ಪದ್ಯ ೯೭: ನಾರದರ ಯಜ್ಞದ ಮಾತು ಯುಧಿಷ್ಠಿರನನ್ನು ಹೇಗೆ ಆವರಿಸಿತು?

ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯ ಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಣದ
ನೆನಹು ಭಾರವಣೆಯಲಿ ಬಿದ್ದುದ್ದು ಧರ್ಮನಂದನನ (ಸಭಾ ಪರ್ವ, ೧ ಸಂಧಿ, ೯೭ ಪದ್ಯ)

ತಾತ್ಪರ್ಯ:
ಧರ್ಮರಾಯನ ಮನಸ್ಸಿನಲ್ಲಾದ ಭಾವನೆಯನ್ನು ಕುಮಾರವ್ಯಾಸರು ಸೊಗಸಾಗಿ ಚಿತ್ರಿಸಿದ್ದಾರೆ. ನಾರದರು ರಾಜಸೂಯದ ಮಹಿಮೆಯನ್ನು ಯುಧಿಷ್ಠಿರನಿಗೆ ತಿಳಿಸಿದ ಮೇಲೆ, ಧರ್ಮರಾಯನು ಅದನ್ನೇ ಯೋಚಿಸ ತೊಡಗಿದನು, ನಾರದರ ಮಾತಿನ ಬಲೆಗೆ ಧರ್ಮರಾಯನ ಚೈತನ್ಯವೆಂಬ ಮೃಗವು ಸಿಲುಕಿತು, ಆತನ ಮಾತಿನ ಮಳೆಯಲ್ಲಿ ಧರ್ಮರಾಯನ ಜ್ಞಾನೇಂದ್ರಿಯಗಳು ನೆನದವು, ಮನದಾಳದಲ್ಲಿ ಈ ರಾಜಸೂಯ ಯಾಗವನ್ನು ಮಾಡಬೇಕೆಂಬ ಚಿಗುರು ಮೊಳೆಯಿತು, ಅವನ ನಾಲಿಗೆ ಕೊನೆಯಲ್ಲಿ ಆ ಚಿಗುರಿನ ಎರಡು ಎಲೆಗಳು ಹೊರಹೊಮ್ಮಿದವು (ಈತನು ಇದನ್ನು ನುಡಿಯಬೇಕೆಂದು ಸೂಚಿಸುವ ಹಾಗೆ), ಈ ಮಹಾಶ್ರೇಷ್ಠವಾದ ಯಜ್ಞದ ಆಲೋಚನೆಯಲ್ಲಿ ಅವನ ಮನಸ್ಸು ನಿಂತಿತು.

ಅರ್ಥ:
ಮುನಿ: ಋಷಿ; ಮಾತು: ವಾಕ್; ಬಲೆ: ಜಾಲ; ಸಿಲುಕು: ಬಂಧನಕ್ಕೊಳಗಾಗು; ಜನಪತಿ: ರಾಜ; ಚೈತನ್ಯ:ಪ್ರಜ್ಞೆ, ಶಕ್ತಿ; ಮೃಗ: ಪಶು; ವಚ: ಮಾತು; ವರುಷ: ಮಳೆ; ನೆನೆ: ತೋಯು, ಒದ್ದೆಯಾಗು; ಕರಣ:ಕಿವಿ, ಜ್ಞಾನೇಂದ್ರಿಯ; ಕರಣವೃತ್ತಿ: ಇಂದ್ರಿಯ ವ್ಯಾಪಾರ; ಮನ: ಮನಸ್ಸು; ಅಂಕುರ:ಮೊಳಕೆ, ಚಿಗುರು;ನಾಲಿಗೆ: ಜಿಹ್ವ; ಕೊನೆ: ತುದಿ; ಎರಡು: ಇಬ್ಬಾಗ; ಯಜ್ಞ: ಕ್ರತು; ನೆನಹು: ನೆನಪು; ಭಾರವಣೆ: ಘನತೆ, ಗೌರವ; ಬಿದ್ದು: ಕೆಳಕ್ಕೆ ಬೀಳು; ನಂದನ: ಕುಮಾರ;

ಪದವಿಂಗಡಣೆ:
ಮುನಿಯ +ಮಾತಿನ +ಬಲೆಗೆ+ ಸಿಲುಕಿತು
ಜನಪತಿಯ +ಚೈತನ್ಯ +ಮೃಗವ್
ಈತನ +ವಚೋ +ವರುಷದಲಿ+ ನೆನೆದವು+ ಕರಣ+ವೃತ್ತಿಗಳು
ಮನದಲ್+ಅಂಕುರವಾಯ್ತು +ನಾಲಿಗೆ
ಗೊನೆಯಲ್+ಎರಡ್+ಎಲೆಯಾಯ್ತು +ಯಜ್ಣದ
ನೆನಹು +ಭಾರವಣೆಯಲಿ+ ಬಿದ್ದುದ್ದು +ಧರ್ಮನಂದನನ

ಅಚ್ಚರಿ:
(೧) ಒಂದು ಆಲೋಚನೆಯು ಹೇಗೆ ಆವರಿಸಿಕೊಳ್ಳುತ್ತದೆ ಎಂದು ಕವಿ ವಿವರಿಸಿದ್ದಾರೆ, ಧರ್ಮರಾಯನ ತಿಳುವಳಿಕೆಯನ್ನು ಮೃಗಕ್ಕೆ ಹೋಲಿಸಿ, ಹೇಗೆ ಮೃಗವು ಬಲೆಗೆ ಸಿಲುಕುವುದೋ ಅದೇ ರೀತಿ ಧರ್ಮರಾಯನ ಚೈತನ್ಯವೆಂಬ ಮೃಗವು ನಾರದರ ಮಾತಿನ ಬಲೆಗೆ ಸಿಲುಕಿತು
(೨) ಯಾವ ರೀತಿ ಮಳೆಯಲ್ಲಿ ನೆನೆದರೆ ಸಂಪೂರ್ಣ ಒದ್ದೆ ಯಾಗುವುದೋ ಅದೇ ರೀತಿ, ನಾರದರ ಮಾತಿನ ಮಳೆಯಲ್ಲಿ ಧರ್ಮರಾಯನ ಸರ್ವ ಇಂದ್ರಿಯಗಳು ನೆನೆದವು
(೩) ಗಿಡವು ಚಿಗುರೊಡೆದು ಎರಡು ಎಲೆಗಳು ಬರುವಹಾಗೆ, ಧರ್ಮರಾಯನ ಮನಸ್ಸಿನಲ್ಲಿ ಈ ರಾಜಸೂಯ ಯಾಗ ಮಾಡಬೇಕೆಂಬ ಬೀಜವು ಗಟ್ಟಿಯಾಗಿ ನೆಲಸಿ ಚಿಗುರೊಡೆದು ಅವನ ನಾಲಿಗೆಯಲ್ಲಿ ಎರಡು ಎಲೆಯಾಗಿ ಹೊರಹೊಮ್ಮಿತು ಮತ್ತು
ಧರ್ಮರಾಯನು ಸಂಪೂರ್ಣವಾಗಿ ಈ ನೆನಪಿನಲ್ಲಿ ಬಿದ್ದನು ಎಂದು ವಿವರಿಸುತ್ತಾರೆ
(೫) ಜೋಡಿ ಪದಗಳು – ಮುನಿಯ ಮಾತಿನ, ವಚೋ ವರುಷ;

ನಿಮ್ಮ ಟಿಪ್ಪಣಿ ಬರೆಯಿರಿ