ಪದ್ಯ ೫೬: ದ್ರೌಪದಿಯು ಹೇಗೆ ಕೊರಗಿದಳು?

ಆವ ಹೆಂಗುಸನಳಲಿಸಿದೆ ಮು
ನ್ನಾವ ನೋಂಪಿಯನಳಿದೆನೋ ಮೇ
ಣಾವ ಪಾಪದ ಫಲಕೆ ಹಿಡಿದೆನೊ ಸಂಚಕಾರವನು
ಆವ ಹೆಂಗುಸು ನವೆದಳೆನ್ನವೊ
ಲಾವಳಳಲುತೆ ಮರುಗಿದಳು ಮ
ತ್ತಾವಳೆನ್ನಂದದ ಮಗಳ ಪಡೆದವಳು ಲೋಕದಲಿ (ವಿರಾಟ ಪರ್ವ, ೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಅದಾವ ಹೆಂಗಸನ್ನು ನಾನು ಹಿಂದೆ ನೋಯಿಸಿದ್ದೇನೋ? ಯಾವ ವ್ರತವನ್ನು ಭಂಗಿಸಿದ್ದೇನೋ? ಯಾವ ಪಾಪವನ್ನು ನನಗಿರಲಿ ಎಂದು ಸ್ವೀಕರಿಸಿದ್ದೇನೋ? ನನ್ನಮ್ತೆ ದುಃಖಿಸಿದ ಹೆಂಗಸಾದರು ಯಾರು? ನನ್ನಮ್ತೆ ಅತ್ತವಳು, ಮರುಗಿದವಳು ಯಾರು? ನನ್ನಂತಹ ಮಗಳನ್ನು ಪಡೆದವರು ಈ ಲೋಕದಲ್ಲಿ ಯಾರಿದ್ದಾರೆ ಎಂದು ತನ್ನ ನೋವನ್ನು ನುಂಗುತ್ತಾ ದುಃಖಿಸಿದಳು.

ಅರ್ಥ:
ಹೆಂಗುಸು: ಹೆಣ್ಣು, ಸ್ತ್ರೀ; ಅಳಲಿಸು: ನೋಯಿಸು; ಮುನ್ನ: ಮುಂಚೆ, ಹಿಂದೆ; ನೋಂಪು: ವ್ರತ; ಅಳಿ: ನಾಶ; ಮೇಣ್: ಅಥವ; ಪಾಪ: ಕೆಟ್ಟ ಕೆಲಸ; ಫಲ: ಫಲಿತಾಂಶ; ಹಿಡಿ: ಮುಟ್ಟಿಗೆ, ಬಂಧನ; ಸಂಚಕಾರ: ಮುಂಗಡ; ನವೆ: ದುಃಖಿಸು, ಕೊರಗು; ಮರುಗು: ದುಃಖಿಸು; ಮಗಳು: ಸುತೆ; ಪಡೆ: ದೊರಕು; ಲೋಕ: ಜಗತ್ತು;

ಪದವಿಂಗಡಣೆ:
ಆವ +ಹೆಂಗುಸನ್+ಅಳಲಿಸಿದೆ +ಮುನ್ನ್
ಆವ +ನೋಂಪಿಯನ್+ಅಳಿದೆನೋ +ಮೇಣ್
ಆವ +ಪಾಪದ +ಫಲಕೆ+ ಹಿಡಿದೆನೊ +ಸಂಚಕಾರವನು
ಆವ +ಹೆಂಗುಸು +ನವೆದಳ್+ಎನ್ನವೊಲ್
ಆವಳ್+ಅಳಲುತೆ+ ಮರುಗಿದಳು +ಮತ್ತ್
ಆವಳ್+ಎನ್ನಂದದ +ಮಗಳ+ ಪಡೆದವಳು+ ಲೋಕದಲಿ

ಅಚ್ಚರಿ:
(೧) ಎಲ್ಲಾ ಸಾಲಿನ ಮೊದಲ ಪದ – ಆವ

ಪದ್ಯ ೯: ಕೀಚಕನೇಕೆ ನಡುಗಿದನು?

