ಪದ್ಯ ೨೮: ಅರ್ಜುನನಿಗೆ ಯಾರು ಶುಭ ನುಡಿಯಲೆಂದು ಧರ್ಮಜನು ಹೇಳಿದನು?

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರಮಹೋರಗ ಯಕ್ಷ ಮನುಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ (ಅರಣ್ಯ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಿವನು ನಿನಗೆ ದಯೆತೋರಿ ಶ್ರೇಷ್ಠವಾದ ಆಯುಧವನ್ನು ನೀಡಲಿ. ಇಂದ್ರ, ಯಮ, ಸೂರ್ಯ, ಅಗ್ನಿ, ನಿರುತಿ, ವರುಣ, ಕುಬೇರ, ವಾಯು, ವಸುಗಳು, ಸಿದ್ಧರು, ವಿದ್ಯಾಧರರು, ಮಹಾಸರ್ಪಗಳು, ಯಕ್ಷರು, ಮನುಗಳು, ದೇವತೆಗಳು, ಕಿಂಪುರುಷರು ನಿನಗೆ ಶುಭನುಡಿಗಳಿಂದ ಹರಸಲಿ ಎಂದು ಧರ್ಮಜನು ನುಡಿದನು.

ಅರ್ಥ:
ಕರುಣಿಸು: ದಯೆತೋರು, ಆಶೀರ್ವದಿಸು; ಕಾಮ: ಮನ್ಮಥ; ಅರಿ: ವೈರಿ; ಕಾಮಾರಿ: ಶಿವ; ಕೃಪೆ: ದಯೆ, ಕರುಣೆ; ವರ: ಶ್ರೇಷ್ಠ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಇಂದ್ರ: ಶಕ್ರ; ಭಾಸ್ಕರ: ಸೂರ್ಯ; ಹುತಾಶನ: ಹವಿಸ್ಸನ್ನು ಸೇವಿಸುವವನು, ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಮಾರುತ: ವಾಯುದೇವತೆ; ಸುರರು: ದೇವತೆಗಳು; ವಸು: ದೇವತೆಗಳ ಒಂದು ವರ್ಗ; ಸಿದ್ಧ: ದೇವತೆಗಳಲ್ಲಿ ಒಂದು ಪಂಗಡ; ವಿದ್ಯಾಧರ: ದೇವತೆಗಳ ಗುಂಪು; ಉರಗ: ಹಾವು; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ಮನು: ಬ್ರಹ್ಮನ ಹದಿನಾಲ್ಕು ಜನ ಮಾನಸಪುತ್ರರಲ್ಲಿ ಪ್ರತಿಯೊಬ್ಬ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ, ಕಿನ್ನರ; ವಿಮಳ: ಶುದ್ಧ; ಸ್ವಸ್ತಿ: ಒಳ್ಳೆಯದು, ಶುಭ; ವಾಚನ: ನುಡಿ;

ಪದವಿಂಗಡಣೆ:
ಕರುಣಿಸಲಿ +ಕಾಮಾರಿ +ಕೃಪೆಯಿಂ
ವರ+ ಮಹಾಸ್ತ್ರವನ್+ಇಂದ್ರ +ಯಮ +ಭಾ
ಸ್ಕರ+ ಹುತಾಶನ+ ನಿರುತಿ +ವರುಣ +ಕುಬೇರ +ಮಾರುತರು
ಸುರರು +ವಸುಗಳು +ಸಿದ್ಧ +ವಿದ್ಯಾ
ಧರ+ಮಹ+ಉರಗ +ಯಕ್ಷ +ಮನು+ಕಿಂ
ಪುರುಷರ್+ಈಯಲಿ +ನಿನಗೆ +ವಿಮಳ +ಸ್ವಸ್ತಿ+ವಾಚನವ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣಿಸಲಿ ಕಾಮಾರಿ ಕೃಪೆಯಿಂ
(೨) ಮಹಾಸ್ತ್ರ, ಮಹೋರಗ – ಮಹ ಪದದ ಬಳಕೆ

ಪದ್ಯ ೪: ಯಾರು ಯಾರ ಕಡೆ ನಿಂತರು?

