ಪದ್ಯ ೩೫: ಧೃತರಾಷ್ಟ್ರನು ವ್ಯಾಸರ ಸಲಹೆಗೆ ಏನೆಂದು ಉತ್ತರಿಸಿದ?

ಹೈ ಹಸಾದವು ನಿಮ್ಮ ಚಿತ್ತಕೆ
ಬೇಹ ಹದನೇ ಕಾರ್ಯಗತಿ ಸಂ
ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ
ಕಾಹುರರು ಕಲ್ಮಷರು ಬಂಧು
ದ್ರೋಹಿಗಳು ಗತವಾಯ್ತು ನಿಷ್ಪ್ರ
ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ (ಗದಾ ಪರ್ವ, ೧೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ವ್ಯಾಸರಿಗೆ ಉತ್ತರಿಸುತ್ತಾ, ನಿಮ್ಮ ಸಲಹೆಯು ನನಗೆ ಮಹಾಪ್ರಸಾದ, ನಿಮ್ಮ ಮನಸ್ಸಿಗೆ ಬಂದುದನ್ನೇ ನಾನು ನಡೆಸುತ್ತೇನೆ. ಪಾಂಡುವಿನ ಮಕ್ಕಳು ನನ್ನ ಮಕ್ಕಳೇ, ಮನಸ್ಸಿನಲ್ಲಿ ಕೊಳೆಯನ್ನಿಟ್ಟುಕೊಂಡು ದುಡುಕಿ ಬಂಧು ದ್ರೋಹ ಮಾಡಿದವರು ಮಡಿದುಹೋದರು. ಅದನ್ನು ತಪ್ಪಿಸುವುದಾದರೂ ಹೇಗೆ? ಎಂದು ವೇದವ್ಯಾಸರನ್ನು ಧೃತರಾಷ್ಟ್ರ ಕೇಳಿದ.

ಅರ್ಥ:
ಹಸಾದ: ಮಹಾಪ್ರಸಾದ; ಚಿತ್ತ: ಮನಸ್ಸು; ಹದ: ರೀತಿ; ಬೇಹ: ಬಂದುದು; ಕಾರ್ಯ: ಕೆಲಸ; ಗತಿ: ಚಲನೆ, ವೇಗ; ಸಂದೇಹ: ಸಂಶಯ; ಮಕ್ಕಳು: ಪುತ್ರರು; ಕಾಹುರ: ಸೊಕ್ಕು, ಕೋಪ; ಕಲ್ಮಷ: ದುಷ್ಟ; ಬಂಧು: ಸಂಬಂಧಿಕ; ದ್ರೋಹಿ: ದುಷ್ಟ; ಗತ: ಸತ್ತುಹೋದ, ಹಿಂದೆ ಆದುದು; ಪ್ರತ್ಯೂಹ: ಅಡ್ಡಿ, ಅಡಚಣೆ; ಮುನಿ: ಋಷಿ;

ಪದವಿಂಗಡಣೆ:
ಹೈ +ಹಸಾದವು +ನಿಮ್ಮ +ಚಿತ್ತಕೆ
ಬೇಹ +ಹದನೇ +ಕಾರ್ಯಗತಿ +ಸಂ
ದೇಹವೇ +ಪಾಂಡುವಿನ +ಮಕ್ಕಳು +ಮಕ್ಕಳವರ್+ಎಮಗೆ
ಕಾಹುರರು +ಕಲ್ಮಷರು +ಬಂಧು
ದ್ರೋಹಿಗಳು +ಗತವಾಯ್ತು +ನಿಷ್ಪ್ರ
ತ್ಯೂಹವ್+ಇನ್ನೇನವರಿಗೆಂದನು +ಮುನಿಗೆ +ಧೃತರಾಷ್ಟ್ರ

ಅಚ್ಚರಿ:
(೧) ಕೌರವರನ್ನು ದೂಷಿಸಿದ ಪರಿ – ಕಾಹುರರು ಕಲ್ಮಷರು ಬಂಧು ದ್ರೋಹಿಗಳು ಗತವಾಯ್ತು
(೨) ದೇಹ, ಬೇಹ – ಪ್ರಾಸ ಪದ

ಪದ್ಯ ೬೪: ಕೃಷ್ಣನು ಧರ್ಮಜನಿಗೆ ಏನನ್ನು ಬೋಧಿಸಿದನು?

ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಿಟ್ಟನು ಹಸಾದದ ಮಧುರವಚನದಲಿ (ಶಲ್ಯ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನೇ ಕೇಳು, ನಿಮ್ಮ ಸೇನೆಯ ವೀರರ ಸಂಹಾರಕ್ಕೆ ಕೃಷ್ಣಶಕ್ತಿಯ ಸ್ಫುರಣವೇ ಕಾರಣ. ನಿಮ್ಮ ಯುದ್ಧವು ದೈವಹೀನರ ವಿಲಾಸ. ಶ್ರೀಕೃಷ್ಣನು ಯುಧಿಷ್ಠಿರನನ್ನು ಪಕ್ಕಕ್ಕೆ ಕರೆದು ತನ್ನ ಶಕ್ತಿಯ ಪ್ರಯೋಗವನ್ನು ಬೋಧಿಸಿದನು. ಧರ್ಮಜನು ಮಹಾಪ್ರಸಾದ ಎಂದು ಸ್ವೀಕರಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲ್ಸಿಉ; ಶಕ್ತಿ: ಬಲ; ಸ್ಫುರಣ: ನಡುಗುವುದು, ಕಂಪನ; ಐಸಲೆ: ಅಲ್ಲವೆ; ಸಂಹರಣ: ನಾಶ; ಬೀಜ: ಮೂಲವಸ್ತು; ದೈವ: ಅಮರ; ವಿಲಾಸ: ವಿಹಾರ; ಹರಿ: ಕೃಷ್ಣ; ನೃಪ: ರಾಜ; ಎಕ್ಕಟಿ: ಒಬ್ಬಂಟಿಗ, ಏಕಾಕಿ, ಗುಟ್ಟು; ಕರೆ: ಬರೆಮಾಡು; ನಿಜ: ನೈಜ, ದಿಟ; ಶಕ್ತಿ: ಬಲ; ಪ್ರಯೋಗ: ಉಪಯೋಗ, ನಿದರ್ಶನ; ಒರೆ: ಶೋಧಿಸಿ; ಹಸಾದ: ಪ್ರಸಾದ, ಅನುಗ್ರಹ; ಮಧುರ: ಹಿತ; ವಚನ: ನುಡಿ;

ಪದವಿಂಗಡಣೆ:
ಅರಸ +ಕೇಳೈ +ಕೃಷ್ಣ+ಶಕ್ತಿ
ಸ್ಫುರಣವ್+ಐಸಲೆ +ನಿಮ್ಮ +ಬಲ +ಸಂ
ಹರಣಕ್+ಆವುದು +ಬೀಜ +ನಿರ್ದೈವರ +ವಿಲಾಸವಿದು
ಹರಿ +ಯುಧಿಷ್ಠಿರ+ ನೃಪನನ್+ಎಕ್ಕಟಿ
ಕರೆದು +ನಿಜಶಕ್ತಿ+ಪ್ರಯೋಗವನ್
ಒರೆದಡ್+ಒಡಬಿಟ್ಟನು +ಹಸಾದದ +ಮಧುರ+ವಚನದಲಿ

ಅಚ್ಚರಿ:
(೧) ಕೌರವರ ಸೋಲಿನ ಮೂಲ ಕಾರಣ – ನಿಮ್ಮ ಬಲ ಸಂಹರಣಕಾವುದು ಬೀಜ ನಿರ್ದೈವರ ವಿಲಾಸವಿದು

ಪದ್ಯ ೧೩: ಕೃಷ್ಣನು ಯಾವ ಮಾರ್ಗವನ್ನು ಸೂಚಿಸಿದನು?

ದಂಡನಯ ತರುಬಿದರೆ ಗುಣದಲಿ
ಖಂಡಿಸುವುದಿದಿರಾದ ತರುಗಳು
ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು
ಚಂಡಬಲನೀ ಭೀಷ್ಮ ಮುಳಿದರೆ
ಖಂಡಪರಶುವ ಗಣಿಸನೆನೆ ಖರ
ದಂಡನಾಭನ ಮತಕೆ ನೃಪತಿ ಹಸಾದವೆನುತಿರ್ದ (ಭೀಷ್ಮ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಅಸಾಧ್ಯವಾದರೆ ಸಾಮದಿಂದ ಗೆಲ್ಲಬೇಕು, ಪ್ರವಾಹ ಬಂದಾಗ ಅದರ ಭರಕ್ಕೆ ಮರಗಳೂ ಮುರಿದು ಬೀಳುತ್ತವೆ, ಆದರೆ ಗೇಕು ಎಂಬ ಹುಲ್ಲು ಪಕ್ಕಕ್ಕೆ ಬಾಗಿ ಉಳಿದುಕೊಳ್ಳುತ್ತದೆ, ಭೀಷ್ಮನು ಶಿವನನ್ನೂ ಲೆಕ್ಕಕ್ಕಿಟ್ಟಿಲ್ಲ ಎಂದು ಕೃಷ್ಣನು ಹೇಳಲು ಧರ್ಮಜನು ಮಹಾಪ್ರಸಾದ ಎಂದು ಅವನ ಮಾತಿಗೆ ಒಪ್ಪಿದನು.

ಅರ್ಥ:
ದಂಡ: ಶಿಕ್ಷೆ, ದಂಡನೆ, ಸಾಮ, ದಾನ, ಭೇದ ಮತ್ತು ದಂಡಗಳೆಂಬ ರಾಜನೀತಿಯ ನಾಲ್ಕು ಉಪಾಯ ಗಳಲ್ಲೊಂದು; ನಯ: ಶಾಸ್ತ್ರ ರಾಜನೀತಿ, ನುಣುಪು; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಗುಣ: ನಡತೆ; ಖಂಡಿಸು: ಸೀಳು; ಇದಿರು: ಎದುರು; ತರು: ಮರ; ದಿಂಡು: ಕಾಂಡ, ಬೊಡ್ಡೆ; ಕೆಡೆ: ಬಾಗು, ಬೀಳು; ತೊರೆ: ನದಿ, ಹೊಳೆ; ಮಣಿ: ಬಾಗು; ಗೇಕು: ಒಂದು ಬಗೆಯ ಹುಲ್ಲು; ಬದುಕು: ಜೀವಿಸು; ಚಂಡಬಲ: ಪರಾಕ್ರಮಿ; ಮುಳಿ: ಕೋಪ; ಖಂಡಪರಶು: ಶಿವ; ಗಣಿಸು: ಲೆಕ್ಕಿಸು; ಖರ: ವಿಶೇಷವಾಗಿ; ಖರದಂಡನಾಭ: ಹೊಕ್ಕಳಲ್ಲಿ ಕಮಲವನ್ನುಳ್ಳವನು, ಕೃಷ್ಣ; ಮತ: ವಿಚಾರ; ನೃಪ: ರಾಜ; ಹಸಾದ: ಅನುಗ್ರಹ, ದಯೆ;

