ಪದ್ಯ ೫೬: ದುರ್ಯೊಧನನು ಕಲ್ಲಿನಿಂದ ಯಾರಿಗೆ ಹೊಡೆಯುತ್ತಿದ್ದನು?

ಉಡಿದ ತೊಡೆಗಳ ಮಗ್ಗುಲಲಿ ಹೊನ
ಲಿಡುವ ರಕುತದ ಭೀಮಸೇನನ
ಮಡದ ಹೊಯ್ಲಲಿ ಕೆಲಕೆ ಸೂಸಿದ ಮಕುಟಮಣಿಮಯದ
ಕೆಡೆದು ಮೈವೇದನೆಗೆ ನರಳುವ
ನಿಡುಸರದ ಖಗ ಜಂಬುಕೌಘವ
ನಿಡುವ ಕೈಗಲ್ಲುಗಳ ನೃಪತಿಯ ಕಂಡರಿವರಂದು (ಗದಾ ಪರ್ವ, ೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕೌರವನ ತೊಡೆಗಳು ಮುರಿದಿದ್ದವು. ಪಕ್ಕದಲ್ಲಿ ರಕ್ತ ಹರಿಯುತ್ತಿತ್ತು. ಭೀಮನ ಹಿಮ್ಮಡಿಯ ಹೊಡೆತಕ್ಕೆ ಅವನ ಮಣಿಮಯ ಕಿರೀಟವು ಪಕ್ಕಕ್ಕೆ ಹಾರಿಹೋಗಿತ್ತು. ಗಾಯದ ನೋವಿನಿಂದ ನರಳುತ್ತಾ ಮೇಲೆ ಬರುವ ಪ್ರಾಣಿಗಲನ್ನು ಹತ್ತಿರಕ್ಕೆ ಬಾರದಮ್ತೆ ಕಲ್ಲಿನಿಂದ ಹೊಡೆಯುತ್ತಿದ್ದ ದುರ್ಯೋಧನನನ್ನು ಅವರು ನೋಡಿದರು.

ಅರ್ಥ:
ಉಡಿ: ಮುರಿ, ತುಂಡು ಮಾಡು; ತೊಡೆ: ಜಂಘೆ; ಮಗ್ಗುಲು: ಪಕ್ಕ; ಹೊನಲು: ಪ್ರವಾಹ, ನೀರೋಟ, ತೊರೆ; ರಕುತ: ನೆತ್ತರು; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಹೊಯ್ಲು: ಏಟು, ಹೊಡೆತ; ಕೆಲ: ಪಕ್ಕ; ಸೂಸು: ಎರಚು, ಚಲ್ಲು; ಮಕುಟ: ಕಿರೀಟ; ಮಣಿ: ಬೆಲೆಬಾಳುವ ರತ್ನ; ಕೆಡೆ: ಬೀಳು, ಕುಸಿ; ಮೈ: ತನು, ದೇಹ; ವೇದನೆ: ನೋವು; ನರಳು: ನೋವನ್ನನುಭವಿಸು, ವೇದನೆ, ಸಂಕಟ; ನಿಡುಸರ: ದೊಡ್ಡ ಕೂಗು, ದೀರ್ಘಧ್ವನಿ; ಖಗ: ಪಕ್ಷಿ; ಜಂಬುಕ: ನರಿ; ಔಘ: ಗುಂಪು; ಕೈ: ಹಸ್ತ; ಕಲ್ಲು: ಶಿಲೆ, ಬಂಡೆ; ನೃಪತಿ: ರಾಜ; ಕಂಡು: ನೋಡು;

ಪದವಿಂಗಡಣೆ:
ಉಡಿದ+ ತೊಡೆಗಳ +ಮಗ್ಗುಲಲಿ +ಹೊನ
ಲಿಡುವ +ರಕುತದ +ಭೀಮಸೇನನ
ಮಡದ +ಹೊಯ್ಲಲಿ +ಕೆಲಕೆ +ಸೂಸಿದ +ಮಕುಟಮಣಿಮಯದ
ಕೆಡೆದು +ಮೈವೇದನೆಗೆ +ನರಳುವ
ನಿಡುಸರದ +ಖಗ +ಜಂಬುಕ +ಔಘವನ್
ಇಡುವ +ಕೈಗಲ್ಲುಗಳ +ನೃಪತಿಯ +ಕಂಡರ್+ಇವರ್+ಅಂದು

