ಪದ್ಯ ೩೦: ಕಿಮ್ಮೀರನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಎಂಬೆನೇನನು ಪವನಜನ ಕೈ
ಕೊಂಬ ದೈತ್ಯನೆ ಹೆಮ್ಮರನ ಹೆ
ಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ
ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾ
ನಂಬಿದುದು ನೆರೆ ದೈವವೆನುತಿದಿರಾದನಮರಾರಿ (ಅರಣ್ಯ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಮನು ಕಿಮ್ಮೀರನೆದುರು ಗರ್ಜಿಸಲು, ಕಿಮ್ಮೀರನು ಭೀಮನಿಗೆ ಹೆದರುವಾನೇ, ದೊಡ್ಡಮರದ ದೊಡ್ಡ ಕೊಂಬೆಯನ್ನು ಕಿತ್ತು ಅದನ್ನು ನಾಶಗೊಳಿಸಿ ನನ್ನ ಹಿಡಿಂಬನ ಶತ್ರುಗಳು ಇದೀಗ ಸಿಕ್ಕಿದ್ದಾರೆ, ನಾನು ಪೂಜಿಸುತ್ತಿರುವುದು ನಿಜವಾಗಿಯೂ ದೊಡ್ಡ ದೇವರು ಎನ್ನುತ್ತಾ ಯುದ್ಧಕ್ಕೆ ಸಿದ್ಧನಾದನು.

ಅರ್ಥ:
ಪವನಜ: ಭೀಮ; ಕೈಕೊಂಬ: ಸಿಲುಕು; ದೈತ್ಯ: ರಾಕ್ಷಸ; ಹೆಮ್ಮರ: ದೊಡ್ಡ ಮರ; ಕೊಂಬೆ: ಟೊಂಗೆ; ಮುರಿ: ಸೀಳು; ಸವರು: ಸಾರಿಸು, ನಾಶಮಾಡು; ಶಾಖ: ಮರದ ಕೊಂಬೆ; ತಿಂಬೆ: ತಿನ್ನು; ತಂದು: ಬರೆಮಾಡು; ಹಗೆ: ವೈರ; ಸಿಲುಕು: ಸಿಕ್ಕು, ಬಂಧನಕ್ಕೊಳಗಾಗು; ನಂಬು: ವಿಶ್ವಾಸ, ಭರವಸೆ; ನೆರೆ: ಸೇರು, ಜೊತೆಗೂಡು; ದೈವ: ಭಗವಂತ; ಇದಿರು: ಎದುರು; ಅಮರಾರಿ: ದೇವತೆಗಳ ವೈರಿ (ರಾಕ್ಷಸ);

ಪದವಿಂಗಡಣೆ:
ಎಂಬೆನೇನ್+ಅನು +ಪವನಜನ+ ಕೈ
ಕೊಂಬ +ದೈತ್ಯನೆ +ಹೆಮ್ಮರನ+ ಹೆ
ಗ್ಗೊಂಬ +ಮುರಿದನು+ ಸವರಿದನು+ ಶಾಖೋಪ+ಶಾಖೆಗಳ
ತಿಂಬೆನ್+ಇವನನು +ತಂದು +ತನ್ನ +ಹಿ
ಡಿಂಬಕನ+ ಹಗೆ+ ಸಿಲುಕಿತೇ+ ತಾ
ನಂಬಿದುದು +ನೆರೆ+ ದೈವವೆನುತ್+ಇದಿರಾದನ್+ಅಮರಾರಿ

ಅಚ್ಚರಿ:
(೧) ಕಿಮ್ಮೀರನ ಎದುರಿಸಲು ಸಿದ್ಧನಾದ ಪರಿ – ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾನಂಬಿದುದು ನೆರೆ ದೈವವೆನುತಿದಿರಾದನಮರಾರಿ
(೨) ಭೀಮನ ಗುಣಗಾನ – ಹೆಮ್ಮರನ ಹೆಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ

ಪದ್ಯ ೨೮: ಕಿಮ್ಮೀರನು ಪಾಂಡವರ ಬಗ್ಗೆ ಏನೆಂದು ಜರೆದನು?