ಪದವಿಂಗಡಣೆ:
ದಂಡನಯ +ತರುಬಿದರೆ +ಗುಣದಲಿ
ಖಂಡಿಸುವುದ್+ಇದಿರಾದ +ತರುಗಳು
ದಿಂಡುಗೆಡೆವವು+ ತೊರೆಗೆ+ ಮಣಿದರೆ+ ಗೇಕು +ಬದುಕುವುದು
ಚಂಡಬಲನೀ +ಭೀಷ್ಮ +ಮುಳಿದರೆ
ಖಂಡಪರಶುವ +ಗಣಿಸನ್+ಎನೆ +ಖರ
ದಂಡನಾಭನ+ ಮತಕೆ+ ನೃಪತಿ +ಹಸಾದ+ವೆನುತಿರ್ದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತರುಗಳು ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು

ಪದ್ಯ ೩೦: ಧರ್ಮಜನು ಮುಂದೆ ಯಾರ ಬಳಿ ಬಂದನು?

ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜನುಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣಕಮಲದಲಿ (ಭೀಷ್ಮ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಭೀಷ್ಮನ ಮಾತುಗಳನ್ನು ಆಲಿಸಿ, ಮಹಾಪ್ರಸಾದ ವೆಂದು ತಿಳಿದು ಭೀಷ್ಮರಿಂದ ಬೀಳುಕೊಂಡು, ಆತನ ಮಾತನ್ನು ನೆನೆನೆನೆದು ರೋಮಾಂಚನಗೊಂಡನು. ಕೌರವ ಸೈನ್ಯದ ನಡುವೆ ಬರುತ್ತಿರಲು ಕೌರವ ವೀರರು ಅವನನ್ನು ತಡೆಯಲಿಲ್ಲ, ಅವನು ದ್ರೋಣರ ಬಳಿ ಬಂದು ಅವರಿಗೆ ವಂದಿಸಿದನು.

ಅರ್ಥ:
ಹಸಾದ: ಅನುಗ್ರಹ; ನಂದನ: ಮಗ; ಕಳುಹಿಸು: ತೆರಳು; ತನುಜ: ಮಗ; ಉಚಿತ: ಸರಿಯಾದ; ಉಕ್ತಿ: ಮಾತು; ನೆನೆದು: ಜ್ಞಾಪಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಪುಳಕ: ರೋಮಾಂಚನ; ವಿನುತ: ಸ್ತುತಿಗೊಂಡ; ಮತಿ: ಬುದ್ಧಿ; ನಡೆ: ಚಲಿಸು; ಸುಭಟ: ಪರಾಕ್ರಮಿ; ತೊಲಗು: ದೂರ ಸರಿ; ಜನಪ: ರಾಜ; ಮೈಯಿಕ್ಕು: ನಮಸ್ಕರಿಸು; ಚರಣ: ಪಾದ; ಕಮಲ: ಪದ್ಮ;

ಪದವಿಂಗಡಣೆ:
ಎನೆ+ ಹಸಾದವೆನುತ್ತ+ ಯಮ+ನಂ
ದನನು +ಕಳುಹಿಸಿಕೊಂಡು +ಗಂಗಾ
ತನುಜನ್ + ಉಚಿತ+ಉಕ್ತಿಗಳ +ನೆನೆದ್+ಅಡಿಗಡಿಗೆ+ ಪುಳಕಿಸುತ
ವಿನುತ+ಮತಿ +ನಡೆತರಲು+ ಸುಭಟರು
ತನತನಗೆ +ತೊಲಗಿದರು+ ಪಾಂಡವ
ಜನಪ +ಮೈಯಿಕ್ಕಿದನು +ದ್ರೋಣನ +ಚರಣ+ಕಮಲದಲಿ

ಅಚ್ಚರಿ:
(೧) ತನತನಗೆ, ಅಡಿಗದಿ – ಪದಗಳ ಬಳಕೆ
(೨) ನಂದನ, ತನುಜ – ಸಮನಾರ್ಥಕ ಪದ

ಪದ್ಯ ೭೮: ದ್ರೌಪದಿಯು ಸಂತಸಗೊಂಡು ಯಾರ ಮನೆಗೆ ಬಂದಳು?

ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೀಚಕನನ್ನು ನಾಟ್ಯಮಂದಿರಕ್ಕೆ ಬರಲು ಹೇಳಲು, ಆತ ಇದು ಮಹಾಪ್ರಸಾದವೆಂದು ಭಾವಿಸಿ ಆಕೆಗೆ ಕೈಮುಗಿದು ತನ್ನ ಮನೆಗೆ ಹೋದನು. ಸೂರ್ಯನು ಮುಳುಗಿದನು, ದ್ರೌಪದಿಯು ಸಂತೋಷಭರಿತಳಾಗಿ, ಕಗ್ಗತ್ತಲೆಯಲ್ಲಿ ತನ್ನ ಕಣ್ಣ ಬೆಳಕಿನ ಸಹಾಯದಿಂದ ಅಡುಗೆಯ ಮನೆಗೆ ಬಂದಳು.

ಅರ್ಥ:
ಖಳ: ದುಷ್ಟ; ಹಸಾದ: ಪ್ರಸಾದ, ಅನುಗ್ರಹ; ಹಾಯ್ಕಿ: ಬೀಸು, ತೆಗೆ; ನಿಳಯ: ಮನೆ; ಐದು: ಬಂದು ಸೇರು; ಅಬುಜ: ಕಮಲ; ಬಾಂಧವ: ಸಂಬಂಧಿಕ; ಅಬುಜಬಾಂಧವ: ಸೂರ್ಯ, ರವಿ; ಇಳಿ: ಕೆಳಕ್ಕೆ ಹೋಗು; ಅಸ್ತಾಚಲ: ಪಡುವಣದ ಬೆಟ್ಟ; ತಪ್ಪಲು: ಬೆಟ್ಟದ ತಳಭಾಗ; ತಾವರೆ: ಕಮಲ; ಬನ: ಕಡು; ನಳಿನಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ನಲ: ನಲಿವು, ಸಂತೋಷ; ಏರು: ಹೆಚ್ಚಾಗು; ಕಗ್ಗತ್ತಲೆ: ಗಾಡಾಂಧಕಾರ; ಹಬ್ಬುಗೆ: ಹರಡು; ಕಂಗಳು: ಕಣ್ಣು, ನಯನ; ಬೆಳಗು: ಪ್ರಕಾಶ; ಬಟ್ಟೆ: ಹಾದಿ, ಮಾರ್ಗ; ತೋರು: ಗೋಚರಿಸು; ಬಂದು: ಆಗಮಿಸು; ಬಾಣಸಿಗ: ಅಡುಗೆಯವ; ಮನೆ: ಆಲಯ;

ಪದವಿಂಗಡಣೆ:
ಖಳ +ಹಸಾದವ +ಹಾಯ್ಕಿ +ತನ್ನಯ
ನಿಳಯಕ್+ಐದಿದನ್+ಅಬುಜಬಾಂಧವನ್
ಇಳಿದನ್+ಅಸ್ತಾಚಲದ+ ತಪ್ಪಲ +ತಾವರೆಯ +ಬನಕೆ
ನಳಿನಮುಖಿ +ನಲವೇರಿ+ ಕಗ್ಗ
ತ್ತಲೆಯ+ ಹಬ್ಬುಗೆಯೊಳಗೆ+ ಕಂಗಳ
ಬೆಳಗು +ಬಟ್ಟೆಯ +ತೋರೆ +ಬಂದಳು +ಬಾಣಸಿನ +ಮನೆಗೆ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಅಬುಜಬಾಂಧವನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
(೨) ದ್ರೌಪದಿಯ ಕಣ್ಣಿನ ಪ್ರಕಾಶ – ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ

ಪದ್ಯ ೨೩: ಧರ್ಮಜನು ತಮ್ಮಂದಿರ ಸ್ಥಿತಿಯನ್ನರಿಯಲು ಯಾರನ್ನು ಕಳಿಸಿದನು?

ತಡೆದರತ್ತಲು ಮೂವರನುಜರು
ಮಡಿದರೇನೋ ಚಿತ್ರವಾಯಿತು
ನಡೆ ಸಮೀರ ಕುಮಾರ ನೀ ಹೋಗತ್ತ ತಳುವದಿರು
ತಡೆಯದೈತಹುದೆನೆ ಹಸಾದದ
ನುಡಿಯಲವನೈದಿದನು ಹೆಜ್ಜೆಯ
ಹಿಡಿದು ಬಳಿಸಲಿಸಿದನು ಬರೆ ಬರೆ ಕಂಡನದ್ಭುತವ (ಅರಣ್ಯ ಪರ್ವ, ೨೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮೂವರು ತಮ್ಮಂದಿರೂ ಬರಲಿಲ್ಲ ಅಲ್ಲಿಯೇ ಉಳಿದರು, ಇದು ವಿಚಿತ್ರ, ಭೀಮ ನೀನು ಆ ಕಡೆಗೆ ಹೋಗು, ಅಲ್ಲೇ ನಿಲ್ಲದೆ ಬೇಗ ಬಂದು ಬಿಡು ಎಂದು ಧರ್ಮಜನು ಹೇಳಲು, ಭೀಮನು ಮಹಾ ಪ್ರಸಾದವೆಂದು ಹೇಳಿ ತಮ್ಮಂದಿರ ಹೆಜ್ಜೆಗಳನ್ನೇ ಹಿಂಬಾಲಿಸುತ್ತಾ ಬರಲು ಮಹಾದ್ಭುತವನ್ನು ಕಂಡನು.

