ಪದ್ಯ ೯೪: ಬ್ರಹ್ಮನ ಹಿರಿಮೆ ಎಂತಹದು?

ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನ ಚತುರ್ದಶವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿಯಾವುದೈ ನೃಪತಿ (ಸಭಾ ಪರ್ವ, ೧ ಸಂಧಿ, ೯೪ ಪದ್ಯ)

ತಾತ್ಪರ್ಯ:
ಬ್ರಹ್ಮನ ಆಸ್ಥಾನದ ಹಿರಿಮೆ ಎಂತಹುದೆಂದು ನಾರದರು ವಿವರಿಸುತ್ತಾ, ಮುನಿಗಳೇ ಬ್ರಹ್ಮನ ಊಳಿಗದ ಹುಡುಗರು, ಮಂತ್ರಾಭಿಮಾನಿದೇವತೆಗಳು ಓಲೆಕಾತಿಯರು, ದೇವತೆಗಳೇ ಆತನ ಸೇವಕರು, ಸೂರ್ಯನೇ ಮೊದಲಾದ ಗ್ರಹಗಳು ಅವನ ಸಹಚರರು, ಚತುರ್ದಶ ವಿದ್ಯೆಗಳು ಬ್ರಹ್ಮನ ವಂದಿಮಾಗಧರು, ಇವರೆಲ್ಲರು ಬ್ರಹ್ಮನ ಆಸ್ಥಾನದಲ್ಲಿರುವವರು, ಇದು ಬ್ರಹ್ಮನ ಹಿರಿಮೆ.

ಅರ್ಥ:
ಮುನಿ: ಋಷಿ; ಮಾಣಿ:ವಟು, ಬ್ರಹ್ಮಚಾರಿ, ಬಾಲಕ; ಮಂತ್ರ:ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಂಗನೆ: ಸ್ತ್ರೀ; ಓಲೆಕಾತಿ:ಸೇವಕಿ; ಸುರ: ದೇವತೆ; ಜನ: ಸಮೂಹ; ಕಿಂಕರ:ಸೇವಕ; ಸೂರ್ಯ: ರವಿ; ಆದಿ: ಮುಂತಾದ; ಸಹಚರ: ಜೊತೆಯಲ್ಲಿ ಓಡಾಡುವವರು; ಘನ: ಶ್ರೇಷ್ಠ; ವಿದ್ಯೆ: ಜ್ಞಾನ; ಪಾಠಕ: ಹೊಗಳುಭಟ್ಟ; ಪಾಡು: ಹಾಡು; ಪದುಮ: ಕಮಲ; ಆಸನ: ಕುಳಿತಿರುವ; ಪರಠುವ: ಶ್ರೇಷ್ಠತೆ; ಸಭೆ: ದರ್ಬಾರು; ಸರಿ: ಸಮಾನ; ನೃಪತಿ: ರಾಜ;

ಪದವಿಂಗಡಣೆ:
ಮುನಿಗಳೇ +ಮಾಣಿಯರು +ಮಂತ್ರ
ಅಂಗನೆಯರ್+ಓಲೆಯಕಾತಿಯರು+ ಸುರ
ಜನವೆ +ಕಿಂಕರ+ಜನವು +ಸೂರ್ಯಾದಿಗಳೆ +ಸಹಚರರು
ಘನ +ಚತುರ್ದಶ+ವಿದ್ಯೆ +ಪಾಠಕ
ಜನವಲೈ+ ಪಾಡೇನು +ಪದುಮ
ಆಸನನ +ಪರುಠವವಾ+ ಸಭೆಗೆ +ಸರಿಯಾವುದೈ +ನೃಪತಿ

ಅಚ್ಚರಿ:
(೧) ಮಾಣಿ, ಓಲೆಕಾತಿ, ಕಿಂಕರ, ಸಹಚರ, ಪಾಠಕ – ಜೊತೆಯಲ್ಲಿರುವವರ ವಿವರ
(೨) ೧ ಸಾಲಿನ ಎಲ್ಲಾ ಪದ “ಮ” ಕಾರದಿಂದ ಪ್ರಾರಂಭ
(೩) “ಜನ” ಪದದ ಬಳಕೆ – ಸುರಜನ, ಕಿಂಕರಜನ, ಪಾಠಕಜನ
(೪) “ಪ” ಕಾರದ ಪದದ ಗುಂಪು – ಪಾಠಕಜನವಲೈ ಪಾಡೇನು ಪದುಮಾಸನನ ಪರುಠವವಾ

ಪದ್ಯ ೯೩: ಬ್ರಹ್ಮನ ಆಸ್ಥಾನವು ಹೇಗಿರುತ್ತದೆ?

