಜವಾಬ್ಧಾರಿ ಕೃಪಾಚಾರ್ಯರದ್ದು, ಅಡಿಗೆ ಬೇಕಾದ ಸಾಮಗ್ರಿಗಳಾದ ತುಪ್ಪ, ಮೊಸರು, ಜೇನುತುಪ್ಪ, ಎಣ್ಣೆ, ಕಸ್ತೂರಿ, ಉಪ್ಪು, ಸಾಂಬಾರ ಸಾಮಗ್ರಿಗಳು, ತರಕಾರಿಗಳನ್ನು ಕೊಡಿಸುವ ಜವಾಬ್ಧಾರಿಯನ್ನು ವಿದುರರು ವಹಿಸಿಕೊಂಡರು.

ಅರ್ಥ:
ವಿತತ:ಶ್ರೇಷ್ಠವಾದ; ಭೂಸುರ: ಬ್ರಾಹ್ಮಣ, ದಕ್ಷಿಣೆ: ಕಾಣಿಕೆ; ಗುರು: ಆಚಾರ್ಯ; ಸುತ: ಮಗ; ನಿಯೋಗ: ಗುಂಪು; ಸಮಸ್ತ: ಎಲ್ಲಾ; ರತ್ನ: ಮುತ್ತು; ಪ್ರತತಿ: ಸಮೂಹ; ತರಿಸು: ಬರೆಮಾಡು; ಘೃತ: ತುಪ್ಪ; ದಧಿ: ಮೊಸರು; ಮಧು: ಜೇನುತುಪ್ಪ; ತೈಲ: ಎಣ್ಣೆ; ಕತ್ತುರಿ: ಕಸ್ತೂರಿ; ಸಿತಲವಣ: ಬಿಳಿಉಪ್ಪು; ಸಿತ: ಶ್ವೇತ, ಬಿಳಿ; ಸಂಭಾರ: ಸಾಂಬಾರು, ಸಾರು; ಶಾಕ: ತರಕಾರಿ; ಉಚಿತ: ಸರಿಯಾದ; ಸುವಸ್ತು: ಒಳ್ಳೆಯ ಸಾಮಗ್ರಿ; ಕೊಡು: ನೀಡು; ಆರೈಕೆ: ನೋಡಿಕೊಳ್ಳು;

ಪದವಿಂಗಡಣೆ:
ವಿತತ +ಭೂಸುರ+ ದಕ್ಷಿಣೆಗೆ+ ಗುರು
ಸುತ +ನಿಯೋಗ+ ಸಮಸ್ತರತ್ನ
ಪ್ರತತಿಗಳನ್+ಆರೈದು +ತರಿಸುವನಾ +ಕೃಪಾಚಾರ್ಯ
ಘೃತವು +ದಧಿ +ಮಧು +ತೈಲ +ಕತ್ತುರಿ
ಸಿತಲವಣ+ ಸಂಭಾರ +ಶಾಕೋ
ಚಿತ +ಸುವಸ್ತುವ +ಕೊಡು +ಕೊಂಬಾರೈಕೆ +ವಿದುರಂಗೆ

ಅಚ್ಚರಿ:
(೧) ಅಶ್ವತ್ಥಾಮ, ಕೃಪಾಚಾರ್ಯ, ವಿದುರರ ಕೆಲಸವನ್ನು ವಿವರಿಸಿರುವುದು
(೨) ಆರೈಕೆ, ಆರೈದು – ಪದಗಳ ಬಳಕೆ

ಪದ್ಯ ೧೫: ಯಾಗದ ಕೆಲಸವನ್ನು ಯಾರು ನೋಡಿಕೊಳ್ಳುತ್ತಿದ್ದರು?

