ಪದ್ಯ ೧೪: ಬಂಡಿಗಳನ್ನು ಎಳೆಯುವುದೇಕೆ ಪ್ರಯಾಸವಾಗಿತ್ತು?

ಬಳಿಯ ಚೌರಿಯ ಹೊರೆಯ ಚಿತ್ರಾ
ವಳಿ ವಿಧಾನದ ಹಾಸುಗಳ ಹೊಂ
ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ
ಹೊಳೆವ ಪಟ್ಟೆಯಲೋಡಿಗೆಯ ಹೊಂ
ಗೆಲಸದೊಳುಝಗೆಗಳ ಸುವರ್ಣಾ
ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ (ಗದಾ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚೌರಿಯ, ಚಿತ್ರ ರಂಜಿತವಾದ ಹಾಸುಗಳು, ಬಂಗಾರದ ಕೆಲಸದ ತೆರೆಗಳು, ಛತ್ರ, ಬೀಸಣಿಗೆ, ಚಾಮರಗಳ ಕಟ್ಟುಗಳು, ದಿಂಬುಗಳು, ಹೊಂಗೆಲಸ ಮಾಡಿದ ಹೊದಿಕೆಗಳು, ಬಂಗಾರದ ಬಣ್ನದ ದಿಂಡುಗಳ ಹೊರೆಗಳನ್ನು ಬಂಡಿಗಳ ಮೇಲೊಟ್ಟಿದರು. ಅವನ್ನೆಳೆಯುವುದೇ ಪ್ರಯಾಸದ ಕೆಲಸ.

ಅರ್ಥ:
ಬಳಿ: ಹತ್ತಿರ; ಚೌರಿ: ಚೌರಿಯ ಕೂದಲು; ಹೊರೆ: ಭಾರ; ಚಿತ್ರ:ಬರೆದ ಆಕೃತಿ; ಆವಳಿ: ಸಾಲು; ವಿಧಾನ: ರೀತಿ, ಬಗೆ; ಹಾಸು: ಹಾಸಿಗೆ, ಶಯ್ಯೆ; ಹೊಂಬಳಿ: ಚಿನ್ನದ ಕಸೂತಿ ಮಾಡಿದ ಬಟ್ಟೆ, ಜರತಾರಿ ವಸ್ತ್ರ; ತೆರೆಸೀರೆ: ಅಡ್ಡ ಹಿಡಿದಿರುವ ಬಟ್ಟೆ; ಛತ್ರ: ಕೊಡೆ; ವ್ಯಜನ: ಬೀಸಣಿಗೆ; ಸೀಗುರಿ: ಚಾಮರ; ಹೊಳೆ: ಪ್ರಕಾಶ; ಪಟ್ಟೆ: ರೇಷ್ಮೆಸೀರೆ; ಝಗೆ: ಹೊಳಪು, ಪ್ರಕಾಶ; ಸುವರ್ಣ: ಚಿನ್ನ; ಆವಳಿ: ಗುಂಪು, ಸಾಲು; ದಿಂಡು: ಬಟ್ಟೆಯ ಕಟ್ಟು, ಹೊರೆ; ಒಟ್ಟು: ರಾಶಿ; ಬಂಡಿ: ರಥ; ಜವ: ಯಮ; ಜಡಿ:ಕೊಲ್ಲು, ಗದರಿಸು;

ಪದವಿಂಗಡಣೆ:
ಬಳಿಯ +ಚೌರಿಯ +ಹೊರೆಯ +ಚಿತ್ರಾ
ವಳಿ +ವಿಧಾನದ +ಹಾಸುಗಳ +ಹೊಂ
ಬಳಿಯ +ತೆರೆ+ಸೀರೆಗಳ+ ಛತ್ರ +ವ್ಯಜನ +ಸೀಗುರಿಯ
ಹೊಳೆವ +ಪಟ್ಟೆಯಲ್+ಓಡಿಗೆಯ +ಹೊಂ
ಗೆಲಸದೊಳು +ಝಗೆಗಳ +ಸುವರ್ಣಾ
ವಳಿಯ +ದಿಂಡುಗಳ್+ಒಟ್ಟಿದವು +ಬಂಡಿಗಳ +ಜವ +ಜಡಿಯೆ

ಅಚ್ಚರಿ:
(೧) ಬಳಿ, ಆವಳಿ – ಪ್ರಾಸ ಪದ
(೨) ಹೊಂಬಳಿ, ಹೊಂಗೆಲಸ – ಚಿನ್ನ ಎಂದು ಹೇಳುವ ಪರಿ

ಪದ್ಯ ೪: ಆನೆಯ ಮೊಗದಲ್ಲಿ ಯಾವುದು ರಂಜಿಸುತ್ತಿತ್ತು?

