ಪದ್ಯ ೪೩: ಸೈಂಧವನ ಶಿರವು ಯಾರ ಕೈಯಲ್ಲಿ ಬಿದ್ದಿತು?

ತುಡುಕಿ ಖಂಡವ ಕಚ್ಚಿ ನಭದಲಿ
ಗಿಡಿಗ ಹಾಯ್ವಂದದಲಿ ತಲೆಯನು
ಹಿಡಿದು ಹಾಯ್ದುದು ಬಾಣ ವೃದ್ಧಕ್ಷತ್ರನಿದ್ದೆಡೆಗೆ
ಕುಡಿತೆಯೆರಡರೊಳರ್ಘ್ಯಜಲವನು
ಹಿಡಿದು ಹಾಯ್ಕುವ ಸಮಯದಲಿ ತಲೆ
ನಡುವೆ ಬಿದ್ದುದು ಅರ್ಘ್ಯಜಲ ನವರಕ್ತಮಯವಾಗೆ (ದ್ರೋಣ ಪರ್ವ, ೧೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಮಾಂಸವನ್ನು ಕಚ್ಚಿಕೊಂಡು ಗಿಡುಗವು ಆಕಾಶದಲ್ಲಿ ಹಾರಿಹೋಗುವಂತೆ ಪಾಶುಪತಾಸ್ತ್ರವು ಸೈಂಧವನ ತಲೆಯಸಮೇತ ಜಯದ್ರಥನ ತಂದೆಯಾದ ವೃದ್ಧಕ್ಷತ್ರನ ಕಡೆಗೆ ಹೋಯಿತು. ಆಗ ವೃದ್ಧಕ್ಷತ್ರನು ಬೊಗಸೆಯಲ್ಲಿ ಅರ್ಘ್ಯ ಜಲವನ್ನು ಹಿಡಿದು ಇನ್ನೇನು ಅರ್ಘ್ಯವನ್ನು ಕೊಡಬೇಕು ಎನ್ನುವಷ್ಟರಲ್ಲಿ ಆ ತಲೆಯು ಅವನ ಬೊಗಸೆಯಲ್ಲಿ ಬಿದ್ದು ಬೊಗಸೆಯೆಲ್ಲಾ ರಕ್ತಮಯವಾಯಿತು.

ಅರ್ಥ:
ತುಡುಕು: ಹೋರಾಡು, ಸೆಣಸು; ಖಂಡ: ತುಂಡು, ಚೂರು; ಕಚ್ಚು: ಹಲ್ಲಿನಿಂದ ಹಿಡಿ; ನಭ: ಆಗಸ; ಗಿಡಿಗ: ಖಗ, ಹದ್ದು; ಹಾಯ್: ಹಾರು, ಜಿಗಿ; ತೆಲೆ: ಶಿರ; ಹಿಡಿ: ಗ್ರಹಿಸು; ಬಾಣ: ಸರಳು; ವೃದ್ಧಕ್ಷತ್ರ : ಮುದುಕ ಕ್ಷತ್ರಿಯ (ಸೈಂಧವನ ತಂದೆ); ಕುಡಿತೆ: ಬೊಗಸೆ, ಸೇರೆ; ಅರ್ಘ್ಯ: ದೇವತೆಗಳಿಗೂ ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು; ಜಲ: ನೀರು; ಹಿಡಿ: ಗ್ರಹಿಸು; ಹಾಯ್ಕು: ನೀಡು; ಸಮಯ: ಕಾಲ; ನಡುವೆ: ಮಧ್ಯೆ; ಬಿದ್ದು: ಬೀಳು; ನವ: ಹೊಸ; ರಕ್ತ: ನೆತ್ತರು;

