ಪದ್ಯ ೧೮: ರಣರಂಗವು ಏಕೆ ಭಯಾನಕವಾಗಿತ್ತು?

ಕಡಿದು ಚಿಮ್ಮಿದ ಬೆರಳುಗಳ ಹಿ
ಮ್ಮಡಿಯ ಘಾಯದ ನಾಳ ಹರಿದರೆ
ಮಡಿದ ಗೋಣಿನ ಬೆಸುಗೆ ಬಿರಿದ ಕಪಾಲದೋಡುಗಳ
ಉಡಿದ ತೊಡೆಗಳ ಹರಿದ ಹೊಟ್ಟೆಯ
ಹೊಡೆ ಮರಳಿದಾಲಿಗಳ ತೋಳಿನ
ಕಡಿಕುಗಳ ರಣಮಹಿ ಭಯಾನಕ ರಸಕೆ ಗುರಿಯಾಯ್ತು (ಭೀಷ್ಮ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕಡಿದು ಚಿಮ್ಮಿದ ಬೆರಳುಗಳು, ಹಿಮ್ಮಡಿ ಕತ್ತರಿಸಿ ಹರಿದ ರಕ್ತ ನಾಳಗಳು, ತಲೆಗಳಿಗೆ ಹೊಡೆತ ಬಿದ್ದಾಗ ಕತ್ತರಿಸಿದ ಕಪಾಲ, ಹರಿದ ಹೊಟ್ಟೆ, ಮುರಿದ ತೊಡೆ ಹಿಂದಕ್ಕೆ ನೆಟ್ಟ ಕಣ್ಣುಗಳಿಂದ ರಣರಂಗವು ಭಯಾನಕವಾಗಿ ತೋರಿತು.

ಅರ್ಥ:
ಕಡಿ: ಕತ್ತರಿಸು; ಚಿಮ್ಮು: ಹೊರಹೊಮ್ಮು; ಬೆರಳು: ಅಂಗುಲಿ; ಹಿಮ್ಮಡಿ: ಕಾಲಿನ ಹಿಂಭಾಗ; ಘಾಯ: ಪೆಟ್ಟು; ನಾಳ: ದೇಹದೊಳಗಿರುವ ರಕ್ತನಾಳ; ಹರಿ: ಸೀಳು; ಮಡಿ: ಸತ್ತ; ಗೋಣು:ಕಂಠ, ಕುತ್ತಿಗೆ; ಬೆಸುಗೆ: ಪ್ರೀತಿ; ಬಿರಿ: ಸೀಳು; ಕಪಾಲ: ಕೆನ್ನೆ; ಓಡು: ತಲೆಬುರುಡೆ; ಉಡಿ: ಸೊಂಟ; ತೊಡೆ: ಊರು; ಹರಿ: ಸೀಳು, ಕಡಿ, ಕತ್ತರಿಸು; ಹೊಟ್ಟೆ; ಉದರ; ಹೊಡೆ: ಏಟುಕೊಡು, ಪೆಟ್ಟುಹಾಕು; ಮರಳು:ಹಿಂದಕ್ಕೆ ಬರು, ಹಿಂತಿರುಗು; ಆಲಿ: ಕಣ್ಣು; ತೋಳು: ಬಾಹು; ಕಡಿಕು: ತುಂಡು; ರಣ: ರಣರಂಗ; ಮಹಿ: ಭೂಮಿ; ಭಯಾನಕ: ಭಯಂಕರ, ಘೋರ; ರಸ: ದ್ರವ, ಲಾಲಾ; ಗುರಿ: ಉದ್ದೇಶ;

ಪದವಿಂಗಡಣೆ:
ಕಡಿದು +ಚಿಮ್ಮಿದ +ಬೆರಳುಗಳ +ಹಿ
ಮ್ಮಡಿಯ +ಘಾಯದ +ನಾಳ +ಹರಿದರೆ
ಮಡಿದ+ ಗೋಣಿನ+ ಬೆಸುಗೆ +ಬಿರಿದ +ಕಪಾಲದ್+ಓಡುಗಳ
ಉಡಿದ +ತೊಡೆಗಳ +ಹರಿದ +ಹೊಟ್ಟೆಯ
ಹೊಡೆ +ಮರಳಿದ್+ಆಲಿಗಳ +ತೋಳಿನ
ಕಡಿಕುಗಳ +ರಣಮಹಿ +ಭಯಾನಕ +ರಸಕೆ+ ಗುರಿಯಾಯ್ತು

ಅಚ್ಚರಿ:
(೧) ಕಡಿ, ಹಿಮ್ಮಡಿ, ಮಡಿ, ಉಡಿ – ಪ್ರಾಸ ಪದಗಳು
(೨) ಹ ಕಾರದ ತ್ರಿವಳಿ ಪದ – ಹರಿದ ಹೊಟ್ಟೆಯ ಹೊಡೆ

ಪದ್ಯ ೨೩: ದ್ರೌಪದಿಯು ಕೃಷ್ಣನನ್ನು ಹೇಗೆ ಭಜಿಸಿದಳು?

ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮಗುಳೆವೆಯ ನೆರೆಮುಚ್ಚಿ ನಾಸಿಕದಗ್ರದಲಿ ನಿಲಿಸಿ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದುವೊನಲಾಗಿರಲು ಹಿಮ್ಮಡಿ
ಗೊಗುವ ಕೇಶದ ಬಾಲೆ ಭಾವಿಸಿ ನೆನೆದಳುಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಾದಗಳನ್ನು ಸಮವಾಗಿ ನಿಲ್ಲಿಸಿ, ಕಣ್ಣಿನ ರೆಪ್ಪೆಯನ್ನು ಸ್ವಲ್ಪ ಮುಚ್ಚಿ, ಸೂರ್ಯನನ್ನು ನೋಡಿ, ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸಿ, ರೋಮಾಂಚನದ ಜಲವು ಹರಿಯುತ್ತಿರಲು, ಹಿಮ್ಮಡಿಯನ್ನು ಮುಟ್ಟುವ ಕೇಷರಾಶಿಯ ಅಬಲೆಯು ಶ್ರೀಕೃಷ್ಣನನ್ನು ಸ್ಮರಿಸಿದಳು.

ಅರ್ಥ:
ಮುಗುದೆ: ಕಪಟವರಿಯದವಳು; ಮಿಗೆ: ಮತ್ತು, ಅಧಿಕವಾಗಿ; ನಿಂದಿರ್ದು: ನಿಲ್ಲು; ಸಮ: ಸಮನಾಗಿ; ಪದ: ಪಾದ, ಚರಣ; ಯುಗಳ: ಎರಡು; ಸೂರ್ಯ: ರವಿ; ನಿರೀಕ್ಷಿಸಿ: ನೋಡಿ; ಮಗುಳೆ: ಮತ್ತೆ, ಪುನಃ; ನೆರೆ: ಪಕ್ಕ, ಪಾರ್ಶ್ವ; ನಾಸಿಕ: ಮೂಗು; ನೆಗಹು: ಮೇಲೆತ್ತು; ಪುಳಕ: ರೋಮಾಂಚನ; ಅಂಬು: ನೀರು; ಮೈ: ತನು; ಬಿಗಿ: ಕಟ್ತು; ಹಿಮ್ಮಡಿ: ಹಿಂದಿನ ಪಾದ; ಒಗು: ಚೆಲ್ಲು, ಸುರಿ; ಕೇಶ: ಕೂದಲು; ಬಾಲೆ: ಅಬಲೆ, ಹೆಣ್ಣು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಚ್ಯುತ: ಚ್ಯುತಿಯಿಲ್ಲದ (ಕೃಷ್ಣ);

ಪದವಿಂಗಡಣೆ:
ಮುಗುದೆ +ಮಿಗೆ +ನಿಂದಿರ್ದು +ಸಮಪದ
ಯುಗಳದಲಿ +ಸೂರ್ಯನ +ನಿರೀಕ್ಷಿಸಿ
ಮಗುಳೆವೆಯ +ನೆರೆಮುಚ್ಚಿ +ನಾಸಿಕದ್+ಅಗ್ರದಲಿ +ನಿಲಿಸಿ
ನೆಗಹಿ +ಪುಳಕಾಂಬುಗಳು+ ಮೈಯಲಿ
ಬಿಗಿದುವೊನಲಾಗಿರಲು +ಹಿಮ್ಮಡಿ
ಗೊಗುವ +ಕೇಶದ +ಬಾಲೆ +ಭಾವಿಸಿ+ ನೆನೆದಳ್+ಅಚ್ಯುತನ

ಅಚ್ಚರಿ:
(೧) ದ್ರೌಪದಿಯ ಕೇಶವನ್ನು ವಿವರಿಸುವ ಪರಿ – ಹಿಮ್ಮಡಿಗೊಗುವ ಕೇಶದ ಬಾಲೆ

ಪದ್ಯ ೪೩: ಹಂದಿಯು ಹೇಗೆ ಹೋರಾಡುತ್ತಿತ್ತು?

