ಪದ್ಯ ೧: ಧರ್ಮಜನು ಏನೆಂದು ಚಿಂತಿಸಿದನು?

ದೃಗುಯುಗಳ ನೀರೇರಿದವು ಸೆರೆ
ಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ ತನ್ನೊಡನೆ ಫಲುಗುಣನೇಕೆ ಜನಿಸಿದನೊ
ಹಗೆಯ ಹರಿವಿಂಗೊಪ್ಪುಗೊಟ್ಟೆನು
ಮಗನಳಲು ಮಿಗೆ ಹೂಣೆ ಹೊಕ್ಕನು
ಮಗುಳಲರಿಯನು ತಮ್ಮನೆನುತವನೀಶ ಚಿಂತಿಸಿದ (ದ್ರೋಣ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಕೃಷ್ಣನ ಪಾಂಚಜನ್ಯ ಧ್ವನಿಯನ್ನು ಕೇಳಿ ಯುಧಿಷ್ಠಿರನ ಕಣ್ಣುಗಳಲ್ಲಿ ನೀರು ತುಂಇದವು. ಗಂಟಲು ಗದ್ಗದವಾಯಿತು. ನಾನು ಅನಾಥ, ಅರ್ಜುನನು ನನ್ನೊಡನೆ ಏಕೆ ಹುಟ್ತಿದನೋ ಏನೋ, ಮಗನ ಮರಣದಿಂದ ಅತಿಶಯ ದುಃಖಕ್ಕೆ ಪಕ್ಕಾಗಿ ಶತ್ರುಸೈನ್ಯದೊಳಕ್ಕೆ ಅವನು ಹೊಕ್ಕ, ನಾನೋ ಅವನನ್ನು ಕಳಿಸಿಕೊಟ್ಟೆ, ಅವನು ಹಿಂದಿರುಗಲಾರ ಎಂದು ಧರ್ಮಜನ ಚಿಂತಿಸಿದನು.

ಅರ್ಥ:
ದೃಗು: ಕಣ್ಣು; ಯುಗಳ: ಎರಡು; ನೀರು: ಜಲ; ಏರು: ಹೆಚಾಗು; ಸೆರೆ: ನರ, ಬಂಧನ; ಬಿಗಿ: ಬಂಧಿಸು; ಹಲುಬು: ದುಃಖಪಡು; ಅಕಟ: ಅಯ್ಯೋ; ಕಡು: ಬಹಳ; ದೇಸಿಗ: ದಿಕ್ಕಿಲ್ಲದವ, ಅನಾಥ; ಜನಿಸು: ಹುಟ್ಟು; ಹಗೆ: ವೈರಿ; ಹರಿ: ಚಲಿಸು, ಸೀಳು; ಒಪ್ಪು: ಒಪ್ಪಿಗೆ, ಸಮ್ಮತಿ; ಮಗ: ಸುತ; ಅಳಲು: ದುಃಖ; ಮಿಗೆ: ಹೆಚ್ಚು; ಹೂಣು: ಶಪಥಮಾಡು; ಹೊಕ್ಕು: ಸೇರು; ಮಗುಳ: ಹಿಂದಿರುಗು; ಅರಿ: ತಿಳಿ; ತಮ್ಮ; ಸಹೋದರ; ಅವನೀಶ: ರಾಜ; ಚಿಂತಿಸು: ಯೋಚಿಸು;

ಪದವಿಂಗಡಣೆ:
ದೃಗುಯುಗಳ +ನೀರೇರಿದವು+ ಸೆರೆ
ಬಿಗಿದು +ಹಲುಬಿದನ್+ಅಕಟ +ಕಡು +ದೇ
ಸಿಗನು +ತಾ +ತನ್ನೊಡನೆ +ಫಲುಗುಣನೇಕೆ+ ಜನಿಸಿದನೊ
ಹಗೆಯ+ ಹರಿವಿಂಗ್+ಒಪ್ಪು+ಕೊಟ್ಟೆನು
ಮಗನ್+ಅಳಲು +ಮಿಗೆ +ಹೂಣೆ +ಹೊಕ್ಕನು
ಮಗುಳಲ್+ಅರಿಯನು+ ತಮ್ಮನ್+ಎನುತ್+ಅವನೀಶ +ಚಿಂತಿಸಿದ

ಅಚ್ಚರಿ:
(೧) ಧರ್ಮಜನು ದುಃಖ ಪಟ್ಟ ಪರಿ – ದೃಗುಯುಗಳ ನೀರೇರಿದವು ಸೆರೆಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ

ಪದ್ಯ ೪: ಅಭಿಮನ್ಯುವಿನ ಪರಾಕ್ರಮ ಹೇಗಿತ್ತು?