ಪದವಿಂಗಡಣೆ:
ತುಡುಕಿ +ಖಂಡವ +ಕಚ್ಚಿ +ನಭದಲಿ
ಗಿಡಿಗ +ಹಾಯ್ವಂದದಲಿ +ತಲೆಯನು
ಹಿಡಿದು +ಹಾಯ್ದುದು +ಬಾಣ +ವೃದ್ಧಕ್ಷತ್ರನಿದ್ದೆಡೆಗೆ
ಕುಡಿತೆ+ಎರಡರೊಳ್+ಅರ್ಘ್ಯ+ಜಲವನು
ಹಿಡಿದು +ಹಾಯ್ಕುವ +ಸಮಯದಲಿ +ತಲೆ
ನಡುವೆ +ಬಿದ್ದುದು +ಅರ್ಘ್ಯಜಲ+ ನವರಕ್ತಮಯವಾಗೆ

ಅಚ್ಚರಿ:
(೧) ಹಾಯ್ವ, ಹಾಯ್ಕು, ಹಾಯ್ದು – ಹ ಕಾರದ ಪದದ ಬಳಕೆ
(೨) ಉಪಮಾನದ ಪ್ರಯೋಗ – ತುಡುಕಿ ಖಂಡವ ಕಚ್ಚಿ ನಭದಲಿ ಗಿಡಿಗ ಹಾಯ್ವಂದದಲಿ

ಪದ್ಯ ೧೬: ಸುಪ್ರತೀಕ ಗಜವು ಹೇಗೆ ವಿಜೃಂಭಿಸಿತು?

ದ್ವಿಗುಣ ತ್ರಿಗುಣದಲಣೆದು ಜೋಡಿಸಿ
ಚಿಗಿದು ಹಾಯ್ಕುವ ಮೆಟ್ಟಿ ಸೀಳುವ
ತೆಗೆದು ಕಟ್ಟುವ ತಿರುಹಿ ನೂಕುವ ಹೆಡತಲೆಯೊಳಡಸಿ
ಉಗುರೊಳೌಕುವ ನಿಗ್ಗವದೊಳಿ
ಬ್ಬಗಿಯ ಮಾಡುವ ಕಾಲುಗೊಲೆಯಲಿ
ವಿಗಡ ಕರಿ ತುಳಿದಾಡಿತಿದಿರಿದಿರಾದ ಪಟುಭಟರ (ದ್ರೋಣ ಪರ್ವ, ೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇದಿರುಬಂದ ಭಟರಲ್ಲಿ ಇಬ್ಬರು ಮೂವರಂತೆ ಹೊಡೆಯಿತು. ಅವರನ್ನು ಸೀಳುವ, ತುಳಿಯುವ, ಒಗ್ಗೂಡಿಸಿ ತಿರುಗಿಸಿ ನೂಕುವ, ಅವರ ತಲೆಗಳನ್ನು ದಂತಗಳಿಂದ ಚುಚ್ಚುವ, ಸೀಳುವ ಕಾಲಿನಿಮ್ದ ಕೊಲ್ಲುವ ಸುಪ್ರತೀಕವು ಪಾಂಡವ ಸೈನ್ಯದಲ್ಲಿ ವಿಜೃಂಭಿಸಿತು.

ಅರ್ಥ:
ದ್ವಿ: ಇಬ್ಬರು; ತ್ರಿ: ಮೂರು; ಗುಣ: ನಡತೆ, ಸ್ವಭಾವ, ಸತ್ತ್ವ; ಅಣೆ:ತಿವಿ; ಜೋಡಿಸು: ಸೇರಿಸು; ಚಿಗಿ: ನೆಗೆ, ಹಾರು; ಹಾಯ್ಕು: ಹೊಡೆ; ಮೆಟ್ಟು: ತುಳಿ; ಸೀಳು: ಚೂರು, ತುಂಡು; ತೆಗೆ: ಹೊರತರು; ಕಟ್ಟು: ಬಂಧಿಸು; ತಿರುಹು: ತಿರುಗಿಸು; ನೂಕು: ತಳ್ಳು; ಹೆಡತಲೆ: ಹಿಂದಲೆ; ಅಡಸು: ಬಿಗಿಯಾಗಿ ಒತ್ತು; ಉಗುರು: ನಖ; ಔಕು: ಒತ್ತು; ನಿಗ್ಗವ: ಆನೆಯ ಕೋರೆ, ಹಸ್ತಿದಂತ; ಇಬ್ಬಗೆ: ಎರಡು ರೀತಿ; ಕಾಲು: ಪಾದ; ಕೊಲೆ: ಸಾವು; ವಿಗಡ: ಪರಾಕ್ರಮ; ಕರಿ: ಆನೆ; ತುಳಿ: ಮೆಟ್ಟು; ಇರಿದು: ಚುಚ್ಚು; ಪಟುಭಟ: ಪರಾಕ್ರಮಿ;