ಅರ್ಥ:
ತಡೆ: ನಿಲ್ಲಿಸು; ಅನುಜ: ತಮ್ಮ; ಮಡಿ: ಸಾವು; ಚಿತ್ರ: ಚಮತ್ಕಾರ; ನಡೆ: ತೆರಳು; ಸಮೀರ: ವಾಯು; ಕುಮಾರ: ಮಗ; ಹೋಗು: ತೆರಳು; ತಳುವು: ನಿಧಾನಿಸು; ಐತಹುದು: ಬಂದು ಸೇರು; ಹಸಾದ: ಪ್ರಸಾದ, ಅನುಗ್ರಹ, ದಯೆ; ನುಡಿ: ಮಾತು; ಐದು: ಬಂದು ಸೇರು; ಹೆಜ್ಜೆ: ಪಾದ; ಹಿಡಿ: ಗ್ರಹಿಸು; ಬಳಸು: ಹರಡು; ಬರೆ: ಬರುತ್ತಿರಲು; ಅದ್ಭುತ: ಅತ್ಯಾಶ್ಚರ್ಯ;

ಪದವಿಂಗಡಣೆ:
ತಡೆದರ್+ಅತ್ತಲು +ಮೂವರ್+ಅನುಜರು
ಮಡಿದರ್+ಏನೋ +ಚಿತ್ರವಾಯಿತು
ನಡೆ +ಸಮೀರ +ಕುಮಾರ +ನೀ +ಹೋಗ್+ಅತ್ತ +ತಳುವದಿರು
ತಡೆಯದ್+ಐತಹುದ್+ಎನೆ +ಹಸಾದದ
ನುಡಿಯಲ್+ಅವನ್+ಐದಿದನು +ಹೆಜ್ಜೆಯ
ಹಿಡಿದು+ ಬಳಿ+ಸಲಿಸಿದನು +ಬರೆ+ ಬರೆ +ಕಂಡನ್+ಅದ್ಭುತವ

ಅಚ್ಚರಿ:
(೧) ಐತಹುದ್, ಐದು – ಸಾಮ್ಯಾರ್ಥ ಪದ
(೨) ಭೀಮನನ್ನು ಸಮೀರ ಕುಮಾರ ಎಂದು ಕರೆದಿರುವುದು
(೩) ಬರೆ ಪದದ ಬಳಕೆ, ಬೇಗೆ ತೆರಳಿದನೆಂದು ಹೇಳಲು – ಹೆಜ್ಜೆಯ ಹಿಡಿದು ಬಳಿಸಲಿಸಿದನು ಬರೆ ಬರೆ

ಪದ್ಯ ೪೫: ಜಯದ್ರಥನು ಯಾವ ವರವನ್ನು ಕೇಳಿದನು?

ವರದನಾದೈ ಶಂಭು ಕರುಣಾ
ಕರ ಹಸಾದವು ಪಾಂಡು ಸುತರೈ
ವರನು ದಿನವೊಂದರಲಿ ಗೆಲುವುದು ತನಗಭೀಷ್ಟವಿದು
ಕರುಣಿಸೈತನಗೆನಲು ನಕ್ಕನು
ಗಿರಿಸುತೆಯ ಮೊಗ ನೋಡಿ ಭಾರಿಯ
ವರವ ವಿವರಿಸಿದನು ಜಯದ್ರಥನೆಂದನಿಂದುಧರ (ಅರಣ್ಯ ಪರ್ವ, ೨೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಜಯದ್ರಥನು ಕರುಣಾಕರ, ನೀನು ನನಗೆ ವರವನ್ನು ಕೊಡುವೆನೆಂದುದು ನನಗೆ ಮಹಾಪ್ರಸಾದವಾಗಿದೆ, ಐವರು ಪಾಂಡವರನ್ನು ಒಂದೇ ದಿವಸ ಗೆಲ್ಲುವುದು ನನ್ನ ಬಯಕೆ, ಕರುಣಿಸಿ ವರವನ್ನು ನೀಡು ಎಂದು ಕೇಳಲು, ಶಿವನು ನಕ್ಕು ಪಾರ್ವತಿಯ ಕಡೆ ಮುಖವನ್ನು ಮಾಡಿ, ಜಯದ್ರಥನು ಬಹು ದೊಡ್ಡ ವರವನ್ನೇ ಕೇಳಿದ್ದಾನೆ ಎಂದನು.

