ಪದ್ಯ ೮೩: ಸೇವಕನ ಲಕ್ಷಣಗಳೇನು?

ದೊರೆಯಕಾಣುತ ವಂದಿಸುತಲಂ
ಕರಿಸುತಂತರಿಸುತ್ತ ಮಿಗೆ ಹ
ತ್ತಿರನೆನಿಸದತಿ ದೂರನೆನಿಸದೆ ಮಧ್ಯಗತನೆನಿಸಿ
ಪರಿವಿಡಿಯಲೋಲೈಸುತರಸನ
ಸಿರಿಮೊಗವನೀಕ್ಷಿಸುತ ಬೆಸಸಲು
ಕರಯುಗವನಾನುವನೆ ಸೇವಕನರಸ ಕೇಳೆಂದ (ಸಭಾ ಪರ್ವ, ೧ ಸಂಧಿ, ೮೩ ಪದ್ಯ)

ತಾತ್ಪರ್ಯ:
ದೊರೆಯನ್ನು ಕಂಡು ವಂದಿಸಿ, ಅವನ ಅಲಂಕಾರವನ್ನು ಸರಿಪಡಿಸಿ ದೂರನಿಂತು ಹತ್ತಿರವೂ ಅಲ್ಲ ದೂರವೂ ಅಲ್ಲ ಎನ್ನಿಸದೆ ಮಧ್ಯದಲ್ಲಿದ್ದು, ಕ್ರಮವಾಗಿ ಅವನನ್ನು ಓಲೈಸುತ್ತಾ ರಾಜನ ಮುಖವನ್ನು ನೋಡಿಯೇ ಕೈಕೊಳ್ಳುವವನು ಸೇವಕ.

ಅರ್ಥ:
ದೊರೆ: ರಾಜ; ಕಾಣುತ: ನೋಡುತ; ವಂದಿಸು: ನಮಸ್ಕರಿಸು; ಅಂಕರಿಸು: ಒಪ್ಪಿಕೊ; ಅಂತರಿಸು: ಮರೆಯಾಗು; ಮಿಗೆ: ಮತ್ತು; ಹತ್ತಿರ: ಸಮೀಪ; ಅತಿ: ತುಂಬ; ದೂರ: ಅಂತರ, ಸಮೀಪವಲ್ಲದ; ಮಧ್ಯ: ನಡುವೆ; ಪರಿವಿಡಿ:ರೀತಿ, ಕ್ರಮ; ಓಲೈಸು: ಸೇವೆಮಾಡು, ಉಪಚರಿಸು; ಅರಸ: ರಾಜ; ಸಿರಿ: ಐಶ್ವರ್ಯ; ಮೊಗ: ಮುಖ; ಈಕ್ಷಿಸು: ನೋಡುತ; ಬೆಸಸು: ಹೇಳು; ಕರ: ಕೈ, ಹಸ್ತ; ಕರಯುಗ: ಎರಡು ಕೈಗಳು; ಆನು:ವಹಿಸು; ಸೇವಕ: ದಾಸ;

ಪದವಿಂಗಡಣೆ:
ದೊರೆಯ+ಕಾಣುತ +ವಂದಿಸುತಲ್+
ಅಂಕರಿಸುತ್+ಅಂತರಿಸುತ್ತ+ ಮಿಗೆ+ ಹ
ತ್ತಿರನ್+ಎನಿಸದ್+ಅತಿ +ದೂರನ್+ಎನಿಸದೆ+ ಮಧ್ಯ+ಗತನ್+ಎನಿಸಿ
ಪರಿವಿಡಿಯಲ್+ಓಲೈಸುತ್+ಅರಸನ
ಸಿರಿಮೊಗವನ್+ಈಕ್ಷಿಸುತ +ಬೆಸಸಲು
ಕರಯುಗವನ್+ಆನುವನೆ +ಸೇವಕನ್+ಅರಸ +ಕೇಳೆಂದ

ಅಚರಿ:
(೧) ದೊರೆ, ಅರಸ – ಸಮನಾರ್ಥಕ ಪದ
(೨) ಅರಸ – ೪, ೬ ಸಾಲಿನಲ್ಲಿ ಬರುವ ಪದ
(೩) ಹತ್ತಿರ, ದೂರ – ವಿರುದ್ಧ ಪದ
(೪) ಹತ್ತಿರ, ದೂರ, ಮಧ್ಯ – ಅಂತರವನ್ನು ತೋರಿಸುವ ಪದ