ಪದ್ಯ ೧೪: ದ್ರೋಣನು ಸೈಂಧವನನ್ನು ಕಾಪಾಡಲೇಕಾಗಲಿಲ್ಲವೆಂದು ಹೇಳಿದನು?

ಖಾತಿಯೇಕೈ ಸೈಂಧವನ ಕಾ
ವಾತನಾರೈ ತ್ರಿಪುರದಹನದ
ಭೂತನಾಥನ ಬಾಣ ಬಂದುದು ನರನ ಗಾಂಡಿವಕೆ
ಆತನೆಚ್ಚದು ಪಾಶುಪತವದ
ನಾತುಕೊಂಬವರಾರು ಬರಿದೆ ಭ
ಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ (ದ್ರೋಣ ಪರ್ವ, ೧೫ ಸಮ್ಧಿ, ೧೪ ಪದ್ಯ)

ತಾತ್ಪರ್ಯ:
ನೀವೇಕೆ ಇಷ್ಟು ಸಿಟ್ಟಿನಿಂದ ವಾದಿಸುತ್ತಿರುವಿರಿ ಎಂದು ದ್ರೋಣನು ತನ್ನ ವಿಚಾರವನ್ನಿಡಲು ಶುರುಮಾಡಿದರು. ತ್ರಿಪುರಗಳನ್ನು ದಹಿಸಿದ ಶಿವನ ಪಾಶುಪತಾಸ್ತ್ರವು ಅರ್ಜುನನ ಗಾಂಡಿವಕ್ಕೆ ಬಂದಿತು ಎಂದ ಮೇಲೆ ಸೈಂಧವನನ್ನು ಕಾಪಾಡುವವರಾರು? ಅರ್ಜುನನು ಪ್ರಯೋಗಿಸಿದ್ದ ಪಾಶುಪತಾಸ್ತ್ರವನ್ನು ಇದಿರಿಸಬಲ್ಲವರಾರು? ಸುಮ್ಮನೆ ವೀರರನ್ನು ಬೆದರಿಸಿ ಅಲ್ಲಗಳೆಯುತ್ತಿದ್ದೀರಿ ಎಂದು ದ್ರೋಣನು ಹೇಳಿದನು.

ಅರ್ಥ:
ಖಾತಿ: ಕೋಪ, ಸಿಟ್ಟು; ಕಾವು: ರಕ್ಷಿಸು; ದಹನ: ಸುಡು; ಭೂತನಾಥ: ಶಿವ; ಬಾಣ: ಅಂಬು; ಬಂದು: ಆಗಮಿಸು; ನರ: ಅರ್ಜುನ; ಎಚ್ಚು: ಬಾಣ ಪ್ರಯೋಗ ಮಾಡು; ಭಟ: ಸೈನಿಕ, ಪರಾಕ್ರಮಿ; ಅತಿಶಯ: ಹೆಚ್ಚಳ; ಹುರುಳು: ಸತ್ತ್ವ, ಸಾರ; ಕೆಡಿಸು: ಹಾಳುಮಾಡು;

ಪದವಿಂಗಡಣೆ:
ಖಾತಿಯೇಕೈ +ಸೈಂಧವನ +ಕಾವ್
ಆತನಾರೈ +ತ್ರಿಪುರದಹನದ
ಭೂತನಾಥನ +ಬಾಣ +ಬಂದುದು +ನರನ +ಗಾಂಡಿವಕೆ
ಆತನ್+ಎಚ್ಚದು +ಪಾಶುಪತವ್+ಅದನ್
ಆತುಕೊಂಬವರಾರು +ಬರಿದೆ +ಭ
ಟಾತಿಶಯವನು +ಹುರುಳು+ಕೆಡಿಸುವಿರೆಂದನಾ +ದ್ರೋಣ

ಅಚ್ಚರಿ:
(೧) ಪಾಶುಪತಾಸ್ತ್ರ ಎಂದು ಹೇಳುವ ಪರಿ – ತ್ರಿಪುರದಹನದ ಭೂತನಾಥನ ಬಾಣ
(೨) ಹುರುಳಿಲ್ಲದ ಮಾತು ಎಂದು ಹೇಳುವ ಪರಿ – ಬರಿದೆ ಭಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ

ಪದ್ಯ ೩೫: ಶಲ್ಯನ ಸೈನ್ಯವು ಎತ್ತ ತಿರುಗಿತು?

