ಪದ್ಯ ೮೨: ಪುರೋಹಿತನ ಲಕ್ಷಣಗಳೇನು?

ಚಂಡನೀತಿ ಸ್ಥಾನ ಶೌಚೋ
ದ್ದಂಡ ಗರ್ಗಾಂಗಿರಸ ನಿಪುಣನ
ಪಂಡಿತಪ್ರಿಯ ಶಾಂತಿ ಪೌಷ್ಟಿಕ ಕರ್ಮಕೋವಿದನ
ಚಂಡ ದೈವಜ್ಞನನು ನುತಗುಣ
ಮಂಡಿತನ ಬಹುಶಾಸ್ತ್ರವಿದನನು
ಖಂಡಿತನ ಪೌರೋಹಿತನ ಪಡೆದಿಹೆಯ ಎಂದ (ಸಭಾ ಪರ್ವ, ೧ ಸಂಧಿ, ೮೨ ಪದ್ಯ)

ತಾತ್ಪರ್ಯ:
ಪ್ರಚಂಡ ರಾಜನೀತಿಜ್ಞನೂ, ಶುಚಿಯೂ, ಗರ್ಗ, ಅಂಗಿರಸ ಶಾಸ್ತ್ರನಿಪುಣನೂ, ಪಂಡಿತರಿಗೆ ಪ್ರೀತಿ ಪಾತ್ರನೂ, ಶಾಂತಿಕರ್ಮ, ಅಭ್ಯುದಯ, ಇಷ್ಟಪ್ರಾಪ್ತಿ ಕರ್ಮಗಳಲ್ಲಿ ನಿಪುಣನೂ, ಮಂತ್ರಶಾಸ್ತ್ರ ಪ್ರವೀಣನೂ ಸದ್ಗುಣಶಾಲಿಯೂ, ಅನೇಕ ಶಾಸ್ತ್ರಗಳಲ್ಲಿ ನಿಪುಣನೂ ಖಂಡಿತ ಸ್ವಭಾವದವನೂ ಆದ ಪುರೋಹಿತನು ನಿನಗಿರುವನೇ, ಎಂದು ನಾರದರು ಕೇಳಿದರು.

ಅರ್ಥ:
ಚಂಡ:ಶೂರ, ಪರಾಕ್ರಮಿ; ನೀತಿ:ಮಾರ್ಗ, ದರ್ಶನ; ಸ್ಥಾನ:ನೆಲೆ, ಸ್ಥಿತಿ; ಶೌಚ: ನೈರ್ಮಲ್ಯ, ಪರಿಶುದ್ಧತೆ; ಉದ್ದಂಡ: ಪ್ರಚಂಡವಾದ; ಗರ್ಗ: ಗಾರ್ಗ್ಯ ಋಷಿ; ನಿಪುಣ:ವಿದ್ವಾಂಸ,ಪಾರಂಗತ; ಪಂಡಿತ:ವಿದ್ವಾಂಸ; ಪ್ರಿಯ:ಇಷ್ಟ; ಶಾಂತಿ:ನೆಮ್ಮದಿ; ಪೌಷ್ಟಿಕ: ಶಕ್ತಿಯನ್ನು ಶಕ್ತಿಯನ್ನು ಕೊಡುವಂತಹದು; ಕರ್ಮ: ಕೆಲಸ, ಕಾರ್ಯ; ಕೋವಿದ:ವಿದ್ವಾಂಸ; ದೈವಜ್ಞ:ಭವಿಷ್ಯವನ್ನು ಹೇಳುವವನು; ನುತ:ಸ್ತುತಿಸಲ್ಪಡುವ; ಗುಣ: ನಡತೆ, ಸ್ವಭಾವ; ಮಂಡಿತ:ಶೋಭೆಗೊಂಡ; ಬಹು: ಬಹಳ; ಶಾಸ್ತ್ರ:ಧಾರ್ಮಿಕ ವಿಷಯ; ಖಂಡಿತ:ನಿಶ್ಚಿತವಾಗಿ; ಪೌರೋಹಿತ:ಪೂಜಾವಿಧಾನವನ್ನು ನೆರವೇರಿಸುವವ;

ಪದವಿಂಗಡಣೆ:
ಚಂಡ+ನೀತಿ +ಸ್ಥಾನ +ಶೌಚ
ಉದ್ದಂಡ +ಗರ್ಗ+ಅಂಗಿರಸ+ ನಿಪುಣನ
ಪಂಡಿತಪ್ರಿಯ+ ಶಾಂತಿ+ ಪೌಷ್ಟಿಕ +ಕರ್ಮ+ಕೋವಿದನ
ಚಂಡ +ದೈವಜ್ಞನನು +ನುತ+ಗುಣ
ಮಂಡಿತನ+ ಬಹು +ಶಾಸ್ತ್ರವಿದನನು
ಖಂಡಿತನ+ ಪೌರೋಹಿತನ+ ಪಡೆದಿಹೆಯ+ ಎಂದ

ಅಚ್ಚರಿ:
(೧) ಚಂಡ – ೧, ೪ ಸಾಲಿನ ಮೊದಲ ಪದ
(೨) ಮಂಡಿತನ, ಖಂಡಿತನ – ಪ್ರಾಸ ಪದ

ಪದ್ಯ ೮೧: ಅಂತಃಪುರದ ಮೇಲ್ವಿಚಾರಕನ ಲಕ್ಷಣಗಳೇನು?

