ಪದ್ಯ ೧೩: ಭೀಮನು ದ್ರೋಣರ ರಥವನ್ನು ಹೇಗೆ ತಿರುಗಿಸಿದನು?

ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ (ದ್ರೋಣ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬೆಟ್ಟಗಳು ಬಿರಿಯುವಂತೆ, ದೇವತೆಗಳು ಭಯಗೊಳ್ಳುವಂತೆ ಭೀಮನು ಗರ್ಜಿಸಿ ಮುನ್ನುಗ್ಗಲು, ವೈರಿಗಳ ಗೆಲುವನ್ನು ಅಟ್ಟಾಡಿಸಿಕೊಂಡು ಹೋದ ಪರಿಯಲ್ಲಿ, ದ್ರೋಣನು ಹಿಮ್ಮೆಟ್ಟಿದನು. ಭೀಮನು ಹಿಂದಕ್ಕೆ ನುಗ್ಗಿ ದ್ರೋಣನ ರಥವನ್ನು ಮುಂಗೈಯಿಂದ ಹಿಡಿದು ಮೇಲಕ್ಕೆತ್ತಿ ಹಿಡಿ ಬುಗುರಿಯಂತೆ ತಿರುಗಿಸಿ ಆಕಾಶಕ್ಕೆಸೆಯಲು ಕೌರವ ಸೈನ್ಯವು ಭಯದಿಮ್ದ ಕೂಗಿಕೊಂಡಿತು?

ಅರ್ಥ:
ಗಜರು: ಆರ್ಭಟಿಸು; ಗಿರಿ: ಬೆಟ್ಟ; ಬಿರಿ: ಸೀಳು; ದಿವಿಜ: ದೇವತೆ; ವ್ರಜ: ಗುಂಪು; ಭಯ: ಅಂಜು; ಹೂಣು: ಪ್ರತಿಜ್ಞೆಮಾಡು; ಹೊಕ್ಕು: ಸೇರು; ಅರಿ: ವೈರಿ; ವಿಜಯ: ಗೆಲುವು; ಹಿಮ್ಮೆಟ್ಟು: ಹಿಂದೆ ಸರಿ; ಬಳಿ: ಹತ್ತಿರ; ಬಳಿಸಲಿಸು: ಹಿಂದಟ್ಟಿಕೊಂಡು ಹೋಗು; ಸುಜನ: ಒಳ್ಳೆಯ ಮನುಷ್ಯ; ವಂದ್ಯ: ಗೌರವಿಸು; ರಥ: ಬಂಡಿ; ಹಿಡಿ: ಗ್ರಹಿಸು; ಅನಿಲಜ: ಭೀಮ; ಮುಂಗೈ: ಮುಂದಿನ ಹಸ್ತ; ಪಡೆ: ಗುಂಪು; ಗಜಬಜ: ಗಲಾಟೆ, ಕೋಲಾಹಲ; ನಭ: ಆಗಸ; ಈಡಾಡು: ಚೆಲ್ಲು; ಹಿಡಿ: ಗ್ರಹಿಸು;

ಪದವಿಂಗಡಣೆ:
ಗಜರಿನಲಿ +ಗಿರಿ +ಬಿರಿಯೆ +ದಿವಿಜ
ವ್ರಜ +ಭಯಂಗೊಳೆ +ಹೂಣೆ +ಹೊಕ್ಕ್+ಅರಿ
ವಿಜಯನ್+ಇಟ್ಟಣಿಸಿದರೆ +ಹಿಮ್ಮೆಟ್ಟಿದರೆ +ಬಳಿಸಲಿಸಿ
ಸುಜನ +ವಂದ್ಯನ +ರಥವ +ಹಿಡಿದ್+ಅನಿ
ಲಜನು +ಮುಂಗೈಗೊಂಡು +ಪಡೆ +ಗಜ
ಬಜಿಸೆ +ನಭಕ್+ಈಡಾಡಿದನು +ಹಿಡಿ +ಬುಗುರಿಯಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನಭಕೀಡಾಡಿದನು ಹಿಡಿ ಬುಗುರಿಯಂದದಲಿ

ಪದ್ಯ ೨೧: ಭೀಮನೇಕೆ ಮರುಗಿದನು?

