ಪದ್ಯ ೪೪: ಕೃಷ್ಣನು ತಂತ್ರವನ್ನರಿತ ಬಲರಾಮನು ಹೇಗೆ ಸ್ಪಂದಿಸಿದನು?

ಅಕಟ ದುರ್ಯೋಧನಗೆ ತಪ್ಪಿಸಿ
ಸಕಲಯಾದವರಿಲ್ಲಿಗೈದರೆ
ವಿಕಳಮತಿ ನಾನೈಸಲೇ ಕೃಷ್ಣನ ಕುಮಂತ್ರವಿದು
ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆ ನುತ ಸ
ಭ್ರುಕುಟಿ ರೌದ್ರಾನನನು ಮುರಿದನು ಪುರಕೆ ಬಲರಾಮ (ಆದಿ ಪರ್ವ, ೧೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ನನ್ನ ಬಯಕೆಯಂತೆ ಸುಭದ್ರೆಯನು ದುರ್ಯೋಧನನಿಗೆ ಕೊಡುವುದನ್ನು ತಪ್ಪಿಸಲು ಯಾದವರೆಲ್ಲರೂ ಇಲ್ಲಿರುವರಲ್ಲ, ಕೃಷ್ಣನ ಕಪಟಮಂತ್ರವಿದು, ಅದನ್ನು ತಿಳಿದುಕೊಳ್ಳಲಾರದ ದಡ್ಡ ನಾನು. ಮರ್ಯಾದೆಯಿರುವವರಿಗೆ ಕುಟಿಲವನ್ನರಿಯದ ಅಂತಃಕರಣವು ತೊಂದರೆಕೊಡುತ್ತದೆ, ಎಂದು ಹುಬ್ಬುಗಂಟಿಟ್ಟುಕೊಂದು ಮುಖವು ಭಯಾನಕರೂಪವನ್ನು ತಾಳಿರಲು ಬಲರಾಮನು ದ್ವಾರಕೆಗೆ ಹೋದನು.

ಅರ್ಥ:
ಅಕಟ: ಅಯ್ಯೋ; ತಪ್ಪಿಸು: ಅಡ್ಡಿಪಡಿಸು; ಸಕಲ: ಎಲ್ಲಾ; ಐದು: ಹೋಗಿಸೇರು;ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಮತಿ: ಬುದ್ಧಿ; ಐಸಲೆ: ಅಲ್ಲವೆ; ಕುಮಂತ್ರ: ಕೆಟ್ಟ, ಕಪಟಮಂತ್ರ; ಕುಟಿಲ:ವಂಚನೆಯಲ್ಲಿ ನಿಪುಣ; ಅಂತಃಕರಣ: ಚಿತ್ತವೃತ್ತಿ, ದಯೆ; ಬಾಧಕ: ತಡೆ; ಗರುವ:ಶ್ರೇಷ್ಠ, ಉತ್ತಮ; ನುತ: ಸ್ತುತಿಸಲ್ಪಡುವ; ಸಭ್ರುಕುಟಿ: ಹುಬ್ಬುಗಂಟಿಟ್ಟುಕೊಂಡು; ರೌದ್ರ: ಭಯಾನಕ; ಆನನ: ಮುಖ; ಮುರಿ: ತೆರಳು; ಪುರ: ಊರು;

ಪದವಿಂಗಡಣೆ:
ಅಕಟ +ದುರ್ಯೋಧನಗೆ +ತಪ್ಪಿಸಿ
ಸಕಲ+ಯಾದವರ್+ಇಲ್ಲಿಗ್+ಐದರೆ
ವಿಕಳಮತಿ +ನಾನ್+ಐಸಲೇ +ಕೃಷ್ಣನ +ಕುಮಂತ್ರವಿದು
ಅ+ಕುಟಿಲ+ಅಂತಃಕರಣತನ+ ಬಾ
ಧಕವಲೇ +ಗರುವರಿಗ್+ ಎನುತ+ ಸ
ಭ್ರುಕುಟಿ +ರೌದ್ರ+ಆನನನು+ ಮುರಿದನು +ಪುರಕೆ +ಬಲರಾಮ

ಅಚ್ಚರಿ:
(೧) ಅಕಟ, ಅಕುಟಿಲ, ಭ್ರುಕುಟಿ – “ಟ” ಕಾರದ ಕೆಲ ಪದಗಳ ಬಳಕೆ
(೨) ಒಳ್ಳೆಯ ಬುದ್ದಿ (ಕುಟಿಲವಿಲ್ಲದ) ಬಾಧೆಯಾಗುತ್ತದೆ ಎಂದು ಹೇಳಿರುವ ಬಗೆ – ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆ

ನಿಮ್ಮ ಟಿಪ್ಪಣಿ ಬರೆಯಿರಿ