ಪದ್ಯ ೧೪: ಅರ್ಜುನನ ಪ್ರತಿಯುತ್ತರವು ಹೇಗಿತ್ತು?

ಎಸುಗೆಯೊಳ್ಳಿತು ಶರಬನತಿ ಸಾ
ಹಸಿಕನೈ ಬಿಲ್ಲಾಳಲಾ ಸರಿ
ಬೆಸನನೆಚ್ಚನು ನಮ್ಮೊಡನೆ ಮಝಪೂತುಪಾಯ್ಕೆನುತೆ
ಹೊಸಮಸೆಯ ಹೊಗರಲಗುಗಲದ
ಳ್ಳಿಸುವ ಧಾರೆಯ ಕೆಂಗರಿಯ ಡಾ
ಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರ್ಜುನನು ಶಬರನ ಬಿಲ್ಲುಗಾರಿಕೆಯನ್ನು ನೋಡಿ, ಈ ಬೇಡನು ಅತಿ ಸಾಹಸಿ, ಇವನ ಬಾಣ ಪ್ರಯೋಗವು ಹೆಚಿದನು, ಇವನು ಮಹಾಸಾಹಸಿ, ನನ್ನೊಡನೆ ಸರಿಸಮವಾಗಿ ಕಾದುತ್ತಿದ್ದಾನೆ. ಭಲೇ ಎನ್ನುತ್ತಾ ಹೊಸದಾಗಿ ಮಸೆದ ಹೊಳೆಯುವ ಅಲಗಿನ, ಉರಿಯೇಳುವ ಕೆಂಗರಿಗಳ ಬಾಣಗಳ ಸಮುದ್ರವನ್ನೇ ಶಿವನ ಮೇಲೆ ಕವಿಸಿದನು.

ಅರ್ಥ:
ಎಸುಗೆ: ಬಾಣದ ಹೊಡೆತ; ಒಳ್ಳಿತು: ಚೆನ್ನಾಗಿದೆ; ಶಬರ: ಬೇಡ; ಅತಿ: ಬಹಳ; ಸಾಹಸಿ: ಪರಾಕ್ರಮಿ; ಬೆಲ್ಲು: ಧನಸ್ಸು; ಬಿಲ್ಲಾಳ: ಶೂರ; ಸರಿಬೆಸನು: ಸರಿಸಮಾನನಾಗಿ; ಎಚ್ಚನು: ಬಾಣ ಪ್ರಯೊಗ; ಮಝ: ಭಲೆ; ಪೂತು: ಕೊಂಡಾಟದ ಮಾತು; ಹೊಸ: ನವೀನ; ಮಸೆ: ಕಾಂತಿ, ಹೊಳಪು; ಹೊಗರು: ಕಾಂತಿ; ಧಾರೆ: ಪ್ರವಾಹ; ಕೆಂಗರಿ: ಕೆಂಪಾದ ಗರಿ; ಢಾಳಿಸು: ಕಾಂತಿಯುಳ್ಳ; ಕಣೆ: ಬಾಣ; ಶರನಿಧಿ: ಬಾಣಗಳ ಸಾಗರ; ಕವಿಸು: ಆವರಿಸು; ಕಲಿ: ಶೂರ;

ಪದವಿಂಗಡಣೆ:
ಎಸುಗೆ+ಒಳ್ಳಿತು +ಶರಬನ್+ಅತಿ +ಸಾ
ಹಸಿಕನೈ +ಬಿಲ್ಲಾಳಲಾ+ ಸರಿ
ಬೆಸನನ್+ಎಚ್ಚನು +ನಮ್ಮೊಡನೆ +ಮಝಪೂತುಪಾಯ್ಕೆನುತೆ
ಹೊಸಮಸೆಯ+ ಹೊಗರ್+ಅಲಗುಗಲದ್
ಅಳ್ಳಿಸುವ +ಧಾರೆಯ +ಕೆಂಗರಿಯ +ಡಾ
ಳಿಸುವ +ಕಣೆಗಳ+ ಶರನಿಧಿಯ +ಕವಿಸಿದನು +ಕಲಿಪಾರ್ಥ

ಅಚ್ಚರಿ:
(೧) ಹೊಗಳುವ ನುಡಿ – ಮಝಪೂತು
(೨) ಅರ್ಜುನನು ಬಾಣಗಳನ್ನು ಬಿಡುವ ಪರಿ – ಹೊಸಮಸೆಯ ಹೊಗರಲಗುಗಲದ
ಳ್ಳಿಸುವ ಧಾರೆಯ ಕೆಂಗರಿಯ ಡಾಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ

ಪದ್ಯ ೭: ಅರ್ಜುನನು ಹೇಗೆ ಕೋಪಗೊಂಡನು?

ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದಕಟ್ಟುಕ್ಕಿನ ಛಡಾಳಿಕೆಯೊ
ಉಸುರುಗಳ ಕರ್ಬೊಗೆಗಳಾಲಿಯ
ಬಿಸುಗುದಿಯ ಬಲುಕೆಂಡವಂಬಿನ
ಹೊಸಮಸೆಗಳುರಿ ಝಾಡಿ ಝಳುಪಿಸೆ ಪಾರ್ಥ ಖತಿಗೊಂಡ (ಅರಣ್ಯ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ನಿಮ್ಮವನಾದ ಅರ್ಜುನನು ಆಗ ತಿವಿದೆಬ್ಬಿಸಿದ ಹುಲಿಯೋ, ಗಾಯಗೊಂಡ ಹಂದಿಯೋ, ಹಸಿದ ನಾಗರಹಾವೋ, ಕಾಯಿಸಿದ ಉಕ್ಕಿನ ಕೂರ್ಪೋ ಎಂಬಂತೆ ರೋಷಗೊಂಡನು. ಅವನ ಉಸಿರು ಕರಿಹೊಗೆಯಂತಿತ್ತು. ಕಣ್ಣಿನ ಕೆಂಪು ಕೆಂಡದಂತಿತ್ತು. ಅವನು ತೆಗೆದ ಬಾಣವು ಉರಿಯಂತಿತ್ತು.

ಅರ್ಥ:
ಮಸಗು: ಹರಡು; ಕೆರಳು; ಎಬ್ಬಿಸು: ಎಚ್ಚರಗೊಳಿಸು; ಹುಲಿ: ವ್ಯಾಘ್ರ; ನೊಂದ: ಪೆಟ್ಟಾದ; ಹಂದಿ: ಸೂಕರ; ಹಸಿ: ಆಹಾರವನ್ನು ಬಯಸು, ಹಸಿವಾಗು; ಭುಜಗ: ಹಾವು; ಕಾದ: ಬಿಸಿಯಾದ; ಉಕ್ಕು: ಹದಮಾಡಿದ ಕಬ್ಬಿಣ, ಆಯುಧ; ಛಡಾಳ: ಹೆಚ್ಚಳ, ಆಧಿಕ್ಯ; ಉಸುರು: ಪ್ರಾಣ, ಗಾಳಿ; ಕರ್ಬೊಗೆ: ಕರಿಹೊಗೆ; ಆಲಿ: ಕಣ್ಣು; ಬಿಸು: ಸೇರಿಸು; ಕುದಿ: ಶಾಖದಿಂದ ಉಕ್ಕು, ಕೋಪಗೊಳ್ಳು; ಕೆಂಡ: ಉರಿಯುತ್ತಿರುವ ಇದ್ದಿಲು, ಇಂಗಳ; ಅಂಬು: ಬಾಣ; ಹೊಸ: ನವೀನ; ಮಸೆ: ಹರಿತವಾದುದು, ಚೂಪಾದುದು; ಉರಿ: ಜ್ವಾಲೆ; ಝಾಡಿ: ಕಾಂತಿ; ಝಳ: ತಾಪ; ಖತಿ: ಕೋಪ;

ಪದವಿಂಗಡಣೆ:
ಮಸಗಿದನು +ನಿಮ್ಮಾತನ್+ಉಗಿದ್
ಎಬ್ಬಿಸಿದ +ಹುಲಿಯೋ +ನೊಂದ +ಹಂದಿಯೊ
ಹಸಿದ +ಭುಜಗನೊ+ ಕಾದಕಟ್+ಉಕ್ಕಿನ +ಛಡಾಳಿಕೆಯೊ
ಉಸುರುಗಳ+ ಕರ್ಬೊಗೆಗಳ್+ಆಲಿಯ
ಬಿಸು+ಕುದಿಯ +ಬಲು+ಕೆಂಡವ್+ಅಂಬಿನ
ಹೊಸಮಸೆಗಳ್+ಉರಿ +ಝಾಡಿ +ಝಳುಪಿಸೆ+ ಪಾರ್ಥ +ಖತಿಗೊಂಡ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಎಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದಕಟ್ಟುಕ್ಕಿನ ಛಡಾಳಿಕೆಯೊ
(೨) ಕೋಪವನ್ನು ವಿವರಿಸುವ ಪರಿ – ಉಸುರುಗಳ ಕರ್ಬೊಗೆಗಳಾಲಿಯ ಬಿಸುಗುದಿಯ ಬಲುಕೆಂಡವಂಬಿನ ಹೊಸಮಸೆಗಳುರಿ ಝಾಡಿ ಝಳುಪಿಸೆ ಪಾರ್ಥ

ಪದ್ಯ ೨೩: ವೃಷಸೇನನು ಭೀಮನನ್ನು ಹೇಗೆ ಆವರಿಸಿದನು?