ಮಿಡುಕದದು ಮಹಿಯಿಂದ ಭೀಮನ
ಕಡುಹು ನಿಮ್ದುದು ಬಾಲದಲಿ ತುದಿ
ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು
ತೊಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭಂಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಹನುಮನ ಬಾಲವು ಭೂಮಿಯಿಂದ ಒಂದು ಚೂರು ಅಲುಗಾಡಲಿಲ್ಲ. ಭೀಮನ ಶಕ್ತಿಯು ಅದರೆದುರು ನಿಂತು ಹೋಯಿತು. ಬಾಲದ ತುದಿಯೂ ನಡುಗಲಿಲ್ಲ. ಭೀಮನ ಸರ್ವಶಕ್ತಿಯ ಪ್ರಯೋಗವೂ ನಿಷ್ಫಲವಾಯಿತು. ಆಗ ಭೀಮನು ಕಾರ್ಯದಲ್ಲಿ ತೊಡಗಿ ಕೆಟ್ಟು ಹೋದೆ, ದುರ್ಬಲನ ಜೊತೆ ಹೋರಿ ಅವಮಾನಿತನಾದೆ, ಹೀಗೆ ಯತ್ನದಲ್ಲಿ ಸೋತ ನನ್ನನ್ನು ಸುಡಬೇಕು ಎಂದುಕೊಂಡು ಹಿಂದಕ್ಕೆ ಸರಿದು ತುಂಬ ತಳಮಳಗೊಂಡನು.

ಅರ್ಥ:
ಮಿಡುಕು: ಅಲುಗಾಟ, ಚಲನೆ; ಮಹಿ: ಭೂಮಿ; ಕಡುಹು: ಸಾಹಸ, ಹುರುಪು; ನಿಂದು: ನಿಲ್ಲು; ಬಾಲ: ಪುಚ್ಛ; ತುದಿ: ಅಗ್ರಭಾಗ; ನಡುಗು: ನಡುಕ, ಕಂಪನ; ಅನಿಲಜ: ವಾಯುಪುತ್ರ (ಭೀಮ); ಅಂಗವಟ್ಟ: ಶರೀರ; ಕಂಪಿಸು: ಅಲುಗಾಡು; ತೊಡಕು: ಗೋಜು, ಗೊಂದಲ; ಕೆಟ್ಟು: ಸರಿಯಿಲ್ಲದ; ಕಾರ್ಯ: ಕೆಲಸ; ದುರ್ಬಲ: ಶಕ್ತಿಹೀನ; ಭಂಗ: ಚೂರು, ಮುರಿಯುವಿಕೆ; ವ್ಯಾಪ್ತಿ: ಹರಹು; ಸುಡು: ದಹಿಸು; ಹಿಮ್ಮೆಟ್ಟು: ಹಿಂದೆಸರಿ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ;

ಪದವಿಂಗಡಣೆ:
ಮಿಡುಕದದು +ಮಹಿಯಿಂದ +ಭೀಮನ
ಕಡುಹು +ನಿಂದುದು +ಬಾಲದಲಿ+ ತುದಿ
ನಡುಗದ್+ಅನಿಲಜನ್+ಅಂಗವಟ್ಟದ +ಕಡುಹು +ಕಂಪಿಸದು
ತೊಡಕೆ +ಕೆಟ್ಟುದು +ಕಾರ್ಯ +ದುರ್ಬಲ
ನೊಡನೆ +ಭಂಗವ್ಯಾಪ್ತಿ +ತನ್ನನು
ಸುಡಲೆನುತ +ಹಿಮ್ಮೆಟ್ಟಿ +ಮಮ್ಮಲ +ಮರುಗಿದನು +ಭೀಮ

ಅಚ್ಚರಿ:
(೧) ಭಿಮನು ಕೊರಗಿದ ಪರಿ – ತೊಡಕೆ ಕೆಟ್ಟುದು ಕಾರ್ಯ ದುರ್ಬಲ ನೊಡನೆ ಭಂಗವ್ಯಾಪ್ತಿ ತನ್ನನು ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