ಪದ್ಯ ೧: ದುರ್ಯೋಧನನು ಯಾವ ಹೊತ್ತಿನಲ್ಲಿ ತನ್ನ ಅರಮನೆಯನ್ನು ಸೇರಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆಮೊಗದ
ತಾಳಿಗೆಯ ನಿರ್ದ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜಮಂದಿರವ (ಸಭಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದುಃಖಭರಿತನಾಗಿ ಮುಸುಕು ಹಾಕಿಕೊಂಡು ದುರ್ಯೋಧನನು ಸಿಡಿಮಿಡಿಯ ಹೊಗೆಯನ್ನು ತನ್ನ ಮುಖದಲ್ಲಿ ಹೊತ್ತು ಮುಖಕ್ಕೆ ಮುಸುಕು ಹಾಕಿಕೊಂಡು ನಡುರಾತ್ರಿಯಲ್ಲಿ ತನ್ನ ಅರಮನೆಯನ್ನು ಸೇರಿದನು. ಕೋಪದ ತಾಪದಿಂದ ಅವನ ನಾಲಿಗೆ ಗಂಟಲುಗಳು ಒಣಗಿ ಹೋಗಿದ್ದವು. ಮತ್ಸರವು ಹೆಚ್ಚಾಗಿ ಏನು ಮಾಡಬೇಕೆಂಬುದು ತಿಳಿಯದೆ ಮನಸ್ಸು ಕವಲೊಡೆದಿತ್ತು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ರಾಯ: ರಾಜ; ಮೇಲು: ಹೊರಗಡೆ; ಮುಸುಕು: ಆವರಿಸು, ಹೊದಿಕೆ; ಹೊತ್ತು: ಉದ್ವೇಗಗೊಳ್ಳು; ದುಗುಡ: ದುಃಖ; ಹೊಗರ: ಹೊಗೆ: ಧೂಮ; ಮೊಗ: ಮುಖ; ತಾಳಿಗೆ: ಗಂಟಲು; ದ್ರವ: ನೀರು, ರಸ; ನಿರ್ದ್ರವ: ಒಣಗಿದ ಸ್ಥಿತಿ; ಮತ್ಸರ: ಹೊಟ್ಟೆಕಿಚ್ಚು; ಏಳಿಗೆ: ಅಭ್ಯುದಯ; ಇಕ್ಕಡಿ: ಎರಡು ಕಡೆ; ಮನ: ಮನಸ್ಸು; ನೃಪಾಲ: ರಾಜ; ಹೊಕ್ಕು: ಸೇರು; ಇರುಳು: ರಾತ್ರಿ; ನಡು: ಮಧ್ಯ; ನಿಜ: ತನ್ನ; ರಾಜಮಂದಿರ: ಅರಮನೆ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೌರವರಾಯನ್+ಇತ್ತಲು
ಮೇಲು+ ಮುಸುಕಿನ+ ಹೊತ್ತ +ದುಗುಡದ +ಹೊಗರ+ ಹೊಗೆಮೊಗದ
ತಾಳಿಗೆಯ+ ನಿರ್ದ್ರವದ +ಮತ್ಸರದ್
ಏಳಿಗೆಯಲ್+ಇಕ್ಕಡಿಯ +ಮನದ +ನೃ
ಪಾಲ +ಹೊಕ್ಕನು +ನಡುವ್+ಇರುಳು +ನಿಜ +ರಾಜಮಂದಿರವ

ಅಚ್ಚರಿ:
(೧) ಧರಿತ್ರೀಪಾಲ, ನೃಪಾಲ – ಸಮನಾರ್ಥಕ ಪದ
(೨) ಅವಮಾನ/ಕೋಪದ ಚಿತ್ರಣ – ತಾಳಿಗೆಯ ನಿರ್ದ್ರವದ ಮತ್ಸರ ದೇಳಿಗೆಯಲಿಕ್ಕಡಿಯ ಮನದ ನೃಪಾಲ