ಆರು ನೀವ್ ನಡುವಿರುಳು ಪಾಂಡು ಕು
ಮಾರರಾವೆನಲಿತ್ತಲೇನು ವಿ
ಚಾರ ಬಂದಿರಿ ಹೇಳಿ ನೀವಾ ಬಕ ಹಿಡಿಂಬಕರ
ವೈರಿಗಳಲಾ ಹೊಲ್ಲೆಹೇನು ವಿ
ಕಾರಿಗಳನೊಡಹೊಯ್ದು ಶೋಣಿತ
ವಾರಿಯೋಕುಳಿಯಾಡಬೇಹುದೆನುತ್ತ ಖಳ ಜರೆದ (ಅರಣ್ಯ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪಾಂಡವರು ಮತ್ತು ಕಿಮ್ಮೀರನ ಜೊತೆ ಮಾತುಕತೆಯಾಯಿತು. ಕಿಮ್ಮೀರನು ನೀವು ಯಾರು ಈ ಮಧ್ಯ ರಾತ್ರಿಯಲ್ಲಿ ಬಂದಿರುವುದು ಎನಲು, ಪಾಂಡವರು ತಮ್ಮ ಪರಿಚಯವನ್ನು ಮಾಡಿಕೊಳ್ಳುತ್ತಾ, ನಾವು ಪಾಂಡವರೆಂದು ಉತ್ತರಿಸಿದರು. ಇದನ್ನು ಕೇಳಿದ ಕಿಮ್ಮೀರನು ಇತ್ತ ಏಕೆ ಬಂದಿರಿ, ನೀವು ಬಕ, ಹಿಡಿಂಬರ ವೈರಿಗಳಲ್ಲವೇ? ತಪ್ಪೇನು, ನಿಮ್ಮಂತಹ ದುಷ್ಟರನ್ನು ಸಾಯಿಸಿ ರಕ್ತದದಲ್ಲಿ ಓಕುಳಿಯಾಡಬೇಕೆಂದು ಪಾಂಡವರನ್ನು ಜರೆದನು.

ಅರ್ಥ:
ಆರು: ಯಾರು; ಇರುಳು: ರಾತ್ರಿ; ನಡು: ಮಧ್ಯ; ಕುಮಾರ: ಮಕ್ಕಳು; ವಿಚಾರ: ವಿಷಯ; ಬಂದಿರಿ: ಆಗಮಿಸು; ಹೇಳು: ತಿಳಿಸು; ವೈರಿ: ಶತ್ರು; ಹೊಲ್ಲೆಹ: ದೋಷ; ವಿಕಾರಿ: ಕುರೂಪಿ, ದುಷ್ಟ; ಒಡಹೊಯ್ದು: ಜೊತೆಗೆ ಹೊಡೆದು; ಶೋಣಿತ: ರಕ್ತ; ವಾರಿ: ನೀರು; ಓಕುಳಿ: ಬಣ್ಣದ ನೀರು; ಆಡು: ಕೀಡಿಸು; ಖಳ: ದುಷ್ಟ; ಜರೆ: ಬಯ್ಯು;

ಪದವಿಂಗಡಣೆ:
ಆರು+ ನೀವ್ +ನಡುವ್+ಇರುಳು +ಪಾಂಡು +ಕು
ಮಾರರ್+ಆವ್+ಎನಲ್+ಇತ್ತಲೇನು+ ವಿ
ಚಾರ +ಬಂದಿರಿ+ ಹೇಳಿ+ ನೀವ್+ಆ+ ಬಕ+ ಹಿಡಿಂಬಕರ
ವೈರಿಗಳಲಾ +ಹೊಲ್ಲೆಹೇನು +ವಿ
ಕಾರಿಗಳನ್+ಒಡಹೊಯ್ದು +ಶೋಣಿತ
ವಾರಿ+ಓಕುಳಿ+ಆಡಬೇಹುದ್+ಎನುತ್ತ +ಖಳ +ಜರೆದ