ದೊರೆ ಮಡಿಯೆ ಮಾದ್ರಾನುಜನ ಬಲ
ತಿರುಗಿತಭಿಮನ್ಯುವಿನ ಹೊಯ್ಲಲಿ
ಹುರುಳುಗೆಟ್ಟುದು ಹೆಸರ ನಾಯಕವಾಡಿ ದುಗುಡದಲಿ
ತರಹರವ ನಾ ಕಾಣೆನೀ ಮೋ
ಹರಕೆ ಗತಿಯೇನೆನುತ ಭರದಲಿ
ಕರೆದು ತೋರಿದನಾ ಕೃಪಾಚಾರ್ಯಂಗೆ ಕಲಿ ದ್ರೋಣ (ದ್ರೋಣ ಪರ್ವ, ೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶಲ್ಯನ ತಮ್ಮನ ಸೈನ್ಯವು ಹಿಂದಿರುಗಿತು. ಪ್ರಖ್ಯಾತರಾದ ಕೌರವ ಸೇನಾನಾಯಕರು ಅಭಿಮನ್ಯುವಿನ ಹೊಡೆತಕ್ಕೆ ಸತ್ವಹೀನರಾದರು. ನಮಗಿನ್ನು ನೆಮ್ಮದಿಯಿಲ್ಲ, ಈ ಸೈನ್ಯಕ್ಕೆ ಗತಿಯೇನು ಎನ್ನುತ್ತಾ ದ್ರೋಣನು ಕೃಪಾಚಾರ್ಯರಿಗೆ ಹೀಗೆ ನುಡಿದನು.

ಅರ್ಥ:
ದೊರೆ: ರಾಜ; ಮಡಿ: ಸಾವನಪ್ಪು; ಅನುಜ: ತಮ್ಮ; ಬಲ: ಸೈನ್ಯ; ತಿರುಗು: ಹಿಂತಿರುಗು; ಹೊಯ್ಲು: ಏಟು, ಹೊಡೆತ; ಹುರುಳು: ಚೆಲವು, ಅಂದ; ಕೆಟ್ಟುದು: ಹಾಳಾಗು; ಹೆಸರು: ನಾಮ; ನಾಯಕ: ಒಡೆಯ; ದುಗುಡ: ದುಃಖ; ತರಹರ: ತಂಗುವಿಕೆ, ನಿಲ್ಲುವಿಕೆ; ಕಾಣೆ: ತೋರು; ಮೋಹರ: ಯುದ್ಧ; ಗತಿ: ಅವಸ್ಥೆ; ಭರ: ಹೆಚ್ಚಳ, ಆಧಿಕ್ಯ; ಕರೆದು: ಬರೆಮಾಡು; ತೋರು: ಪ್ರದರ್ಶಿಸು; ಕಲಿ: ಶೂರ;

ಪದವಿಂಗಡಣೆ:
ದೊರೆ +ಮಡಿಯೆ +ಮಾದ್ರಾನುಜನ+ ಬಲ
ತಿರುಗಿತ್+ಅಭಿಮನ್ಯುವಿನ +ಹೊಯ್ಲಲಿ
ಹುರುಳು+ಕೆಟ್ಟುದು +ಹೆಸರ +ನಾಯಕವಾಡಿ +ದುಗುಡದಲಿ
ತರಹರವ+ ನಾ +ಕಾಣೆನ್+ಈ+ ಮೋ
ಹರಕೆ +ಗತಿಯೇನ್+ಎನುತ +ಭರದಲಿ
ಕರೆದು +ತೋರಿದನಾ +ಕೃಪಾಚಾರ್ಯಂಗೆ +ಕಲಿ +ದ್ರೋಣ

ಅಚ್ಚರಿ:
(೧) ದ್ರೋಣನ ಆತಂಕವನ್ನು ಚಿತ್ರಿಸುವ ಪರಿ – ತರಹರವ ನಾ ಕಾಣೆನೀ ಮೋಹರಕೆ ಗತಿಯೇನೆನುತ
(೨) ದೊರೆ, ನಾಯಕ – ಸಾಮ್ಯಾರ್ಥಪದ

ಪದ್ಯ ೬೪: ಅರ್ಜುನನು ಯಾವುದನ್ನು ಬಯಸಿದನು?

ಹರೆದು ಮೋಹಿಸುವೀ ಚರಾಚರ
ನೆರೆದು ನಿಮ್ಮಯ ರೋಮಕೂಪದ
ಹೊರೆಯೊಳಗೆ ಹೊಳೆದಾಡುತಿಹುದೆಂಬಗ್ಗಳಿಕೆಗಳಿಗೆ
ಹುರುಳೆನಿಪ ಹೇರಾಳದಂಗದ
ಸಿರಿಯ ತೋರೈ ಕೃಷ್ಣ ನಿರ್ಮಲ
ಪರಮತತ್ವವನೊಲ್ಲೆ ನಿಮ್ಮಯ ಭಕ್ತಿ ಸಾಕೆಂದ (ಭೀಷ್ಮ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ವಿಸ್ತಾರವಾಗಿ ಹರಡಿ ಮೋಹಿಸುತ್ತಿರುವ ಚರಾಚರಾತ್ಮಕವಾದ ಈ ಜಗತ್ತು, ನಿನ್ನ ರೋಮಕೂಪದೊಳಗೆ ಹುದುಗಿದೆ ಎಂಬ ಹೆಚ್ಚಿನ ರೂಪವನ್ನು ನನಗೆ ತೋರಿಸು. ನಿರ್ಮಲವಾದ ಪರಮತತ್ತ್ವವನ್ನು ನಾನು ಒಳ್ಳೆ, ನಿನ್ನ ಭಕ್ತಿಯೇ ಸಾಕು, ದೇಹ ಬುದ್ಧಿಯಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಅರ್ಜುನನು ಹೇಳಿದನು.

