ಪದ್ಯ ೧೬: ಕೌರವನನ್ನು ಧರ್ಮಜನು ಹೇಗೆ ರೇಗಿಸಿದನು?

ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ (ಗದಾ ಪರ್ವ, ೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ನೀನು ಅರ್ಧ ಭೂಮಿಯನ್ನು ಕೊಡಲಿಲ್ಲ, ಬೇಡ, ಐದು ಊರುಗಳನ್ನು ಕೊಡು ಎಂದರೆ ಅದನ್ನು ಕೊಡದೆ ನಮ್ಮನ್ನು ಲೇವಡಿ ಮಾಡಿದೆ. ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡುವುದಿಲ್ಲವೆಂದು ದರ್ಪವನ್ನು ತೋರಿದೆ. ಈಗ ಸಮಸ್ತ ಭೂಮಿಯನ್ನು ಕಳೆದುಕೊಂಡು ನೀರನ್ನು ಹೊಕ್ಕಿರುವೆ. ಎಲ್ಲಿ ಹೋಯಿತು ನಿನ್ನ ಛಲವೆಂದು ಧರ್ಮಜನು ಕೌರವನನ್ನು ರೇಗಿಸಿದನು.

ಅರ್ಥ:
ನಾಡು: ದೇಶ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಕೊಡು: ನೀಡು; ಬೇಡು: ಕೇಳು; ಊರು: ಗ್ರಾಮ, ಪುರ; ಕೊಡು: ನೀಡು; ಏಡಿಸು: ಅವಹೇಳನ ಮಾಡು, ನಿಂದಿಸು; ಸೂಚಿ: ಸೂಜಿ; ಅಗ್ರ: ತುದಿ; ಪ್ರಮಿತ: ಪ್ರಮಾಣಕ್ಕೆ ಒಳಗಾದುದು; ಧಾರುಣಿ: ಭೂಮಿ; ಕೂಡು: ಜೊತೆಯಾಗು; ಕೊಡೆ: ನೀಡು; ದರ್ಪ: ಅಹಂಕಾರ; ಸಕಲ: ಎಲ್ಲಾ; ಮಹೀತಳ: ಭೂಮಿ; ಹೋಗು: ತೆರಳು; ಹೊಕ್ಕು: ಸೇರು; ಜಲ: ನೀರು; ಛಲ: ದೃಢ ನಿಶ್ಚಯ;

ಪದವಿಂಗಡಣೆ:
ನಾಡೊಳ್+ಅರ್ಧವ +ಕೊಡದೆ +ಹೋದಡೆ
ಬೇಡಿದ್+ಐದೂರುಗಳ +ಕೊಡುಯೆನೆಲ್
ಏಡಿಸಿದಲೈ +ಸೂಚಿ+ಅಗ್ರ+ಪ್ರಮಿತ+ಧಾರುಣಿಯ
ಕೂಡೆ +ನೀ +ಕೊಡೆನೆಂದು+ ದರ್ಪವ
ಮಾಡಿ +ಸಕಲ+ ಮಹೀತಳವ +ಹೋ
ಗಾಡಿ +ಹೊಕ್ಕೈ +ಜಲವನ್+ಆವೆಡೆ +ನಿನ್ನ +ಛಲವೆಂದ

ಅಚ್ಚರಿ:
(೧) ಧಾರುಣಿ, ಮಹೀತಳ, ನಾಡು – ಸಮಾನಾರ್ಥಕ ಪದ