ಅಚ್ಚರಿ:
(೧) ಕಿಮ್ಮೀರನ ಆಶಯ – ವಿಕಾರಿಗಳನೊಡಹೊಯ್ದು ಶೋಣಿತ ವಾರಿಯೋಕುಳಿಯಾಡಬೇಹುದೆನುತ್ತ ಖಳ ಜರೆದ

ಪದ್ಯ ೪೧: ಭೀಮನ ಬಲವನ್ನು ವಿದುರ ಹೇಗೆ ವಿವರಿಸಿದ?

ಬಕನ ಮುರಿದರು ವನದಲಿ ಹಿಡಿಂ
ಬಕನ ಹಣಿದರು ಮಾಗಧನ ಸು
ಪ್ರಕಟ ಬಲನಂಬುಜದನಾಳವನಾನೆ ಕೀಳ್ವಂತೆ
ಸಕಲ ಜನ ನೃಪರರಿಯೆ ಸೀಳಿದ
ರಕಟ ಮಾರಿಯ ಬೇಟವೇ ಪಾ
ತಕವಲಾ ಪಾಂಚಾಲಿ ತೊತ್ತಹಳೇ ಶಿವಾಯೆಂದ (ಸಭಾ ಪರ್ವ, ೧೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ಪಾಂಡವರಲ್ಲಿಯ ಭೀಮನು ಬಕನೆಂಬ ರಾಕ್ಷಸನನ್ನು ಕೊಂದನು, ಹಿಡಿಂಬನೆಂಬ ಅಸುರನನ್ನು ಕಾಡಿನಲ್ಲಿ ಸಂಹಾರ ಮಾಡಿದನು. ಕಮಲದ ನಾಳವನ್ನು ಆನೆಯು ಕಿತ್ತು ಹಾಕುವ ಹಾಗೆ ಜರಾಸಂಧನನ್ನು ಸೀಳಿ ಹಾಕಿದನು. ಅಯ್ಯೋ ದುರ್ಯೋಧನ, ಮಾರಿಯ ಜೊತೆಗೆ ಸರಸವೇ, ಶಿವ ಶಿವಾ ಇದು ಪಾಪ ದುರ್ಯೋಧನ, ಪಾಂಡವರ ಅರಸಿ ದ್ರೌಪದಿ ದಾಸಿನಿನಗೆ ಹೇಗೆ ಆದಾಳು ಎಂದು ತನ್ನ ನೋವನ್ನು ತೊಡಿಕೊಂಡನು ವಿದುರ.

ಅರ್ಥ:
ಬಕ: ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ; ಮುರಿ: ಸೀಳು; ಹಿಡಿಂಬ: ತತ್ತ್ವಾಭಿಮಾನಿ ದೈತ್ಯ; ಹಣಿ: ಬಾಗು, ಮಣಿ; ಮಾಗಧ: ಜರಾಸಂಧ; ಸುಪ್ರಕಟ: ನಿಚ್ಚಳ, ಸ್ಪಷ್ಟ; ಬಲ: ಬಲಿಷ್ಟ; ಅಂಬುಜ: ತಾವರೆ; ನಾಳ: ದಂಟು, ಟೊಳ್ಳಾದ ಕೊಳವೆ, ನಳಿಕೆ; ಆನೆ: ಕರಿ, ಗಜ; ಕೀಳು: ಎಳೆದು ಹಾಕು; ಸಕಲ: ಎಲ್ಲಾ; ಜನ: ಮನುಷ್ಯ; ನೃಪ: ರಾಜ; ಅರಿ: ತಿಳಿ; ಸೀಳು: ಚೂರು, ತುಂಡು; ಅಕಟ: ಅಯ್ಯೋ; ಮಾರಿ: ಕ್ಷುದ್ರ ದೇವತೆ; ಬೇಟ: ಪ್ರಣಯ; ಆಸೆ; ಪಾತಕ: ಪಾಪ, ದೋಷ; ತೊತ್ತು: ದಾಸಿ;