ಬಗೆಯೊಳಗೆ ಮೊರೆವುದು ಚತುರ್ದಶ
ಜಗವೆನಲು ಜಾವಳವೆ ತಸ್ಯೋ
ಲಗದ ಸಿರಿ ಪರಮೇಷ್ಠಿಗೇನರಿದೈ ಮಹೀಪತಿಯೆ
ಸುಗಮಗಾನಿಯರುಪನಿಷದ ವಿ
ದ್ಯೆಗಳು ವೇದಕ್ರತು ಪುರಾಣಾ
ದಿಗಳು ಬಿರುದಾವಳಿಯ ಪಾಠಕರಾತನಿದಿರಿನಲಿ (ಸಭಾ ಪರ್ವ, ೧ ಸಂಧಿ, ೯೩ ಪದ್ಯ)

ತಾತ್ಪರ್ಯ:
ಬ್ರಹ್ಮನ ಆಸ್ಥಾನದ ವರ್ಣನೆಯನ್ನು ನಾರದರು ಮಾಡುತ್ತಾರೆ. ತನ್ನ ಮನೋ ಸಂಕಲ್ಪದಿಂದಲೇ ಹದಿನಾಲ್ಕು ಲೋಕಗಳನ್ನು ಸೃಷ್ಠಿಮಾಡಬಲ್ಲ ಸಾಮರ್ಥ್ಯವಿರುವ ಬ್ರಹ್ಮ, ಅವನ ಆಸ್ಥಾನವು ಹೇಗಿರಬಹುದು? ಆತನಿಗೆ ಏನು ಕಡಿಮೆ, ಅವನಿಗೆ ಸಾಧ್ಯವಲ್ಲದ್ದಾವುದು? ಉಪನಿಷದ್ವಿದ್ಯೆಗಳು ಅವನ ಆಸ್ಥಾನದಲ್ಲಿ ಸಂಗೀತ ಹೇಳುವವರುವೇದಗಳು, ಯಜ್ಞಗಳು, ಪುರಾಣಗಳು ಬ್ರಹ್ಮನ ಹೊಗಳುಭಟ್ಟರು ಎಲ್ಲರು ಇರುವರು.

ಅರ್ಥ:
ಬಗೆ: ಆಲೋಚನೆ; ಮೊಳೆವುದು: ಹೊರಹೊಮ್ಮು; ಚತುರ್ದಶ: ಹದಿನಾಲ್ಕು; ಜಗ: ಜಗತ್ತು, ಪ್ರಪಂಚ; ಜಾವಳ: ಸಾಧಾರಣ; ಓಲಗ: ಸಭೆ, ದರ್ಬಾರು; ಸಿರಿ: ಐಶ್ವರ್ಯ; ಪರಮೇಷ್ಠಿ: ಬ್ರಹ್ಮ; ಅರಿ: ತಿಳಿ; ಮಹೀಪತಿ: ರಾಜ; ಸುಗಮ: ಸುಲಭ; ಗಾನಿಯರು: ಗಾಯಕರು; ವಿದ್ಯೆ: ಜ್ಞಾನ; ಕ್ರತು: ಯಾಗ; ಪುರಾಣ: ಹಿಂದಿನ; ಆದಿ: ಮುಂತಾದ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಪಾಠಕರು:ಹೊಗಳುಭಟ್ಟ; ಇದಿರು: ಎದುರು;

ಪದವಿಂಗಡಣೆ:
ಬಗೆ+ಯೊಳಗೆ+ ಮೊರೆವುದು + ಚತುರ್ದಶ
ಜಗವ್+ಎನಲು +ಜಾವಳವೆ+ ತಸ್ಯ+
ಓಲಗದ+ ಸಿರಿ+ ಪರಮೇಷ್ಠಿಗ್+ಏನ್+ ಅರಿದೈ +ಮಹೀಪತಿಯೆ
ಸುಗಮ+ಗಾನಿಯರ್+ಉಪನಿಷದ+ ವಿ
ದ್ಯೆಗಳು +ವೇದಕ್ರತು+ ಪುರಾಣಾ
ದಿಗಳು +ಬಿರುದಾವಳಿಯ +ಪಾಠಕರ್+ಆತನ್+ಇದಿರಿನಲಿ

ಅಚ್ಚರಿ:
(೧)

ಪದ್ಯ ೯೨: ವರುಣ ಮತ್ತು ಕುಬೇರರ ಸಭೆಯು ಹೇಗಿತ್ತು?