ಪದವಿಂಗಡಣೆ:
ದ್ವಿಗುಣ +ತ್ರಿಗುಣದಲ್+ಅಣೆದು +ಜೋಡಿಸಿ
ಚಿಗಿದು +ಹಾಯ್ಕುವ +ಮೆಟ್ಟಿ +ಸೀಳುವ
ತೆಗೆದು +ಕಟ್ಟುವ +ತಿರುಹಿ +ನೂಕುವ +ಹೆಡತಲೆಯೊಳಡಸಿ
ಉಗುರೊಳ್+ಔಕುವ +ನಿಗ್ಗವದೊಳ್
ಇಬ್ಬಗಿಯ +ಮಾಡುವ +ಕಾಲುಗೊಲೆಯಲಿ
ವಿಗಡ +ಕರಿ +ತುಳಿದಾಡಿತ್+ಇದಿರ್+ಇದಿರಾದ +ಪಟುಭಟರ

ಅಚ್ಚರಿ:
(೧) ಔಕು, ಹಾಯ್ಕು, ನೂಕು, ಮೆಟ್ಟು, ಸೀಳು – ಧಾಳಿಯನ್ನು ವಿವರಿಸುವ ಪದ
(೨) ಸುಪ್ರತೀಕದ ಬಲ – ವಿಗಡ ಕರಿ ತುಳಿದಾಡಿತಿದಿರಿದಿರಾದ ಪಟುಭಟರ

ಪದ್ಯ ೧೧: ಸುಪ್ರತೀಕ ಗಜವು ರಣರಂಗಕ್ಕೆ ಹೇಗೆ ಬಂದಿತು?

ಹಿಡಿವ ಬಿಡುವೊಬ್ಬುಳಿಗೆ ತಹ ಬಲ
ನೆಡಕೆ ಹಾಯ್ಕುವ ಸುತ್ತಲೊತ್ತುವ
ತಡೆವ ನಡಸುವ ಸೆಳೆವ ತಿರುಹುವ ಹದಿರ ಜೋಕೆಯಲಿ
ಗಡಣಿಸಿದನವನಿಭಪತಿಯನವ
ಗಡಿಸಿ ನೂಕಿದೊಡಮಮ ದಿಕ್ಕರಿ
ನಡುಗೆ ಚೌಕದ ಕಳನ ತುಳಿದುದು ಸುಪ್ರತೀಕಗಜ (ದ್ರೋಣ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಸುಪ್ರತೀಕವನ್ನು ಹಿಡಿಯುವ, ಬಿಡುವ, ಸೇನೆಯ ನಡುವಿಗೆ ತರುವ, ಎಡಕ್ಕೆ ಸುತ್ತಲೂ ಹಿಡಿತಕ್ಕೆ ತರುವ, ತಡೆಯುವ, ನಡೆಸುವ, ಹಿಂದಕ್ಕೆ ಸೆಳೆಯುವ, ತಿರುಗಿಸುವ, ಎದುರಿಗೆ ಬರುವುದನ್ನು ಎಚ್ಚರಿಕೆಯಿಂದ ತಪ್ಪಿಸುವ (ನಿರಾತಂಕವಾಗಿ ಮುಂದೆ ನುಗ್ಗಿಸುವ) ಕ್ರಿಯೆಗಳನ್ನು ನಾಜೂಕಾಗಿ ನಡೆಸಿ ಯುದ್ಧದ ಚೌಕಿಗೆ ತರಲು, ಸುಪ್ರತೀಕ ಗಜವು ಕದನದಕ್ಕೆ ಬಂದು ನಿಂತಿತು.