ಉಗುಳುಗುಳು ದುಶ್ಯಾಸನನ ನೀ
ನುಗುಳು ಮಗುಳಿನ್ನಾರ ಬಸುರನು
ಹೊಗುವೆ ಮೊಲೆಮುಡಿಯಾರಿಗಿವು ಫಡ ನಿಲ್ಲು ನಿಲ್ಲೆನುತ
ಹೊಗರೊಗುವ ಹೊಸಮಸೆಯ ಬಾಯ್ದಾ
ರೆಗಳ ಬಂಬಲುಗಿಡಿಯ ಬಾಣಾ
ಳಿಗಳಲೀತನ ಹೂಳಿದನು ಕಾಣೆನು ವೃಕೋದರನ (ಕರ್ಣ ಪರ್ವ, ೨೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುಶ್ಯಾಸನನನ್ನು ಉಗುಳು, ನೀನು ಮತ್ತೆ ಯಾರ ಬಸಿರನ್ನು ಹೊಕ್ಕು ಬದುಕಬಲ್ಲೇ, ಛೇ ನೀನು ಹೆಣ್ಣೇ ಸರಿ, ನಿಲ್ಲು ನಿಲ್ಲೆನುತ ವೃಷಸೇನನು ಹೊಸದಾಗಿ ಸಾಣೆ ಹಿಡಿದ ಕಿಡಿಗಳನ್ನು ಸೂಸುವ ಬಾಣಗಳಿಂದ ಭೀಮನನ್ನು ಮುಚ್ಚಲು, ಭೀಮನು ಮರೆಯಾದನು.

ಅರ್ಥ:
ಉಗುಳು: ಹೊರಸೂಸು; ಮಗುಳಿ: ಮತ್ತೆ;ಬಸುರು: ಹೊಟ್ಟೆ; ಹೊಗು: ಸೇರು; ಮೊಲೆ: ಸ್ತನ; ಮುಡಿ: ತುರುಬು; ಫಡ: ತಿರಸ್ಕಾರದ ಪದ; ನಿಲ್ಲು: ತಡೆ; ಹೊಗರು: ಕಿಡಿಕಾರು; ಹೊಸ: ನವೀನ; ಮಸೆ: ಹರಿತವಾದುದು, ಚೂಪಾದುದು; ಬಾಯ್ದಾರೆ: ಸೂಸುವ; ಬಂಬಲುಗಿಡಿ: ಕಿಡಿಗಳ ಸಮೂಹ; ಬಾಣ: ಸರಳು, ಅಂಬು; ಆಳಿಗಳು: ಸಾಲು, ಗುಂಪು; ಹೂಳು: ಮುಚ್ಚು; ಕಾಣೆ: ನೋಡಲಾರೆ; ವೃಕೋದರ: ಭೀಮ;

ಪದವಿಂಗಡಣೆ:
ಉಗುಳ್+ಉಗುಳು +ದುಶ್ಯಾಸನನ +ನೀನ್
ಉಗುಳು +ಮಗುಳಿನ್ನಾರ +ಬಸುರನು
ಹೊಗುವೆ +ಮೊಲೆಮುಡಿಯಾರಿಗಿವು+ ಫಡ+ ನಿಲ್ಲು +ನಿಲ್ಲೆನುತ
ಹೊಗರೊಗುವ +ಹೊಸಮಸೆಯ +ಬಾಯ್ದಾ
ರೆಗಳ+ ಬಂಬಲು+ಕಿಡಿಯ +ಬಾಣಾ
ಳಿಗಳ್+ಈತನ +ಹೂಳಿದನು +ಕಾಣೆನು +ವೃಕೋದರನ

ಅಚ್ಚರಿ:
(೧) ಭೀಮನನ್ನು ಬಯ್ಯುವ ಪರಿ – ಮಗುಳಿನ್ನಾರ ಬಸುರನು ಹೊಗುವೆ ಮೊಲೆಮುಡಿಯಾರಿಗಿವು ಫಡ
(೨) ಹೊಗರೊಗುವ ಹೊಸಮಸೆಯ – ಹ ಕಾರದ ಜೋಡಿ ಪದ
(೩) ಉಗುಳು – ೧, ೨ ಸಾಲಿನ ಮೊದಲ ಪದ
(೪) ತೀವ್ರತೆಯನ್ನು ತೋರಿಸಲು ಉಗುಳುಗುಳು – ೨ ಬಾರಿ ಪ್ರಯೋಗ