ವರುಣ ಸಭೆಯೊಳಗಿಹವು ಭುಜಗೇ
ಸ್ವ್ಹರ ಸಮುದ್ರ ನದೀ ನದಾವಳಿ
ಗಿರಿ ತರುವ್ರಜವೆನಿಪ ಸಂಖ್ಯಾರಹಿತ ವಸ್ತುಗಳು
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೯೨ ಪದ್ಯ)

ತಾತ್ಪರ್ಯ:
ವರುಣನ ಸಭೆಯೊಳಗೆ ನಾಗರಾಜರು, ನದೀನದಗಳು, ಬೆಟ್ಟಗಳ ಗುಂಪು, ಮರಗಿಡಗ ಕಾಡುಗಳ ಸಮೂಹ ಮುಂತಾದ ಅಸಂಖ್ಯಾತ ವಸ್ತುಗಳಿವೆ. ಕುಬೇರನ ಸಭೆಯು ಎಂಬತ್ತು ಯೋಜನ ಅಗಲವಾಗಿದ್ದು, ಶಿವನ ಮಿತ್ರನಾದ ಅವನ ಐಶ್ವರ್ಯ ಎಣಿಕೆಗೆ ಸಿಗುವುದಿಲ್ಲ.

ಅರ್ಥ:
ವರುಣ: ನೀರಿನ ಅಧಿದೇವತೆ; ಸಭೆ: ದರ್ಬಾರು; ಭುಜಗ: ಹಾವು; ಸಮುದ್ರ: ಜಲಧಿ, ಸಾಗರ; ನದಿ: ಹೊಳೆ, ತೊರೆ; ಗಂಡು ಹೊಳೆ, ನದ: ನದಿಯ ಪುಲ್ಲಿಂಗ ರೂಪ, ಗಂಡು ಹೊಳೆ (ಉದಾ: ಬ್ರಹ್ಮಪುತ್ರ); ಆವಳಿ: ಗುಂಪು; ಗಿರಿ: ಬೆಟ್ಟ; ತರು: ಮರ; ವ್ರಜ: ಗುಂಪು; ಸಂಖ್ಯಾರಹಿತ: ಎಣಿಕೆಗೆಬಾರದ; ವಸ್ತು: ಸಾಮಾನು; ಅರಸ: ರಾಜ; ಕುಬೇರ:ಧನಪತಿ; ಪರಿ: ರೀತಿ; ಅಗಲ: ವಿಸ್ತಾರ; ಯೋಜನ: ದೂರದ ಅಳತೆಯ ಒಂದು ಪ್ರಮಾಣ, ಸುಮಾರು ೧೨ ಮೈಲಿ; ಹರ: ಈಶ್ವರ; ಸಖ: ಮಿತ್ರ; ಸಿರಿ: ಐಶ್ವರ್ಯ; ಸದರ:ಸಲಿಗೆ, ಸುಲಭ; ಭೂಪಾಲ: ರಾಜ;

ಪದವಿಂಗಡಣೆ:
ವರುಣ+ ಸಭೆಯೊಳಗ್+ಇಹವು +ಭುಜಗೇ
ಶ್ವರ +ಸಮುದ್ರ +ನದೀ +ನದಾವಳಿ
ಗಿರಿ +ತರು+ವ್ರಜವ್+ಎನಿಪ +ಸಂಖ್ಯಾರಹಿತ +ವಸ್ತುಗಳು
ಅರಸ+ ಕೇಳು +ಕುಬೇರ +ಸಭೆಯಾ
ಪರಿ+ಅಗಲವ್+ಎಂಭತ್ತು +ಯೋಜನ
ಹರಸಖನ +ಸಿರಿ +ಸದರವೇ +ಭೂಪಾಲ +ಕೇಳೆಂದ

ಅಚ್ಚರಿ:
(೧) ಅರಸ, ಭೂಪಾಲ – ಸಮನಾರ್ಥಕ ಪದ
(೨) ಎಣಿಸಕ್ಕಾಗದ ಎಂದು ತಿಳಿಸಲು – ಸಂಖ್ಯಾರಹಿತ ಪದದ ಬಳಕೆ