ಅರ್ಥ:
ಹಿಡಿ: ಗ್ರಹಿಸು; ಬಿಡು: ತೊರೆ; ಉಬ್ಬುಳಿ: ; ತಹ: ಸಂಧಾನ; ಬಲ: ಸೈನ್ಯ; ಹಾಯ್ಕು: ಹೊಡೆ; ಸುತ್ತ: ಎಲ್ಲಾ ಕಡೆ; ಒತ್ತು: ಮುತ್ತು; ತಡೆ: ನಿಲ್ಲಿಸು; ನಡಸು: ಚಲಿಸು; ಸೆಳೆ: ಆಕರ್ಷಿಸು, ಜಗ್ಗು, ಎಳೆ; ತಿರುಹು: ತಿರುಗಿಸು; ಹದಿರು: ಚುಚ್ಚುಮಾತು, ವಿಡಂಬನೆ; ಜೋಕೆ: ಎಚ್ಚರಿಕೆ; ಗಡಣ: ಕೂಡಿಸುವಿಕೆ, ಸಮೂಹ; ಇಭ: ಆನೆ; ಪತಿ: ಒಡೆಯ; ಅವಗಡಿಸು: ಕಡೆಗಣಿಸು, ಸೋಲಿಸು; ನೂಕು: ತಳ್ಳು; ಅಮಮ:ಅಬ್ಬಬ್ಬ; ದಿಕ್ಕು: ದಿಶೆ; ನಡುಗೆ: ಚಲನೆ, ಓಡಾಡು; ಚೌಕ: ಆಯತ; ಕಳ: ರಣರಂಗ; ತುಳಿ: ಮೆಟ್ಟು; ಗಜ: ಆನೆ;

ಪದವಿಂಗಡಣೆ:
ಹಿಡಿವ +ಬಿಡುವ್+ಉಬ್ಬುಳಿಗೆ +ತಹ +ಬಲನ್
ಎಡಕೆ +ಹಾಯ್ಕುವ +ಸುತ್ತಲ್+ಒತ್ತುವ
ತಡೆವ +ನಡಸುವ +ಸೆಳೆವ +ತಿರುಹುವ +ಹದಿರ +ಜೋಕೆಯಲಿ
ಗಡಣಿಸಿದನ್+ಅವನ್+ಇಭಪತಿಯನ್+ಅವ
ಗಡಿಸಿ +ನೂಕಿದೊಡ್+ಅಮಮ +ದಿಕ್ಕರಿ
ನಡುಗೆ +ಚೌಕದ +ಕಳನ +ತುಳಿದುದು +ಸುಪ್ರತೀಕ+ಗಜ

ಅಚ್ಚರಿ:
(೧) ಹಿಡಿವ, ತಡೆವ – ಪ್ರಾಸ ಪದ
(೨) ಗಡಣಿಸಿ, ಅವಗಡಿಸಿ – ಪದಗಳ ಬಳಕೆ

ಪದ್ಯ ೮೧: ಎರಡು ಕಡೆಯ ಆನೆಯ ಸೈನ್ಯವು ಹೇಗೆ ಯುದ್ಧ ಮಾಡಿದವು?

ಮೆಟ್ಟಿ ಸೀಳಿದುಹಾಯ್ಕಿ ದಾಡೆಯ
ಕೊಟ್ಟು ಮೋರೆಯನೊಲೆದು ಹರಿದರೆ
ಯಟ್ಟಿ ಹಿಡಿದಪ್ಪಳಿಸಿ ಜೋದರನಂಘ್ರಿಯಿಂದರೆದು
ಇಟ್ಟು ಕೆಡಹಲು ಹೆಣನ ಲೊಟ್ಟಾ
ಲೊಟ್ಟಿ ಮಸಗಿತು ತುರಗ ನರ ರಥ
ವಿಟ್ಟಣಿಸೆ ಸವರಿದವು ದಂತಿವ್ರಾತವುಭಯದೊಳು (ಭೀಷ್ಮ ಪರ್ವ, ೪ ಸಂಧಿ, ೮೧ ಪದ್ಯ)