ಕದಳಿಯೊಳು ಮದದಾನೆ ಹೊಕ್ಕಂ
ದದಲಿ ಹೆಚ್ಚಿದ ಚಾತುರಂಗದ
ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು
ಇದಿರೊಳೆಚ್ಚನು ಕೆಲಬಲದೊಳಿಹ
ಕದನಗಲಿಗಳ ಸೀಳಿದನು ಕಾ
ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ (ದ್ರೋಣ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಆನೆಯ ವನದಲ್ಲಿ ಮದದಾನೆ ಹೊಕ್ಕಹಾಗೆ, ಚತುರಂಗ ಸೈನ್ಯದ ನಡುವೆ ಅಭಿಮನ್ಯು ಹೊಕ್ಕು ಶತ್ರು ಸಂಹಾರಮಾಡಿ ಹೆಣಗಳ ಹುಲುರಾಶಿಯನ್ನು ಜೋಡಿಸಿದನು. ಶತ್ರು ಸೈನ್ಯವನ್ನು ತುಳಿದು ನುಗ್ಗಿದನು. ಎದುರಿಗೆ ಬಂದವರನ್ನು ಹೊಡೆದನು. ಅಕ್ಕಪಕ್ಕದಲ್ಲಿದ್ದವರನ್ನು ಸೀಳಿಹಾಕಿದನು. ರಣರಂಗದಲ್ಲಿ ಅಭಿಮನ್ಯುವಿನ ಕೈ ಮೇಲಾಯಿತು. ಅಲ್ಲಿ ಯಮನ ಲೀಲೆಯು ಮೆರೆಯಿತು.

ಅರ್ಥ:
ಕದಳಿ: ಬಾಳೆಹಣ್ಣು; ಮದ: ಸೊಕ್ಕು, ಅಹಂಕಾರ; ಆನೆ: ಗಜ; ಹೊಕ್ಕು: ಸೇರು; ಹೆಚ್ಚು: ಅಧಿಕ; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಮೆದೆ: ಹುಲ್ಲಿನ ರಾಶಿ; ಹೂಣು: ಶಪಥಮಾಡು, ಪ್ರತಿಜ್ಞೆಮಾಡು; ಹೊಕ್ಕು: ಸೇರು; ಥಟ್ಟು: ಪಕ್ಕ, ಕಡೆ, ಗುಂಪು; ತುಳಿ: ಮೆಟ್ಟು; ಇದಿರು: ಎದುರು; ಎಚ್ಚು: ಬಾಣ ಪ್ರಯೋಗ ಮಾಡು; ಕೆಲಬಲ: ಅಕ್ಕಪಕ್ಕ; ಕದನ: ಯುದ್ಧ; ಕಲಿ: ಶೂರ; ಸೀಳು: ಹರಿ, ಕತ್ತರಿಸು; ಕಾದು: ಹೋರಾದು; ಕಾಲ: ಯಮನ; ಲೀಲೆ: ಆನಂದ, ಸಂತೋಷ; ವಿಷಮ: ಭಯಂಕರವಾದ; ಸಮರಂಗ: ಯುದ್ಧ;

ಪದವಿಂಗಡಣೆ:
ಕದಳಿಯೊಳು +ಮದದಾನೆ +ಹೊಕ್ಕಂ
ದದಲಿ +ಹೆಚ್ಚಿದ +ಚಾತುರಂಗದ
ಮೆದೆಯನೊಟ್ಟಿದು+ ಹೂಣೆ +ಹೊಕ್ಕನು +ಥಟ್ಟನೊಡೆ+ತುಳಿದು
ಇದಿರೊಳ್+ಎಚ್ಚನು +ಕೆಲಬಲದೊಳ್+ಇಹ
ಕದನ+ಕಲಿಗಳ +ಸೀಳಿದನು +ಕಾ
ದಿದನು +ಕಾಲನ +ಲೀಲೆಯಾದುದು +ವಿಷಮ +ಸಮರಂಗ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕದಳಿಯೊಳು ಮದದಾನೆ ಹೊಕ್ಕಂದದಲಿ
(೨) ಯುದ್ಧವನ್ನು ವರ್ಣಿಸುವ ಪರಿ – ಕಾಲನ ಲೀಲೆಯಾದುದು ವಿಷಮ ಸಮರಂಗ

ಪದ್ಯ ೩೧: ಭೀಮನು ಹೇಗೆ ಗಾಯಗೊಂಡನು?