ಅರ್ಥ:
ಹರೆದು:ವ್ಯಾಪಿಸು; ಮೋಹಿಸು: ಆಸೆಪಡು; ಚರಾಚರ: ಚಲಿಸುವ-ಚಲಿಸದಿರುವ; ನೆರೆ: ಜೊತೆಗೂಡು; ರೋಮ: ಕೂದಲು; ಕೂಪ: ಹಳ್ಳ, ಗುಳಿ; ಹೊರೆ:ರಕ್ಷಣೆ, ಆಶ್ರಯ; ಹೊಳೆ: ಪ್ರಕಾಶ; ಅಗ್ಗಳಿಕೆ: ಶ್ರೇಷ್ಠ; ಹುರುಳು: ವಸ್ತು, ಪದಾರ್ಥ, ಸಾರ; ಹೇರಾಳ: ವಿಶೇಷ; ಸಿರಿ: ಐಶ್ವರ್ಯ; ತೋರು: ಗೋಚರಿಸು; ನಿರ್ಮಲ: ಶುದ್ಧ; ಪರಮ: ಶ್ರೇಷ್ಠ; ತತ್ವ: ಸಿದ್ಧಾಂತ, ನಿಯಮ; ಒಲ್ಲೆ: ಬೇಡ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಸಾಕು: ನಿಲ್ಲಿಸು;

ಪದವಿಂಗಡಣೆ:
ಹರೆದು +ಮೋಹಿಸುವ+ಈ+ ಚರಾಚರ
ನೆರೆದು +ನಿಮ್ಮಯ +ರೋಮ+ಕೂಪದ
ಹೊರೆಯೊಳಗೆ +ಹೊಳೆದಾಡುತಿಹುದೆಂಬ್ + ಅಗ್ಗಳಿಕೆಗಳಿಗೆ
ಹುರುಳೆನಿಪ +ಹೇರಾಳದ್+ ಅಂಗದ
ಸಿರಿಯ+ ತೋರೈ +ಕೃಷ್ಣ +ನಿರ್ಮಲ
ಪರಮ+ತತ್ವವನ್+ಒಲ್ಲೆ+ ನಿಮ್ಮಯ +ಭಕ್ತಿ+ ಸಾಕೆಂದ

ಅಚ್ಚರಿ:
(೧) ಹರೆದು, ಹೇರಾಳ, ಹುರುಳು, ಹೊರೆ – ಹ ಕಾರದ ಪದಗಳ ಬಳಕೆ

ಪದ್ಯ ೭೬: ಸೇನೆಯು ಏನೆಂದು ನಿಶ್ಚೈಸಿದರು?

ಹುರುಳುಗೆಟ್ಟುದು ಗರುವತನವೆಂ
ದರಸನಾಚಿದನಧಿಕ ಶೌರ್ಯೋ
ತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟದಳಿವ ನಿಶ್ಚೈಸಿ (ವಿರಾಟ ಪರ್ವ, ೯ ಸಂಧಿ, ೭೬ ಪದ್ಯ)

ತಾತ್ಪರ್ಯ:
ತಮ್ಮ ಅಭಿಮಾನಕ್ಕೆ ಕುಂದು ಬಂದಿತೆಂದು ಕೌರವನು ನಾಚಿಕೊಂಡು ಮಹಾ ಶೌರ್ಯದಿಂದ ಮತ್ತೆ ಯುದ್ಧಕ್ಕೆ ನಿಂತನು. ರಾಜನಿಗುಂಟಾದ ಸಂಕಟವನ್ನು ಕಂಡು, ಸೈನ್ಯದ ನಾಯಕರು ಗುಂಪುಗಟ್ಟಿ, ಸಾವು ಇಲ್ಲವೆ ಗೆಲುವು ಎರಡರೊಳಗೊಂದಾಗಬೇಕೆಂದು ನಿಶ್ಚೈಸಿದರು.

ಅರ್ಥ:
ಹುರುಳು: ಸತ್ತ್ವ, ಸಾರ; ಕೆಟ್ಟು: ಹಾಳು; ಗರುವ: ಬಲಶಾಲಿ, ಗರ್ವ; ಅರಸ: ರಾಜ; ನಾಚು: ಅವಮಾನ ಹೊಂದು; ಅಧಿಕ: ಹೆಚ್ಚು; ಶೌರ್ಯ: ಪರಾಕ್ರಮ; ಉತ್ಕರುಷ:ಹೆಚ್ಚಳ, ಮೇಲ್ಮೆ; ಕಲಿ: ಶೂರ; ನಿಂದು: ನಿಲ್ಲು; ಕಾಳಗ: ಯುದ್ಧ; ದೊರೆ: ರಾಜ; ದುಗುಡ: ದುಃಖ; ಕಂಡು: ನೋಡು; ಉರವಣಿಸು: ಆತುರಿಸು; ಸಕಲ: ಎಲ್ಲಾ; ಸುಭಟ: ಸೈನಿಕರು; ಹೊರಳಿಗಟ್ಟು: ಒಟ್ಟು ಸೇರು; ಸೇನೆ: ಸೈನ್ಯ; ನಿಚ್ಚಟ: ಸ್ಪಷ್ಟವಾದುದು; ಅಳಿ: ನಾಶ; ನಿಶ್ಚೈಸು: ನಿರ್ಧರಿಸು;

