ಪದ್ಯ ೨೦: ಧರ್ಮಜನು ಭೀಮನಿಗೆ ಯಾವ ಕಿವಿಮಾತನ್ನು ಹೇಳಿದನು?

ಅಳಲಿದತಿಭಂಗಿಸಲು ಪರಮಂ
ಡಳಿಕರೇ ನಾವ್ ಪಾಂಡುವಿನ ಮ
ಕ್ಕಳುಗಳಾ ಧೃತರಾಷ್ಟ್ರ ತನುಸಂಭವರು ಕೌರವರು
ನೆಲನ ಹುದುವಿನ ದಾಯಭಾಗದ
ಕಳವಳದೊಳ್+ಆಯ್ತಲ್ಲದುಳಿದಂ
ತೊಳಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ (ಗದಾ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ತುಂಬ ಬೇಸರಗೊಂಡು, ಶತ್ರುವನ್ನು ಅಪಮಾನಗೊಳಿಸಲು ನಾವೇನು ಪರರಾಜರೇ? ನಾವು ಪಾಂಡುವಿನ ಮಕ್ಕಳು. ಕೌರವರು ಧೃತರಾಷ್ಟ್ರನ ಮಕ್ಕಳು ನಮ್ಮ ಸಂಬಂಧಿಕರು, ಏನೋ ಭೂಮಿಯ ದಾಯಭಾಗದಲ್ಲಿ ಯುದ್ಧವಾಯಿತು. ಅಷ್ಟೇ ಹೊರತು ನಾವು ನಿಜವಾಗಿಯೂ ಬೇರೆಯವರೇ? ಭೀಮ ಭಂಗಿಸದೆ ನಡೆ ಎಂದು ಧರ್ಮಜನು ನುಡಿದನು.

ಅರ್ಥ:
ಅಳಲು: ದುಃಖಿಸು; ಅತಿ: ಬಹಳ; ಭಂಗ: ಮುರಿ; ಮಂಡಳೀಕ: ಸಾಮಂತರಾಜ; ಪರ: ವಿರೋಧಿ; ಮಕ್ಕಳು: ಪುತ್ರರು; ತನು: ದೇಹ; ಸಂಭವ: ಹುಟ್ಟು; ನೆಲ: ಭೂಮಿ; ಹುದು: ಕೂಡುವಿಕೆ, ಸೇರುವಿಕೆ; ದಾಯ:ಪಗಡೆಯ ಗರ, ಅವಕಾಶ; ಭಾಗ: ಅಂಶ, ಪಾಲು; ಕಲವಳ: ಗೊಂದಲ; ಉಳಿದ: ಮಿಕ್ಕ; ತೊಳಗು: ಕಾಂತಿ, ಪ್ರಕಾಶ; ಭಿನ್ನ: ಚೂರು, ತುಂಡು; ಬಿಡು: ತೊರೆ; ಸಾರು: ಪ್ರಕಟಿಸು, ಘೋಷಿಸು;

ಪದವಿಂಗಡಣೆ:
ಅಳಲಿದ್+ಅತಿ+ಭಂಗಿಸಲು +ಪರಮಂ
ಡಳಿಕರೇ +ನಾವ್ +ಪಾಂಡುವಿನ +ಮ
ಕ್ಕಳುಗಳಾ +ಧೃತರಾಷ್ಟ್ರ+ ತನುಸಂಭವರು+ ಕೌರವರು
ನೆಲನ +ಹುದುವಿನ +ದಾಯಭಾಗದ
ಕಳವಳದೊಳಾಯ್ತಲ್ಲದ್+ಉಳಿದಂ
ತೊಳಗು +ಭಿನ್ನವೆ+ ಭೀಮ +ಬಿಡು +ಭಂಗಿಸದೆ +ಸಾರೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಭಿನ್ನವೆ ಭೀಮ ಬಿಡು ಭಂಗಿಸದೆ
(೨) ಕೌರವರಾರು? ಧೃತರಾಷ್ಟ್ರ ತನುಸಂಭವರು ಕೌರವರು

ಪದ್ಯ ೧೩: ಭೀಮನ ಆವೇಶದ ಉತ್ತರವು ಹೇಗಿತ್ತು?