ಮುಗಿಲ ಹೊದರಿನೊಳೆಳೆಯ ರವಿ ರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾನದಿಯ ಕಾಲುವೆ
ತೆಗೆದರೆನೆ ಠೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ (ದ್ರೋಣ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಆನೆಯ ಸುತ್ತಲೂ ಬಿಗಿದ ಗುಳದಲ್ಲಿದ್ದ ಬಂಗಾರದ ರೇಖೆಗಳು ಆಗಸದಲ್ಲಿ ಹರಡುವ ಸೂರ್ಯ ರಶ್ಮಿಯಂತಿದ್ದವು. ಆಕಾಶ ಗಂಗೆಯ ಕಾಲುವೆಯಂತೆ ಅಳವಡಿಸಿದ್ದ ಧ್ವಜದಂಡವು ಆನೆಯ ಮೊಗರಂಬದಲ್ಲಿ ರಂಜಿಸುತ್ತಿತ್ತು.

ಅರ್ಥ:
ಮುಗಿಲು: ಆಗಸ; ಹೊದರು: ಗುಂಪು, ಸಮೂಹ; ಎಳೆ: ನೂಲಿನ ಎಳೆ, ಸೂತ್ರ; ರವಿ: ಸೂರ್ಯ; ರಶ್ಮಿ: ಕಿರಣ; ಪಸರಿಸು: ಹರಡು; ಸುತ್ತ: ಎಲ್ಲಾ ಕಡೆ; ಬಿಗಿ: ಬಂಧಿಸು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಹೊಳೆ: ಪ್ರಕಾಶ; ಹೊಂಗೆಲಸ: ಚಿನ್ನದ ಕಾರ್ಯದ; ಸುರೇಖೆ: ಚೆಲುವಾದ ಸಾಲು; ಗಗನ: ಆಗಸ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಠೆಕ್ಕೆಯ: ಬಾವುಟ; ಪಲ್ಲವ:ಚಿಗುರು; ಅಗಿ: ಜಗಿ, ಆವರಿಸು; ಮೆರೆ: ಹೊಳೆ; ಬಿಗಿ: ಭದ್ರವಾಗಿರುವುದು; ಮೊಗ: ಮುಖ; ವಿಳಾಸ: ವಿಹಾರ, ಚೆಲುವು; ಮೊಗರಂಬ: ಮೊಗಮುಟ್ಟು;

ಪದವಿಂಗಡಣೆ:
ಮುಗಿಲ +ಹೊದರಿನೊಳ್+ಎಳೆಯ +ರವಿ +ರ
ಶ್ಮಿಗಳು +ಪಸರಿಸುವಂತೆ +ಸುತ್ತಲು
ಬಿಗಿದ +ಗುಳದಲಿ +ಹೊಳೆಯೆ +ಹೊಂಗೆಲಸದ+ ಸುರೇಖೆಗಳು
ಗಗನ+ ಗಂಗಾನದಿಯ +ಕಾಲುವೆ
ತೆಗೆದರ್+ಎನೆ+ ಠೆಕ್ಕೆಯದ +ಪಲ್ಲವವ್
ಅಗಿಯೆ+ ಮೆರೆದುದು+ ಬಿಗಿದ +ಮೊಗರಂಬದ +ವಿಳಾಸದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಗನ ಗಂಗಾನದಿಯ ಕಾಲುವೆತೆಗೆದರೆನೆ

ಪದ್ಯ ೧೦:ಇಂದ್ರಪ್ರಸ್ಥನಗರದ ಸೌಂದರ್ಯ ಹೇಗಿತ್ತು?