ಪದವಿಂಗಡಣೆ:
ಹುರುಳುಗೆಟ್ಟುದು +ಗರುವತನವೆಂದ್
ಅರಸ+ ನಾಚಿದನ್+ಅಧಿಕ +ಶೌರ್ಯ
ಉತ್ಕರುಷದಲಿ +ಕಲಿಯಾಗಿ+ ನಿಂದನು+ ಮತ್ತೆ +ಕಾಳಗಕೆ
ದೊರೆಯ +ದುಗುಡವ +ಕಂಡು +ತಮತಮಗ್
ಉರವಣಿಸಿದರು +ಸಕಲ +ಸುಭಟರು
ಹೊರಳಿಗಟ್ಟಿತು +ಸೇನೆ +ನಿಚ್ಚಟದಳಿವ +ನಿಶ್ಚೈಸಿ

ಅಚ್ಚರಿ:
(೧) ದುರ್ಯೋಧನ ಶಕ್ತಿ – ಅಧಿಕ ಶೌರ್ಯೋತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ

ಪದ್ಯ ೧೦: ದ್ರೌಪದಿಯ ನೋಟವು ಹೇಗೆ ನೋವನ್ನುಂತುಮಾಡಿತು?

ಅರಿದು ನೆತ್ತರು ಗಾಣದಲಗಿದು
ನೆರೆ ಬಿಗಿಯೆ ಮೈಬಾಸುಳೇಳದ
ಹುರಿ ಬಲಿದ ನೇಣ್ಸೋಂಕಿದಡೆ ಹೊಗೆ ಮಸಗದೆದೆಗಿಚ್ಚು
ಅರರೆ ಕಂಗಳ ಧಾರೆ ಯಾವನ
ಕೊರಳಕೊಯ್ಯದದಾವ ನರಿಕೆಯ
ಹುರುಳುಗೆಡಿಸದಿದಾವ ನಿಲುವನು ಶಿವಶಿವಾಯೆಂದ (ವಿರಾಟ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಇವಳ ಕಣ್ಣೋಟದ ಧಾರೆಯು ಕತ್ತರಿಸಿದರೆ ರಕ್ತ ಸುರಿಯದ ಶಸ್ತ್ರ, ಬಿಗಿದರೆ ಮೈಮೇಲೆ ಬಾಸುಂಡೆ ಏಳದ ಹುರಿಗಳುಳ್ಳ ಚಾಟಿ, ಹೊತ್ತಿಕೊಂಡರೆ ಹೊಗೆ ಬಾರದ ಬೆಂಕಿ, ಇದು ಯಾರ ಕೊರಳನ್ನು ಕೊಯ್ಯದೆ ಬಿಟ್ಟೀತು? ಯಾರ ಮತಿಯನ್ನು ಕೆಡಿಸದಿದ್ದೀತು? ಶಿವ ಶಿವಾ ಈ ಕಣ್ಣೋಟಕ್ಕಿದಿರಾಗಿ ಯಾರು ನಿಂತಾರು? ಎಂದು ಕೀಚಕನು ಚಿಂತಿಸಿದನು.

ಅರ್ಥ:
ಅರಿ: ತಿಳಿ, ಕತ್ತರಿಸು; ನೆತ್ತರು: ರಕ್ತ; ಗಾಣ: ಣ್ಣೆಕಾಳು ಅರೆಯುವ ಯಂತ್ರ; ಅಲಗು: ಆಯುಧಗಳ ಹರಿತವಾದ ಅಂಚು; ನೆರೆ: ಗುಂಪು, ಸೇರು; ಬಿಗಿ: ಬಂಧಿಸು; ಮೈ: ತನು; ಬಾಸುಳು: ಹೊಡೆತದಿಂದ ಮೈಮೇಲೆ ಏಳುವ ಬಾವು, ಊತ, ಬಾಸುಂಡೆ; ಏಳು: ಹೊರಹೊಮ್ಮು; ಹುರಿ: ಹಗ್ಗ, ರಜ್ಜು; ಬಲಿ: ಗಟ್ಟಿ, ದೃಢ; ನೇಣು: ಹಗ್ಗ, ಹುರಿ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಹೊಗೆ: ಧೂಮ; ಮಸಗು: ಹರಡು; ಕೆರಳು; ತಿಕ್ಕು; ಎದೆ: ಹೃದಯ; ಕಿಚ್ಚು: ಬೆಂಕಿ, ಅಗ್ನಿ; ಕಂಗಳು: ಕಣ್ಣು; ಧಾರೆ: ಪ್ರವಾಹ; ಕೊರಳು: ಕಂಠ; ಕೊಯ್ಯು: ಸೀಳು; ಅರಿಕೆ: ವಿಜ್ಞಾಪನೆ; ಅರಿ: ತಿಳಿ; ಹುರುಳು: ವಸ್ತು, ಪದಾರ್ಥ; ಕೆಡಿಸು: ಹಾಳುಮಾಡು; ನಿಲುವು: ಸ್ಥಿತಿ;