ಪಲಿತಕಾಯ ಕುರೂಪಿಯನು ನಿ
ರ್ಮಲನ ಲೋಭಿಯ ಸಾವಧಾನಿಯ
ಸಲೆ ಜಿತೇಂದ್ರಿಯನಿಂಗಿತಾಕಾರ ಪ್ರಭೇದಕನ
ಮಲಿನನನು ಕಡುಶುಚಿಯನಬಲಾ
ವಳಿಯ ಸುಯಿಧಾನಕ್ಕೆ ನಿಲಿಸುವು
ದಿಳೆಯೊಳಗ್ಗಳ ಜಾಣ್ಮೆಯುಂಟೇ ಭೂಪ ನಿನಗೆಂದ (ಸಭಾ ಪರ್ವ, ೧ ಸಂಧಿ, ೮೧ ಪದ್ಯ)

ತಾತ್ಪರ್ಯ:
ವಯೋವೃದ್ಧನೂ, ಕುರೂಪಿಯೂ, ನಿರ್ಮಲನೂ, ಲೋಭಿಯೂ, ಸಮಾಧಾನವುಳ್ಳವನೂ, ಜಿತೇಂದ್ರಿಯನು ಆಕಾರವನ್ನು ನೋಡಿ ಇಂಗಿತವನ್ನರಿಯಬಲ್ಲನೂ, ಅತ್ಯಂತ ಶುಚಿಯಾದವನೂ, ಈ ಲಕ್ಷಣಗಳುಳ್ಳ ವ್ಯಕ್ತಿಯನ್ನು ಹೆಂಗಸರ ರಕ್ಷಣೆಗೆ ಅಂತಃಪುರದ ಮೇಲ್ವಿಚಾರಣೆಗೆ ನಿಲ್ಲಿಸುವುದು ಅತ್ಯಂತ ಯೋಗ್ಯ ಎಂದು ನಾರದರು ಯುಧಿಷ್ಠಿರನಿಗೆ ಹೇಳಿದರು.

ಅರ್ಥ:
ಪಲಿತ: ವೃದ್ಧಾಪ್ಯ; ಕಾಯ: ದೇಹ; ಕುರೂಪಿ: ಸೌಂದರ್ಯಹೀನತೆ; ನಿರ್ಮಲ: ಶುದ್ಧ, ಶುಭ್ರ; ಲೋಭಿ: ಕೃಪಣ, ಜಿಪುಣ; ಸಾವಧಾನಿ: ಸಮಾಧಾನಿ; ಸಲೆ:ಒಂದೇ ಸಮನೆ, ಸದಾ; ಜಿತೆಂದ್ರಿಯ: ಇಂದ್ರಿಯವನ್ನು ಗೆದ್ದವನು; ಇಂಗಿತ: ಆಶಯ, ಅಭಿಪ್ರಾಯ; ಆಕಾರ: ರೂಪ; ಪ್ರಭೇದ:ಒಡೆಯುವಿಕೆ; ಮಲಿನ:ಕೊಳೆ, ಹೊಲಸು; ಕಡು: ತುಂಬ; ಶುಚಿ: ಶುಭ್ರ, ನಿರ್ಮಲ; ಅಬಲ: ಹೆಂಗಸು; ಆವಳಿ: ಗುಂಪು, ಸಮೂಹ; ಸುಯಿಧಾನ: ರಕ್ಷಣೆ; ನಿಲಿಸು: ನೇಮಿಸು; ಇಳೆ: ಭೂಮಿ; ಅಗ್ಗ:ಶ್ರೇಷ್ಠತೆ; ಜಾಣ್ಮೆ: ಬುದ್ಧಿ; ಭೂಪ: ರಾಜ;

ಪದವಿಂಗಡಣೆ:
ಪಲಿತ+ಕಾಯ +ಕುರೂಪಿಯನು +ನಿ
ರ್ಮಲನ +ಲೋಭಿಯ +ಸಾವಧಾನಿಯ
ಸಲೆ +ಜಿತೇಂದ್ರಿಯನ್+ಇಂಗಿತಾಕಾರ+ ಪ್ರಭೇದಕನ
ಮಲಿನನನು+ ಕಡು+ಶುಚಿಯನ್+ಅಬಲಾ
ವಳಿಯ +ಸುಯಿಧಾನಕ್ಕೆ+ ನಿಲಿಸುವುದ್
ಇಳೆಯೊಳಗ್+ಅಗ್ಗಳ+ ಜಾಣ್ಮೆ+ಯುಂಟೇ +ಭೂಪ +ನಿನಗೆಂದ

ಅಚ್ಚರಿ:
(೧) ಶುಚಿ, ನಿರ್ಮಲ – ಸಮನಾರ್ಥಕ ಪದ
(೨) ಪಲಿತಕಾಯ, ಕುರೂಪಿ, ಶುಚಿ, ಜಿತೇಂದ್ರಿಯ, ಲೋಭಿ, ಸಾವಧಾನಿ, ಇಂಗಿತ ಪ್ರಭೇದಕ – ಅಂತಃಪುರದ ಮೇಲ್ವಿಚಾರಕನ ಲಕ್ಷಣಗಳು

ಪದ್ಯ ೮೦: ಬಾಣಸಿಗನ ಲಕ್ಷಣವೇನು?

