ಪದ್ಯ ೧೨: ಬೆಳಗಿನ ಜಾವ ಹೇಗೆ ಕಂಡಿತು?

ಎಲೆ ಮಿಡುಕದೆರಡೊಡ್ಡು ಲೆಪ್ಪದ
ಬಲದವೊಲು ನಿದ್ರಾಸಮುದ್ರವ
ಮುಳುಗಿ ಝೊಮ್ಮಿನ ಝಾಡಿಯಲಿ ಝೊಂಪಿಸಿದುದರೆ ಜಾವ
ತಳಿತ ಮರವೆಯ ಪಾಳೆಯದ ಕ
ಗ್ಗೊಲೆಗೆ ಕವಿವ ಗುರೂಪದೇಶಾ
ವಳಿಯವೊಲು ಮೈದೋರುದುವು ಹಿಮರುಚಿಯ ರಶ್ಮಿಗಳು (ದ್ರೋಣ ಪರ್ವ, ೧೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರ್ಧಯಾಮದ ಕಾಲ, ಎರಡೂ ಪಡೆಗಳು ಗೊಂಬೆಗಳಂತೆ ನಿದ್ದೆಯಲ್ಲಿ ಮುಳುಗಿದ್ದವು. ತಾನಾರೆಂಬ ಅಜ್ಞಾನದ ಪಾಳೆಯಕ್ಕೆ ಗುರೂಪದೇಶದ ದಾಳಿ ಕವಿಯುವಂತೆ ಬೆಳದಿಂಗಳು ಮೈದೋರಿತು.

ಅರ್ಥ:
ಲೆಪ್ಪ: ಬಳಿಯುವ ವಸ್ತು, ಲೇಪನ, ಎರಕ; ಬಲ: ಬಿಗಿ, ಗಟ್ಟಿ; ನಿದ್ರೆ: ಶಯನ; ಸಮುದ್ರ: ಸಾಗರ; ಮುಳುಗು: ಮಿಂದು; ಝೊಮ್ಮು:ಪುಳುಕ; ಝಾಡಿ: ಕಾಂತಿ; ಝೊಂಪಿಸು: ನಿದ್ರಿಸು; ಜಾವ: ಗಳಿಗೆ, ಸಮಯ; ತಳಿತ: ಚಿಗುರಿದ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಪಾಳೆಯ: ಬೀಡು, ಶಿಬಿರ; ಕಗ್ಗೊಲೆ: ಹತ್ಯೆ; ಕವಿ: ಆವರಿಸು; ಗುರು: ಆಚಾರ್ಯ; ಉಪದೇಶ: ಬೋಧಿಸುವುದು; ಆವಳಿ: ಸಾಲು; ಮೈದೋರು: ಕಾಣಿಸು; ಹಿಮ: ಮಂಜಿನ ಹನಿ; ರಶ್ಮಿ: ಕಿರಣ;

ಪದವಿಂಗಡಣೆ:
ಎಲೆ +ಮಿಡುಕದ್+ಎರಡ್+ಒಡ್ಡು +ಲೆಪ್ಪದ
ಬಲದವೊಲು +ನಿದ್ರಾ+ಸಮುದ್ರವ
ಮುಳುಗಿ +ಝೊಮ್ಮಿನ +ಝಾಡಿಯಲಿ +ಝೊಂಪಿಸಿದುದರೆ+ ಜಾವ
ತಳಿತ +ಮರವೆಯ +ಪಾಳೆಯದ +ಕ
ಗ್ಗೊಲೆಗೆ +ಕವಿವ +ಗುರು+ಉಪದೇಶ
ಆವಳಿಯವೊಲು +ಮೈದೋರುದುವು +ಹಿಮರುಚಿಯ +ರಶ್ಮಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಲೆ ಮಿಡುಕದೆರಡೊಡ್ಡು ಲೆಪ್ಪದ ಬಲದವೊಲು; ತಳಿತ ಮರವೆಯ ಪಾಳೆಯದ ಕಗ್ಗೊಲೆಗೆ ಕವಿವ ಗುರೂಪದೇಶಾವಳಿಯವೊಲು

ಪದ್ಯ ೨೫: ಭೀಷ್ಮನಿಗೆ ದುರ್ಯೋಧನನು ಯಾವ ನೀರನ್ನು ತರಿಸಿದನು?

