ಪದ್ಯ ೨೫: ಕರ್ಣನು ಹೇಗೆ ಗಂಧರ್ವರ ಸೈನ್ಯವನ್ನು ಎದುರಿಸಿದನು?

ನೊರಜಿನೆರಕೆಯ ಗಾಳಿಯಲಿ ಹೆ
ಮ್ಮರದ ಮೊದಲಳುಕುವುದೆ ಘಡಕಾ
ತರಿಸದಿರಿ ಕೌರವರೆನುತ ಕಲಿಕರ್ಣ ಬೊಬ್ಬಿರಿದು
ಶರನಿಧಿಗೆ ಬಡಬಾಗ್ನಿ ಮುನಿವವೊ
ಲುರವಣಿಪ ಹೆಬ್ಬಲವನೊಂದೇ
ಸರಳಿನಲಿ ಸವರಿದನು ಸುಳಿಸಿದನೌಕಿ ನಿಜರಥವ (ಅರಣ್ಯ ಪರ್ವ, ೨೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ನೊರಜು ಹಾರುವಾಗ ಉಂಟಾಗುವ ಗಾಳಿಯಿಂದ ಮರದ ಬೊಡ್ಡೆ ಅಳುಕಿತೇ? ಗಂಧರ್ವರ ದಾಳಿಗೆ ಕೌರವರು ಹೆದರಬೇಡಿರಿ, ಎಂದು ಕರ್ಣನು ತನ್ನ ಬಲದವರಿಗೆ ಧೈರ್ಯವನ್ನು ಕೊಟ್ಟು, ಸಿಂಹನಾದದಿಂದ ಗರ್ಜಿಸಿದನು. ಸಮುದ್ರದ ನೀರನ್ನು ನುಂಗುವ ಬಡಬಾಗ್ನಿಯಂತೆ ತನ್ನ ಮೇಲೆ ಎರಗಿದ ಗಂಧರ್ವರ ಸೈನ್ಯವನ್ನು ಒಂದೇ ಬಾಣದಿಂದ ಉರುಳಿಸಿ ತನ್ನ ರಥವನ್ನು ಸುಳಿಸಿದನು.

ಅರ್ಥ:
ನೊರಜು: ಸಣ್ಣ ಕೀಟ; ಎರಕೆ: ರೆಕ್ಕೆ; ಗಾಳಿ: ವಾಯು; ಹೆಮ್ಮರ: ದೊಡ್ಡ ಮರ; ಅಳುಕು: ಹೆದರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಕಾತರ:ಕಳವಳ; ಕಲಿ: ಶೂರ; ಬೊಬ್ಬಿರಿ: ಗರ್ಜಿಸು; ಶರನಿಧಿ: ಸಾಗರ; ಬಡಬಾಗ್ನಿ: ಸಮುದ್ರದ ಒಳಗಿನ ಬೆಂಕಿ; ಮುನಿ: ಋಷಿ; ಉರವಣೆ: ಆತುರ, ಅವಸರ; ಹೆಬ್ಬಲ: ಹಿರಿದಾದ ಸೈನ್ಯ; ಸರಳು: ಬಾಣ; ಸವರು: ನಾಶಗೊಳಿಸು, ಧ್ವಂಸ ಮಾಡು; ಸುಳಿಸು: ಸುತ್ತುವಂತೆ ಮಾಡು, ತಿರುಗಿಸು; ಔಕು: ನೂಕು; ರಥ: ಬಂಡಿ;

ಪದವಿಂಗಡಣೆ:
ನೊರಜಿನ್+ಎರಕೆಯ +ಗಾಳಿಯಲಿ +ಹೆ
ಮ್ಮರದ +ಮೊದಲ್+ಅಳುಕುವುದೆ +ಘಡ+ಕಾ
ತರಿಸದಿರಿ +ಕೌರವರ್+ಎನುತ+ ಕಲಿಕರ್ಣ +ಬೊಬ್ಬಿರಿದು
ಶರನಿಧಿಗೆ+ ಬಡಬಾಗ್ನಿ +ಮುನಿವವೊಲ್
ಉರವಣಿಪ +ಹೆಬ್ಬಲವನ್+ಒಂದೇ
ಸರಳಿನಲಿ+ ಸವರಿದನು +ಸುಳಿಸಿದನ್+ಔಕಿ +ನಿಜ+ರಥವ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸರಳಿನಲಿ ಸವರಿದನು ಸುಳಿಸಿದನೌಕಿ
(೨) ಉಪಮಾನದ ಪ್ರಯೋಗ – ನೊರಜಿನೆರಕೆಯ ಗಾಳಿಯಲಿ ಹೆಮ್ಮರದ ಮೊದಲಳುಕುವುದೆ; ಶರನಿಧಿಗೆ ಬಡಬಾಗ್ನಿ ಮುನಿವವೊಲುರವಣಿಪ ಹೆಬ್ಬಲವ

ಪದ್ಯ ೭: ಧೃತರಾಷ್ಟ್ರನು ಯುದ್ಧದ ಬಗ್ಗೆ ಹೇಗೆ ಕುತೂಹಲಗೊಂಡಿದ್ದನು?