ಸುಳಿದು ಹರಿ ಮೇಖಲೆಯ ಮೋಹರ
ದೊಳಗೆ ಮುಗ್ಗಿದಿರೈ ಮಹಾ ಮಂ
ಡಳಿಕರಿರ ಫಡ ಹೋಗಿರೈ ನೀವೆನುತ ಖಾತಿಯಲಿ
ಬಿಲುದುಡುಕಿ ಪವಮಾನ ನಂದನ
ನಳವಿಗೊಟ್ಟನು ಹೂಣೆ ಹೊಕ್ಕರಿ
ಬಲವನಿರಿದನು ಘಾಯವಡೆದನು ಘೋರ ಸಮರದಲಿ (ದ್ರೋಣ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಎಲೈ ಮಾಂಡಲಿಕರೇ, ಇಂದ್ರಜಾಲದ ಈ ಸೈನ್ಯದಲ್ಲಿ ಸೊತು ಹಿಂದಿರುಗಿದಿರಲ್ಲವೇ? ನೀವು ಹೋಗಿರಿ ಎಂದು ಮೂದಲಿಸಿ ಭೀಮನು ಬಿಲ್ಲು ಹಿಡಿದು ಶತ್ರುಸೈನ್ಯದಲ್ಲಿ ನುಗ್ಗಿ ಹೊಡೆದು ಘೋರವಾದ ಯುದ್ಧದಲ್ಲಿ ಗಾಯಗೊಂಡನು.

ಅರ್ಥ:
ಸುಳಿ: ಕಾಣಿಸಿಕೊಳ್ಳು; ಹರಿ: ಕುದುರೆ ; ಮೇಖಲೆ: ಒಡ್ಯಾಣ; ಮೋಹರ: ಯುದ್ಧ; ಮುಗ್ಗು: ಬಾಗು, ಮಣಿ; ಮಂಡಳಿಕ: ಸಾಮಂತರಾಜ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಖಾತಿ: ಕೋಪ; ಬಿಲು: ಬಿಲ್ಲು; ತುಡುಕು: ಹೋರಾಡು, ಸೆಣಸು; ಪವಮಾನ: ವಾಯು; ನಂದನ: ಮಗ; ಅಳವು: ಶಕ್ತಿ, ಸಾಮರ್ಥ್ಯ; ಹೂಣೆ: ಸ್ಪರ್ಧೆ, ಪ್ರತಿಜ್ಞೆ; ಹೊಕ್ಕು: ಸೇರು; ಅರಿ: ವೈರಿ; ಬಲ: ಸೈನ್ಯ; ಇರಿ: ಚುಚ್ಚು; ಘಾಯ: ಪೆಟ್ಟು; ಘೋರ: ಉಗ್ರವಾದ; ಸಮರ: ಯುದ್ಧ;

ಪದವಿಂಗಡಣೆ:
ಸುಳಿದು +ಹರಿ +ಮೇಖಲೆಯ +ಮೋಹರ
ದೊಳಗೆ+ ಮುಗ್ಗಿದಿರೈ+ ಮಹಾ +ಮಂ
ಡಳಿಕರಿರ+ ಫಡ+ ಹೋಗಿರೈ +ನೀವೆನುತ +ಖಾತಿಯಲಿ
ಬಿಲು+ತುಡುಕಿ+ ಪವಮಾನ+ ನಂದನನ್
ಅಳವಿ+ಕೊಟ್ಟನು +ಹೂಣೆ +ಹೊಕ್ಕ್+ಅರಿ
ಬಲವನ್+ಇರಿದನು+ ಘಾಯವಡೆದನು +ಘೋರ +ಸಮರದಲಿ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮೇಖಲೆಯ ಮೋಹರದೊಳಗೆ ಮುಗ್ಗಿದಿರೈ ಮಹಾ ಮಂಡಳಿಕರಿರ

ಪದ್ಯ ೪೧: ಕರ್ಣನ ಧನುರ್ವಿದ್ಯಾ ಕೌಶಲ್ಯವು ಹೇಗಿತ್ತು?