ಅಚ್ಚರಿ:
(೧) ಕೌರವನ ಸ್ಥಿತಿ – ಉಡಿದ ತೊಡೆಗಳ ಮಗ್ಗುಲಲಿ ಹೊನಲಿಡುವ ರಕುತದ; ನಿಡುಸರದ ಖಗ ಜಂಬುಕೌಘವನಿಡುವ ಕೈಗಲ್ಲುಗಳ ನೃಪತಿಯ ಕಂಡರಿ

ಪದ್ಯ ೧೫: ದುರ್ಯೋಧನನು ಯಾವ ಪ್ರಶ್ನೆಯನ್ನು ಕೇಳಿದನು?

ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾ ವಿಚ್ಛೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ (ಶಲ್ಯ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಂಜಿನ ಹೊಡೆತಕ್ಕೆ ಸಿಕ್ಕು ಸೀದ ಕಮಲವನದಮ್ತೆ ತಮ್ಮ ಮಹಾಪರಾಕ್ರಮದ ಕಿರ್ತಿಯು ಭಂಗೊಂದಲಾಗಿ ಆ ನೋವಿನಿಂದ ಕುಸಿದು ವಿವರ್ಣವಾದ ಮುಖಗಳನ್ನು ಹೊತ್ತು ಸಂತೋಷವನ್ನು ತೊರೆದು ಶೋಕದಿಂದ ತಪ್ತರಾದ ತನ್ನ ವೀರರನ್ನು ಕಂಡು ದುರ್ಯೋಧನನು ಕೃಪಾಚಾರ್ಯ, ಅಶ್ವತ್ಥಾಮ, ನಾಳಿನ ಯುದ್ಧದ ಬಗೆಯೇನು ಎಂದು ಕೇಳಿದನು.

ಅರ್ಥ:
ಹಿಮ: ಮಂಜಿನಗಡ್ಡೆ; ಹೊಯ್ಲು: ಏಟು, ಹೊಡೆತ; ಸೀದು: ಕರಕಲಾಗು; ಕಮಲ: ತಾವರೆ; ವನ: ಕಾಡು; ಹತ: ಸಾವು; ವಿಕ್ರಮ: ಪರಾಕ್ರಮ; ಕೀರ್ತಿ: ಯಶಸ್ಸು; ಬಹಳ: ತುಂಬ; ಭಾರ: ಹೊರೆ, ತೂಕ; ಬಳುಕು: ನಡುಕ, ಕಂಪನ; ಆನನ: ಮುಖ; ಸುಮುಖ: ಸುಂದರವಾದ ಮುಖ; ವಿಚ್ಛೇದ: ತುಂಡು ಮಾಡುವಿಕೆ; ಕಲುಷ: ಕಳಂಕ; ಸ್ತಿಮಿತ: ಭದ್ರವಾದ ನೆಲೆ, ಸ್ಥಿರತೆ; ಕಂಡು: ನೋಡು; ಸಮರ: ಯುದ್ಧ; ಉದ್ಯೋಗ: ಕೆಲಸ; ಸುತ: ಪುತ್ರ;

ಪದವಿಂಗಡಣೆ:
ಹಿಮದ+ ಹೊಯ್ಲಲಿ +ಸೀದು +ಸಿಕ್ಕಿದ
ಕಮಲವನದಂದದಲಿ+ ಹತ+ವಿ
ಕ್ರಮದ +ಕೀರ್ತಿಯ +ಬಹಳ+ಭಾರಕೆ+ ಬಳುಕಿದ್+ಆನನದ
ಸುಮುಖತಾ +ವಿಚ್ಛೇದ +ಕಲುಷ
ಸ್ತಿಮಿತರಿರವನು +ಕಂಡು +ನಾಳಿನ
ಸಮರಕೇನ್+ಉದ್ಯೋಗವೆಂದನು +ಕೃಪನ +ಗುರುಸುತನ

ಅಚ್ಚರಿ:
(೧) ಉಪಮಾನದ ಪ್ರಯೋಗ: ಹಿಮದ ಹೊಯ್ಲಲಿ ಸೀದು ಸಿಕ್ಕಿದ ಕಮಲವನದಂದದಲಿ
(೨) ಕೌರವನ ಸ್ಥಿತಿ – ಹತವಿಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ

ಪದ್ಯ ೫೨: ಕರ್ಣನೇಕೆ ಕೋಪಗೊಂಡನು?