ಪದವಿಂಗಡಣೆ:
ಅರಿದು+ ನೆತ್ತರು +ಗಾಣದ್+ಅಲಗಿದು
ನೆರೆ+ ಬಿಗಿಯೆ +ಮೈಬಾಸುಳೇಳದ
ಹುರಿ +ಬಲಿದ +ನೇಣ್+ಸೋಂಕಿದಡೆ +ಹೊಗೆ +ಮಸಗದ್+ಎದೆ+ಕಿಚ್ಚು
ಅರರೆ +ಕಂಗಳ+ ಧಾರೆ +ಯಾವನ
ಕೊರಳ+ಕೊಯ್ಯದ್+ಅದಾವನ್ + ಅರಿಕೆಯ
ಹುರುಳು+ಕೆಡಿಸದ್+ಇದಾವ +ನಿಲುವನು +ಶಿವಶಿವಾಯೆಂದ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಅರಿದು ನೆತ್ತರು ಗಾಣದಲಗಿದು, ನೆರೆ ಬಿಗಿಯೆ ಮೈಬಾಸುಳೇಳದ
ಹುರಿ, ಬಲಿದ ನೇಣ್ಸೋಂಕಿದಡೆ ಹೊಗೆ ಮಸಗದೆದೆಗಿಚ್ಚು

ಪದ್ಯ ೧೧: ಕರ್ಣನು ಶತ್ರುಗಳಿಗೆ ಯಾವ ನೀರನ್ನು ಕುಡಿಸಿದನು?

ಅರಸ ಕೇಳಾ ನರನನಾ ವಾ
ನರನನಾ ಮುರಹರನನಾ ರಥ
ತುರಗನಿಚಯವನಾ ರಥವನಾ ಶರವನಾ ಧನುವ
ಹುರುಳುಗೆಡಿಸಿದು ಭುಜಪರಾಕ್ರಮ
ದುರಿಯೊಳಗೆ ಬಿಡೆಕಾಸಿ ಹಗೆನೆ
ತ್ತರಲಿ ನೀರೂಡಿದನು ನಿಜಶರನಿಕರವನು ಕರ್ಣ (ಕರ್ಣ ಪರ್ವ, ೨೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಕರ್ಣನ ಬಾಣಗಳ ಪ್ರಭಾವ ಅಧಿಕವಾಗಿತ್ತು. ಅರ್ಜುನ, ಹನುಮಂತ, ಕೃಷ್ನ, ರಥದ ದಿವ್ಯಾಶ್ವಗಳು, ರಥ, ಅರ್ಜುನನ ಬಿಲ್ಲುಬಾಣಗಳು, ಇವೆಲ್ಲವನ್ನು ಜೊಳ್ಳಾಗುವಂತೆ ಹೊಡೆದು, ಕರ್ಣನು ಬಾಣಗಳನ್ನು ತನ್ನ ಭುಜಬಲಪರಾಕ್ರಮದ ಉರಿಯಲ್ಲಿ ಕಾಸಿ ಶತ್ರುಗಳ ರಕ್ತವೆಂಬ ನೀರನ್ನು ಕುಡಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ನರ: ಅರ್ಜುನ; ವಾನರ: ಹನುಮಂತ; ಮುರಹರ: ಕೃಷ್ಣ; ರಥ: ಬಂಡಿ; ತುರಗ: ಅಶ್ವ; ನಿಚಯ: ಗುಂಪು; ಶರ: ಬಾಣ; ಧನು: ಬಿಲ್ಲು; ಹುರುಳು: ಸತ್ತ್ವ, ಸಾರ; ಕೆಡಿಸು: ಹಾಳು ಮಾಡು; ಭುಜ: ಬಾಹು; ಪರಾಕ್ರಮ: ಶಕ್ತಿ; ಉರಿ: ಜ್ವಾಲೆ; ಕಾಸಿ: ಬಿಸಿಮಾಡು; ಹಗೆ: ವೈರಿ; ನೆತ್ತರ: ರಕ್ತ; ನೀರು: ಜಲ; ಊಡಿದ: ಕುಡಿಸು; ನಿಜ: ದಿಟ; ಶರ: ಬಾಣ;