ಪಿತೃಪಿತಾಮಹ ಸೂಪಶಾಸ್ತ್ರ
ಪ್ರತತಿ ಕೈಕರಣಗಳೊಳಧಿಕನ
ನತಿ ಶುಚಿಯನಸದೃಶನನಕ್ರೋಧಿಯನನಾಲಸನ
ಪತಿಹಿತನ ಷಡುರಸ ವಿಶೇಷಾ
ನ್ವಿತನನಿತರಾಲಯ ವಿದೂರನ
ಪತಿಕರಿಸುವುದು ಸೂಪಕಾರತೆಗರಸಕೇಳೆಂದ (ಸಭಾ ಪರ್ವ, ೧ ಸಂಧಿ, ೮೦ ಪದ್ಯ)

ತಾತ್ಪರ್ಯ:
ತನ್ನ ತಂದೆ ಅಜ್ಜ (ವಂಶಪಾರಂಪರ್ಯವಾಗಿ) ಬಂದ ಅಡುಗೆ ವಿದ್ಯೆಯನ್ನು ಕಲಿತು, ಅಡಿಗೆ ಮಾಡುವ ವಿಶೇಷಚಾತುರ್ಯವುಳ್ಳವನನ್ನೂ, ಅತ್ಯಂತ ಶುಭ್ರವಾಗಿರುವವನು, ಕೋಪ, ಸೋಮಾರಿತನಗಳಿಲ್ಲದವನೂ, ಇನ್ನೊಂದು ಮನೆಯತ್ತ ಹೋಗದೆ ಷಡ್ರಸ ಭರಿತವಾದ ಅಡುಗೆ ಮಾಡುವವನನ್ನು ಬಾಣಸಿಗನನ್ನಾಗಿ ನೇಮಿಸಿಕೊಳ್ಳಬೇಕೆಂದು ನಾರದರು ಯುಧಿಷ್ಠಿರನಿಗೆ ಹೇಳಿದರು.

ಅರ್ಥ:
ಪಿತೃ: ತಂದೆ, ಪೂರ್ವಜ; ಪಿತಾಮಹ:ಅಜ್ಜ, ತಾತ; ಸೂಪ: ಅನ್ನದೊಂದಿಗೆ ಕಲಸಿಕೊಳ್ಳುವ ಸಾರು; ಶಾಸ್ತ್ರ: ತತ್ತ್ವ, ದರ್ಶನ; ಪ್ರತತಿ: ಗುಂಪು, ಸಮೂಹ; ಕರಣ: ಕೆಲಸ; ಅಧಿಕ: ಹೆಚ್ಚು; ಕೈ: ಹಸ್ತ; ಅತಿ: ತುಂಬ; ಶುಚಿ: ನಿರ್ಮಲ, ಶುಭ್ರ; ಅಸದೃಶ:ಅಸಮಾನವಾದುದು; ಅಕ್ರೋಧಿ: ಕೋಪರಹಿತನು; ಅನಾಲಸ:ಆಲಸ್ಯವಿಲ್ಲದವನು; ಪತಿ:ಒಡೆಯ, ಯಜಮಾನ; ಹಿತ:ಒಳ್ಳೆಯದು; ಷಡುರಸ:ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ವಿಶೇಷ:ಅತಿಶಯತೆ, ವೈಶಿಷ್ಟ್ಯ; ಅನ್ವಿತ:ಒಡಗೂಡಿದ; ಇತರ: ಬೇರೆ; ಆಲಯ: ಮನೆ; ವಿದೂರ: ಅತಿದೂರ, ಇಲ್ಲವಾದುದು; ಪತಿಕರಿಸು: ಸ್ವೀಕರಿಸು, ಅನುಗ್ರಹಿಸು; ಸೂಪಕಾರತೆ: ಅಡಿಗೆಯವ, ಬಾಣಸಿಗ; ಅರಸ: ರಾಜ;

ಪದವಿಂಗಡಣೆ:
ಪಿತೃ+ಪಿತಾಮಹ +ಸೂಪ+ಶಾಸ್ತ್ರ
ಪ್ರತತಿ +ಕೈ+ಕರಣಗಳೊಳ್+ಅಧಿಕನನ್
ಅತಿ +ಶುಚಿಯನ್+ಅಸದೃನನ್+ಅಕ್ರೋಧಿಯನ್+ಅನಾಲಸನ
ಪತಿಹಿತನ+ ಷಡುರಸ+ ವಿಶೇಷಾ
ನ್ವಿತನನ್+ಇತರ+ಆಲಯ +ವಿದೂರನ
ಪತಿಕರಿಸುವುದು +ಸೂಪಕಾರತೆಗ್+ಅರಸ+ಕೇಳೆಂದ

ಅಚ್ಚರಿ:
(೧) ಅತಿ ಶುಚಿ, ಅಕ್ರೋಧಿ, ಅನಾಲಸ, ಇತರ ಆಲಯ ವಿದೂರನು – ಬಾಣಸಿಗನ ಲಕ್ಷಣ
(೨) ಪತಿ – ೪, ೬ ಸಾಲಿನ ಮೊದಲ ಪದ
(೩) ಸೂಪ – ೧, ೬ ಸಾಲಿನ ೨ ಪದ

ಪದ್ಯ ೭೯: ರಥಿಕರಲ್ಲಿ ಶ್ರೇಷ್ಠನಾದವನ ಲಕ್ಷಣವೇನು?

ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೋವುತ
ಲಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೭೯ ಪದ್ಯ)

ತಾತ್ಪರ್ಯ:
ಕುದುರೆಗಳನ್ನು ಉಪಚರಿಸುತ್ತಾ, ರಥವನ್ನು ಮತ್ತು ತನನ್ನು ಕಾಪಾಡಿಕೊಳ್ಳುತ್ತಾ, ಅಕ್ಕ ಪಕ್ಕದವರನ್ನು ಸದೆಬಡಿಯುತ್ತಾ, ಹಿಂದಿರುಗಿ ವೇಗವಾಗಿ ಬರಬಲ್ಲ, ಯುದ್ಧದಲ್ಲಿ ಪ್ರಳಯಕಾಲದ ಅಗ್ನಿಯಂತಿರುವವನು ರಥಿಕರಲ್ಲಿ ಶ್ರೇಷ್ಠನು ಎಂದು ನಾರದರು ಯುಧಿಷ್ಠಿರನಿಗೆ ಹೇಳಿದರು.

