ಪದ್ಯ ೯೮: ರಾಜಸೂಯ ಯಾಗದ ಚಿಂತನೆ ಯುಧಿಷ್ಠಿರನನ್ನು ಹೇಗ ಆವರಿಸಿತು?

ಕಳುಹಿದನು ಸುರಮುನಿಯನುದರದೊ
ಳಿಳಿದು ದಂತಸ್ತಾಪ ಯಜ್ಞದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರನರಯಣನ (ಸಭಾ ಪರ್ವ, ೧ ಸಂಧಿ, ೯೮ ಪದ್ಯ)

ತಾತ್ಪರ್ಯ:
ಧರ್ಮರಾಯನು ನಾರದರನ್ನು ಬೀಳ್ಕೊಟ್ಟನು, ರಾಜಸೂಯದ ಯಜ್ಞದ ತಾಪವು ಅವನ ಹಲ್ಲುಗಳಿಂದ ಆತನ ಹೊಟ್ಟೆಯವರೆಗೂ ಮುಟ್ಟಿತು, ಈ ಮಹಾಯಾಗವನ್ನು ಮಾಡುವುದು ಎಷ್ಟು ಕಷ್ಟವೆಂದು ಅವನ ಪ್ರತಿನಡಿಗೆಯಲ್ಲೂ ನೆನೆದು ನಡುಗುತ್ತಾ ಯೋಚನಾ ಭಂಗಿಯಲಿ ಅವನ ಕೆನ್ನೆಯಮೇಲೆ ತನ್ನ ಕೈಯನ್ನು ಇಟ್ಟನು. ತಲೆಯನ್ನು ಆಚೆ ಈಚೆ ತೂಗುತ್ತಾ ಚಿಂತಿಸಿ, ಕಳವಳಗೊಂಡು, ಸುಧಾರಿಸಿಕೊಂಡು ವೀರನಾರಾಯಣನನ್ನು ನೆನೆಯುತ್ತಿದ್ದನು.

ಅರ್ಥ:
ಕಳುಹು: ಬೀಳ್ಕೊಡು; ಸುರಮುನಿ: ನಾರದ; ಸುರ: ದೇವತೆ; ಮುನಿ: ಋಷಿ; ಉದರ: ಹೊಟ್ಟೆ; ದಂತ: ಹಲ್ಲು; ತಾಪ: ಸಂಕಟ, ಕಷ್ಟ; ಇಳಿ: ಕೆಳಕ್ಕೆ ಬರು; ಯಜ್ಞ: ಕ್ರತು; ಬಲುಹು: ಉತ್ತಮ; ನೆನೆದು: ಜ್ಞಾಪಿಸಿಕೊಳ್ಳು; ಕಂಪಿಸು:ನಡುಗು; ಕೈ: ಹಸ್ತ; ಗಲ್ಲ: ಕೆನ್ನೆ; ಒಲೆ: ತೂಗಾಡು; ಮಿಗೆ: ಮತ್ತು, ಅಧಿಕವಾಗು; ಕಳವಳ: ತಳಮಳ, ಗೊಂದಲ; ಪದುಳಿಸು: ಸಮಾಧಾನ; ಭೂಪತಿ: ರಾಜ; ತಿಲಕ: ಶ್ರೇಷ್ಠ; ಚಿಂತಿಸಿ: ಯೋಚಿಸು; ನೆನೆವು: ಸ್ಮರಿಸು;

ಪದವಿಂಗಡಣೆ:
ಕಳುಹಿದನು +ಸುರಮುನಿಯನ್+ಉದರದೊಳ್
ಇಳಿದು +ದಂತಸ್ತಾಪ+ ಯಜ್ಞದ
ಬಲುಹ +ನೆನೆದ್+ಅಡಿಗಡಿಗೆ +ಕಂಪಿಸಿ +ಕೈಯ +ಗಲ್ಲದಲಿ
ಒಲೆದೊಲೆದು +ಭಾವದಲಿ+ ಮಿಗೆ +ಕಳ
ವಳಿಸಿ +ಪದುಳಿಸಿ +ಕೊಳುತ +ಭೂಪತಿ
ತಿಲಕ +ಚಿಂತಿಸಿ +ನೆನೆವುತಿದ್ದನು+ ವೀರನರಯಣ