ರಾಸಿ ತಾರಾಗಣಸಹಿತವಾ
ಕಾಶ ಕರ್ಣನ ಕಡೆ ಸಮೀರ ಹು
ತಾಶನಾಂಬುಧಿ ಗಿರಿಸಹಿತಲೀ ಧರಣಿ ಪಾರ್ಥನಲಿ
ಆ ಸುರಾರಿಪ್ರಮುಖ ಯಕ್ಷರಿ
ಗಾಸೆ ಕರ್ಣನ ಮೇಲೆ ನಾಕನಿ
ವಾಸಿ ನಿರ್ಜರನಿಕರವಾದುದು ನರನ ಕೈವಾರ (ಕರ್ಣ ಪರ್ವ, ೨೨ ಸಂಧಿ, ೪ ಪದ್ಯ)

ತಾತ್ಪರ್ಯ:
ಹನ್ನೆರಡು ರಾಶಿಗಳು, ನಕ್ಷತ್ರಗಳ ಗುಂಪುಗಳು ಸೇರಿ ಆಕಾಶವು ಕರ್ಣನ ಕಡೆಗೆ ನಿಮ್ತವು. ವಾಯು, ಅಗ್ನಿ, ಸಮುದ್ರ, ಬೆಟ್ಟ, ಭೂಮಿ ಅರ್ಜುನನ ಕಡೆಗೆ ನಿಂತವು. ರಾಕ್ಷಸರು ಯಕ್ಷರು ಕರ್ಣನ ಪಕ್ಷಪಾತಿಗಳು, ಸ್ವರ್ಗದ ದೇವತೆಗಳು ಅರ್ಜುನನ ಪಕ್ಷಪಾತಿಗಳಾದರು.

ಅರ್ಥ:
ರಾಶಿ: ಮೇಷ, ವೃಷಭ ಮೊದಲಾದ ಹನ್ನೆರಡು ವಿಭಾಗಗಳು; ತಾರ: ನಕ್ಷತ್ರ; ತಾರಾಗಣ: ನಕ್ಷತ್ರಗಳ ಗುಂಪು; ಸಹಿತ: ಜೊತೆ; ಆಕಾಶ: ಆಗಸ, ಗಗನ; ಕಡೆ: ಪಕ್ಕ; ಸಮೀರ: ವಾಯು; ಹುತಾಶನ: ಅಗ್ನಿ; ಅಂಬುಧಿ: ಸಾಗರ; ಗಿರಿ: ಬೆಟ್ಟ; ಧರಣಿ: ಭೂಮಿ; ಸುರ: ದೇವತೆ; ಅರಿ: ವೈರಿ; ಸುರಾರಿ: ರಾಕ್ಷಸ; ಪ್ರಮುಖ; ಮುಖ್ಯ, ನಾಯಕ; ಆಸೆ: ಇಚ್ಛೆ; ನಾಕ; ಸ್ವರ್ಗ; ನಿವಾಸಿ: ವಾಸಿಸುವ; ನಿರ್ಜರ: ದೇವತೆ; ನಿಕರ: ಸಮೂಹ; ನರ: ಅರ್ಜುನ; ಕೈವಾರ: ಹೊಗಳಿಕೆ, ಸ್ತೋತ್ರ;

ಪದವಿಂಗಡಣೆ:
ರಾಸಿ +ತಾರಾಗಣ+ಸಹಿತವ್
ಆಕಾಶ +ಕರ್ಣನ +ಕಡೆ +ಸಮೀರ +ಹು
ತಾಶನ+ಅಂಬುಧಿ+ ಗಿರಿ+ಸಹಿತಲ್+ಈ+ ಧರಣಿ +ಪಾರ್ಥನಲಿ
ಆ +ಸುರಾರಿ+ಪ್ರಮುಖ +ಯಕ್ಷರಿಗ್
ಆಸೆ +ಕರ್ಣನ +ಮೇಲೆ +ನಾಕ+ನಿ
ವಾಸಿ +ನಿರ್ಜರ+ ನಿಕರವಾದುದು +ನರನ+ ಕೈವಾರ

ಅಚ್ಚರಿ:
(೧) ದೇವತೆಗಳು ಎಂದು ಹೇಳಲು ನಾಕನಿವಾಸಿ ಪದದ ಬಳಕೆ
(೨) ನಾಕನಿವಾಸಿ, ಸುರಾರಿ – ವಿರುದ್ಧ ಪದಗಳು