ಅರ್ಥ:
ವರ: ಅನುಗ್ರಹ, ಕೊಡುಗೆ; ಶಂಭು: ಶಂಕರ; ಕರುಣಾಕರ: ದಯಾಸಾಗರ; ಹಸಾದ: ಪ್ರಸಾದ, ಅನುಗ್ರಹ; ಸುತ: ಮಕ್ಕಳು; ದಿನ: ದಿವಸ, ವಾರ; ಗೆಲುವು: ಜಯ; ಅಭೀಷ್ಟ: ಇಚ್ಛೆ, ಬಯಸು; ಕರುಣಿಸು: ದಯೆತೋರು; ನಕ್ಕು: ಹಸನ್ಮುಖಿ; ಗಿರಿಸುತೆ: ಪಾರ್ವತಿ; ಮೊಗ: ಮುಖ; ನೋಡು: ವೀಕ್ಷಿಸು; ಭಾರಿ: ದೊಡ್ಡ, ತೂಕವಾದ; ವಿವರಿಸು: ವಿಸ್ತಾರವಾಗಿ ಹೇಳು; ಇಂದುಧರ: ಚಂದ್ರವನ್ನು ಧರಿಸಿದವ;

ಪದವಿಂಗಡಣೆ:
ವರದನಾದೈ +ಶಂಭು +ಕರುಣಾ
ಕರ+ ಹಸಾದವು+ ಪಾಂಡು +ಸುತರ್
ಐವರನು +ದಿನವೊಂದರಲಿ+ ಗೆಲುವುದು +ತನಗ್+ಅಭೀಷ್ಟವಿದು
ಕರುಣಿಸೈತನಗೆನಲು +ನಕ್ಕನು
ಗಿರಿಸುತೆಯ+ ಮೊಗ +ನೋಡಿ +ಭಾರಿಯ
ವರವ+ ವಿವರಿಸಿದನು +ಜಯದ್ರಥನೆಂದನ್+ಇಂದುಧರ

ಅಚ್ಚರಿ:
(೧) ಶಂಭು, ಇಂದುಧರ – ಶಿವನನ್ನು ಕರೆದ ಪರಿ

ಪದ್ಯ ೧೦: ಅರ್ಜುನನು ಇಂದ್ರನಿಗೆ ಏನು ಹೇಳಿದ?

ಹೈ ಹಸಾದವು ನಿಮ್ಮ ಕೃಪೆಯವ
ಗಾಹಿಸುವೊಡರಿದೇನು ದೈತ್ಯರು
ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ
ಆ ಹರಾಸ್ತ್ರದೊಳಮರ ವೈರಿ
ವ್ಯೂಹ ಭಂಜನವಹುದು ನಿಷ್ಪ್ರ
ತ್ಯೂಹ ನಿಶ್ಚಯವೆಂದು ಬಿನ್ನವಿಸಿದೆನು ಸುರಪತಿಗೆ (ಅರಣ್ಯ ಪರ್ವ, ೧೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ದೇವತೆಗಳ ಪಾಡನ್ನು ಇಂದ್ರನಿಂದ ಕೇಳಿದ ಅರ್ಜುನನು, ಓಹೋ ಮಹಾ ಪ್ರಸಾದ, ನಿಮ್ಮ ಕೃಪಾದೃಷ್ಟಿಯಿದ್ದರೆ ಏನು ತಾನೇ ಅಸಾಧ್ಯ! ನಿವಾತ ಕವಚರು ಸಾಹಸಿಗಳೇನು? ಆಗಲಿ, ದೇವತೆಗಳಿಗೆ ಹಿತವಾಗುವುದಾದರೆ ಅವರನ್ನು ಬಡಿದು ಹಾಕುತ್ತೇನೆ, ಪಾಶುಪತಾಸ್ತ್ರದಿಂದ ರಾಕ್ಷಸರ ವ್ಯೂಹವನ್ನು ಮುರಿದು ನಿಮಗೆ ಯಾವ ತೊಂದರೆಯೂ ಇಲ್ಲದಂತೆ ಮಾಡುತ್ತೇನೆ ಎಂದು ಅರ್ಜುನನು ದೇವೇಂದ್ರನಿಗೆ ಹೇಳಿದನು.

ಅರ್ಥ:
ಹಸಾದ: ಮಹಾ ಪ್ರಸಾದ; ಕೃಪೆ: ದಯೆ; ಅವಗಾಹಿಸು: ಮಗ್ನವಾಗಿರುವಿಕೆ; ಅರಿ: ಕತ್ತರಿಸು; ದೈತ್ಯ: ರಾಕ್ಷಸ; ಸಾಹಸಿ: ಬಲಶಾಲಿ; ಸದೆ: ಹೊಡಿ; ಸುರಜನ: ದೇವತೆ; ಹಿತ: ಒಳ್ಳೆಯದು; ಹರ: ಶಂಕರ; ಅಸ್ತ್ರ; ಶಸ್ತ್ರ; ಅಮರ: ದೇವತೆ; ವೈರಿ: ರಿಪು, ಶತ್ರು; ವ್ಯೂಹ: ಜಾಲ; ಭಂಜನ: ನಾಶಕಾರಿ; ಪ್ರತ್ಯೂಹ: ಅಡ್ಡಿ, ಅಡಚಣೆ; ನಿಶ್ಚಯ: ನಿರ್ಣಯ; ಬಿನ್ನವಿಸು: ವಿಜ್ಞಾಪಿಸು; ಸುರಪತಿ: ಇಂದ್ರ;