ಕೆಡಹಿ ದುಶ್ಯಾಸನನ ರಕುತವ
ಕುಡಿದು ನಿನ್ನೂರುಗಳನೀಕ್ಷಣ
ವುಡಿದು ಕೊಂಬೆನು ಧರೆಯನಲ್ಲದೆ ಹುದುವ ಬಯಸುವೆನೆ
ಪೊಡವಿ ದ್ರುಪದಕುಮಾರಿಯೆಮ್ಮಯ
ಮಡದಿಗನ್ಯರು ಮನವಿಡಲು ಬಳಿ
ಕಡಗುದರಿವೆನೆನುತ್ತ ಹೊಕ್ಕನು ಭೀಮನವಗಡಿಸಿ (ಭೀಷ್ಮ ಪರ್ವ, ೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ದುಶ್ಯಾಸನನನ್ನು ಕೆಡವಿ ಅವನ ಉದಿರ ರಕ್ತವನ್ನು ಕುಡಿದು, ನಿನ್ನ ಎರಡು ತೊಡೆಗಳನ್ನು ಈಗಲೆ ಮುರಿದು, ಇಡೀ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ, ಅದರ ಪಾಲ ನನಗೆ ಬೇಡ. ನಮ್ಮ ಮಡದಿ ದ್ರೌಪದಿಯ ಮೇಲೆ ಬೇರೆಯವರು ಮನಸ್ಸಿಟ್ಟರೆ ಅವರ ಮಾಂಸವನ್ನು ಕೊಚ್ಚಿ ಹಾಕುತ್ತೇನೆ ಸುಮ್ಮನೆ ಬಿಟ್ಟೇನೇ ಎಂದು ಭೀಮನು ರೋಷದಿಂದ ಮುನ್ನುಗ್ಗಿದನು.

ಅರ್ಥ:
ಕೆಡಹು: ಬೀಳಿಸು; ರಕುತ: ನೆತ್ತರು; ಕುಡಿ: ಪಾನಮಾಡು; ಊರು: ತೊಡೆ; ಕ್ಷಣ: ಸಮಯ; ವುಡಿ: ಪುಡಿ; ಧರೆ: ಭೂಮಿ; ಹುದು: ಸಂಬಂಧ, ಸಾರ; ಬಯಸು: ಆಸೆ ಪಡು; ಪೊಡವಿ: ಭೂಮಿ; ಮಡದಿ: ಹೆಂಡತಿ; ಅನ್ಯ: ಬೇರೆಯವರು; ಮನ: ಮನಸ್ಸು; ಬಳಿಕ: ನಂತರ; ಅಡಗುದುರು: ಮಾಂಸವನ್ನು ಕತ್ತರಿಸುವಂತೆ ಕತ್ತರಿಸು; ಹೊಕ್ಕು: ಸೇರು; ಅವಗಡಿಸು: ಕಡೆಗಣಿಸು;

ಪದವಿಂಗಡಣೆ:
ಕೆಡಹಿ+ ದುಶ್ಯಾಸನನ +ರಕುತವ
ಕುಡಿದು +ನಿನ್+ಊರುಗಳನ್+ಈ+ಕ್ಷಣ
ವುಡಿದು +ಕೊಂಬೆನು +ಧರೆಯನಲ್ಲದೆ+ ಹುದುವ+ ಬಯಸುವೆನೆ
ಪೊಡವಿ +ದ್ರುಪದ+ಕುಮಾರಿ+ಎಮ್ಮಯ
ಮಡದಿಗ್+ಅನ್ಯರು +ಮನವಿಡಲು+ ಬಳಿಕ್
ಅಡಗುದರಿವೆನ್+ಎನುತ್ತ +ಹೊಕ್ಕನು +ಭೀಮನ್+ಅವಗಡಿಸಿ

ಅಚ್ಚರಿ:
(೧) ಭೀಮನ ಪ್ರತಿಜ್ಞೆ – ಕೆಡಹಿ ದುಶ್ಯಾಸನನ ರಕುತವಕುಡಿದು ನಿನ್ನೂರುಗಳನೀಕ್ಷಣವುಡಿದು ಕೊಂಬೆನು