ಪದವಿಂಗಡಣೆ:
ಬಕನ +ಮುರಿದರು +ವನದಲಿ +ಹಿಡಿಂ
ಬಕನ +ಹಣಿದರು +ಮಾಗಧನ +ಸು
ಪ್ರಕಟ+ ಬಲನ್+ಅಂಬುಜದ+ನಾಳವನ್+ಆನೆ +ಕೀಳ್ವಂತೆ
ಸಕಲ+ ಜನ +ನೃಪರ್+ಅರಿಯೆ +ಸೀಳಿದರ್
ಅಕಟ +ಮಾರಿಯ +ಬೇಟವೇ +ಪಾ
ತಕವಲಾ +ಪಾಂಚಾಲಿ+ ತೊತ್ತಹಳೇ+ ಶಿವಾಯೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಾಗಧನ ಸುಪ್ರಕಟ ಬಲನಂಬುಜದನಾಳವನಾನೆ ಕೀಳ್ವಂತೆ; ಮಾರಿಯ ಬೇಟವೇ
(೨) ಬಕ, ಹಿಡಿಂಬಕ- ಬಕ ಪದದ ಬಳಕೆ
(೩) ಪ್ರಕಟ, ಅಕಟ – ಪ್ರಾಸಪದಗಳ ಬಳಕೆ

ಪದ್ಯ ೩೪: ಘಟೋತ್ಕಚನು ತನ್ನ ತಾಯಿಯ ಪರಿಚಯವನ್ನು ಹೇಗೆ ಮಾಡಿದ?

ಅರಸನೊಂದು ನಿಮಿತ್ತ ದೇಶಾಂ
ತರ ಪರಿಭ್ರಮಣದಲಿ ವಿಪಿನಾಂ
ತರದೊಳಿರೆ ಬಂದನು ಹಿಡಿಂಬಕನೆಂಬನಸುರಪತಿ
ಕೆರಳಿಚಿದೊಡಾ ಭೀಮನಾತನ
ನೊರಸಿದನು ಖಳನನುಜೆಯಾತಂ
ಗರಸಿಯಾದಳು ಸತಿಹಿಡಿಂಬಿಕೆ ಮಾತೆ ತನಗೆಂದ (ಸಭಾ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಧರ್ಮಜನು ಕಾರಣಾಂತರದಿಂದ ದೇಶವನ್ನು ಸುತ್ತಾಡುತ್ತಾ ಕಾಡಿನಲ್ಲಿರಲು, ರಾಕ್ಷಸರಾಜನಾದ ಹಿಡಿಂಬನು ಬಂದು ಅವರನ್ನು ಕೆಣಕಿದನು. ಭೀಮನು ಅವನನ್ನು ಸಂಹರಿಸಿ ಅವನ ತಂಗಿಯಾದ ಹಿಡಿಂಬಿಯನ್ನು ಮದುವೆಯಾದನು. ಹಿಡಿಂಬೆಯು ನನ್ನ ತಾಯಿ ಎಂದು ಘಟೋತ್ಕಚನು ಹೇಳಿದನು.

