ಪದ್ಯ ೧೬: ಸಂಜಯನು ನಡೆಯುವ ಮನುಷ್ಯನನ್ನು ಯಾರೊಂದಿಗೆ ಹೋಲಿಸಿದನು?

ಹೇಳುವಡೆ ಕುರುಪತಿಯನೇ ನೆರೆ
ಹೋಲುವನು ಗದೆ ಹೆಗಲಲದೆ ಮೇ
ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
ಹೋಲುವುದು ಜನವೊಬ್ಬರೊಬ್ಬರ
ನಾಳೊಳೊಬ್ಬನೊ ಮೇಣು ಕುರು ಭೂ
ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ (ಗದಾ ಪರ್ವ, ೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅವನನ್ನು ನೋಡಿದ ಸಂಜಯನು, ಅವನು ದುರ್ಯೋಧನನನ್ನೇ ಹೋಲುತ್ತಾನೆ. ಹೆಗಲಲ್ಲಿ ಗದೆಯಿದೆ. ಪರಿವಾರವೂ ಇಲ್ಲ, ಛತ್ರ ಚಾಮರ ಆನೆ ಕುದುರೆಗಳೂ ಇಲ್ಲ. ಒಬ್ಬನನ್ನು ಹೋಲುವವನು ಮತ್ತೊಬ್ಬನಿರುತ್ತಾನೆ. ಇವನೇನು ಒಬ್ಬ ಸಾಮಾನ್ಯ ಯೋಧನೋ ಅಥವ ರಾಜನಾದ ದುರ್ಯೋಧನನೋ? ನೋಡುತ್ತೇನೆ ಎಂದು ಯೋಚಿಸೆ ಅವನ ಬಳಿಗೆ ಹೆಜ್ಜೆ ಹಾಕಿದನು.

ಅರ್ಥ:
ಹೇಳು: ತಿಳಿಸು; ನೆರೆ: ಸಮೀಪ, ಹತ್ತಿರ; ಹೋಲು: ಎಣೆಯಾಗು, ಸದೃಶವಾಗು; ಗದೆ: ಮುದ್ಗರ; ಹೆಗಲು: ಬಾಹು; ಮೇಲಾಳು: ಶೂರ; ಕಾಣು: ತೋರು; ಚಮರ: ಚಾಮರ; ಚಾಹಿ: ಚಾಮರ ಬೀಸುವವ; ಗಜ: ಆನೆ; ಹಯ: ಕುದುರೆ; ಆವಳಿ: ಸಾಲು, ಗುಂಪು; ಜನ: ಮನುಷ್ಯ, ಗುಂಪು; ಆಳು: ಸೇವಕ; ಮೇಣು: ಅಥವ; ಭೂಪಾಲಕ: ರಾಜ; ನಡೆ: ಚಲಿಸು;

ಪದವಿಂಗಡಣೆ:
ಹೇಳುವಡೆ +ಕುರುಪತಿಯನೇ +ನೆರೆ
ಹೋಲುವನು +ಗದೆ +ಹೆಗಲಲದೆ+ ಮೇ
ಲಾಳ +ಕಾಣೆನು +ಚಮರ +ಚಾಹಿಯ +ಗಜ+ಹಯಾವಳಿಯ
ಹೋಲುವುದು+ ಜನವ್+ಒಬ್ಬರೊಬ್ಬರನ್
ಆಳೊಳ್+ಒಬ್ಬನೊ +ಮೇಣು+ ಕುರು+ ಭೂ
ಪಾಲಕನೊ+ ನೋಡುವೆನೆನುತ+ ಸಂಜಯನು+ ನಡೆತಂದ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಕುರುಪತಿ, ಭೂಪಾಲಕ
(೨) ದುರ್ಯೋಧನನು ಕಂಡ ಪರಿ – ಕುರುಪತಿಯನೇ ನೆರೆ ಹೋಲುವನು ಗದೆ ಹೆಗಲಲದೆ ಮೇಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
(೩) ಹೋಲು – ೨, ೪ ಸಾಲಿನ ಮೊದಲ ಪದ

ಪದ್ಯ ೬೧: ದ್ರೌಪದಿಯು ಪಾಂಡವರನ್ನು ಯಾರಿಗೆ ಹೋಲಿಸಿದಳು?

ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂರು
ರ್ಚಿಗಳದಾರುಂಟೆಂದು ದ್ರೌಪದಿ ಹಿರಿದು ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ವೈರಿಗಳು ಸುಖವಾಗಿರಲೆಂದು ಬಯಸಿ, ಶಾಂತರಾಗಿ ಬದುಕುವ ಮುಗ್ಧರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ, ಎಲ್ಲರೂ ಮೋಸವನ್ನು ದ್ವೇಷಿಸಿದರೆ, ನೀವು ಭಂಗವನ್ನು ಹೆಗಲುಕೊಟ್ಟು ಹೊರುತ್ತೀರಿ, ವೀರರೆಂಬ ಬಿರುದನ್ನು ದೂರಕ್ಕೆಸೆದು ಹೋರಿಗಳಂತೆ ಹೊಡಿಸಿಕೊಂಡು ಮೂಗುದಾರವನ್ನು ಹಾಕಿಕೊಂಡಿರುವವರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ ಎಂದು ದ್ರೌಪದಿಯು ಅತೀವ ದುಃಖದಿಂದ ಹೇಳಿದಳು.

ಅರ್ಥ:
ಹಗೆ: ವೈರತ್ವ; ತಂಪು: ತೃಪ್ತಿ, ಸಂತುಷ್ಟಿ; ಬದುಕು: ಜೀವಿಸು; ಮುಗುದ: ಕಪಟವರಿಯದ; ಭಂಗ: ಮೋಸ, ವಂಚನೆ; ಹೆಗಲು: ಭುಜ; ವಿರೋಧಿ: ವೈರಿ; ಲೋಕ: ಜಗತ್ತು; ವಿಗಡ: ಶೌರ್ಯ, ಪರಾಕ್ರಮ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಿಸುಟು: ಹೊರಹಾಕು; ಬಡಿ: ಹೊಡೆ, ತಾಡಿಸು; ಬಡಿಹೋರಿ: ಹೋರಿಯಂತೆ ಬಡಿಸಿಕೊಳ್ಳುವವ; ಮೂಗು: ನಾಸಿಕ; ಮೂಗುರ್ಚು: ಮೂಗುದಾರ ಹಾಕಿಸಿಕೊಂಡಿರುವವರು; ಹಿರಿದು: ಹೆಚ್ಚಾಗಿ; ಹಲುಬು: ದುಃಖಪಡು;

ಪದವಿಂಗಡಣೆ:
ಹಗೆಗಳಿಗೆ +ತಂಪಾಗಿ +ಬದುಕುವ
ಮುಗುದರ್+ಇನ್ನಾರುಂಟು +ಭಂಗಕೆ
ಹೆಗಲಕೊಟ್ಟಾನುವ+ ವಿರೋಧಿಗಳುಂಟೆ+ ಲೋಕದಲಿ
ವಿಗಡ+ ಬಿರುದನು +ಬಿಸುಟು +ಬಡಿಹೋ
ರಿಗಳು +ಪಾಂಡವರಂತೆ +ಮೂರು
ರ್ಚಿಗಳದ್+ಆರುಂಟೆಂದು +ದ್ರೌಪದಿ+ ಹಿರಿದು +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ವಿಗಡ ಬಿರುದನು ಬಿಸುಟು ಬಡಿಹೋರಿಗಳು ಪಾಂಡವರಂತೆ