ಕುಡಿತೆಗಂಗಳ ಚಪಳೆಯುಂಗುರ
ವಿಡಿಯನಡುವಿನ ನೀರೆ ಹಂಸೆಯ
ನಡೆಯ ನವಿಲಿನ ಮೌಳಿಕಾತಿ ಪಯೋಜ ಪರಿಮಳದ
ಕಡು ಚೆಲುವೆ ಬರಲವನು ತನು ನಡ
ನಡುಗಿನಿಂದನದಾವ ಹೆಂಗುಸು
ಪಡೆದಳೀ ಚೆಲುವಿಕೆಯನೆನುತಡಿಗಡಿಗೆ ಬೆರಗಾದ (ವಿರಾಟ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಬೊಗಸೆಕಣ್ಣಿನ ಚೆಲುವೆ, ನಾಲ್ಕು ಬೆರಳುಗಳಿಂದ ಹಿಡಿಮಾಡಿದರೆ ಅಷ್ಟು ಚಿಕ್ಕ ನಡುವಿನ ಸುಂದರಿ, ಹಂಸಗಮನೆ, ನವಿಲಿನ ತಲೆಯಂತಹ ತಲೆಯುಳ್ಳವಳು, ಕಮಲಗಂಧಿನಿಯಾದ ಬಹಳ ಸುಂದರಿಯಾದ ದ್ರೌಪದಿಯು ಬರಲು, ಇನ್ನಾವ ಹೆಂಗಸು ಇವಳ ಸೌಂದರ್ಯವನ್ನು ಹೊಂದಲು ಸಾಧ್ಯ ಎನ್ನಿಸಿ ಕೀಚಕನು ನಡುಗಿದನು.

ಅರ್ಥ:
ಕುಡಿತೆ: ಬೊಗಸೆ, ಸೇರೆ; ಕಂಗಳು: ಕಣ್ಣು; ಚಪಲೆ: ಚಂಚಲ ಸ್ವಭಾವ; ಉಂಗುರ: ಬೆರಳಲ್ಲಿ ಧರಿಸುವ ಆಭರಣ; ವಿಡಿ: ಹಿಡಿ, ಗ್ರಹಿಸು; ನಡು: ಮಧ್ಯ; ನೀರೆ: ಸ್ತ್ರೀ, ಚೆಲುವೆ; ಹಂಸ: ಮರಾಲ; ನಡೆ: ಓಡಾಟ; ಮೌಳಿ: ಶಿರ; ನವಿಲು: ಮಯೂರ; ಕಾತಿ: ಗರತಿ; ಪಯೋಜ: ಕಮಲ; ಪರಿಮಳ: ಸುಗಂಧ; ಕಡು: ಬಹಳ; ಚೆಲುವು: ಅಂದ; ಬರಲು: ಆಗಮಿಸು; ತನು: ದೇಹ; ನಡುಗು: ಕಂಪಿಸು; ನಿಂದು: ನಿಲ್ಲು; ಹೆಂಗುಸು: ಸ್ತ್ರೀ; ಪಡೆ: ಹೊಂದು, ತಾಳು; ಚೆಲುವು: ಸೌಂದರ್ಯ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಕುಡಿತೆ+ಕಂಗಳ +ಚಪಳೆ+ಉಂಗುರ
ವಿಡಿಯ+ನಡುವಿನ+ ನೀರೆ+ ಹಂಸೆಯ
ನಡೆಯ+ ನವಿಲಿನ+ ಮೌಳಿ+ಕಾತಿ +ಪಯೋಜ +ಪರಿಮಳದ
ಕಡು +ಚೆಲುವೆ +ಬರಲವನು +ತನು +ನಡ
ನಡುಗಿ+ನಿಂದನ್+ಅದಾವ +ಹೆಂಗುಸು
ಪಡೆದಳೀ +ಚೆಲುವಿಕೆಯನ್+ಎನುತ್+ಅಡಿಗಡಿಗೆ +ಬೆರಗಾದ

ಅಚ್ಚರಿ:
(೧) ದ್ರೌಪದಿಯ ಸೌಂದರ್ಯವನ್ನು ವಿವರಿಸುವ ಪರಿ – ಕುಡಿತೆಗಂಗಳ ಚಪಳೆ; ಉಂಗುರ ವಿಡಿಯನಡುವಿನ ನೀರೆ; ಹಂಸೆಯ ನಡೆಯ, ನವಿಲಿನ ಮೌಳಿಕಾತಿ, ಪಯೋಜ ಪರಿಮಳದ ಕಡು ಚೆಲುವೆ