ಅರ್ಥ:
ಅರಸ: ರಾಜ; ನಿಮಿತ್ತ: ಕಾರಣ; ದೇಶ: ರಾಷ್ಟ್ರ; ಪರಿಭ್ರಮಣ: ಸುತ್ತು; ವಿಪಿನ: ಕಾಡು, ಅಟವಿ; ಬಂದನು: ಆಗಮಿಸಿದನು; ಅಸುರ: ರಾಕ್ಷಸ; ಅಸುರಪತಿ: ರಾಕ್ಷಸರ ರಾಜ; ಕೆರಳಿಸು: ಕೆಣಕು; ಒರಸು: ನಾಶಮಾಡು; ಖಳ: ದುಷ್ಟ, ರಾಕ್ಷಸ; ಅನುಜೆ: ತಂಗಿ; ಅರಸಿ: ರಾಣಿ; ಸತಿ: ಪತ್ನಿ; ಮಾತೆ: ತಾಯಿ;

ಪದವಿಂಗಡಣೆ:
ಅರಸನ್+ಒಂದು +ನಿಮಿತ್ತ+ ದೇಶಾಂ
ತರ+ ಪರಿಭ್ರಮಣದಲಿ+ ವಿಪಿನಾಂ
ತರದೊಳ್+ಇರೆ+ ಬಂದನು+ ಹಿಡಿಂಬಕ+ನೆಂಬನ್+ಅಸುರಪತಿ
ಕೆರಳಿಚಿದೊಡ್+ಆ+ ಭೀಮನ್+ ಆತನನ್
ಒರಸಿದನು +ಖಳನ್+ಅನುಜೆ+ಆತಂಗ್
ಅರಸಿಯಾದಳು +ಸತಿ+ಹಿಡಿಂಬಿಕೆ+ ಮಾತೆ +ತನಗೆಂದ

ಅಚ್ಚರಿ:
(೧) ದೇಶಾಂತರ, ವಿಪಿನಾಂತರ – ಅಂತರದಿಂದ ಕೊನೆಗೊಳ್ಳುವ ಪದಗಳು
(೨) ಹಿಡಿಂಬಕ, ಹಿಡಿಂಬಿಕೆ – ಹೆಸರುಗಳ ಬಳಕೆ

ಪದ್ಯ ೧೨೦: ಮತ್ತೊಮ್ಮೆ ಬಂದ ಜರಾಸಂಧನ ದೇಹವೇನಾಯಿತು?

ಇನ್ನರಿಯ ಬಹುದೋ ವೃಕೋದರ
ಬೆನ್ನಲುಗಿವೆನು ಕರುಳನಕಟಾ
ನಿನ್ನ ಕೈಯಲಿ ಮಡಿವೊಡಾ ಬಕನೋ ಹಿಡಿಂಬಕನೋ
ಎನ್ನಳವ ನೋಡೆನುತ ಹಿಡಿದನು
ತನ್ನ ದಂಡೆಯನ್ನೊಡ್ಡಿ ನಿಮಿಷಕೆ
ಮನ್ನಿಸದೆ ಕಲಿಭೀಮ ಸೀಳ್ದನು ಮತ್ತೆ ಮಾಗಧನ (ಸಭಾ ಪರ್ವ, ೨ ಸಂಧಿ, ೧೨೦ ಪದ್ಯ)

ತಾತ್ಪರ್ಯ:
ಜರಾಸಂಧನು ತನ್ನ ಶಕ್ತಿಯನ್ನೆಲ್ಲಾ ಕೃಢೀಕರಿಸಿ ಎಲವೋ ಭೀಮ, ಇನ್ನು ನನ್ನ ಪ್ರರಾಕ್ರಮವನ್ನು ನೀನಿನ್ನು ತಿಳಿದಿಲ್ಲ. ನಿನ್ನ ಕರುಳುಗಳನ್ನು ನಿನ್ನ ಬೆನ್ನಿನಲ್ಲಿ ತೆಗೆಯುತ್ತೇನೆ, ನೆನ್ನ ಕೈಯಲ್ಲಿ ಸಾಯುವುದಕ್ಕೆ ನಾನೇನು ಬಕಾಸುರನೋ ಅಥವ ಹಿಡಿಂಬಕನೋ? ನನ್ನ ಸತ್ವವನ್ನು ನೋಡು, ಎನ್ನುತ್ತಾ ಜರಾಸಂಧನು ಭೀಮನಿಗೆ ದಂಡೆಯೊಡ್ಡಿ ಬರಲು, ಭೀಮನು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮತ್ತೆ ಜರಾಸಂಧನನ್ನು ಸೀಳಿದನು.