ಪದವಿಂಗಡಣೆ:
ಹೈ+ ಹಸಾದವು+ ನಿಮ್ಮ +ಕೃಪೆ+ಅವ
ಗಾಹಿಸುವೊಡ್+ಅರಿದೇನು+ ದೈತ್ಯರು
ಸಾಹಸಿಗರೇ+ ಸದೆವೆನ್+ಈ+ ಸುರಜನಕೆ +ಹಿತವಹರೆ
ಆ +ಹರಾಸ್ತ್ರದೊಳ್+ಅಮರ +ವೈರಿ
ವ್ಯೂಹ +ಭಂಜನವ್+ಅಹುದು +ನಿಷ್ಪ್ರ
ತ್ಯೂಹ +ನಿಶ್ಚಯವೆಂದು +ಬಿನ್ನವಿಸಿದೆನು +ಸುರಪತಿಗೆ

ಅಚ್ಚರಿ:
(೧) ಅರ್ಜುನನು ಅಭಯವನ್ನು ನೀಡುವ ಪರಿ – ದೈತ್ಯರು ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ

ಪದ್ಯ ೩೫: ಧರ್ಮಜನು ಘಟೋತ್ಕಚನಿಗೆ ಯಾವ ಕಾರ್ಯವನ್ನು ನೀಡಿದನು?

ದುರ್ಗವಿದೆ ನಮ್ಮಂಘ್ರಿಶಕ್ತಿಯ
ಸುಗ್ಗಿ ಬೀತುದು ಸಾಹಸಿಗ ನೀ
ನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ
ಹುಗ್ಗಿಗರ ಹೆಗಲೇರಿಸೊಂದೇ
ಲಗ್ಗೆಯಲಿ ಹಾಯ್ಸೆನೆ ಹಸಾದದ
ಮೊಗ್ಗಗೈಗಳ ದನುಜತಗ್ಗಿದನರಸನಿದಿರಿನಲಿ (ಅರಣ್ಯ ಪರ್ವ, ೧೦ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ಘಟೋತ್ಕಚ ಮುಂದೆ ನಮ್ಮ ಮಾರ್ಗದಲ್ಲಿ ಘೋರ ಕಾಡು ಮತ್ತು ಪರ್ವತವಿದೆ, ಪರ್ವತದ ಮಾರ್ಗದಲ್ಲಿ ಓಡಾಡಿ ನಮ್ಮ ಪಾದಗಳಲ್ಲಿ ಶಕ್ತಿ ಕ್ಷೀಣವಾಗಿ ಹೋಗಿದೆ. ನಿನ್ನ ಪರಿವಾರದವರಾದರೋ ಪರ್ವತಕ್ಕೆ ಸರಿಸಮಾನವಾದ ಪರ್ವತಗಳೋ ಎಂಬಂತಿದ್ದಾರೆ, ಈ ಬ್ರಾಹ್ಮಣರನ್ನು ಹೆಗಲ ಮೇಲೇರಿಸಿ ಎಲ್ಲರನ್ನು ದಾಟಿಸು ಎಂದು ಧರ್ಮಜನು ಹೇಳಲು, ಘಟೋತ್ಕಚನು ಮಹಾಪ್ರಸಾದ ಎಂದು ಹೇಳುತ್ತಾ ಶಿರಬಾಗಿ ನಮಿಸಿದನು.

ಅರ್ಥ:
ದುರ್ಗ: ಕಾಡು, ಅಡವಿ; ಅಂಘ್ರಿ: ಪಾದ; ಶಕ್ತಿ: ಬಲ; ಸುಗ್ಗಿ: ಹೆಚ್ಚಳ; ಬೀತು: ಕಳೆ; ಸಾಹಸಿಗ: ಬಲಶಾಲಿ; ಅಗ್ಗ: ಶ್ರೇಷ್ಠ; ಅರಿ: ತಿಳಿ; ಪಡಿ: ಪ್ರತಿಯಾದುದು, ಬದಲು, ಅಳತೆ; ಗಿರಿ: ಬೆಟ್ಟ; ಹುಗ್ಗಿಗ: ಶ್ರೇಷ್ಠ; ಲಗ್ಗೆ: ಮುತ್ತಿಗೆ, ಆಕ್ರಮಣ; ಹಾಯಿಸು: ಕೊಂಡೊಯ್ಯು; ಹೆಗಲು: ಭುಜ; ಹಸಾದ: ಪ್ರಸಾದ, ಅನುಗ್ರಹ; ಕೈ: ಹಸ್ತ; ಮೊಗ್ಗು: ಮುಡಿಸಿದ, ಅರಳದ; ದನುಜ: ರಾಕ್ಷಸ; ತಗ್ಗು: ಬಾಗು; ಅರಸ: ರಾಜ; ಇದಿರು: ಎದುರು;

ಪದವಿಂಗಡಣೆ:
ದುರ್ಗವಿದೆ+ ನಮ್ಮಂಘ್ರಿ+ಶಕ್ತಿಯ
ಸುಗ್ಗಿ +ಬೀತುದು +ಸಾಹಸಿಗ+ ನೀನ್
ಅಗ್ಗಳೆ+ಅರಿದೆ+ ನಿನ್ನವರು+ ಪಡಿಗಿರಿಗಳ್+ಆ+ ಗಿರಿಗೆ
ಹುಗ್ಗಿಗರ +ಹೆಗಲೇರಿಸ್+ಒಂದೇ
ಲಗ್ಗೆಯಲಿ +ಹಾಯ್ಸೆನೆ +ಹಸಾದದ
ಮೊಗ್ಗ+ಕೈಗಳ+ ದನುಜ+ತಗ್ಗಿದನ್+ಅರಸನ್+ಇದಿರಿನಲಿ