ಅರ್ಥ:
ಕುದುರೆ: ಅಶ್ವ, ಆರೈ: ಉಪಚರಿಸು, ರಕ್ಷಿಸು; ರಥ:ಬಂಡಿ, ತೇರು; ಹದುಳ: ಕ್ಷೇಮ, ಸೌಖ್ಯ, ಉತ್ಸಾಹ; ಸಾರಥಿ: ರಥಿಕ; ಓವು: ರಕ್ಷಿಸು, ಕಾಪಾಡು; ಇದಿರ: ಮಿಕ್ಕ; ಮುರಿ: ಹೊಡೆ, ಸೀಳು; ಕಾಯಿದು: ರಕ್ಷಿಸು; ಸದೆ: ಹೊಡೆ; ಬಲ: ಸೈನ್ಯ,ಶಕ್ತಿ; ಮರಳು: ಹಿಂದಿರುಗು; ಲಾಗು: ರಭಸ, ತೀವ್ರತೆ,ವೇಗ; ಕದನ: ಯುದ್ಧ, ಕಾಳಗ; ಅನಲ; ಬೆಂಕಿ; ಕಾಲ; ಸಂದರ್ಭ, ಸಮಯ; ಮೊದಲು: ಮುಂಚೆ; ಭೂಪಾಲ: ರಾಜ;

ಪದವಿಂಗಡಣೆ:
ಕುದುರೆಗಳನ್+ಆರೈದು +ರಥವನು
ಹದುಳಿಸುತ +ಸಾರಥಿಯನ್+ಓವುತಲ್
ಇದಿರ +ಮುರಿವುತ +ತನ್ನ +ಕಾಯಿದುಕೊಳುತ+ ಕೆಲಬಲನ
ಸದೆದು +ಮರಳುವ+ ಲಾಗು+ವೇಗದ
ಕದನ+ ಕಾಲ+ಅನಲನ್+ಅವನು +ತಾ
ಮೊದಲಿಗನಲೈ+ ರಥಿಕರಿಗೆ+ ಭೂಪಾಲ+ ಕೇಳೆಂದ

ಅಚ್ಚರಿ:
(೧) ಲಾಗು, ವೇಗ – ಸಮನಾರ್ಥಕ ಪದ, ಆದರೂ ಒಂದೇ ಪದವಾಗಿ ಬಂದಿರುವುದು
(೨) ಆರೈದು, ಓವುತ – ಸಮನಾರ್ಥಕ ಪದ

ಪದ್ಯ ೭೮: ಯಾರನ್ನು ರಾಜನೆಂದು ಕರೆಯಲಾಗುವುದಿಲ್ಲ?

ಒಂದು ಕಡೆಯಲಿ ದಳ ಮುರಿದು ಮ
ತ್ತೊಂದು ಕಡೆಯಲಿ ಮನ್ನೆಯರು ಕವಿ
ದೊಂದು ದೆಸೆ ಸಮವಲ್ಲಿ ಮತ್ತೊಂದಧಿಕ ಬಲವೆನಿಸಿ
ಬಂದು ಸಂತಾಪದಲಿ ಕಾಳಗ
ದಿಂದ ಪುರದಲಿ ನಿಂದು ಕರಿಕರಿ
ಗುಂದುವವ ಕ್ಷಿತಿಪಾಲನೇ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೭೮ ಪದ್ಯ)

ತಾತ್ಪರ್ಯ:
ಒಂದು ಭಾಗದ ಸೈನ್ಯವು ಮುರಿದುಹೋಗಿ, ಮತ್ತೊಂದು ಭಾಗದಲ್ಲಿ ಸಾಮಂತರೇ ಮೇಲೆ ಬೀಳಲು, ಒಂದು ಯುದ್ಧ ಸಮವಾದರೆ, ಇನ್ನೊಂದು ಯುದ್ಧದಲ್ಲಿ ಎದುರಾಳಿಗಳ ಕೈ ಮೇಲಾಗಿದೆ, ಹೀಗಿರುವಾಗ ರಾಜನಾದವನು ಓಡಿ ಬಂದು ದುಃಖಿಸುತ್ತಾ ರಾಜಧಾನಿಯಲ್ಲಿ ಕುಳಿತರೆ ಅವನನ್ನು ರಾಜನೆಂದು ಹೇಳಲಾಗುತ್ತದೆಯೆ ಎಂದು ನಾರದರು ಯುಧಿಷ್ಠಿರನಿಗೆ ಕೇಳಿದರು.

ಅರ್ಥ:
ಕಡೆ: ಪಕ್ಕ, ಅಂಚು, ಸ್ಥಳ; ದಳ: ಸೈನ್ಯ; ಮುರಿದು: ಚೂರಾಗು; ಮನ್ನೆಯ: ಮೆಚ್ಚಿನ, ಗೌರವ; ಕವಿ:ಆಕ್ರಮಣ; ದೆಸೆ: ದಿಕ್ಕು; ಸಮ:ಸರಿಸಮಾನವಾದುದು; ಅಧಿಕ: ಹೆಚ್ಚಳ; ಬಲ: ಶೌರ್ಯ, ಸೈನ್ಯ; ಬಂದು: ಆಗಮಿಸಿ; ಸಂತಾಪ: ದುಃಖ; ಕಾಳಗ: ಯುದ್ಧ; ಪುರ: ಊರು; ಕರಿಕರಿಗುಂದು: ಬೇಗೆಯಿಂದ ಬಾಡಿದಂತಾಗು, ಸೀದುಹೋಗು; ಕ್ಷಿತಿಪಾಲ: ರಾಜ; ಭೂಪಾಲ: ರಾಜ;