ಅರ್ಥ:
ಅರಿ: ತಿಳಿ; ಇನ್ನು: ಮುಂದೆ; ಬಹು: ತುಂಬ; ವೃಕ: ತೋಳ; ಉದರ: ಹೊಟ್ಟೆ; ಬೆನ್ನೆಲು: ಬೆನ್ನ ಎಲುಬು; ಅಕಟ: ಅಯ್ಯೋ; ಅಲುಗು: ಅಳ್ಳಾಡಿಸು; ಕರುಳು:ಪಚನಾಂಗ; ಕೈ: ಹಸ್ತ; ಮಡಿ: ಸಾವು; ಅಳವಿ: ಶಕ್ತಿ; ನೋಡು: ವೀಕ್ಷಿಸು; ಹಿಡಿ: ಬಂಧಿಸು; ದಂಡೆ: ಮಲ್ಲ ಯುದ್ಧದ ಒಂದು ವರಸೆ; ಒಡ್ಡು: ಹಾಯಿಸು; ಮನ್ನಿಸು: ಶಮನಗೊಳಿಸು; ಕಲಿ: ಸಾಹಸಿ; ಸೀಳು: ಚೂರು ಮಾಡು; ಮಾಗಧ: ಜರಾಸಂಧ;

ಪದವಿಂಗಡಣೆ:
ಇನ್+ಅರಿಯ +ಬಹುದೋ +ವೃಕೋದರ
ಬೆನ್ನ್+ಅಲುಗಿವೆನು +ಕರುಳನ್+ಅಕಟಾ
ನಿನ್ನ +ಕೈಯಲಿ +ಮಡಿವೊಡಾ +ಬಕನೋ +ಹಿಡಿಂಬಕನೋ
ಎನ್+ಅಳವ+ನೋಡೆನುತ +ಹಿಡಿದನು
ತನ್ನ +ದಂಡೆಯನ್ನೊಡ್ಡಿ +ನಿಮಿಷಕೆ
ಮನ್ನಿಸದೆ+ ಕಲಿಭೀಮ+ ಸೀಳ್ದನು +ಮತ್ತೆ +ಮಾಗಧನ

ಅಚ್ಚರಿ:
(೧) ಇನ್ನ, ನಿನ್ನ, ತನ್ನ, ಎನ್ನ – ಪದಗಳ ಬಳಕೆ
(೨) ವೃಕೋಧರ, ಭೀಮ – ೧, ೬ ಸಾಲು

ಪದ್ಯ ೨೦: ಹಿಡಿಂಬನ ಅಂತ್ಯ ಹೇಗಾಯ್ತು?

ಎದ್ದು ತಿವಿದನು ಖಳನ ಬದಿಯೊಳ
ಗದ್ದು ದೀತನ ಮುಷ್ಟಿ ಮುರಿದೊಡ
ನೆದ್ದು ನಿಮಿಷಕೆ ಸಂತವಿಸಿ ಹೆಮ್ಮರನ ಕೊಂಬಿನಲಿ
ಗೆದ್ದೆಯಿದಕೊಳ್ಳೆನುತ ಖಳನು
ಬ್ಬೆದ್ದು ಹೊಯ್ದರೆ ಮರ ಸಹಿತ ಹಿಡಿ
ದುದ್ದಿ ನೆಲದೊಳಗೊರಸಿ ಕೊಂದನು ಕಲಿ ಹಿಡಿಂಬಕನ (ಆದಿ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಹಿಡಿಂಬನು ಮರವನ್ನು ಕಿತ್ತು ಭೀಮನ ಮೇಲೆ ಆಕ್ರಮಿಸಿದಾಗ, ಭೀಮನು ಎದ್ದು ಆ ದಾನವನ ಪಕ್ಕೆಯನ್ನು ಗುದ್ದಲು ಅದು ಮುರಿದು ರಕ್ತದಿಂದ ನೆನೆಯಿತು, ಹಿಡಿಂಬನು ಸ್ವಲ್ಪ ಸುಧಾರಿಸಿಕೊಂಡು, ಗೆದ್ದೆ ಎಂದು ತಿಳಿದೆಯ, ಇದನ್ನು ತೆಗೆದುಕೋ ಎಂದು, ಮರದ ಕೊಂಬೆಯನ್ನು ಹಿಡಿದು ಭೀಮನನ್ನು ಹೊಯ್ದನು, ಭೀಮನು ಮರದ ಸಹಿತ ಹಿಡಿಂಬನನ್ನು ನೆಲಕ್ಕೆ ಹಾಕಿ ಕಾಲಿನಲ್ಲಿ ಉದ್ದಿ ಒರಸಿ ಹಿಡಿಂಬನನ್ನು ಕೊಂದನು.

