ಪದ್ಯ ೩೩: ಕೃಪ ಅಶ್ವತ್ಥಾಮರು ಕೌರವನಿಗೆ ಯಾವ ಅಭಯವನ್ನು ನೀಡಿದರು?

ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತ ನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ (ಗದಾ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಒಡೆಯ, ನೀರಿನಿಂದ ಹೊರಕ್ಕೆ ಬಾ, ನಿನ್ನೆದುರಿನಲ್ಲೇ ನಮ್ಮ ಅಸ್ತ್ರಗಳನ್ನೆಲ್ಲಾ ಒಡ್ಡಿ ಭೀಮಾರ್ಜುನರ ಕರುಳನ್ನು ಹೊರಗೆಳೆದು ಭೂತಗಳಿಗೆ ಬಡಿಸುತ್ತೇವೆ. ನಿನ್ನಂತಹ ಸ್ವಾಭಿಮಾನಿ ಶೂರರು ಎಲ್ಲಾದರೂ ನೀರಿನಲ್ಲಿ ಅಡಗಿಕೊಳ್ಳುವರೇ? ಚಂದ್ರವಂಶದ ಕೀರ್ತಿಯು ನಿನ್ನಿಂದಾಗಿ ನೀರಿನಲ್ಲಿ ಕರಗದಿರುವುದೇ?

ಅರ್ಥ:
ಅರಸ: ರಾಜ; ಹೊರವಡು: ಹೊರಗೆ ಬಾ; ಕರುಳು: ಪಚನಾಂಗ; ಬೀಯ: ಉಣಿಸು, ಆಹಾರ; ಭೂತ: ಬೇತಾಳ; ನಿಕರ: ಗುಂಪು; ಬರಿಸು: ತೃಪ್ತಿಪಡಿಸು; ನೋಡು: ವೀಕ್ಷಿಸು; ಒಡ್ಡು: ನೀಡು; ಅಸ್ತ್ರ: ಶಸ್ತ್ರ, ಆಯುಧ; ಸಂತತಿ: ಗುಂಪು; ಗರುವ: ಶ್ರೇಷ್ಠ, ಬಲಶಾಲಿ; ನೀರು: ಜಲ; ಹಿಮಕರ: ಚಂದ್ರ; ಮಹಾನ್ವಯ: ವಂಶ; ಕೀರ್ತಿ: ಯಶಸ್ಸು; ಜಲ: ನೀರು; ಕರಗು: ಮಾಯವಾಗು; ಕಷ್ಟ: ಕಠಿಣ; ವೃತ್ತಿ: ಸ್ಥಿತಿ; ಅವನಿಪ: ರಾಜ;

ಪದವಿಂಗಡಣೆ:
ಅರಸ+ ಹೊರವಡು +ಭೀಮ+ಪಾರ್ಥರ
ಕರುಳ +ಬೀಯವ +ಭೂತ +ನಿಕರಕೆ
ಬರಿಸುವೆವು +ನೀ +ನೋಡಲ್+ಒಡ್ಡುವೆವ್+ಅಸ್ತ್ರ+ಸಂತತಿಯ
ಗರುವರಿಹರೇ +ನೀರೊಳಾ +ಹಿಮ
ಕರ +ಮಹಾನ್ವಯ +ಕೀರ್ತಿ +ಜಲದೊಳು
ಕರಗದಿಹುದೇ +ಕಷ್ಟ+ವೃತ್ತಿಯದೆಂದರ್+ಅವನಿಪನ

ಅಚ್ಚರಿ:
(೧) ರೂಪಕದ ಪ್ರಯೋಗ – ಹಿಮಕರ ಮಹಾನ್ವಯ ಕೀರ್ತಿ ಜಲದೊಳು ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ
(೨) ಚಂದ್ರವಂಶ ಎಂದು ಕರೆಯುವ ಪರಿ – ಹಿಮಕರ ಮಹಾನ್ವಯ

ಪದ್ಯ ೧೯: ಧರ್ಮಜನು ವಿರಾಟ ರಾಜನಿಗೆ ಏನು ಹೇಳಿದ?

ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ
ಬಿಟ್ಟರೆಮ್ಮನು ಜಠರ ಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಭಿದಾನ ತನಗೆಂದ (ವಿರಾಟ
ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಹಾ ವೈಭವಯುತವಾದ ಇಂದ್ರಪ್ರಸ್ಥನಗರವು ಕೆಟ್ಟು ಹೋಯಿತು. ಲೋಕೈಕ ವೀರರಾದ ಪಾಂಡಾರು ನಾರುಮಡಿಯುಟ್ಟು ಊರುಬಿಟ್ಟರು. ಚಂದ್ರವಂಶದ ರಾಜರಿಗೆ ದಟ್ಟವಾದ ಅಡವಿಯು ಮನೆಯಾಯಿತು. ಊರು ಬಿಡುವ ಮೊದಲು ನಮ್ಮನ್ನು ಕರೆಸಿ ಎಲ್ಲಿಯಾದರೂ ಹೋಗಿ ಹೊಟ್ಟೆ ಹೊರೆದುಕೊಳ್ಳಿರಿ ಎಂದು ಹೇಳಬೇಕಾಯಿತು. ಆಶ್ರಯವೇ ಇಲ್ಲದವನಾಗಿ ವ್ಯೆಥೆಪಟ್ಟು ಇಲ್ಲಿಗೆ ಬಂದಿದ್ದೇನೆ. ನನ್ನ ಹೆಸರು ಕಂಕ ಎಂದು ಧರ್ಜಜನು ವಿರಾಟ ರಾಜನಿಗೆ ಹೇಳಿದನು.

ಅರ್ಥ:
ಕೆಟ್ಟು: ಹಾಳಾಗು; ಉಟ್ಟು: ತೊಡು; ನಾರು: ತೊಗಟೆ; ಸೀರೆ: ವಸ್ತ್ರ; ಅಡವಿ: ಕಾದು; ಮನೆ: ಆಲಯ; ಹಿಮಕರ: ಚಂದ್ರ; ಕುಲ: ವಂಶ; ರಾಯ: ರಾಜ; ಬಿಟ್ಟು: ತೊರೆ; ಜಠರ: ಹೊಟ್ಟೆ; ಭರಣ: ಕಾಪಾಡು, ಪೋಷಿಸು; ಆಶ್ರಯ: ಆಸರೆ; ಕಂಗೆಟ್ಟು: ವ್ಯಥೆಗೊಳ್ಳು; ಬಂದು: ಆಗಮಿಸು; ಅಭಿಧಾನ: ಹೆಸರು;

ಪದವಿಂಗಡಣೆ:
ಕೆಟ್ಟುದ್+ಇಂದ್ರಪ್ರಸ್ಥ +ಪಾಂಡವರ್
ಉಟ್ಟು+ಹೋದರು +ನಾರ +ಸೀರೆಯನ್
ಅಟ್ಟಡವಿ+ ಮನೆಯಾಯ್ತು +ಹಿಮಕರ+ಕುಲದ +ರಾಯರಿಗೆ
ಬಿಟ್ಟರ್+ಎಮ್ಮನು +ಜಠರ+ ಭರಣಕೆ
ನೆಟ್ಟನ್+ಆಶ್ರಯವಿಲ್ಲದಿರೆ+ ಕಂ
ಗೆಟ್ಟು +ಬಂದೆವು +ಕಂಕನೆಂಬ್+ಅಭಿದಾನ+ ತನಗೆಂದ

ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವಿವರಿಸುವ ಪರಿ – ಪಾಂಡವರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