ಧರಣಿಪತಿ ಚಿತ್ತೈಸಿಳಾವೃತ
ವರುಷಮಧ್ಯದ ಹೇಮಗಿರಿಯವೊ
ಲರಮನೆಯ ಸಿರಿ ಸೋಲಿಸಿತು ಸುರರಾಜ ವೈಭವವ
ಹರಿಯವೀಧಿಯ ಸೋಮವೀಧಿಯ
ಮುರಿವುಗಳ ಕೇರಿಗಳ ನೆಲೆಯು
ಪ್ಪರಿಗೆಗಳ ಹೊಂಗೆಲಸದಲಿ ಹೊಳೆಹೊಳೆದುದಾ ನಗರ (ಆದಿ ಪರ್ವ, ೧೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಜನಮೇಜಯ ಆಲಿಸು, ಇಳಾವೃತ ವರ್ಷದ ಮಧ್ಯಭಾಗದ ವೇಳೆಗೆ ಬಂಗಾರದ ಬೆಟ್ಟದಂತೆ ಇಂದ್ರಪ್ರಸ್ಥ ಅರಮನೆಯು ಇಂದ್ರನ ವೈಭವವನ್ನು ಮೂದಲಿಸುವಂತೆ ಮೆರೆಯುತ್ತಿತ್ತು. ಸೂರ್ಯವೀಧಿ, ಚಂದ್ರವೀಧಿ, ಅಡ್ಡರಸ್ತೆಗಳು, ಕೇರಿಗಳು ಮೊದಲಾದ ಮಾರ್ಗಗಳಲ್ಲಿ ಬಂಗಾರದ ಲೇಪವನ್ನುಳ್ಳ ಮಹಡಿಯ ಮನೆಗಳಿದ್ದವು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಇಳಾವೃತ: ಸಂವತ್ಸರದ ಹೆಸರು;ವರುಷ: ಸಂವತ್ಸರ; ಮಧ್ಯ: ಅರ್ಧ; ಹೇಮ: ಬಂಗಾರ; ಗಿರಿ: ಬೆಟ್ಟ; ಅರಮನೆ: ರಾಜರ ವಾಸಸ್ಥಾನ; ಸಿರಿ: ಸಂಪತ್ತು, ಐಶ್ವರ್ಯ; ಸೋಲು: ಪರಾಭವ; ಸುರ: ದೇವತೆ; ಸುರರಾಜ: ಇಂದ್ರ; ವೈಭವ: ಆಡಂಬರ, ಐಶ್ವರ್ಯ; ಹರಿ: ಸೂರ್ಯ; ವೀಧಿ: ಮಾರ್ಗ, ದಾರಿ; ಸೋಮ: ಚಂದ್ರ; ಮುರಿವು: ತಿರುವು; ಕೇರಿ:ಬೀದಿ, ಓಣಿ; ನೆಲೆಯುಪ್ಪರಿಗೆ: ಮಹಡಿ ಮನೆ; ಹೊಂಗೆಲಸ: ಸುವರ್ಣದ ಲೇಪನವುಳ್ಳ ಕೆಲಸ; ಹೊಳೆ: ಕಾಂತಿ, ಮಿಂಚು; ನಗರ: ಪುರ;

ಪದವಿಂಗಡಣೆ:
ಧರಣಿಪತಿ +ಚಿತ್ತೈಸಿ+ಇಳಾವೃತ
ವರುಷ+ಮಧ್ಯದ +ಹೇಮಗಿರಿಯವೊಲ್
ಅರಮನೆಯ +ಸಿರಿ +ಸೋಲಿಸಿತು+ ಸುರರಾಜ +ವೈಭವವ
ಹರಿಯವೀಧಿಯ +ಸೋಮವೀಧಿಯ
ಮುರಿವುಗಳ+ ಕೇರಿಗಳ+ ನೆಲೆ
ಉಪ್ಪರಿಗೆಗಳ+ ಹೊಂಗೆಲಸದಲಿ+ ಹೊಳೆಹೊಳೆದುದ್+ಆ+ನಗರ

ಅಚ್ಚರಿ:
(೧) ದಾರಿಗಳ ಹೆಸರು – ಹರಿ(ಸೂರ್ಯ)ವೀಧಿ, ಸೋಮ ವೀಧಿ
(೨) “ಹ” ಕಾರದ ಜೋಡಿ ಪದಗಳು – ಹೊಂಗೆಲಸದಲಿ ಹೊಳೆಹೊಳೆದು
(೩) ಬಂಗಾರದ ಲೇಪನ ಎಲ್ಲೆಲ್ಲಿತ್ತು – ಮುರಿವುಗಳ ಕೇರಿಗಳ ನೆಲೆಯುಪ್ಪರಿಗೆಗಳ