ಅಚರಿ:
(೧) ಜೋಡಿ ಪದಗಳು – ನೆನೆದು, ಅಡಿಗಡಿಗೆ, ಒಲೆದೊಲೆದು
(೨) ಯೋಚನೆಯ ತೀವ್ರತೆಯನ್ನು ಬಣ್ಣಿಸಲು – ನೋವು ಹಲ್ಲಿನಿಂದ ಹೊಟ್ಟೆಯೊಳಗೆ ಇಳಿಯಿತು – ಉದರದೊಳಿಳಿದು ದಂತಸ್ತಾಪ
(೩) ಯೋಚಿಸುವ ಬಗೆ: ಕಂಪಿಸಿ ಕೈಯ ಗಲ್ಲದಲಿ, ಒಲೆದೊಲೆದು ಭಾವದಲಿ
(೪) ಯುಧಿಷ್ಠಿರನನ್ನು ಭೂಪತಿ ತಿಲಕ ನೆಂದು ಕರೆದಿರುವುದು

ಪದ್ಯ ೯೭: ನಾರದರ ಯಜ್ಞದ ಮಾತು ಯುಧಿಷ್ಠಿರನನ್ನು ಹೇಗೆ ಆವರಿಸಿತು?

ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯ ಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಣದ
ನೆನಹು ಭಾರವಣೆಯಲಿ ಬಿದ್ದುದ್ದು ಧರ್ಮನಂದನನ (ಸಭಾ ಪರ್ವ, ೧ ಸಂಧಿ, ೯೭ ಪದ್ಯ)

ತಾತ್ಪರ್ಯ:
ಧರ್ಮರಾಯನ ಮನಸ್ಸಿನಲ್ಲಾದ ಭಾವನೆಯನ್ನು ಕುಮಾರವ್ಯಾಸರು ಸೊಗಸಾಗಿ ಚಿತ್ರಿಸಿದ್ದಾರೆ. ನಾರದರು ರಾಜಸೂಯದ ಮಹಿಮೆಯನ್ನು ಯುಧಿಷ್ಠಿರನಿಗೆ ತಿಳಿಸಿದ ಮೇಲೆ, ಧರ್ಮರಾಯನು ಅದನ್ನೇ ಯೋಚಿಸ ತೊಡಗಿದನು, ನಾರದರ ಮಾತಿನ ಬಲೆಗೆ ಧರ್ಮರಾಯನ ಚೈತನ್ಯವೆಂಬ ಮೃಗವು ಸಿಲುಕಿತು, ಆತನ ಮಾತಿನ ಮಳೆಯಲ್ಲಿ ಧರ್ಮರಾಯನ ಜ್ಞಾನೇಂದ್ರಿಯಗಳು ನೆನದವು, ಮನದಾಳದಲ್ಲಿ ಈ ರಾಜಸೂಯ ಯಾಗವನ್ನು ಮಾಡಬೇಕೆಂಬ ಚಿಗುರು ಮೊಳೆಯಿತು, ಅವನ ನಾಲಿಗೆ ಕೊನೆಯಲ್ಲಿ ಆ ಚಿಗುರಿನ ಎರಡು ಎಲೆಗಳು ಹೊರಹೊಮ್ಮಿದವು (ಈತನು ಇದನ್ನು ನುಡಿಯಬೇಕೆಂದು ಸೂಚಿಸುವ ಹಾಗೆ), ಈ ಮಹಾಶ್ರೇಷ್ಠವಾದ ಯಜ್ಞದ ಆಲೋಚನೆಯಲ್ಲಿ ಅವನ ಮನಸ್ಸು ನಿಂತಿತು.