ಪದವಿಂಗಡಣೆ:
ಒಂದು +ಕಡೆಯಲಿ +ದಳ +ಮುರಿದು+ ಮ
ತ್ತೊಂದು +ಕಡೆಯಲಿ +ಮನ್ನೆಯರು +ಕವಿದ್
ಒಂದು+ ದೆಸೆ+ ಸಮವಲ್ಲಿ+ ಮತ್ತೊಂದ್+ಅಧಿಕ+ ಬಲವೆನಿಸಿ
ಬಂದು+ ಸಂತಾಪದಲಿ +ಕಾಳಗ
ದಿಂದ +ಪುರದಲಿ+ ನಿಂದು +ಕರಿಕರಿ
ಗುಂದುವವ+ ಕ್ಷಿತಿಪಾಲನೇ +ಭೂಪಾಲ +ಕೇಳೆಂದ

ಅಚ್ಚರಿ:
(೧) ಕ್ಷಿತಿಪಾಲ, ಭೂಪಾಲ – ರಾಜನ ಸಮನಾರ್ಥಕ ಪದ
(೨) ಒಂದು – ೧-೩ ಸಾಲಿನ ಮೊದಲ ಪದ

ಪದ್ಯ ೭೭: ಜೋಧನ ಲಕ್ಷಣವೇನು?

ಹೆಬ್ಬಲವನೊಡೆತುಳಿದು ಧರಣಿಯ
ನಿಬ್ಬಗಿಯ ಮಾಡಿಸುತ ಪಾಯ್ದಳ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರಮಳೆಯ ಕರೆವುತ
ಲಬ್ಬರಿಸಿ ಬವರದಲಿ ರಿಪುಗಳಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ (ಸಭಾ ಪರ್ವ, ೧ ಸಂಧಿ, ೭೭ ಪದ್ಯ)

ತಾತ್ಪರ್ಯ:
ಹೆಚ್ಚಿನದಾದ ಶತ್ರುಸೈನ್ಯವನ್ನು ತುಳಿದು, ಭೂಮಿಯು ಎರಡು ಭಾಗವಾಗುವುದೋ ಎಂಬಂತೆ, ಕಾಲಾಳುಗಳನ್ನು ಕಡಿದುಹಾಕಿ, ಆನೆಗಳ ಮೇಲೆ ತನ್ನಾನೆಯನ್ನು ಬಿಟ್ಟು, ಗರ್ಜಿಸುಟ್ಟ ಬಾಣಗಳ ಮಳೆಯನ್ನು ಕರೆದು ಶತ್ರುಗಳು ಉಸಿರುಸಿರು ಬಿಡುವಂತೆ ಮಾಡಬಲ್ಲವನೇ ಜೋಧ ಎಂದು ನಾರದರು ಯುಧಿಷ್ಠಿರನಿಗೆ ಹೇಳಿದರು.

ಅರ್ಥ:
ಹೆಬ್ಬಲ: ದೊಡ್ಡ ಸೈನ್ಯ; ಒಡೆ: ಸೀಳು; ತುಳಿ:ಮೆಟ್ಟು; ಧರಣಿ: ಭೂಮಿ; ಇಬ್ಬಗಿ: ಎರಡು ತುಂಡು; ಪಾಯ್ದಳ: ಪದಾತಿ ಸೈನ್ಯ; ಒಬ್ಬುಳಿ: ಗುಂಪು, ಸಮೂಹ; ಹರೆಗಡಿ: ಚೆಲ್ಲಾಪಿಲ್ಲಿಯಾಗುವಂತೆ ಕತ್ತರಿಸು; ಕಾದಿಸು: ಕಾದಾಡುವಂತೆ ಮಾಡು; ಆನೆ: ಕರಿ; ಮೇಲೆ:ತುದಿ; ಬೊಬ್ಬಿರಿದು: ಗರ್ಜಿಸು; ಶರ: ಬಾಣ; ಮಳೆ: ವರ್ಷ; ಕರೆ: ಬರೆಮಾಡು; ಅಬ್ಬರಿಸು: ಕಿರುಚು; ಬವರ:ಕಾಳಗ; ರಿಪು: ವೈರಿ; ಉಬ್ಬಸ:ಸಂಕಟ; ಎಸಗು:ಕೆಲಸ; ಜೋಧ: ಆನೆಯ ಮೇಲಿರುವ ಯೋಧ; ರಾಯ: ರಾಜ;

ಪದವಿಂಗಡಣೆ:
ಹೆಬ್ಬಲವನ್+ಒಡೆತುಳಿದು+ ಧರಣಿಯನ್
ಇಬ್ಬಗಿಯ+ ಮಾಡಿಸುತ +ಪಾಯ್ದಳದ್
ಒಬ್ಬುಳಿಯ +ಹರೆಗಡಿದು +ಕಾದಿಸುತ+ಆನೆಗಳ +ಮೇಲೆ
ಬೊಬ್ಬಿರಿದು+ ಶರಮಳೆಯ +ಕರೆವುತಲ್
ಅಬ್ಬರಿಸಿ+ ಬವರದಲಿ +ರಿಪುಗಳಿಗ್
ಉಬ್ಬಸವನ್+ಎಸಗುವನೆ+ ಜೋಧನು+ ರಾಯ +ಕೇಳೆಂದ

ಅಚ್ಚರಿ:
(೧) ಬೊಬ್ಬಿರಿದು, ಅಬ್ಬರಿಸು – ಜೋರಾಗಿ ಕೂಗು ಪದದ ಅರ್ಥ;

ಪದ್ಯ ೪: ಭೀಮನ ತುಂಟಾಟ ಹೇಗಿತ್ತು?