ಅಚ್ಚರಿ:
(೧) ದಣಿವನ್ನು ಸೂಚಿಸುವ ಪರಿ – ನಮ್ಮಂಘ್ರಿಶಕ್ತಿಯ ಸುಗ್ಗಿ ಬೀತುದು
(೨) ಘಟೋತ್ಕಚನ ಗುಂಪನ್ನು ವರ್ಣಿಸುವ ಪರಿ – ಸಾಹಸಿಗ ನೀನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ
(೩) ಹ ಕಾರದ ಪದಗಳ ಬಳಕೆ – ಹುಗ್ಗಿಗರ ಹೆಗಲೇರಿಸೊಂದೇಲಗ್ಗೆಯಲಿ ಹಾಯ್ಸೆನೆ ಹಸಾದದ
(೪) ನಮಸ್ಕಾರವನ್ನು ಸೂಚಿಸುವ ಪರಿ – ಮೊಗ್ಗಗೈಗಳ ದನುಜತಗ್ಗಿದನರಸನಿದಿರಿನಲಿ

ಪದ್ಯ ೯೮: ಚಿತ್ರಸೇನನು ಯಾರ ಮನೆಗೆ ಬಂದನು?

ಇನಿಬರಿರೆ ರಂಭಾದಿ ಸೀಮಂ
ತಿನಿಯರೊಳಗೂರ್ವಶಿಯೊಳಾದುದು
ಮನ ಧನಂಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ
ವನಿತೆಯನು ಕಳುಹೇಳು ನೀನೆಂ
ದೆನೆ ಹಸಾದವೆನುತ್ತ ದೇವಾಂ
ಗನೆಯ ಭವನಕೆ ಬಂದನೀತನು ಹರಿಯ ನೇಮದಲಿ (ಅರಣ್ಯ ಪರ್ವ, ೮ ಸಂಧಿ, ೯೮ ಪದ್ಯ)

ತಾತ್ಪರ್ಯ:
ರಂಭೆ ಮೊದಲಾಗಿ ಇಷ್ಟು ಜನ ಅಪ್ಸರೆಯರಿದ್ದರೂ, ಅರ್ಜುನನಿಗೆ ಊರ್ವಶಿಯಲ್ಲಿ ಮನಸ್ಸು ನೆಟ್ಟಿತು, ಊರ್ವಶಿಯನ್ನು ರೆಪ್ಪೆ ಬಡಿಯದೆ ಒಂದೇ ದೃಷ್ಟಿಯಿಂದ ನೋಡುತ್ತಿದ್ದನು. ಇಂದ್ರನು ಚಿತ್ರಸೇನನಿಗೆ, ನೀನು ಹೋಗಿ ಊರ್ವಶಿಯನ್ನು ಕಳುಹಿಸು, ಎಂದು ಹೇಳಲು, ಚಿತ್ರಸೇನನು ಊರ್ವಶಿಯ ಮನೆಗೆ ಬಂದನು.

ಅರ್ಥ:
ಇನಿಬರು: ಇಷ್ಟುಜನ; ಆದಿ: ಮೊದಲಾದ; ಸೀಮಂತಿನಿ: ಹೆಂಗಸು, ಸ್ತ್ರೀ; ಮನ: ಮನಸ್ಸು; ಈಕ್ಷಿಸು: ನೋಡು; ಅನಿಮೇಷ: ಕಣ್ಣಿನ ರೆಪ್ಪೆ ಬಡಿಯದೆ; ದೃಷ್ಟಿ: ನೋಟ; ವನಿತೆ: ಹೆಂಗಸು; ಕಳುಹೇಳು: ಬರೆಮಾಡು; ಹಸಾದ: ಪ್ರಸಾದ; ದೇವಾಂಗನೆ: ಅಪ್ಸರೆ; ಭವನ: ಆಲಯ; ಬಂದು: ಆಗಮಿಸು; ಹರಿ: ಇಂದ್ರ; ನೇಮ: ಆಜ್ಞೆ;

ಪದವಿಂಗಡಣೆ:
ಇನಿಬರಿರೆ +ರಂಭಾದಿ +ಸೀಮಂ
ತಿನಿಯರೊಳಗ್+ಊರ್ವಶಿಯೊಳ್+ಆದುದು
ಮನ +ಧನಂಜಯನ್+ಈಕ್ಷಿಸಿದನ್+ಅನಿಮೇಷ +ದೃಷ್ಟಿಯಲಿ
ವನಿತೆಯನು +ಕಳುಹೇಳು +ನೀನೆಂದ್
ಎನೆ +ಹಸಾದವೆನುತ್ತ +ದೇವಾಂ
ಗನೆಯ +ಭವನಕೆ+ ಬಂದನ್+ಈತನು+ ಹರಿಯ +ನೇಮದಲಿ

ಅಚ್ಚರಿ:
(೧) ಸೀಮಂತಿನಿ, ವನಿತೆ, ಅಂಗನೆ – ಸಮನಾರ್ಥಕ ಪದ