ಪದವಿಂಗಡಣೆ:
ಅರಸ +ಕೇಳ್+ಆ+ ನರನನಾ +ವಾ
ನರನನಾ+ ಮುರಹರನನಾ+ ರಥ
ತುರಗನಿಚಯವನಾ +ರಥವನಾ+ ಶರವನಾ+ ಧನುವ
ಹುರುಳು+ಕೆಡಿಸಿದು +ಭುಜ+ಪರಾಕ್ರಮದ್
ಉರಿಯೊಳಗೆ +ಬಿಡೆಕಾಸಿ+ ಹಗೆ+ನೆ
ತ್ತರಲಿ +ನೀರೂಡಿದನು+ ನಿಜಶರ+ನಿಕರವನು +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯೊಳಗೆ ಬಿಡೆಕಾಸಿ ಹಗೆನೆತ್ತರಲಿ ನೀರೂಡಿದನು ನಿಜಶರನಿಕರವನು ಕರ್ಣ
(೨) ನಾ ಕಾರದ ಪ್ರಯೋಗ ೧-೩ ಸಾಲುಗಳಲ್ಲಿ

ಪದ್ಯ ೧೫: ಸೋಲಿಗೆ ಯಾವ ಕಾರಣವೆಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು?

ಹರುಹುಗೆಟ್ಟುದು ತೇರು ಸಾರಥಿ
ಹುರುಳುಗೆಡಿಸಿಯೆ ನುಡಿದನಂಬಿನ
ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ
ಅರಿವಿಜಯವೆಲ್ಲಿಯದು ನೀವ್ ಮನ
ಬರಡಾರೈ ನಿಮ್ಮನ್ವಯವ ಸಂ
ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ (ಕರ್ಣ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಪ್ರಶ್ನೆಗಳಿಗೆ ಸಂಜಯನು ಉತ್ತರಿಸುತ್ತಾ, ಕರ್ಣನ ರಥವು ಕುಗ್ಗಿ ಹೋಯಿತು, ಸಾರಥಿಯು ಮರ್ಮಗೆಡಿಸಿ ಭಂಗಿಸಿದನು. ಬಾಣಗಳ ಕೊರತೆ ಮೊದಲೇ ಆಗಿತ್ತು, ದೈವದ್ರೋಹಿಗಳಾದ ನೀವು ಶತ್ರುಗಳನ್ನು ಹೇಗೆ ಗೆಲ್ಲಲು ಸಾಧ್ಯ? ನಿಮ್ಮದು ಬರುಡಾದ ಮನಸ್ಸು ಆದ್ದರಿಂದ ನಿಮ್ಮ ವಂಶವನ್ನೇ ನಾಶಮಾಡಿದಿರಿ ಎಂದು ಸಂಜಯನು ತಲೆದೂಗುತ್ತಾ ತಿಳಿಸಿದನು.

ಅರ್ಥ:
ಹರುಹು: ವಿಸ್ತಾರ, ವೈಶಲ್ಯ; ತೇರು: ರಥ; ಸಾರಥಿ: ರಥವನ್ನು ಓಡಿಸುವವ; ಹುರುಳು:ತಿರುಳು, ಸಾರ, ಸಾಮರ್ಥ್ಯ; ಕೆಡಿಸು: ಹಾಳು ಮಾಡು; ನುಡಿ: ಮಾತು; ಅಂಬು: ಬಾಣ; ಕೊರತೆ: ನೂನ್ಯತೆ; ಮುನ್ನ: ಮುಂದಿನ; ದೈವ: ಭಗವಂತ; ದ್ರೋಹ: ವಿಶ್ವಾಸಘಾತ, ವಂಚನೆ; ಅರಿ: ರಿಪು, ವೈರಿ; ವಿಜಯ: ಗೆಲುವು; ಮನ: ಮನಸ್ಸು; ಬರಡು: ವ್ಯರ್ಥವಾದುದು; ಅನ್ವಯ: ಸಂಬಂಧ; ಸಂಹರಿಸು: ನಾಶಮಾಡು; ಸಾಕು: ನಿಲ್ಲಿಸು; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ಹರುಹು+ಕೆಟ್ಟುದು +ತೇರು +ಸಾರಥಿ
ಹುರುಳು+ಕೆಡಿಸಿಯೆ +ನುಡಿದನ್+ಅಂಬಿನ
ಕೊರತೆ+ ತಾ +ಮುನ್ನಾಯ್ತು +ದೈವದ್ರೋಹಿಗಳು+ ನಿಮಗೆ
ಅರಿ+ವಿಜಯವ್+ಎಲ್ಲಿಯದು +ನೀವ್ +ಮನ
ಬರಡಾರೈ +ನಿಮ್ಮ+ಅನ್ವಯವ +ಸಂ
ಹರಿಸಿದಿರಿ+ ಸಾಕೆಂದು +ಸಂಜಯ +ತೂಗಿದನು +ಶಿರವ

ಅಚ್ಚರಿ:
(೧) ಹುರುಹು, ಹುರುಳು- ಪ್ರಾಸ ಪದಗಳು
(೨) ಸಂಜಯನು ಬಯ್ಯುವ ಪರಿ – ದೈವದ್ರೋಹಿಗಳು, ಬರಡಾರೈ, ಅನ್ವಯವ ಸಂಹರಿಸಿದಿರಿ

ಪದ್ಯ ೨೫: ಭೀಷ್ಮರ ಯಾವ ಬುದ್ಧಿವಾದದ ಮಾತನ್ನು ಹೇಳಿದರು?

