ಪದ್ಯ ೬೧: ಯುಧಿಷ್ಠಿರನು ದ್ರೋಣನ ರಥವನ್ನು ಹೇಗೆ ಮುಸುಕಿದನು?

ಅರಸ ಫಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸೆ ಧನುವನೊದರಿಸೆ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ (ದ್ರೋಣ ಪರ್ವ, ೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ಓಡಿ ಹೋಗಬೇಡ, ಇಲ್ಲಿ ಸಂಧಿಯ ಸರಸ ನಡೆಯುವುದಿಲ್ಲ, ಬಿಲ್ಲನ್ನು ಹಿಡಿ, ನೀನು ಶಿವನನ್ನು ಮೊರೆಹೊಕ್ಕರೂ ನಿನ್ನನ್ನು ಸೆರೆಹಿಡಿಯುತ್ತೇನೆ ಎನ್ನುತ್ತಾ ಬಾಣವನ್ನು ಕೆನ್ನೆಗೆಳೆದು ದ್ರೋಣನು ಆರ್ಭಟಿಸಲು, ಯುಧಿಷ್ಠಿರನು ಬಿಲ್ಲನ್ನೊದರಿಸಿ ದ್ರೋಣನ ರಥವನ್ನು ಬಾಣಗಳಿಂದ ಮುಚ್ಚಿದನು.

ಅರ್ಥ:
ಅರಸ: ರಾಜ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹೋಗು: ತೆರಳು; ಸಾಮ: ಶಾಂತಗೊಳಿಸುವಿಕೆ; ಸರಸ: ಚೆಲ್ಲಾಟ; ಕೊಳ್ಳು: ಪಡೆ; ಬಿಲ್ಲು: ಚಾಪ; ಹಿಡಿ: ಗ್ರಹಿಸು; ಹರ: ಶಿವ; ಮರೆ:ಆಶ್ರಯ; ಸರಳ: ಬಾಣ; ಮುಷ್ಟಿ: ಅಂಗೈ; ಕದಪು; ಓರೆ: ವಕ್ರ; ಕೆನ್ನೆಯೋರೆ: ಓರೆಯಾಗಿಟ್ಟುಕೊಂಡ ಕೆನ್ನೆ; ಗುರು: ಆಚಾರ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಧನು: ಚಾಪ; ಒದರು: ಜಾಡಿಸು, ಗರ್ಜಿಸು; ಧರಣಿಪತಿ: ರಾಜ; ಹಳಚು: ತಾಗು, ಬಡಿ; ಹೂಳು: ಹೂತು ಹಾಕು, ಮುಳುಗುವಂತೆ ಮಾಡು; ಅಂಬು: ಬಾಣ; ರಥ: ಬಂಡಿ;

ಪದವಿಂಗಡಣೆ:
ಅರಸ +ಫಡ +ಹೋಗದಿರು +ಸಾಮದ
ಸರಸ +ಕೊಳ್ಳದು +ಬಿಲ್ಲ +ಹಿಡಿ +ಹಿಡಿ
ಹರನ +ಮರೆವೊಗು +ನಿನ್ನ +ಹಿಡಿವೆನು +ಹೋಗು +ಹೋಗೆನುತ
ಸರಳ +ಮುಷ್ಟಿಯ +ಕೆನ್ನೆ+ಓರೆಯ
ಗುರು +ಛಡಾಳಿಸೆ +ಧನುವನ್+ಒದರಿಸೆ
ಧರಣಿಪತಿ+ ಹಳಚಿದನು +ಹೂಳಿದನ್+ಅಂಬಿನಲಿ +ರಥವ

ಅಚ್ಚರಿ:
(೧) ಧರಣಿಪತಿ, ಅರಸ; ಬಿಲ್ಲ, ಧನು – ಸಮಾನಾರ್ಥಕ ಪದ
(೨) ಅರಸ, ಸರಸ – ಪ್ರಾಸ ಪದಗಳು

ಪದ್ಯ ೯: ಸಾತ್ಯಕಿಯ ಮೇಲೆ ಹೇಗೆ ಆಕ್ರಮಣ ಮಾಡಿದರು?

ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಿಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸುಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ (ಕರ್ಣ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ತಮ್ಮ ಬಲವು ತಗ್ಗಲು ವಿಂದಾನುವಿಂದರು ಮುಂದೆ ನುಗ್ಗಿ ಸಾತ್ಯಕಿಯನ್ನು ಬಾಣಗಳಿಂದ ಮುಚ್ಚಿದರು. ಆಹಾ ಬಾಣಗಳು ಚೆನ್ನಾಗಿ ಬರುತ್ತಿವೆ, ಶಿವ ಶಿವಾ ರಾಜರಲ್ಲವೇ ಮಹಾ ಸಾಹಸಿಗರಲ್ಲವೇ ನೀವು, ಎಂದು ಸಾತ್ಯಕಿಯು ಬಾಣಗಳನ್ನು ಬಿಟ್ಟನು.

ಅರ್ಥ:
ದೊರೆ: ರಾಜ; ಅವದಿರು: ಅವರು; ಬಲ: ಸೈನ್ಯ; ಸಂವರಣೆ: ಸಜ್ಜು, ಸನ್ನಾಹ; ನೆಗ್ಗು:ಕುಗ್ಗು, ಕುಸಿ; ಹೇವ:ಮಾನ, ಹಗ್; ಹೊಡಕರಿಸು: ಕಾಣಿಸು; ಹೊಕ್ಕು: ಸೇರಿ; ಹೂಳು: ನೆಲದಲ್ಲಿ ಹುದುಗಿಸು; ಅಂಬು: ಬಾಣ; ಸರಳ: ಬಾಣ; ಬರವೊಳು: ಬರುವು, ಆಗಮನ; ಮಹಾದೇವ: ಶಿವ; ಅರಸು: ರಾಜ; ಮಕ್ಕಳು: ಸುತರ್; ವಿರೋಧ: ವೈರತ್ವ; ಹರಹರ: ಶಿವ ಶಿವಾ; ಸಾಹಸಿ: ಪರಾಕ್ರಮಿ; ಅಹುದು: ಹೌದು; ತೆಗೆ: ಹೊರಗೆ ತರು;

ಪದವಿಂಗಡಣೆ:
ದೊರೆಗಳ್+ಅವದಿರು +ತಮ್ಮ +ಬಲ +ಸಂ
ವರಣೆ +ನೆಗ್ಗಿದ+ ಹೇವದಲಿ+ ಹೊಡ
ಕರಿಸಿ +ಹೊಕ್ಕರು +ಹೂಳಿದರು +ಸಾತ್ಯಕಿಯನ್+ಅಂಬಿನಲಿ
ಸರಳ +ಬರವೊಳ್ಳಿತು +ಮಹಾ ದೇವ್
ಅರಸು+ಮಕ್ಕಳಲೇ +ವಿರೋಧವೆ
ಹರಹರ್+ಅತಿಸಾಹಸಿಕರ್+ಅಹುದ್+ಅಹುದೆನುತ+ ತೆಗೆದೆಚ್ಚ

ಅಚ್ಚರಿ:
(೧) ಹ ಕಾರದ ಪದಗಳ ಬಳಕೆ – ಹೇವ, ಹೊಡಕರಿಸು, ಹೂಳು, ಹರಹರ
(೨) ಅಂಬು, ಸರಳ – ಸಮನಾರ್ಥಕ ಪದ