ಅರ್ಥ:
ಮುನಿ: ಋಷಿ; ಮಾತು: ವಾಕ್; ಬಲೆ: ಜಾಲ; ಸಿಲುಕು: ಬಂಧನಕ್ಕೊಳಗಾಗು; ಜನಪತಿ: ರಾಜ; ಚೈತನ್ಯ:ಪ್ರಜ್ಞೆ, ಶಕ್ತಿ; ಮೃಗ: ಪಶು; ವಚ: ಮಾತು; ವರುಷ: ಮಳೆ; ನೆನೆ: ತೋಯು, ಒದ್ದೆಯಾಗು; ಕರಣ:ಕಿವಿ, ಜ್ಞಾನೇಂದ್ರಿಯ; ಕರಣವೃತ್ತಿ: ಇಂದ್ರಿಯ ವ್ಯಾಪಾರ; ಮನ: ಮನಸ್ಸು; ಅಂಕುರ:ಮೊಳಕೆ, ಚಿಗುರು;ನಾಲಿಗೆ: ಜಿಹ್ವ; ಕೊನೆ: ತುದಿ; ಎರಡು: ಇಬ್ಬಾಗ; ಯಜ್ಞ: ಕ್ರತು; ನೆನಹು: ನೆನಪು; ಭಾರವಣೆ: ಘನತೆ, ಗೌರವ; ಬಿದ್ದು: ಕೆಳಕ್ಕೆ ಬೀಳು; ನಂದನ: ಕುಮಾರ;

ಪದವಿಂಗಡಣೆ:
ಮುನಿಯ +ಮಾತಿನ +ಬಲೆಗೆ+ ಸಿಲುಕಿತು
ಜನಪತಿಯ +ಚೈತನ್ಯ +ಮೃಗವ್
ಈತನ +ವಚೋ +ವರುಷದಲಿ+ ನೆನೆದವು+ ಕರಣ+ವೃತ್ತಿಗಳು
ಮನದಲ್+ಅಂಕುರವಾಯ್ತು +ನಾಲಿಗೆ
ಗೊನೆಯಲ್+ಎರಡ್+ಎಲೆಯಾಯ್ತು +ಯಜ್ಣದ
ನೆನಹು +ಭಾರವಣೆಯಲಿ+ ಬಿದ್ದುದ್ದು +ಧರ್ಮನಂದನನ

ಅಚ್ಚರಿ:
(೧) ಒಂದು ಆಲೋಚನೆಯು ಹೇಗೆ ಆವರಿಸಿಕೊಳ್ಳುತ್ತದೆ ಎಂದು ಕವಿ ವಿವರಿಸಿದ್ದಾರೆ, ಧರ್ಮರಾಯನ ತಿಳುವಳಿಕೆಯನ್ನು ಮೃಗಕ್ಕೆ ಹೋಲಿಸಿ, ಹೇಗೆ ಮೃಗವು ಬಲೆಗೆ ಸಿಲುಕುವುದೋ ಅದೇ ರೀತಿ ಧರ್ಮರಾಯನ ಚೈತನ್ಯವೆಂಬ ಮೃಗವು ನಾರದರ ಮಾತಿನ ಬಲೆಗೆ ಸಿಲುಕಿತು
(೨) ಯಾವ ರೀತಿ ಮಳೆಯಲ್ಲಿ ನೆನೆದರೆ ಸಂಪೂರ್ಣ ಒದ್ದೆ ಯಾಗುವುದೋ ಅದೇ ರೀತಿ, ನಾರದರ ಮಾತಿನ ಮಳೆಯಲ್ಲಿ ಧರ್ಮರಾಯನ ಸರ್ವ ಇಂದ್ರಿಯಗಳು ನೆನೆದವು
(೩) ಗಿಡವು ಚಿಗುರೊಡೆದು ಎರಡು ಎಲೆಗಳು ಬರುವಹಾಗೆ, ಧರ್ಮರಾಯನ ಮನಸ್ಸಿನಲ್ಲಿ ಈ ರಾಜಸೂಯ ಯಾಗ ಮಾಡಬೇಕೆಂಬ ಬೀಜವು ಗಟ್ಟಿಯಾಗಿ ನೆಲಸಿ ಚಿಗುರೊಡೆದು ಅವನ ನಾಲಿಗೆಯಲ್ಲಿ ಎರಡು ಎಲೆಯಾಗಿ ಹೊರಹೊಮ್ಮಿತು ಮತ್ತು
ಧರ್ಮರಾಯನು ಸಂಪೂರ್ಣವಾಗಿ ಈ ನೆನಪಿನಲ್ಲಿ ಬಿದ್ದನು ಎಂದು ವಿವರಿಸುತ್ತಾರೆ
(೫) ಜೋಡಿ ಪದಗಳು – ಮುನಿಯ ಮಾತಿನ, ವಚೋ ವರುಷ;

ಪದ್ಯ ೯೬: ರಾಜಸೂಯ ಯಾಗದ ಮಹತ್ವವೇನು?