ಈ ಹರಿಯ ನುಡಿಗೇಳು ದೈವದ
ಮೋಹ ತಪ್ಪಿದ ಬಳಿಕ ಸುಭಟರ
ಸಾಹಸದೆ ಹುರುಳಿಲ್ಲ ನಂಬದಿರೆಮ್ಮ ಬಲುಹುಗಳ
ಆ ಹಿತವ ನೀಡಾಡದಿರು ವೈ
ದೇಹಿಯನು ಸೆರೆಗೆಯ್ದ ಸ್ವಾಮಿ
ದ್ರೋಹಿಯನು ಹೋಲದಿರು ಕೌರವಯೆಂದನಾ ಭೀಷ್ಮ (ಉದ್ಯೋಗ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಬುದ್ಧಿಮಾತನ್ನು ಹೇಳುತ್ತಾ, ಎಲೈ ದುರ್ಯೋಧನ ಈ ಕೃಷ್ಣನ ಮಾತುಗಳನ್ನು ಕೇಳು, ಭಗವಂತನ ಕೃಪೆ ತಪ್ಪಿದ ಬಳಿಕೆ ಎಂತಹ ಬಲಿಷ್ಠ ಸೈನ್ಯವಿದ್ದರೂ ಅದು ನಗಣ್ಯ, ಆ ಸೈನ್ಯದ ಪರಾಕ್ರಮವನ್ನು ನಂಬಬೇಡ. ನಿನಗೆ ಹಿತವಾಗುವುದನ್ನು ಕಡೆಗಣಿಸಬೇಡ. ಸೀತಾದೇವಿಯನ್ನುಆಪಹರಿಸಿ ಸ್ವಾಮಿದ್ರೋಹವನ್ನು ಮಾಡಿದ ರಾವಣನನ್ನು ಹೋಲಬೇಡ ಎಂದರು ಭೀಷ್ಮರು.

ಅರ್ಥ:
ಹರಿ: ವಿಷ್ಣು; ನುಡಿ: ಮಾತು; ದೈವ: ಭಗವಂತ; ಮೋಹ: ಆಸೆ; ತಪ್ಪಿದ: ಕಳಚಿದ; ಬಳಿಕ: ನಂತರ; ಭಟ: ಸೈನಿಕ, ಸಾಹಸಿ; ಸಾಹಸ: ಪರಾಕ್ರಮ, ಶೌರ್ಯ; ಹುರುಳು: ಸಾರ; ನಂಬು: ವಿಶ್ವಾಸವಿಡು; ಬಲುಹು: ಬಲ, ಶಕ್ತಿ; ಹಿತ: ಒಳಿತು; ನೀಡಾಡು: ಕಡೆಗಣಿಸದಿರು; ವೈದೇಹಿ: ಸೀತೆ; ಸೆರೆ: ಬಂಧನ; ಸ್ವಾಮಿ: ಒಡೆಯ; ದ್ರೋಹಿ: ವಿಶ್ವಾಸಘಾತ, ವಂಚಕ; ಹೋಲು: ಸದೃಶವಾಗು; ಕೌರವ: ದುರ್ಯೋಧನ;

ಪದವಿಂಗಡಣೆ:
ಈ +ಹರಿಯ +ನುಡಿ+ ಕೇಳು +ದೈವದ
ಮೋಹ+ ತಪ್ಪಿದ +ಬಳಿಕ +ಸುಭಟರ
ಸಾಹಸದೆ+ ಹುರುಳಿಲ್ಲ +ನಂಬದಿರ್+ಎಮ್ಮ +ಬಲುಹುಗಳ
ಆ +ಹಿತವ +ನೀಡಾಡದಿರು +ವೈ
ದೇಹಿಯನು +ಸೆರೆಗೆಯ್ದ +ಸ್ವಾಮಿ
ದ್ರೋಹಿಯನು +ಹೋಲದಿರು +ಕೌರವ+ಯೆಂದನಾ +ಭೀಷ್ಮ

ಅಚ್ಚರಿ:
(೧) ಉಪಮಾನದ ಬಳಕೆ – ವೈದೇಹಿಯನು ಸೆರೆಗೆಯ್ದ ಸ್ವಾಮಿದ್ರೋಹಿಯನು ಹೋಲದಿರು
(೨) ಹಿತವಚನದ ಮಾತು – ದೈವದ ಮೋಹ ತಪ್ಪಿದ ಬಳಿಕ ಸುಭಟರ ಸಾಹಸದೆ ಹುರುಳಿಲ್ಲ
(೩) ವೈದೇಹಿ, ಸ್ವಾಮಿದ್ರೋಹಿ – ಪ್ರಾಸ ಪದಗಳು

ಪದ್ಯ ೧೮: ಸುಯೋಧನನು ಭೀಷ್ಮ ದ್ರೋಣರ ಸಲಹೆಗೆ ಹೇಗೆ ಪ್ರತಿಕ್ರಿಯಿಸಿದನು?