ತಾತ್ಪರ್ಯ:
ಶತ್ರು ಸೈನಿಕರನ್ನು ಕಾಲಲ್ಲಿ ತುಳಿದು, ಸೊಂಡಿಲಿನಿಂದ ಸೀಳಿಹಾಕಿ, ದಂತಗಳನ್ನು ಮುಂದೆ ಮಾದಿ, ಮುಖವನ್ನು ಆಚೆ ಈಚೆ ತೂಗಿ ಎದುರಿದ್ದ ಆನೆಯು ಓಡಿಹೋದರೆ, ಅಟ್ಟಿಸಿಕೊಂಡು ಹೋಗಿ, ಯೋಧರನ್ನು ಹಿಡಿದು ಅಪ್ಪಳಿಸಿ ಕೆಡವಲು ಹೆಣಗಳ ತಂಡವೇ ಕಾಣಿಸಿತು. ಆನೆ, ರಥ ಕಾಲಾಳುಗಲನ್ನು ಎರಡು ಸೈನ್ಯಗಳ ಆನೆಗಳೂ ಸವರಿದವು.

ಅರ್ಥ:
ಮೆಟ್ಟು: ತುಳಿ; ಸೀಳು: ಕತ್ತರಿಸು; ಹಾಯ್ಕು: ಹೊಡೆ; ದಾಡೆ:ದವಡೆ, ಒಸಡು; ಕೊಟ್ಟು: ನೀಡು; ಮೋರೆ: ಮುಖ; ಒಲೆ: ತೂಗಾಡು; ಹರಿ: ಸೀಳು; ಅಟ್ಟು: ಹಿಂಬಾಲಿಸು; ಹಿಡಿ: ಬಂಧಿಸು; ಅಪ್ಪಳಿಸು: ತಟ್ಟು, ತಾಗು;
ಜೋದ: ಯೋಧ; ಅಂಘ್ರಿ: ಪಾದ; ಅರೆ: ನುಣ್ಣಗೆ ಮಾಡು; ಇಟ್ಟು: ಇಡು; ಕೆಡಹು: ನಾಶಮಾಡು; ಹೆಣ: ಜೀವವಿಲ್ಲದ ಶರೀರ; ಲೊಟ್ಟಾಲೊಟ್ಟಿ: ಲಟಲಟ ಶಬ್ದ; ಮಸಗು: ಹರಡು; ಕೆರಳು; ತುರಗ: ಕುದರೆ; ನರ: ಮನುಷ್ಯ; ರಥ: ಬಂಡಿ; ಇಟ್ಟಣ: ಹಿಂಸೆ, ಆಘಾತ; ಸವರು: ನಾಶಮಾಡು; ದಂತಿ: ಆನೆ; ವ್ರಾತ: ಗುಂಪು; ಉಭಯ: ಎರಡು;

ಪದವಿಂಗಡಣೆ:
ಮೆಟ್ಟಿ+ ಸೀಳಿದು+ಹಾಯ್ಕಿ +ದಾಡೆಯ
ಕೊಟ್ಟು +ಮೋರೆಯನ್+ಒಲೆದು +ಹರಿದರೆ
ಅಟ್ಟಿ +ಹಿಡಿದಪ್ಪಳಿಸಿ+ ಜೋದರನ್+ಅಂಘ್ರಿಯಿಂದ್+ಅರೆದು
ಇಟ್ಟು+ ಕೆಡಹಲು +ಹೆಣನ +ಲೊಟ್ಟಾ
ಲೊಟ್ಟಿ +ಮಸಗಿತು+ ತುರಗ+ ನರ+ ರಥವ್
ಇಟ್ಟಣಿಸೆ +ಸವರಿದವು +ದಂತಿ+ವ್ರಾತವ್+ಉಭಯದೊಳು

ಅಚ್ಚರಿ:
(೧) ಮೆಟ್ಟು, ಸೀಳು, ಹಾಯ್ಕು, ಒಲೆ, ಹರಿ, ಅಟ್ಟಿ, ಅಪ್ಪಳಿಸಿ, ಇಟ್ಟಣಿಸಿ, ಕೆಡಹು, ಸವರು – ಹೋರಟವನ್ನು ವಿವರಿಸುವ ಪದಗಳು

ಪದ್ಯ ೧೪: ಶಕುನಿ ನಕುಲನನ್ನು ಗೆದ್ದನೆ?