ಆ ಮಹಾಕ್ರತುವರವ ನೀ ಮಾ
ಡಾ ಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ (ಸಭಾ ಪರ್ವ, ೧ ಸಂಧಿ, ೯೬ ಪದ್ಯ)

ತಾತ್ಪರ್ಯ:
ನಾರದರು ಯುಧಿಷ್ಠಿರನಿಗೆ ರಾಜಸೂಯ ಯಾಗವನ್ನು ಮಾಡಲು ಪ್ರೇರೇಪಿಸುತ್ತಾರೆ. ರಾಜನೆ, ನೀನು ಶ್ರೇಷ್ಠವಾದ ಈ ರಾಜಸೂಯ ಮಹಾಯಾಗವನ್ನು ಮಾಡಿದರೆ, ನಿನ್ನ ತಂದೆಯು ಇಂದ್ರನ ಆಸ್ಥಾನದಲ್ಲಿ ಮಹಾಸುಕೃತಿಗಳಾದ ರಾಜರ ಪಂಕ್ತಿಯಲ್ಲಿರುತ್ತಾರೆ, ಚಂದ್ರವಂಶದ ರಾಜಕುಮಾರರಲ್ಲಿ ಮಹಾಶಕ್ತರಾದ ನೀವು ಇರಬೇಕಾದರೆ ನಿಮ್ಮ ತಂದೆ ಏನುತಾನೆ ಅಸಾಧ್ಯ” ಎಂದು ನಾರದರು ನುಡಿದರು.

ಅರ್ಥ:
ಕ್ರತು: ಯಜ್ಞ; ವರ: ಶ್ರೇಷ್ಠ; ನಿರಾಮಯ: ಮುಕ್ತನಾದ,ಪರಿಶುದ್ಧವಾದ; ಅಯ್ಯ: ತಂದೆ; ತೇಜ: ಕಾಂತಿ; ಸೋಮ: ಚಂದ್ರ; ವಂಶ:ಕುಲ; ರಾಯ: ರಾಜ; ಉದ್ದಾಮ: ಶ್ರೇಷ್ಠವಾದ; ಸ್ತೋಮ: ಗುಂಪು, ಸಮೂಹ; ಕುಮಾರ: ಮಕ್ಕಳು; ಮುನಿಪ: ಋಷಿ; ಮಹೀಶ್ವರ: ರಾಜ; ಬಲುಗೈ: ಪರಾಕ್ರಮ;

ಪದವಿಂಗಡಣೆ:
ಆ +ಮಹಾ+ಕ್ರತುವರವ +ನೀ +ಮಾಡ್
ಆ +ಮಹೀಶ್ವರ+ ಪಂಕ್ತಿಯಲ್ಲಿ+ ನಿ
ರಾಮಯನು +ನಿಮ್ಮಯ್ಯನ್+ಇಹನು +ಸತೇಜದಲಿ +ಬಳಿಕ
ಸೋಮವಂಶದ+ ರಾಯರೊಳಗ್+
ಉದ್ದಾಮರಹ +ಬಲುಗೈ +ಕುಮಾರ
ಸ್ತೋಮ +ನೀವಿರಲ್+ಅಯ್ಯಗೇನ್+ಅರಿದೆಂದನಾ +ಮುನಿಪ

ಅಚ್ಚರಿ:
(೧) ೧, ೨ ಸಾಲಿನ ಮೊದಲ ಪದ “ಆ” ಕಾರದಿಂದ ಪ್ರಾರಂಭ
(೨) ಮಹೀಶ್ವರ, ರಾಯ – ಸಮನಾರ್ಥಕ ಪದ

ಪದ್ಯ ೯೫: ಹರಿಶ್ಚಂದ್ರ ಮತ್ತು ಪಾಂಡು ತಮ್ಮ ಕಾಲದ ಬಳಿಕ ಯಾವ ಲೋಕಕ್ಕೆ ಹೋದರು?

ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಫನವನರಿಯಾ ಧರ್ಮನಂದನಯೆಂದನಾ ಮುನಿಪ (ಸಭಾ ಪರ್ವ, ೧ ಸಂಧಿ, ೯೫ ಪದ್ಯ)

ತಾತ್ಪರ್ಯ:
ಇಷ್ಟುಜನರಿರುವ ಇಂದ್ರನ ಆಸ್ಥಾನದಲ್ಲಿ ಒಳ್ಳೆಯ ಕೆಲಸ ಮಾಡಿದ ತೇಜಸ್ವಿಗಳಿರುವರೆಂದರಲ್ಲವೆ? ಹಾಗದರೆ ಹರಿಶ್ಚಂದ್ರ ಮಹಾರಾಜರು ಮಾಡಿದ ಪುಣ್ಯವೇನು, ನಮ್ಮ ತಂದೆ ಪಾಂಡುಮಹಾರಾಜರು ಮಾಡಿದ ಪಾಪವೇನು ಎಂದು ಧರ್ಮರಾಯಕೇಳಲು, ನಾರದರು ನಕ್ಕು, ರಾಜಸೂಯ ಯಾಗದ ಮಹಿಮೆ ನಿನಗೆ ತಿಳಿಯದೆ ಎಂದು ಕೇಳಿದರು.

ಅರ್ಥ:
ಇನಿಬರ್: ಇಷ್ಟು ಜನ; ಆಸ್ಥಾನ: ಸಭೆ; ಸುಕೃತಿ: ಭಾಗ್ಯವಂತ, ಪುಣ್ಯವಂತ; ತೇಜಸ್ವಿ: ಕಾಂತಿಯುಳ್ಳವನು; ಗಡ:ಅಲ್ಲವೆ; ಸುರಮುನಿ: ನಾರದ; ಸುಕೃತ: ಒಳ್ಳೆಯ ಕೆಲಸ; ಫಲ: ಫಲಿತಾಂಶ; ಜನಪ: ರಾಜ; ಅಪದೆಸೆ: ದುರ್ಭಾಗ್ಯ; ದುಷ್ಕೃತ: ಕೆಟ್ಟ ಕೆಲಸ; ನಕ್ಕು: ಹಸನ್ಮುಖ; ಘನ: ಶ್ರೇಷ್ಠ; ಅರಿ: ತಿಳಿ; ನಂದನ: ಮಗ; ಮುನಿಪ: ಋಷಿ;

ಪದವಿಂಗಡಣೆ:
ಇನಿಬರ್+ಆಸ್ಥಾನದಲಿ+ ಸುಕೃತಿಗಳ್
ಎನಿಪ +ತೇಜಸ್ವಿಗಳು +ಗಡ+ ಸುರ
ಮುನಿ +ಹರಿಶ್ಚಂದ್ರಂಗೆ +ಸೇರಿದ +ಸುಕೃತ +ಫಲವೇನು
ಜನಪನ್+ಅಪದೆಸೆಗ್+ಏನು +ದುಷ್ಕೃತವ್
ಎನಲು+ ನಕ್ಕನು +ರಾಜಸೂಯದ
ಫನವನ್+ಅರಿಯಾ +ಧರ್ಮನಂದನ+ಎಂದನಾ +ಮುನಿಪ

ಅಚ್ಚರಿ:
(೧) ಸುಕೃತ, ದುಷ್ಕೃತ – ವಿರುದ್ಧ ಪದಗಳು
(೨) ಇನಿಬರ್, ಗಡ – ಪದಗಳ ಬಳಕೆ
(೩) ೧, ೪ ಸಾಲಿನಲ್ಲಿ ೨ ಪದಗಳು ಮಾತ್ರ – ಇನಿಬರಾಸ್ಥಾನದಲಿ ಸುಕೃತಿಗ; ಜನಪನಪದೆಸೆಗೇನು ದುಷ್ಕೃತ
(೪) ೧-೪ ಸಾಲುಗಳ ಕೊನೆ ಪದಗಳು – “ಉ” ಕಾರದಿಂದ ಪ್ರಾರಂಭ – ಸುಕೃತಿ, ಸುರ, ಸುಕೃತ, ದುಷ್ಕೃತ