ಪದ್ಯ ೨೦: ಪಾಂಡವರು ಹೇಗೆ ದುಃಖಿಸಿದರು?

ಬೊಪ್ಪ ದೇಸಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವಕಾಲದಲಿ
ಮುಪ್ಪಿನಲಿ ನಿನಗೀಯವಸ್ಥೆಯಿ
ದೊಪ್ಪುದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು (ಆದಿ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಪ್ಪಾ, ನಾವು ಅನಾಥರಾದೆವು. ನಮ್ಮ ಭಾಗ್ಯವನ್ನು ವಿಧಿಯು ಸೆಳೆದುಕೊಂಡಿತು. ನಮ್ಮನ್ನು ಯಾರಿಗೊಪ್ಪಿಸಿ ಹೋದೆ? ಈ ಮುಪ್ಪಿನಲ್ಲಿ ಅಡವಿಯಲ್ಲಿ ಹೀಗೆ ಮಲಗಿರುವುದೇಕೆ? ನಿನಗೆ ಇದು ಒಪ್ಪುತ್ತದೆಯೇ? ಎಂದು ಪಾಂಡವರು ದುಃಖಿಸಿದರು.

ಅರ್ಥ:
ಬೊಪ್ಪ: ಅಪ್ಪ, ತಂದೆ; ದೇಸಿಗ: ಅನಾಥ; ವಿಧಿ: ನಿಯಮ; ತಪ್ಪಿಸು: ಅಡ್ಡಿಮಾಡು; ಭಾಗ್ಯ: ಶುಭ; ಒಪ್ಪಿಸು: ಸಮರ್ಪಿಸು; ಪೂರ್ವ: ಹಿಂದೆ; ಕಾಲ: ಸಮಯ; ಮುಪ್ಪು: ವಯಸ್ಸಾದ ಸ್ಥಿತಿ; ಅವಸ್ಥೆ: ಸ್ಥಿತಿ; ಒಪ್ಪು: ಸರಿಹೊಂದು; ಹೇರಡವಿ: ದಟ್ಟವಾದ ಕಾಡು; ಮಲಗು: ನಿದ್ರಿಸು; ಒರಲು: ಅರಚು; ಮರುಗು: ತಳಮಳ, ಸಂಕಟ; ಕುಮಾರಕರು: ಮಕ್ಕಳು;

ಪದವಿಂಗಡಣೆ:
ಬೊಪ್ಪ +ದೇಸಿಗರಾದೆವೈ +ವಿಧಿ
ತಪ್ಪಿಸಿತಲಾ +ನಮ್ಮ+ ಭಾಗ್ಯವನ್
ಒಪ್ಪಿಸಿದೆ +ನೀನಾರಿಗ್+ಎಮ್ಮನು +ಪೂರ್ವ+ಕಾಲದಲಿ
ಮುಪ್ಪಿನಲಿ +ನಿನಗೀ+ಅವಸ್ಥೆ+ಇದ್
ಒಪ್ಪುದೇ +ಹೇರಡವಿಯಲಿ +ಮಲ
ಗಿಪ್ಪುದ್+ಏಕೆಂದ್+ಒರಲಿ +ಮರುಗಿದರಾ+ ಕುಮಾರಕರು

ಅಚ್ಚರಿ:
(೧) ದುಃಖವನ್ನು ವಿವರಿಸುವ ಪರಿ – ದೇಸಿಗರಾದೆವೈ ವಿಧಿತಪ್ಪಿಸಿತಲಾ ನಮ್ಮ ಭಾಗ್ಯವ

ಪದ್ಯ ೮: ಭೀಮನ ಜೊತೆ ಯಾರು ಯುದ್ಧಕ್ಕೆ ಹೊರಟರು?

ನಡೆದರಾಹವಕನಿಲ ನಂದನ
ನೊಡನೆ ಸಾತ್ಯಕಿ ನಕುಲ ದ್ರುಪದರು
ತುಡುಕಿದರು ಬಿಲುಗೋಲನೈದಿತು ಪವನಜನ ಚೂಣಿ
ಗಡಣಿಸುವ ಮುಂಮೊಗದ ಕೌರವ
ಪಡೆಯ ಹೇರಡವಿಯನು ಸವರಲು
ಕಡಿತಕಾರರು ಮುಂದೆ ಹೊಕ್ಕುದು ನಕುಲ ಪಾರ್ಥಜರು (ಭೀಷ್ಮ ಪರ್ವ, ೫ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮನೊಡನೆ ಸಾತ್ಯಕಿ, ನಕುಲ, ದ್ರುಪದರು ಬಿಲ್ಲು ಬಾಣಗಳನ್ನು ಹಿಡಿದು ಹೊರಟರು. ಮುಂದೆನಿಂತು ಕೌರವ ಸೈನ್ಯದ ಮಹಾರಣ್ಯವನ್ನು ನಾಶ ಮಾಡಲು ಅಭಿಮನ್ಯು ನಕುಲರು ಮುಂದೆ ಬಂದರು.

ಅರ್ಥ:
ನಡೆ: ಚಲಿಸು; ಆಹವ: ಯುದ್ಧ; ಅನಿಲನಂದನ: ವಾಯುಪುತ್ರ (ಭೀಮ); ತುಡುಕು: ಹೋರಾಡು, ಸೆಣಸು; ಬಿಲು: ಬಿಲ್ಲು, ಚಾಪ; ಕೋಲು: ಬಾಣ; ಐದು: ಬಂದು ಸೇರು; ಪವನಜ: ವಾಯುಪುತ್ರ (ಭೀಮ); ಚೂಣಿ: ಮುಂದಿನ ಸಾಲು; ಗಡಣ: ಸಮೂಹ; ಮೊಗ: ಮುಖ; ಪಡೆ: ಗುಂಪು; ಹೇರಡವಿ: ದಟ್ಟವಾದ ಕಾಡು; ಸವರು: ನಾಶಗೊಳಿಸು; ಕಡಿತ: ಕತ್ತರಿಸುವಿಕೆ; ಹೊಕ್ಕು: ಸೇರು;

ಪದವಿಂಗಡಣೆ:
ನಡೆದರ್+ಆಹವಕ್+ಅನಿಲ+ ನಂದನ
ನೊಡನೆ +ಸಾತ್ಯಕಿ +ನಕುಲ +ದ್ರುಪದರು
ತುಡುಕಿದರು +ಬಿಲುಗೋಲನ್+ಐದಿತು +ಪವನಜನ +ಚೂಣಿ
ಗಡಣಿಸುವ +ಮುಂಮೊಗದ +ಕೌರವ
ಪಡೆಯ +ಹೇರಡವಿಯನು +ಸವರಲು
ಕಡಿತಕಾರರು+ ಮುಂದೆ +ಹೊಕ್ಕುದು +ನಕುಲ +ಪಾರ್ಥಜರು

ಅಚ್ಚರಿ:
(೧) ಕೌರವ ಸೈನ್ಯವನ್ನು ಮಹಾಟವಿಗೆ ಹೋಲಿಸುವ ಪರಿ – ಕೌರವಪಡೆಯ ಹೇರಡವಿಯನು ಸವರಲು
ಕಡಿತಕಾರರು ಮುಂದೆ ಹೊಕ್ಕುದು
(೨) ಅನಿಲನಂದನ, ಪವನಜ – ಭೀಮನನ್ನು ಕರೆದ ಪರಿ