ಕೆಣಕಿ ದುರ್ಯೋಧನನ ನೆತ್ತಿಯ
ನಣೆದು ಹಾಯ್ವನು ನಿಮ್ಮ ನೂರ್ವರ
ಬಣಗುಗಳಿಗೆಡಗಾಲ ತೊಡರಿದೆ ಬನ್ನಿ ನೀವೆನುತ
ಗುಣವ ನುಡಿದೊಂದಾಗಿ ಕೆಳೆಗೊಂ
ಡಣಕಿಸದೆ ಮೈಮರೆಸಿ ಮರೆಯಲಿ
ಹಣಿದು ಬಿಡುವರು ಭೀಮನನು ದುರ್ಯೋಧನಾದಿಗಳು (ಆದಿ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನ ನೆತ್ತಿಗೆ ಹೊಡೆದು, ನೀವು ನೂರು ಜನ ಜೊಳ್ಳುಗಳಿಗೂ ಎಡಗಾಲಿನಿಂದ ತೊಡರು ಕೊಡುತ್ತೇನೆಂದು ಭೀಮನು ಕೌರವರಿಗೆ ಹೇಳುವನು. ಕೌರವರು ಭೀಮನೊಡನೆ ನಯವಾದ ಮಾತುಗಳನ್ನಾಡಿ ಅವನನ್ನು ಅಣಕಿಸದೆ ಹೊಗಳಿ, ಮೈಮರೆಸಿ, ಮರೆಗೆ ಕರೆದುಕೊಂಡು ಹೋಗಿ ಚೆನ್ನಾಗಿ ಹೊಡೆದು ಬಿಡುತ್ತಿದ್ದನು.

ಅರ್ಥ:
ಕೆಣಕು:ರೇಗಿಸು; ನೆತ್ತಿ: ತಲೆ; ನಣೆ:ಹೊಡೆ; ಹಾಯ್: ಓಡಿಸು; ಬಣ: ಗುಂಪು; ತೊಡರು:ಬಂಧನ; ಗುಣ:ನಡತೆ; ನುಡಿ: ಮಾತು; ಅಣಕಿಸು: ಹಂಗಿಸು; ಮರೆ:ಕಾಣದಂತಾಗು; ಮರೆ:ರಹಸ್ಯಸ್ಥಾನ; ಹಣಿ: ಬಾಗು, ಮಣಿ; ಆದಿ: ಮುಂತಾದ;

ಪದವಿಂಗಡಣೆ:
ಕೆಣಕಿ +ದುರ್ಯೋಧನನ +ನೆತ್ತಿಯ
ನಣೆದು +ಹಾಯ್ವನು +ನಿಮ್ಮ +ನೂರ್ವರ
ಬಣಗುಗಳಿಗ್+ಎಡಗಾಲ +ತೊಡರಿದೆ+ ಬನ್ನಿ +ನೀವೆನುತ
ಗುಣವ+ ನುಡಿದ್+ಒಂದಾಗಿ+ ಕೆಳೆಗೊಂಡ್
ಅಣಕಿಸದೆ+ ಮೈಮರೆಸಿ +ಮರೆಯಲಿ
ಹಣಿದು +ಬಿಡುವರು+ ಭೀಮನನು+ ದುರ್ಯೋಧನಾದಿಗಳು

ಅಚ್ಚರಿ:
(೧) ಮರೆ – ೨ ರೀತಿಯಲ್ಲಿ ಬಳಕೆ – ಮೈಮರೆಸಿ ಮರೆಯಲಿ
(೨) ಜೋಡಿ ಪದ: ನೆತ್ತಿಯ ನಣೆದು;ಮೈಮರೆಸಿ ಮರೆಯಲಿ;ಬಿಡುವರು ಭೀಮನನು

ಪದ್ಯ ೭೬: ರಾವುತನ ಲಕ್ಷಣವೇನು?

ಬಿಟ್ಟ ಸೂಠಿಯಲರಿನೃಪರ
ಯಟ್ಟಿ ಮೂದಲಿಸುತ್ತ ಮುಂದಣ
ಥಟ್ಟನೊಡೆಹಾಯ್ದಹಿತ ಬಲದೊಳಗಾನೆವರಿವರಿದು
ಹಿಟ್ಟುಗುಟ್ಟುತ ಹೆಣನ ಸಾಲುಗ
ಳೋಟ್ಟುಮೆರೆಯಲು ಕಳನ ಚೌಕದ
ಲಟ್ಟಿಯಾಡಿಸಬಲ್ಲವನೆ ರಾವುತನು ಕೇಳೆಂದ (ಸಭಾ ಪರ್ವ, ೧ ಸಂಧಿ, ೭೬ ಪದ್ಯ)

ತಾತ್ಪರ್ಯ:
ತಡೆಯಿಲ್ಲದೆ ವೇಗದಿಂದ ತನ್ನ ಚುರುಕುತನದಿಂದ ಮುನ್ನುಗ್ಗಿ ಶತ್ರುರಾಜರನ್ನು ಮೂದಲಿಸಿ ಅಟ್ಟಿಸಿಕೊಂಡು ಹೋಗಿ, ಶತ್ರು ಸೈನ್ಯವನ್ನು ಸೀಳಿ ಮುನ್ನುಗ್ಗಿ ಆನೆಯಂತೆ ಸುತ್ತಲಿನವರನ್ನು ಸಂಹರಿಸಿ ಪುಡಿಪುಡಿಮಾಡಿ, ಹೆಣಗಳು ಸಾಲು ಸಾಲಾಗಿ ಬೀಳುವಂತೆ ಯುದ್ಧಮಾಡಬಲ್ಲವನು ರಾವುತನೆನಿಸಿಕೊಳ್ಳುತ್ತಾನೆ.

