ಪದ್ಯ ೩೨: ಕೃಷ್ಣನನ್ನು ಕಂಡು ಪಾಂಡವರು ಏನು ಮಾಡಿದರು?

ಮುಗುಳು ನಗೆಗಳ ಹೊಂಗುವಂಗದ
ನಗೆ ಮೊಗದೊಳಾನಂದ ಬಿಂದುಗ
ಳೊಗುವ ಕಂಗಳ ಹೊತ್ತ ಹರುಷಸ್ಪಂದ ಸಂಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡಗೊಂಡಮಳ ಜನ್ಮದ
ಮುಗುದ ಪಾಂಡವರೆರಗಿದರು ಧೌಮ್ಯಾದಿಗಳು ಸಹಿತ (ಅರಣ್ಯ ಪರ್ವ, ೧೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರ ಮುಖಗಳು ಮ್ಗುಳು ನಗೆಯಿಂದ ಅರಳಿದವು, ದೇಹವು ಉತ್ಸಾಹ ಭರಿತವಾದವು, ಕಣ್ಣುಗಳಲ್ಲಿ ಆನಂದಬಾಷ್ಪಗಳು ಉದುರಿದವು. ಹರ್ಷವು ಮೈದುಂಬಿತು. ಭಕ್ತಿ ಪರವಶರಾದರು, ಅವರು ಮುಗ್ಧಭಾವದಿಂದ ಧೌಮ್ಯನೇ ಮೊದಲಾದವರೊಡನೆ ಶ್ರೀಕೃಷ್ಣನಿಗೆ ನಮಿಸಿದರು.

ಅರ್ಥ:
ಮುಗುಳು ನಗೆ: ಮಂದಸ್ಮಿತ; ಹೊಂಗು: ಉತ್ಸಾಹ, ಹುರುಪು; ಅಂಗ: ಅವಯವ; ನಗೆ: ಸಂತಸ; ಮೊಗ: ಮುಖ; ಆನಂದ: ಹರ್ಷ; ಬಿಂದು: ಹನಿ, ತೊಟ್ಟು; ಒಗು: ಹೊರಹೊಮ್ಮುವಿಕೆ; ಕಂಗಳು: ನಯನ; ಹರುಷ: ಆನಂದ; ಸ್ಪಂದ: ಮಿಡಿಯುವಿಕೆ; ಸಂಪುಟ: ಭರಣಿ, ಕರಂಡಕ; ಬಗೆ: ಆಲೋಚನೆ, ಯೋಚನೆ; ಬೆರಸು: ಕೂಡಿರುವಿಕೆ; ಪರವಶ: ಬೇರೆಯವರಿಗೆ ಅಧೀನವಾಗಿರುವಿಕೆ; ಎಡೆಗೊಳ್ಳು: ಅವಕಾಶಮಾಡಿಕೊಡು; ಅಮಳ: ನಿರ್ಮಲ; ಜನ್ಮ: ಹುಟ್ಟು; ಮುಗುದ: ಕಪಟವನ್ನು ತಿಳಿಯದವನು; ಎರಗು: ನಮಸ್ಕರಿಸು; ಆದಿ: ಮುಂತಾದ; ಸಹಿತ: ಜೊತೆ;

ಪದವಿಂಗಡಣೆ:
ಮುಗುಳು +ನಗೆಗಳ +ಹೊಂಗುವ್+ಅಂಗದ
ನಗೆ +ಮೊಗದೊಳ್+ಆನಂದ +ಬಿಂದುಗಳ್
ಒಗುವ +ಕಂಗಳ +ಹೊತ್ತ +ಹರುಷಸ್ಪಂದ +ಸಂಪುಟದ
ಬಗೆಯ+ ಬೆರಸದ+ ಪರವಶದೊಳ್+ಆ
ನಗೆಯೊಳ್+ಎಡಗೊಂಡ್+ಅಮಳ +ಜನ್ಮದ
ಮುಗುದ +ಪಾಂಡವರ್+ಎರಗಿದರು +ಧೌಮ್ಯಾದಿಗಳು +ಸಹಿತ

ಅಚ್ಚರಿ:
(೧) ನಗೆಗಳ ವಿವರಣೆ – ಮುಗುಳು ನಗೆ, ಹೊಂಗುವಂಗದ ನಗೆ, ಮೊಗದೊಳಾನಂದ, ಹೊತ್ತ ಹರುಷಸ್ಪಂದ