ಅರ್ಥ:
ಎದ್ದು: ನಿಂತು; ತಿವಿ: ಗುದ್ದು, ಇರಿ; ಖಳ: ದುಷ್ಟ, ದಾನವ; ಬದಿ: ಪಕ್ಕ; ಮುಷ್ಟಿ: ಮುಚ್ಚಿದ ಕೈ, ಮುಟ್ಟಿಗೆ; ಮುರಿ: ಬಾಗು, ತಿರುಗು; ಸಂತವಿಸು: ಸುಧಾರಿಸು; ಕೊಂಬೆ: ರೆಂಬೆ; ಮರ: ತರು; ಹೆಮ್ಮರ: ದೊಡ್ಡ ಮರ; ಗೆದ್ದೆ: ಗೆಲುವು; ಹೊಯ್: ಹೊಡೆ, ಬಡಿ; ಸಹಿತ: ಜೊತೆ; ಉದ್ದು: ಒರಸು, ತಿಕ್ಕು; ನೆಲ: ಭೂಮಿ; ಒರಸು: ತೀಡು, ತಿಕ್ಕು; ಕೊಂದನು: ಸಾಯಿಸು, ಕೊಲ್ಲು; ಕಲಿ: ಬಲಶಾಲಿ;

ಪದವಿಂಗಡನೆ:
ಎದ್ದು +ತಿವಿದನು +ಖಳನ+ ಬದಿಯೊಳಗ್
ಅದ್ದುದ್+ಈತನ+ ಮುಷ್ಟಿ +ಮುರಿದೊಡನ್
ಎದ್ದು+ ನಿಮಿಷಕೆ+ ಸಂತವಿಸಿ+ ಹೆಮ್ಮರನ +ಕೊಂಬಿನಲಿ
ಗೆದ್ದೆ+ಯಿದ+ಕೊಳ್ಳ್+ಎನುತ+ ಖಳನುಬ್
ಎದ್ದು +ಹೊಯ್ದರೆ +ಮರ +ಸಹಿತ +ಹಿಡಿದ್
ಉದ್ದಿ+ ನೆಲದೊಳಗ್+ಒರಸಿ+ ಕೊಂದನು+ ಕಲಿ+ ಹಿಡಿಂಬಕನ

ಅಚ್ಚರಿ:
(೧) ಎದ್ದು – ೧, ೩, ೫ ಸಾಲಿನ ಮೊದಲ ಪದ
(೨) ತಿವಿ, ಒರಸಿ, ಉದ್ದಿ,ಹೊಯ್ದು, ಅದ್ದು, ಎದ್ದು, – ಕಾದಾಟವನ್ನು ವಿವರಿಸುವ ಪದಗಳು
(೩) ೫, ೬ ಸಾಲಿನ ಕೊನೆ ಪದಗಳು – ಹಿಡಿ, ಹಿಡಿಂಬಕ