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮ ವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದವನಿಪಗೆ ನುಡಿದ (ಸಭಾ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ಹಠದಿಂದ ತಮ್ಮನನ್ನು ಒಡ್ಡಿದರೆ ನಮಗೇನು ಭಯವಿಲ್ಲ, ಒಂದು ಕೈಯಿ ನೋಡೋಣ, ದಾಳವನ್ನು ಹಾಕು ಎಂದನು. ಪೂರ್ವಜನ್ಮದಲ್ಲಿ ಗಳಿಸಿದ ಮೋಸದಿಂದ ಧರ್ಮವಿನಾಶಮಾಡುವ ರಭಸದಿಂದ ನಕುಲನನ್ನು ಗೆದ್ದು ಆರ್ಭಟಿಸುತ್ತಾ ಹೀಗೆ ಹೇಳಿದನು.

ಅರ್ಥ:
ವಾಸಿ: ಪ್ರತಿಜ್ಞೆ, ಶಪಥ; ಅನುಜ: ತಮ್ಮ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಸರ: ರೀತಿ; ಭಯ: ಅಂಜಿಕೆ; ಐಸಲೇ: ಅಲ್ಲವೇ; ನೃಪ: ರಾಜ; ಹಾಯ್ಕು: ಇಡು, ಇರಿಸು, ಧರಿಸು; ಹಾಸಂಗಿ: ಜೂಜಿನ ದಾಳ; ಪೂರ್ವಾರ್ಜಿತ: ಹಿಂದೆಯೇ ಗಳಿಸಿದ; ಡೊಳ್ಳಾಸ: ಮೋಸ, ಕಪಟ; ಡಾವರಿಸು: ಸುತ್ತು, ತಿರುಗಾಡು; ಧರ್ಮ: ಧಾರಣ ಮಾಡಿದುದು, ನಿಯಮ; ವಿನಾಶ: ಹಾಳು, ಸರ್ವನಾಶ; ಗೆಲಿ: ಗೆಲ್ಲು, ಜಯ; ಬೊಬ್ಬಿರಿ: ಗರ್ಜಿಸು, ಆರ್ಭಟ; ನುಡಿ: ಮಾತಾಡು; ಅವನಿಪ: ರಾಜ;

ಪದವಿಂಗಡಣೆ:
ವಾಸಿಗ್+ಅನುಜನನ್+ಒಡ್ಡಿದರೆ+ ನಮಗ್
ಈಸರಲಿ +ಭಯವೇನು +ನೋಡುವೆವ್
ಐಸಲೇ +ನೃಪ +ಹಾಯ್ಕು +ಹಾಸಂಗಿಗಳ +ಹಾಯ್ಕೆನುತ
ಆ +ಶಕುನಿ +ಪೂರ್ವಾರ್ಜಿತದ +ಡೊ
ಳ್ಳಾಸದಲಿ +ಡಾವರಿಸಿ+ ಧರ್ಮ +ವಿ
ನಾಶಿ +ನಕುಲನ +ಗೆಲಿದು +ಬೊಬ್ಬಿರಿದ್+ಅವನಿಪಗೆ+ ನುಡಿದ

ಅಚ್ಚರಿ:
(೧) ಶಕುನಿಯ ವರ್ಣನೆ – ಪೂರ್ವಾರ್ಜಿತದ ಡೊಳ್ಳಾಸದಲಿ ಡಾವರಿಸಿ ಧರ್ಮ ವಿನಾಶಿ
(೨) ಹ ಕಾರದ ತ್ರಿವಳಿ ಪದ – ಹಾಯ್ಕು ಹಾಸಂಗಿಗಳ ಹಾಯ್ಕೆನುತ