ಕೂಡೆ ಕಟ್ಟಿತು ಭೂತಗಣ ಧ್ವನಿ
ಮಾಡಿ ಜಡಿದಬ್ಬರಿಸಿ ಮೋರೆಯ
ನೀಡಿ ನಾಯ್ಗಳು ತುಡುಕಿದವು ತಿರುಗಿದರೆ ಹಿಮ್ಮಡಿಯ
ಝಾಡಿಸುತ ಕವಿದೆಕ್ಕಲಂದೋ
ಡಾಡಿ ಬಿರಿದುದು ನೂರುಗಾಯವ
ನೋಡುತಿರ್ದುದು ಸೇನೆ ಕಂಡನು ಶೂಲಿ ಸೂಕರನ (ಅರಣ್ಯ ಪರ್ವ, ೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೂತಗಣಗಳು ಕೂಗುತ್ತಾ ಒಟ್ಟಾದವು ನಾಯಿಗಳು ಬೊಗಳಿ ಮೂತಿಯನ್ನು ಚಚಿ ಹಿಡಿದಾಗ ಹಂದಿಯು ಹಿಂಗಾಲನ್ನು ಜಾಡಿಸುತ್ತಾ ತಿರುಗಾಡಿ ನೂರಾರು ಗಾಯಗಳನ್ನು ತಪ್ಪಿಸಿಕೊಂಡಿತು. ಸೈನ್ಯವು ನೋಡುತ್ತಿತ್ತು, ಹೀಗಿರುವಾಗ ಶಿವನು ಹಂದಿಯನ್ನು ನೋಡಿದನು.

ಅರ್ಥ:
ಕೂಡು: ಸೇರು; ಕಟ್ಟು: ಬಂಧಿಸು, ಒಟ್ಟಾಗು; ಭೂತಗಣ: ಶಿವಗಣ; ಗಣ: ಗುಂಪು; ಧ್ವನಿ: ಶಬ್ದ; ಜಡಿ: ಗದರಿಸು, ಬೆದರಿಸು, ಕೂಗು; ಅಬ್ಬರ: ಆರ್ಭಟ; ಮೋರೆ: ಮುಖ, ಆನನ; ನಾಯಿ: ಶ್ವಾನ; ತುಡುಕು: ಹೋರಾಡು, ಸೆಣಸು; ತಿರುಗು: ಸುತ್ತು, ಸಂಚರಿಸು; ಹಿಮ್ಮಡಿ: ಪಾದದ ಹಿಂಬದಿ;ಝಾಡಿಸು: ಗುಂಪಾಗಿ ಹೊಡೆ; ಕವಿ: ಆವರಿಸು; ಇಕ್ಕೆಲ: ಎರಡೂ ಕಡೆ; ಓಡಾಡು: ಸಂಚರಿಸು; ಬಿರಿ: ಸೀಳು; ನೂರು: ಶತ; ಗಾಯ: ಪೆಟ್ಟು; ನೋಡು: ವೀಕ್ಷಿಸು; ಸೇನೆ: ಸೈನ್ಯ; ಕಂಡು: ವೀಕ್ಷಿಸು; ಶೂಲಿ: ಶಿವ; ಸೂಕರ: ಹಂದೆ;

ಪದವಿಂಗಡಣೆ:
ಕೂಡೆ +ಕಟ್ಟಿತು +ಭೂತಗಣ+ ಧ್ವನಿ
ಮಾಡಿ +ಜಡಿದ್+ಅಬ್ಬರಿಸಿ +ಮೋರೆಯ
ನೀಡಿ +ನಾಯ್ಗಳು +ತುಡುಕಿದವು+ ತಿರುಗಿದರೆ+ ಹಿಮ್ಮಡಿಯ
ಝಾಡಿಸುತ +ಕವಿದ್+ಇಕ್ಕಲಂದ್
ಓಡಾಡಿ +ಬಿರಿದುದು +ನೂರು+ಗಾಯವ
ನೋಡುತಿರ್ದುದು +ಸೇನೆ +ಕಂಡನು +ಶೂಲಿ +ಸೂಕರನ

ಅಚ್ಚರಿ:
(೧) ಜಡಿ, ಅಬ್ಬರ, ತುಡುಕು, ಝಾಡಿಸು, ಓಡಾಡು, ಗಾಯ, ಬಿರಿ – ಹೋರಾಟವನ್ನು ವಿವರಿಸುವ ಪದಗಳು