ಹೇಳಲರಿಯೆನು ನಿನ್ನವನ ಕ
ಟ್ಟಾಳುತನವನು ದೇವ ದೈತ್ಯರ
ಕಾಳೆಗದಲಿವನಂತೆ ಬಲ್ಲಿದರಿಲ್ಲ ಬಿಲ್ಲಿನಲಿ
ಆಳ ಮುರಿದನು ಹೂಣೆ ಹೊಗುವು
ಬ್ಬಾಳುಗಳ ಬಲು ದೇಹದಂಬಿನ
ಕೀಲಣದ ಕಾಳಾಸದಿರಿತವ ಮೆರೆದನಾ ಕರ್ಣ (ಕರ್ಣ ಪರ್ವ, ೧೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧದ ವಿವರವನ್ನು ನೀಡುತ್ತಾ, ಧೃತರಾಷ್ಟ್ರ ನಿನ್ನ ಮಗನ ಕಟ್ಟಾಳಾದ ಕರ್ಣನ ಪರಾಕ್ರಮವನ್ನು ವರ್ಣಿಸಲಾಗುವುದಿಲ್ಲ. ದೇವತೆಗಳಲ್ಲಿ, ದಾನವರಲ್ಲಿ ಇವನಂತಹ ಧನುರ್ವಿದ್ಯಾ ಪ್ರವೀಣರು ಕಾಣಲಾಗದು, ವಿರೋಧಿ ವೀರರನ್ನು ಮುರಿದನು. ಆಣೆ ಮಾಡಿ ಯುದ್ಧಕ್ಕೆ ಬಂದ ವೈರಿಗಳಿಗೆ ದೇಹದಲ್ಲಿ ಬಾಣಗಳನ್ನು ನೆಟ್ಟು ಅವರನ್ನು ತಡೆದನು.

ಅರ್ಥ:
ಹೇಳು: ತಿಳಿಸು; ಅರಿ: ತಿಳಿ; ಕಟ್ಟಾಳು: ನಂಬುಗೆಯ ಸೇವಕ; ದೇವ: ಅಮರರು; ದೈತ್ಯ: ರಾಕ್ಷಸ; ಕಾಳೆಗ: ಯುದ್ಧ; ಬಲ್ಲಿದ: ಬಲಿಷ್ಠನಾದವನು, ಪರಾಕ್ರಮಿ; ಬಿಲ್ಲು: ಧನುಸ್ಸು; ಆಳ: ಸೇವಕ; ಮುರಿ: ಸೀಳು; ಹೂಣೆ: ಪ್ರತಿಜ್ಞೆ; ಹೊಗು: ಪ್ರವೇಶಿಸು; ಉಬ್ಬಾಳು: ಉತ್ಸಾಹಿಯಾದ ಶೂರ; ಬಲುಹು: ಪರಾಕ್ರಮ; ದೇಹ: ಶರೀರ; ಅಂಬು: ಬಾಣ; ಕೀಲು: ಬೆಣೆ, ಕಡಾಣಿ; ಕಾಳಾಸ: ಹೊಂದುವಿಕೆ; ಇರಿ: ಚುಚ್ಚು; ಮೆರೆ: ಶೋಭಿಸು;

ಪದವಿಂಗಡಣೆ:
ಹೇಳಲ್+ಅರಿಯೆನು +ನಿನ್ನವನ +ಕ
ಟ್ಟಾಳುತನವನು +ದೇವ +ದೈತ್ಯರ
ಕಾಳೆಗದಲ್+ಇವನಂತೆ +ಬಲ್ಲಿದರಿಲ್ಲ +ಬಿಲ್ಲಿನಲಿ
ಆಳ +ಮುರಿದನು +ಹೂಣೆ +ಹೊಗುವ್
ಉಬ್ಬಾಳುಗಳ+ ಬಲು +ದೇಹದ್+ಅಂಬಿನ
ಕೀಲಣದ +ಕಾಳಾಸದ್+ಇರಿತವ +ಮೆರೆದನಾ +ಕರ್ಣ

ಅಚ್ಚರಿ:
(೧) ಕರ್ಣನ ಹಿರಿಮೆ: ದೇವ ದೈತ್ಯರ ಕಾಳೆಗದಲಿವನಂತೆ ಬಲ್ಲಿದರಿಲ್ಲ ಬಿಲ್ಲಿನಲಿ