ತರಿಸಿದನು ಹಿಮರುಚಿಯ ಹಿಂಡಿದ
ಪರಮ ಶೀತೋದಕವೊ ತಾನೆನೆ
ಸುರಭಿ ಪರಿಮಳ ಪಾನವನು ಪರಿಪರಿಯ ಕುಡಿನೀರ
ಸರಸ ಬಹುವಿಧ ಭಕ್ಷ್ಯ ಭೋಜ್ಯವ
ನೆರಹಿದನು ಕುಡಿನೀರ ಗಿಂಡಿಯ
ನರಸ ನೀಡಲು ಕಂಡು ನಕ್ಕನು ಭೀಷ್ಮನಿಂತೆಂದ (ಭೀಷ್ಮ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನು ಶೀತಲವಾದ ಹಿಮರುಚಿಯ ತಂಪಾದ ನೀರಿನೊಂದಿಗೆ ಸುಗಂಧವನ್ನು ಮಿಶ್ರಣ ಮಾಡಿ ಸುಗಂಧಭರಿತವಾದ ತಂಪಾದ ನೀರನ್ನು ತರಿಸಿದನು. ಜೊತೆಗೆ ಭಕ್ಷ್ಯ ಭೋಜ್ಯಗಳನ್ನು ತರಿಸಿದನು. ಇದೆಲ್ಲವನ್ನು ನೋಡಿದ ಭೀಷ್ಮನು ನಕ್ಕು ಹೀಗೆ ನುಡಿದನು.

ಅರ್ಥ:
ತರಿಸು: ಬರೆಮಾಡು; ಹಿಮ: ಮಂಜಿನಗಡ್ಡೆ; ರುಚಿ: ಆಸ್ವಾದ, ಸವಿ; ಹಿಂಡು: ರಸ ಒಸರುವಂತೆ ಗಟ್ಟಿಯಾಗಿ ಹಿಸುಕು; ಪರಮ: ಶ್ರೇಷ್ಠ; ಶೀತ: ತಂಪು; ಉದಕ: ನೀರು; ಸುರಭಿ:ಸುಗಂಧ; ಪರಿಮಳ: ಸುಗಂಧದಿಂದ ಕೂಡಿದ ವಸ್ತು; ಪಾನ: ಕುಡಿಯುವಿಕೆ; ಪರಿ: ವಿಧವಾದ; ಕುಡಿನೀರು: ಪೀಯಜಲ; ಸರಸ: ಚೆಲುವು; ಬಹುವಿಧ: ಹಲವಾರು ಬಗೆಯ; ಭಕ್ಷ್ಯ: ತಿನಿಸು; ಭೋಜ್ಯ: ಊಟ; ಎರಹು: ನೀಡು; ಗಿಂಡಿ: ಕಿರಿದಾದ ಬಾಯುಳ್ಳ ಪಾತ್ರೆ, ಕೊಂಬು; ಅರಸ: ರಾಜ; ನೀಡು: ಒಡ್ಡು, ಚಾಚು; ನಕ್ಕು: ಹರ್ಷಿಸು;

ಪದವಿಂಗಡಣೆ:
ತರಿಸಿದನು +ಹಿಮರುಚಿಯ +ಹಿಂಡಿದ
ಪರಮ +ಶೀತ+ಉದಕವೊ+ ತಾನ್+ಎನೆ
ಸುರಭಿ +ಪರಿಮಳ +ಪಾನವನು +ಪರಿಪರಿಯ +ಕುಡಿನೀರ
ಸರಸ +ಬಹುವಿಧ +ಭಕ್ಷ್ಯ +ಭೋಜ್ಯವನ್
ಎರಹಿದನು +ಕುಡಿನೀರ +ಗಿಂಡಿಯನ್
ಅರಸ +ನೀಡಲು +ಕಂಡು +ನಕ್ಕನು +ಭೀಷ್ಮನಿಂತೆಂದ

ಅಚ್ಚರಿ:
(೧) ನೀರಿನ ವರ್ಣನೆ – ಹಿಮರುಚಿಯ ಹಿಂಡಿದಪರಮ ಶೀತೋದಕವೊ; ಸುರಭಿ ಪರಿಮಳ ಪಾನವನು ಪರಿಪರಿಯ ಕುಡಿನೀರ