ಪದ್ಯ ೧೫: ಭೀಮನು ದ್ರೋಣರಿಗೇಕೆ ದಾರಿ ಬಿಡಿ ಎಂದನು?

ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ (ದ್ರೋಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಎಲೈ ದ್ರೋಣನೇ, ಅರ್ಜುನ, ಸಾತ್ಯಕಿಯರು ಇನ್ನೂ ಬಾಲಕರು, ಅವರಿಗೆಂತಹ ಹುರುಡು, ಪಂಥ? ನನ್ನಲ್ಲದು ನಡೆಯದು, ಗರುಡಿಯಲ್ಲಿ ನೀವು ನಮಗೆ ಆಚಾರ್ಯರು ಅಲ್ಲಿ ನಮಸ್ಕರಿಸುತ್ತೇನೆ, ಯುದ್ಧಭೂಮಿಯಲ್ಲಿ ಎಂತಹ ನಮಸ್ಕಾರ? ನೀವು ಬಹಳ ವೃದ್ಧರು, ನಿಮಗೆದುರಾಡಬಾರದು, ನಿಮ್ಮ ಸತ್ವ ನನಗೆ ಗೊತ್ತು, ಸುಮ್ಮನೆ ಪಕ್ಕಕ್ಕೆ ಸರಿಯಿರಿ ಎಂದು ಭೀಮನು ದ್ರೋಣರಿಗೆ ಹೇಳಿದನು.

ಅರ್ಥ:
ತರಳ: ಬಾಲಕ; ಅವದಿರು: ಅಷ್ಟುಜನ; ಪಂಥವ: ಹಟ, ಛಲ, ಸ್ಪರ್ಧೆ; ಗರುಡಿ: ವ್ಯಾಯಾಮ ಶಾಲೆ; ವಂದಿಸು: ನಮಸ್ಕರಿಸು; ವಂದನೆ: ನಮಸ್ಕಾರ; ಸಮರ: ಯುದ್ಧ; ಮರುಳು: ಮೂಢ; ಮರುಮಾತು: ಎದುರುತ್ತರ; ವೃದ್ಧ: ಮುದುಕ; ಚಿತ್ತ: ಮನಸ್ಸು; ಹುರುಳು: ಸತ್ತ್ವ, ಸಾರ; ಬಲ್ಲೆ: ತಿಳಿ; ಪಥ: ದಾರಿ; ಬಿಡು: ತೊರೆ; ಕೆಲಸಾರು: ಪಕ್ಕಕ್ಕೆ ಹೋಗು;

ಪದವಿಂಗಡಣೆ:
ತರಳರ್+ಅರ್ಜುನ +ಸಾತ್ಯಕಿಗಳ್+ಅವ
ದಿರಿಗೆ +ಪಂಥವದೇಕೆ +ನಿಮ್ಮನು
ಗರುಡಿಯಲಿ +ವಂದಿಸುವ +ವಂದನೆ+ಯುಂಟೆ +ಸಮರದಲಿ
ಮರುಳಲಾ+ ಮರುಮಾತು +ಕಡು+ವೃ
ದ್ಧರಿಗ್+ಅದೇಕೆಂಬಂತೆ+ ಚಿತ್ತದ
ಹುರುಳ +ಬಲ್ಲೆನು +ಪಥವ+ ಬಿಡಿ +ಕೆಲಸಾರಿ +ಸಾಕೆಂದ

ಅಚ್ಚರಿ:
(೧) ಭೀಮನ ಬಿರುಸು ನುಡಿ – ವಂದನೆಯುಂಟೆ ಸಮರದಲಿ

ಪದ್ಯ ೨೬: ಕರ್ಣನು ದೇವತೆಗಳನ್ನು ಹೇಗೆ ಮೂದಲಿಸಿದನು?