ಸವನ ಸಾಧನ ಸರ್ವ ಸಂಹಾ
ರವನು ಧೌಮ್ಯನು ತರಿಸಿಕೊಡಿಸುವ
ನವನಿಪತಿಗಳ ಪಾರುಪತ್ಯದ ನೋಟ ಸಂಜಯಗೆ
ವಿವಿಧ ಋಷಿ ಯಾಜ್ಞಿಕರು ಮಾಂತ್ರಿಕ
ನಿವಹ ಸಹದೇವಂಗೆ ಭೋಜ್ಯ
ಪ್ರವರದಧಿಕಾರದ ನಿಯೋಗ ಯುಯುತ್ಸುವಿನ ಮೇಲೆ (ಸಭಾ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಯಜ್ಞಕ್ಕೆ ಬೇಕಾದ ಸಾಮಗ್ರಿಗಳನ್ನು ತರಿಸಿಕೊಡುವ ಜವಾಬ್ಧಾರಿಯನ್ನು ಧೌಮ್ಯನು ಹೊತ್ತುಕೊಂಡನು, ಬಂದ ರಾಜರನ್ನು ಅವರವರ ಪ್ರತಿಷ್ಠೆಗೆ ಅನುಸಾರವಾಗಿ ನೋಡಿಕೊಳ್ಳುವ ಜವಾಬ್ಧಾರಿಯನ್ನು ಸಂಜಯನು ವಹಿಸಿದನು. ಋಷಿಗಳು, ಯಜ್ಞದಲ್ಲಿ ನಿಯುಕ್ತರಾದ ಋಷಿಗಳು, ಮಂತ್ರಪಠಣ ಮಾಡುವವರನ್ನು ಸಹದೇವನು ನೋಡಿಕೊಳ್ಳುತ್ತಿದ್ದನು. ಯುಯುತ್ಸುವು ಪಾಕಶಾಲೆಯ ಮೇಲ್ವಿಚಾರಣೆ ನೋಡುಕೊಳ್ಳುತ್ತಿದ್ದನು.

ಅರ್ಥ:
ಸವನ: ಯಜ್ಞ, ಯಾಗ; ಸಾಧನ: ಸಾಮಗ್ರಿ, ಸಹಾಯ; ಸರ್ವ: ಎಲ್ಲಾ; ಸಂಭಾರ: ಸಲಕರಣೆ; ಅವನಿ: ಭೂಮಿ; ಅವನಿಪತಿ: ರಾಜ; ತರಿಸು: ಬರೆಮಾಡು; ಕೊಡಿಸು: ನೀಡು; ಪಾರುಪತ್ಯ:ಮೇಲ್ವಿಚಾರಣೆ, ಉಸ್ತು ವಾರಿ, ಪ್ರತಿಷ್ಠೆ; ವಿವಿಧ: ಹಲವಾರು; ಋಷಿ: ಮುನಿ; ನಿವಹ: ಗುಂಪು; ಭೋಜ್ಯ: ಊಟ; ಪ್ರವರ: ಪ್ರಧಾನ ವ್ಯಕ್ತಿ; ಅಧಿಕಾರ: ಆಳ್ವಿಕೆ, ಹಕ್ಕು; ನಿಯೋಗ: ಗುಂಪು;

ಪದವಿಂಗಡಣೆ:
ಸವನ +ಸಾಧನ +ಸರ್ವ +ಸಂಹಾ
ರವನು +ಧೌಮ್ಯನು +ತರಿಸಿಕೊಡಿಸುವನ್
ಅವನಿಪತಿಗಳ +ಪಾರುಪತ್ಯದ +ನೋಟ +ಸಂಜಯಗೆ
ವಿವಿಧ+ ಋಷಿ +ಯಾಜ್ಞಿಕರು +ಮಾಂತ್ರಿಕ
ನಿವಹ +ಸಹದೇವಂಗೆ +ಭೋಜ್ಯ
ಪ್ರವರದ್+ಅಧಿಕಾರದ+ ನಿಯೋಗ +ಯುಯುತ್ಸುವಿನ+ ಮೇಲೆ

ಅಚ್ಚರಿ:
(೧) ಧೌಮ್ಯ, ಸಂಜಯ, ಸಹದೇವ, ಯುಯುತ್ಸುವಿನ ಜವಾಬ್ಧಾರಿಯನ್ನು ವಿವರಿಸುವ ಪದ್ಯ
(೨) ನಿವಹ, ನಿಯೋಗ – ಸಮಾನಾರ್ಥಕ ಪದ
(೩) ೧ನೇ ಸಾಲಿನ ಎಲ್ಲಾ ಪದಗಳು “ಸ” ಕಾರದಿಂದ ಪ್ರಾರಂಭ