ಅರ್ಥ:
ಬಿಟ್ಟ: ತಡೆಯಿಲ್ಲದ; ಸೂಠಿ: ವೇಗ ಚುರುಕುತನ; ಅರಿ: ವೈರಿ; ನೃಪ: ರಾಜ; ನೆರೆ: ಗುಂಪು; ಅಟ್ಟಿ: ಬೆನ್ನುಹತ್ತಿ ಹೋಗು; ಮೂದಲಿಸು: ಹಂಗಿಸು; ಮುಂದಣ: ಮುಂದಕ್ಕೆ; ಥಟ್ಟ: ಬೇಗನೆ; ಒಡೆ:ಸೀಳು; ಹಾಯಿ: ಮೇಲೆಬೀಳು; ಅಹಿತ: ಶತ್ರು; ಬಲ: ಶಕ್ತಿ; ಒಳಗೆ: ಅಂತರಂಗ; ಆನೆ: ಕರಿ, ಹಸ್ತಿ; ಹಿಟ್ಟುಗುಟ್ಟು: ನಾಶಮಾಡು, ಧ್ವಂಸಮಾಡು; ಹೆಣ: ಶವ; ಸಾಲು: ಗುಂಪು; ಮೆರೆ:ಪ್ರದರ್ಶಿಸು; ಕಳ:ರಣರಂಗ; ಚೌಕ:ಎಲ್ಲೆ; ಆಡಿಸು: ಆಟವಾಡು, ಕ್ರೀಡೆ; ರಾವುತ:ಅಶ್ವಾರೋಹಿ

ಪದವಿಂಗಡಣೆ:
ಬಿಟ್ಟ+ ಸೂಠಿಯಲ್+ಅರಿ+ನೃಪರ
ಯಟ್ಟಿ +ಮೂದಲಿಸುತ್ತ+ ಮುಂದಣ
ಥಟ್ಟನ್+ಒಡೆ +ಹಾಯ್ದ್+ಅಹಿತ +ಬಲದೊಳಗ್+ಆನೆ+ವರಿವರಿದು
ಹಿಟ್ಟುಗುಟ್ಟುತ +ಹೆಣನ +ಸಾಲುಗಳ್
ಒಟ್ಟುಮೆರೆಯಲು +ಕಳನ+ ಚೌಕದಲ್
ಅಟ್ಟಿ+ಯಾಡಿಸ+ಬಲ್ಲವನೆ +ರಾವುತನು +ಕೇಳೆಂದ

ಅಚ್ಚರಿ:
(೧) ಅಟ್ಟಿ – ೨, ೬ ಸಾಲಿನ ಮೊದಲ ಪದ

ಪದ್ಯ ೭೫: ಕಾಲಾಳುವಿನ ಲಕ್ಷಣವೇನು?

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆವೇ
ಡೈಸಿ ಕಡಿದರೆಯಟ್ಟುವಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳೆಂದ (ಸಭಾ ಪರ್ವ, ೧ ಸಂಧಿ, ೭೫ ಪದ್ಯ)

ತಾತ್ಪರ್ಯ:
ಚಿಕ್ಕದಾದ ಇರುವೆಗಳ ಗುಂಪು ಬಲಿಷ್ಠವಾದ ಕರಿನಾಗರವನ್ನು ಅಡ್ಡನಿಲ್ಲಿಸಿ ಮುತ್ತಿ ಬೇಸರದೆ ಕಡಿದು ಓಡಿಸುವಂತೆ, ಹಿಂಜರಿಯದೆ ಶತ್ರುಸೈನ್ಯದೊಳಕ್ಕೆ ನುಗ್ಗಿ, ಶತ್ರು ಸೈನಿಕರನ್ನು ಕೂದಲು ಹಿಡಿದು ಎಳೆದುಕೊಂಡು ಇರುದುಕೊಲ್ಲುವವನೇ ಕಾಲಾಳು ಎಂದು ನಾರದರ ಯುಧಿಷ್ಠಿರನಿಗೆ ತಿಳಿಸಿದರು.

ಅರ್ಥ:
ಬೇಸರ: ಆಸಕ್ತಿಯಿಲ್ಲದಿರುವಿಕೆ; ಕಾಳ: ಕಪ್ಪು; ಉರಗ: ಹಾವು; ಅಡ್ಡೈಸಿ: ತಡೆ; ಇರುವೆ: ಚೀಮೆ, ಪಿಪೀಲಿಕೆ; ಕಟ್ಟಿ: ರಚಿಸಿ; ಮಿಗೆ: ಹೆಚ್ಚು; ವೇಡೈಸಿ: ಸುತ್ತುವರಿ, ಮುತ್ತು; ಕಡಿ: ತುಂಡು, ಹೋಳು; ಅಟ್ಟು:ಓಡಿಸು; ಅಹಿತ:ಶತ್ರು; ಬಲ:ಶಕ್ತಿ, ಸಾಮರ್ಥ್ಯ; ಓಸರಿಸು: ಹಿಂಜರಿ; ಒಳ: ಒಳಗೆ, ಆಂತರ್ಯ; ಹೊಕ್ಕು: ಹೋಗಿ; ಸಮರ: ಯುದ್ಧ; ವಿಳಾಸ: ಸೌಂದರ್ಯ; ನೆರೆ:ಸಮೀಪ, ಹತ್ತಿರ; ಮೆರೆ:ಪ್ರಕಾಶಿಸು; ಕೇಶ: ಕೂದಲು; ಕೇಶಾಕೇಶಿ: ಕೂದಲು ಹಿಡಿದು ಹೋರಾಡು; ಹಿಡಿ:ಬಂಧನ; ಇರಿ:ಚುಚ್ಚು, ಕೊಲ್ಲು; ಕಾಲಾಳು: ಸೈನಿಕ;