ಹೇಳು ಸಂಜಯ ವಿಸ್ತರಿಸಿ ಕಾ
ಲಾಳು ಮೇಲಾಳಿನಲಿ ಭೀಮನ
ಕಾಳೆಗದ ಕೌತುಕವನೀ ಹೆಬ್ಬಲದ ದುರ್ಬಲವ
ಆಳು ಹಿರಿದಿದ್ದೇನು ಫಲ ಹೀ
ಹಾಳಿ ದೈವಕೆ ಬೇರೆ ಪರಿಯ ವಿ
ತಾಳವಿಲ್ಲ ವಿಪಕ್ಷಪಾತದೊಳೆಂದನಂಧನೃಪ (ಕರ್ಣ ಪರ್ವ, ೧೫ ಸಂಧಿ, ೭ ಪದ್ಯ)

ತಾತ್ಪರ್ಯ:
ಯುದ್ಧದ ಬಗ್ಗೆ ಹೆಚ್ಚು ವಿವರವಾಗಿ ತಿಳಿಯಲು ಉತ್ಸುಕನಾದ ಧೃತರಾಷ್ಟ್ರ, ಸಂಜಯ ನಮ್ಮ ಸೈನ್ಯ ಮತ್ತು ಸೇನಾನಾಯಕರೊಡನೆ ಭೀಮನ ಯುದ್ಧವನ್ನು ವಿಸ್ತಾರವಾಗಿ ವಿವರಿಸು, ನಮ್ಮ ಮಹಾಸೈನ್ಯದ ದೌರ್ಬಲ್ಯವನ್ನೂ ವಿವರಿಸು, ಹೆಚ್ಚು ಜನರಿದ್ದರೇನು, ದೈವವು ಬೇರೆಯೇ
ರೀತಿಯಲ್ಲಿ ನಿರ್ಧರಿಸುತ್ತ, ದೈವವು ಪಕ್ಷಪಾತಿಯಾಗಿದ್ದಾನೆ, ಎಂದು ಧೃತರಾಷ್ಟ್ರನು ಬೇಜಾರಿನಿಂದ ಹೇಳಿದನು.

ಅರ್ಥ:
ವಿಸ್ತರಿಸು: ಹಬ್ಬುಗೆ, ವಿಸ್ತಾರ, ವ್ಯಾಪ್ತಿ; ಕಾಲಾಳು: ಸೈನಿಕರು; ಮೇಲಾಳು: ಸೇನಾನಾಯಕರು; ಕಾಳೆಗ: ಯುದ್ಧ; ಕೌತುಕ: ಅಚ್ಚರಿ; ಹೆಬ್ಬಲ: ದೊಡ್ಡ ಸೈನ್ಯ; ದುರ್ಬಲ: ಬಲಹೀನನಾದವನು, ಅಶಕ್ತ; ಆಳು: ಸೈನಿಕ; ಹಿರಿ: ಹೆಚ್ಚು; ಫಲ: ಪ್ರಯೋಜನ; ಹೀಹಾಳಿ: ತೆಗಳಿಕೆ, ಅವಹೇಳನ; ದೈವ: ವಿಧಿ, ಭಗವಂತ; ಬೇರೆ: ಅನ್ಯ; ಪರಿ: ರೀತಿ; ವಿತಾಳ: ಚಿಂತೆ, ಅಳಲು; ವಿಪಕ್ಷ: ವಿರೋಧಿಯಾದ; ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ಹೇಳು +ಸಂಜಯ +ವಿಸ್ತರಿಸಿ+ ಕಾ
ಲಾಳು +ಮೇಲಾಳಿನಲಿ+ ಭೀಮನ
ಕಾಳೆಗದ +ಕೌತುಕವನ್+ಈ+ ಹೆಬ್ಬಲದ +ದುರ್ಬಲವ
ಆಳು +ಹಿರಿದಿದ್ದೇನು +ಫಲ +ಹೀ
ಹಾಳಿ +ದೈವಕೆ +ಬೇರೆ +ಪರಿಯ +ವಿ
ತಾಳವಿಲ್ಲ+ ವಿಪಕ್ಷಪಾತದೊಳ್+ಎಂದನ್+ಅಂಧನೃಪ

ಅಚ್ಚರಿ:
(೧) ಕಾಲಾಳು, ಮೇಲಾಳು; ಹೆಬ್ಬಲ, ದುರ್ಬಲ – ಪದಗಳ ಬಳಕೆ
(೨), ಆಳು, ಕಾಲಾಳು, ಹೇಳು – ಪ್ರಾಸ ಪದಗಳು