ಗದೆಯ ಹೊಯ್ಲಲಿ ನೊಂದು ಕೋಪದೊ
ಳದಿರೆನುತ ಸೈಗೆಡೆದ ರೋಮದ
ಹೊದರುಗಳ ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ
ಕುದಿದ ಹೃದಯದ ಕಾದ ದೇಹದ
ಕದನಗಲಿ ರವಿಸೂನು ಮೇಲಿ
ಕ್ಕಿದನು ಫಡ ಹೋಗದಿರು ಹೋಗದಿರೆನುತ ತೆಗೆದೆಚ್ಚ (ದ್ರೋಣ ಪರ್ವ, ೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಗದೆಯ ಬಡಿತದಿಂದ ನೊಂದು ಕರ್ಣನು ಬಹಳ ಕೋಪಗೊಂಡನು. ಅವನ ರೋಮಗಳು ಜೋಲು ಬಿದ್ದವು. ನಟ್ಟ ನೋಟದಿಂದ ನೋಡುವ ತನ್ನ ಕಣ್ಣುಗಳು ಕೆಂಪಾಗಿ ಕೋಪವನ್ನು ಕಾರಿದವು. ಅವನ ಮೀಸೆಗಳು ಕುಣಿದವು. ಹೃದಯವು ಕುದಿಯಿತು. ದೇಹ ಕಾವೇರಿತು. ಆಗ ಕರ್ಣನು ಹೋಗಬೇಡ ಹೋಗಬೇಡ ಎಂದು ಕೂಗಿ ಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಗದೆ: ಮುದ್ಗರ; ಹೊಯ್ಲು: ಏಟು, ಹೊಡೆತ; ನೊಂದು: ನೋವು; ಕೋಪ: ಖತಿ; ಅದಿರು: ನಡುಕ, ಕಂಪನ; ಸೈಗೆಡೆ: ನೇರವಾಗಿ ಕೆಳಕ್ಕೆ ಬೀಳು; ರೋಮ: ಕೂದಲು; ಹೊದರು: ಗುಂಪು, ಸಮೂಹ; ಬಿಡುಗಣ್ಣ: ಬಿಟ್ಟಕಣ್ಣು; ಕೆಂಪು: ರಕ್ತವರ್ಣ; ಕುಣಿ: ನರ್ತಿಸು; ಕುದಿ: ಮರಳು; ಹೃದಯ: ಎದೆ; ಕಾದ: ಬಿಸಿಯಾದ; ದೇಹ: ತನು; ಕದನ: ಯುದ್ಧ; ಕಲಿ: ಶೂರ; ರವಿ: ಸೂರ್ಯ; ಸೂನು: ಮಗ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಗದೆಯ +ಹೊಯ್ಲಲಿ +ನೊಂದು +ಕೋಪದೊಳ್
ಅದಿರೆನುತ +ಸೈಗೆಡೆದ +ರೋಮದ
ಹೊದರುಗಳ +ಬಿಡುಗಣ್ಣ +ಕೆಂಪಿನ +ಕುಣಿವ +ಮೀಸೆಗಳ
ಕುದಿದ +ಹೃದಯದ +ಕಾದ+ ದೇಹದ
ಕದನ+ಕಲಿ +ರವಿಸೂನು +ಮೇಲಿ
ಕ್ಕಿದನು +ಫಡ +ಹೋಗದಿರು +ಹೋಗದಿರ್+ಎನುತ+ ತೆಗೆದ್+ಎಚ್ಚ

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ ಕುದಿದ ಹೃದಯದ ಕಾದ ದೇಹದ