ಪದವಿಂಗಡಣೆ:
ಬೇಸರದೆ+ ಕಾಳ+ಉರಗನನ್
ಅಡ್ಡೈಸಿ +ಕಟ್ಟಿರುವೆಗಳು +ಮಿಗೆ+
ವೇಡೈಸಿ +ಕಡಿದರೆ+ಯಟ್ಟು+ವಂದದಲ್+ಅಹಿತ +ಬಲದೊಳಗೆ
ಓಸರಿಸದ್+ಒಳಹೊಕ್ಕು +ಸಮರ+ ವಿ
ಳಾಸವನು +ನೆರೆ +ಮೆರೆದು +ಕೇಶಾ
ಕೇಶಿಯಲಿ+ ಹಿಡಿದ್+ಇರಿವವನೆ +ಕಾಲಾಳು +ಕೇಳೆಂದ

ಅಚ್ಚರಿ:
(೧) ಕಾಲಾಳುವಿನ ಶಕ್ತಿಯನ್ನು ಇರುವೆಯ ಪ್ರಾಭಲ್ಯಕ್ಕೆ ಹೋಲಿಸಿ ಹೇಳಿರುವುದು
(೨) ಅಡ್ಡೈಸಿ, ಕಟ್ಟಿ, ವೇಡೈಸಿ, ಕಡಿ ಅಟ್ಟು – ಇರುವೆಗಳು ನಾಗರಹಾವನ್ನು ಓಡಿಸುವಾಗ ಬಳಸಿರುವ ಪದಗಳು
(೩) ಬೇಸರ, ಓಸರ – ಪದಗಳ ಬಳಕೆ (ಇರುವೆ, ಕಾಲಾಳು)

ಪದ್ಯ ೭೪: ಛತ್ರಧಾರಕನ ಲಕ್ಷಣವೇನು?

ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲು ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯ ಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಢಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ (ಸಭಾ ಪರ್ವ, ೧ ಸಂಧಿ, ೭೪ ಪದ್ಯ)

ತಾತ್ಪರ್ಯ:
ತಗ್ಗು ದಿನ್ನೆಗಳನ್ನು ನೋಡುತ್ತಾ, ಮಾರ್ಗದಲ್ಲಿರುವ ಮರಗಳು ಪೊದೆಗಳು ತಾಕುವುದನ್ನು ತಪ್ಪಿಸಿ, ನೆರಳನ್ನುಂಟುಮಾಡುತ್ತಾ, ರಾಜನು ವೇಗವಾಗಿ ಸಾಮಾನ್ಯವಾದ ಗತಿಯಲ್ಲಿ ಚಲಿಸುವಾಗ ತನ್ನ ಆಯಾಸವನ್ನು ತೋರ್ಪಡಿಸದೆ, ಅದನ್ನು ಸಹಿಸಿಕೊಂಡು ಸಂಚರಿಸುವವನೇ ಛತ್ರಧಾರಕನ ಲಕ್ಷಣ ಎಂದು ನಾರದರು ಯುಧಿಷ್ಠಿರನಿಗೆ ತಿಳಿಸಿದರು.

ಅರ್ಥ:
ಗುಳಿ:ಹಳ್ಳ, ತಗ್ಗು; ತೆವರು:ದಿಣ್ಣೆ, ದಿಬ್ಬ; ಈಕ್ಷಿಸು:ನೋಡು; ಬಟ್ಟೆ: ದಾರಿ, ಮಾರ್ಗ; ಮೆಳೆ:ದಟ್ಟವಾಗಿ ಬೆಳೆದ ಗಿಡಗಳ ಗುಂಪು, ಪೊದರು; ಮರ: ವೃಕ್ಷ; ಹೊಯ್ಲು:ಹೊಡೆತ; ತಪ್ಪಿಸು: ಅಡ್ಡಿಪಡಿಸು; ನೆಳಲು: ನೆರಳು; ಅರಸು: ಹುಡುಕು; ವೇಗ: ಶೀಘ್ರ; ಗತಿ: ಸಂಚಾರ; ಸಾಮಾನ್ಯ: ಸಾಧಾರಣ; ಅಳುಕು: ಹೆದರಿಕೆ; ಬಳಿ: ಹತ್ತಿರ; ಭೂಭುಜ: ರಾಜ, ಅರಸ; ಯಾನ: ಸಂಚಾರ, ಪ್ರಯಾಣ; ಢಗೆ:ಕಾವು, ಬಾಯಾರಿಕೆ; ಸೈರಿಸು:ತಾಳು, ಸಹಿಸು; ಬಳಸು: ಸುತ್ತಾಡು; ಅರಸ: ರಾಜ;

ಪದವಿಂಗಡಣೆ:
ಗುಳಿ +ತೆವರನ್+ಈಕ್ಷಿಸುತ +ಬಟ್ಟೆಯ
ಮೆಳೆ + ಮರಂಗಳ +ಹೊಯ್ಲು +ತಪ್ಪಿಸಿ
ನೆಳಲನ್+ಅರಸುತ +ವೇಗಗತಿ+ ಸಾಮಾನ್ಯ +ಗತಿಗಳಲಿ
ಬಳಿವಿಡಿದು +ಭೂಭುಜರ +ಯಾನಂ
ಗಳ್+ಒಳಗ್+ಅಳುಕದೆ +ಢಗೆಯ +ಸೈರಿಸಿ
ಬಳಸುವವನೇ +ಛತ್ರಧಾರಕನ್+ಅರಸ +ಕೇಳೆಂದ

ಅಚ್ಚರಿ:
(೧) ಭೂಭುಜ, ಅರಸ – ರಾಜನ ಸಮನಾರ್ಥಕ ಪದಗಳು