ಹುರುಳುಗೆಡಿಸುವಿರಾವು ನುಡಿದರೆ
ಕರಗಿ ಕುಂತಿಯ ಮಕ್ಕಳೆಂದೊಡೆ
ಹರಹಿಕೊಳುವಿರಿ ಡಿಂಬವೆಮ್ಮಲಿ ಜೀವವವರಲ್ಲಿ
ಭರತಸಂತತಿಯಲ್ಲಿ ಕೆಲಬರು
ನರರೆ ಕೆಲಬರು ಸುರರೆ ಸಾಕಂ
ತಿರಲಿ ಸಮರದೊಳೆಮ್ಮ ನೋಡೆಂದನು ಸುಯೋಧನನು (ಉದ್ಯೋಗ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭೀಷ್ಮ ದ್ರೋಣರ ಮಾತುಗಳನ್ನು ಕೇಳಿ ಕೋಪಗೊಂಡ ಸುಯೋಧನನು, ನಾವು ಏನೇ ಹೇಳಿದರು ಅದನ್ನು ನೀವು ತೆಗಳುವಿರಿ, ಪಾಂಡವರು ಏನೆಂದರೂ ಒಪ್ಪುವಿರಿ ಮತ್ತು ಪ್ರಶಂಸಿಸುವಿರಿ, ನಿಮ್ಮ ದೇಹಗಳು ನಮ್ಮಲ್ಲಿವೆ ಆದರೆ ಪ್ರಾಣವು ಪಾಂಡವರಲ್ಲಿ. ಒಂದೇ ಕುಲದ ಭರತ ವಂಶದಲ್ಲಿ ಒಬ್ಬರು ನರರು, ಮತ್ತೊಬ್ಬರು ದೇವತೆಗಳೇ? ನಿಮ್ಮ ಮಾತು ಸಾಕು, ಯುದ್ಧದಲ್ಲಿ ನಾವು ಯಾರು ಏನು ಎಂಬುದನ್ನು ನೀವು ನೋಡಿಕೊಳ್ಳಿರೆ ಎಂದು ದುರ್ಯೋಧನನು ಗುಡುಗಿದನು.

ಅರ್ಥ:
ಹುರುಳು: ಶಕ್ತಿ, ಸಾಮರ್ಥ್ಯ, ಒಳಿತು; ನುಡಿ: ಮಾತು; ಕರಗು: ಕನಿಕರ ಪಡು; ಮಕ್ಕಳು: ಸುತರು; ಹರಹು: ವಿಸ್ತಾರ, ವೈಶಾಲ್ಯ, ಹಬ್ಬುವಿಕೆ; ಡಿಂಬ: ವಿಪ್ಲವ, ದಂಗೆ, ಅಲ್ಪ, ತೊಂದರೆ; ಜೀವ: ಪ್ರಾಣ; ಸಂತತಿ: ವಂಶ; ನರ: ಮನುಷ್ಯ; ಸುರ: ದೇವತೆ; ಸಾಕು: ನಿಲ್ಲಿಸು; ಸಮರ: ಯುದ್ಧ; ನೋಡು: ವೀಕ್ಷಿಸು; ಎಂದನು: ನುಡಿದನು; ಆವು: ನಾವು;

ಪದವಿಂಗಡಣೆ:
ಹುರುಳು+ಗೆಡಿಸುವಿರ್+ಆವು +ನುಡಿದರೆ
ಕರಗಿ+ ಕುಂತಿಯ +ಮಕ್ಕಳೆಂದೊಡೆ
ಹರಹಿಕೊಳುವಿರಿ +ಡಿಂಬವೆಮ್ಮಲಿ +ಜೀವವ್+ಅವರಲ್ಲಿ
ಭರತಸಂತತಿಯಲ್ಲಿ+ ಕೆಲಬರು
ನರರೆ+ ಕೆಲಬರು +ಸುರರೆ +ಸಾಕ್+ಅಂ
ತಿರಲಿ +ಸಮರದೊಳ್+ಎಮ್ಮ +ನೋಡೆಂದನು +ಸುಯೋಧನನು

ಅಚ್ಚರಿ:
(೧) ಹುರುಳು, ಹರಹಿ – ಪದಗಳ ಬಳಕೆ
(೨) ಸುಯೋಧನನು ಕೌರವರು ಮತ್ತು ಪಾಂಡವರ ಬಗ್ಗೆ ಹೋಲಿಸುತ್ತಿರುವುದು, – ಆವು ನುಡಿದರೆ.. ಕುಂತಿಯ ಮಕ್ಕಳೆಂದೊಡೆ.. ಕೆಲಬರು ನರರೆ ಕೆಲಬರು ಸುರರೆ..