ಪದ್ಯ ೭೯: ಶಿಶುಪಾಲನ ಅಂತ್ಯದ ನಂತರ ಪರಿಸ್ಥಿತಿ ಹೇಗಾಯಿತು?

ತಗ್ಗಿತುರು ಕಳಕಳ ವಿಷಾದದ
ಸುಗ್ಗಿ ಬೀತುದು ರಾಯರೀಚೆಯ
ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ ಬಾಂಧವರು
ನೆಗ್ಗಿದವು ನೆನಹವನ ಸಖಿಗಳು
ಮುಗ್ಗಿದರು ಹುರುಡಿನ ವಿಘಾತಿಯ
ಲಗ್ಗಿಗರು ಹಣುಗಿದರು ಶಿಶುಪಾಲಾವಸಾನದಲಿ (ಸಭಾ ಪರ್ವ, ೧೧ ಸಂಧಿ, ೭೯ ಪದ್ಯ)

ತಾತ್ಪರ್ಯ:
ಶಿಶುಪಾಲನ ಅಂತ್ಯದ ನಂತರ ಎಲ್ಲೆಲ್ಲಿಯೂ ಗೊಂದಲ ಆಂತಕದ ವಾತಾವರಣ ಕಡಿಮೆಯಾಯಿತು, ದುಃಖದಿಂದ ತುಂಬಿದ್ದ ಪರಿಸರ ಮಾಯವಾಯಿತು. ತೆರಳಿದ್ದ ರಾಜರೆಲ್ಲರೂ ಈ ಕಡೆಗೆ ಬಂದು ತಮ್ಮ ಬಾಂಧವರ ಜೊತೆ ಸೇರಿದರು. ಹಿಂದಿನ ನೆನಪುಗಳನ್ನು ಮರೆತು ಶಿಶುಪಾಲನ ಮಿತ್ರರೆಲ್ಲರೂ ಸುಮ್ಮನಾದರು. ಶಿಶುಪಾಲನ ಮರಣದನಂತರವೂ ಹೋರಾಡಬೇಕೆಂಬ ಕುತೂಹಲಿಗಳು ಸುಮ್ಮನಾದರು.

ಅರ್ಥ:
ತಗ್ಗು: ಕಡಿಮೆಯಾಗು; ಉರು: ಹೆಚ್ಚಾದ; ಕಳಕಳ: ಗೊಂದಲ; ವಿಷಾದ: ದುಃಖ; ಸುಗ್ಗಿ: ಪರ್ವ, ಹಬ್ಬ; ಬೀತುದು: ಕಳೆದುಹೋಗು, ಮಾಯವಾಗು; ರಾಯ: ರಾಜ; ಮಗ್ಗುಲು: ಪಕ್ಕ, ಪಾರ್ಶ್ವ; ಮೇಳೈಸು: ಒಟ್ಟಿಗೆ ಸೇರು; ಮೆರೆ: ಹೊಳೆ, ಶೋಭಿಸು; ಮತ್ತೆ: ಪುನಃ; ಬಾಂಧವರು: ಪರಿಜನರು; ನೆಗ್ಗು: ತಗ್ಗು, ಬೀಳು; ನೆನೆಹು: ನೆನೆಪು; ಸಖಿ: ಸ್ನೇಹಿತ, ಮಿತ್ರ; ಮುಗ್ಗು:ಬಾಗು, ಮಣಿ; ಹುರುಡು: ಸಾಮರ್ಥ್ಯ, ಪೈಪೋಟಿ; ವಿಘಾತಿ: ಹೊಡೆತ, ವಿರೋಧ; ಲಗ್ಗಿಗ: ಲಗ್ಗೆ ಮಾಡುವವ, ಮೌಹೂರ್ತಿಕ; ಹಣುಗು: ಹಿಂಜರಿ; ಅವಸಾನ: ಮರಣ, ಅಂತ್ಯ;

ಪದವಿಂಗಡಣೆ:
ತಗ್ಗಿತುರು+ ಕಳಕಳ +ವಿಷಾದದ
ಸುಗ್ಗಿ +ಬೀತುದು +ರಾಯರ್+ಈಚೆಯ
ಮಗ್ಗುಲಲಿ +ಮೇಳೈಸಿ +ಮೆರೆದರು+ ಮತ್ತೆ +ಬಾಂಧವರು
ನೆಗ್ಗಿದವು+ ನೆನಹವನ +ಸಖಿಗಳು
ಮುಗ್ಗಿದರು +ಹುರುಡಿನ+ ವಿಘಾತಿಯ
ಲಗ್ಗಿಗರು +ಹಣುಗಿದರು +ಶಿಶುಪಾಲ+ಅವಸಾನದಲಿ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ
(೨) ಸುಗ್ಗಿ ಪದದ ಬಳಕೆ ವಿಷಾದದೊಂದಿಗೆ ಜೋಡಿಸಿರುವ ಪರಿ – ವಿಷಾದದ ಸುಗ್ಗಿ ಬೀತುದು