ಗೆದ್ದುದೇ ರಣವೆಲವೊ ದಿವಿಜರ
ದೊದ್ದೆಯಲಿ ಸೂಳೆಯರ ಜಾತಿಯ
ಬಿದ್ದಿನರ ವೀಳೆಯದ ಬದೆಗರು ಭಟರ ಮೋಡಿಯಲಿ
ಹೊದ್ದಿದರೆ ಹುರುಳಹುದೆ ಭಯರಸ
ದದ್ದುಗೆಯ ಮಂಜಿಡಿಕೆ ಮನದವ
ರಿದ್ದು ಫಲವೇನೆನುತ ಕೈ ಮಾಡಿದನು ಕಲಿ ಕರ್ಣ (ಅರಣ್ಯ ಪರ್ವ, ೨೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಆವರೇನು ಯುದ್ಧವನ್ನು ಗೆದ್ದವರೇ? ಎಲೈ ದಿವಿಜರೇ, ನೀವು ಅಪ್ಸರ ಸ್ತ್ರೀಯರ ಬಳಿಗೆ ಬರುವವರಿಗೆ ವೀಳೆಯನ್ನು ಕೊಡುವ ಮಧ್ಯಸ್ಥರು, ನೀವು ವೀರರಂತೆ ವೇಷಹಾಕಿ ಯುದ್ಧಕ್ಕೆ ಬಂದರೆ ಅದರಿಂದೇನಾದರೂ ಪ್ರಯೋಜನ ವಾದೀತೇ? ಭಯದಿಂದ ತತ್ತರಿಸುವ ಅಳುಕು ಮನದವರು ಇದ್ದು ಏನು ಫಲ ಎಂದು ಮೂದಲಿಸುತ್ತಾ ಕರ್ಣನು ತನ್ನ ಕೈಚಳಕವನ್ನು ತೋರಿಸಿದನು.

ಅರ್ಥ:
ಗೆದ್ದು: ಗೆಲುವು; ರಣ: ಯುದ್ಧ; ದಿವಿಜ: ದೇವತೆ; ಒದ್ದೆ: ತೇವ; ಸೂಳೆ: ವೇಶ್ಯೆ, ಗಣಿಕೆ; ಜಾತಿ: ಕುಲ; ವೀಳೆ: ತಾಂಬೂಲ; ಭಟ: ಸೈನಿಕ; ಮೋಡಿ: ರೀತಿ, ಶೈಲಿ; ಹೊದ್ದು: ಮುಸುಕು; ಹುರುಳ: ಸತ್ತ್ವ, ಸಾರ; ಭಯ: ಅಂಜಿಕೆ; ಮಂಜಿಡಿಕೆ: ಮಂಜುಮುಸುಕಿರುವ, ದಡ್ಡತನ; ಮನ: ಮನಸ್ಸು; ಫಲ: ಪ್ರಯೋಜನ; ಕೈ: ಹಸ್ತ; ಕಲಿ: ಶೂರ;

ಪದವಿಂಗಡಣೆ:
ಗೆದ್ದುದೇ +ರಣವ್+ಎಲವೊ +ದಿವಿಜರದ್
ಒದ್ದೆಯಲಿ +ಸೂಳೆಯರ +ಜಾತಿಯ
ಬಿದ್ದಿನರ+ ವೀಳೆಯದ +ಬದೆಗರು +ಭಟರ +ಮೋಡಿಯಲಿ
ಹೊದ್ದಿದರೆ +ಹುರುಳಹುದೆ +ಭಯರಸದ್
ಅದ್ದುಗೆಯ +ಮಂಜಿಡಿಕೆ+ ಮನದವರ್
ಇದ್ದು+ ಫಲವೇನೆನುತ +ಕೈ +ಮಾಡಿದನು +ಕಲಿ+ ಕರ್ಣ

ಅಚ್ಚರಿ:
(೧) ದಿವಿಜರನ್ನು ಹೀಯಾಳಿಸುವ ಪರಿ – ಎಲವೊ ದಿವಿಜರದೊದ್ದೆಯಲಿ ಸೂಳೆಯರ ಜಾತಿಯ
ಬಿದ್ದಿನರ ವೀಳೆಯದ ಬದೆಗರು ಭಟರ ಮೋಡಿಯಲಿ