ಪದ್ಯ ೫೦: ಇಂದ್ರನು ಅರ್ಜುನನನ್ನು ಹೇಗೆ ಸಂತೈಸಿದನು?

ಮಗನನಪ್ಪಿದನೆನ್ನ ತಂದೆಗೆ
ದುಗುಡವೇಕೆನ್ನಾನೆಗೆತ್ತಣ
ಬೆಡಗಿದೆನ್ನರಸಂಗಿದೆತ್ತಣದೆಸೆಯ ದುಮ್ಮಾನ
ಮೊಗದ ತನಿ ಹಳಹಳಿಕೆ ನೇತ್ರಾಂ
ಬುಗಳಲದ್ದುದು ನಿಜಮನೋವೃ
ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆಂದ (ಅರಣ್ಯ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಇಂದ್ರನು ಅರ್ಜುನನನ್ನು ಅಪ್ಪಿಕೊಂಡು, ನನ್ನಪ್ಪನಿಗೇನು ದುಃಖ, ನನ್ನಾನೆಗೆ ಏತರದ ಭಯ, ನನ್ನ ರಾಜನಿಗೆ ಏಕೆ ಬೇಸರ, ನಿನ್ನ ಕಳವಳವು ಕಣ್ಣೀರಾಗಿ ಬರುತ್ತಿದೆ, ನಿನ್ನ ಮನಸ್ಸಿನ ಕಳವಳದಲ್ಲಿ ಮಾತೇ ನಿಂತು ಹೋಗಿದೆ, ಇದೇನು ವಿಚಿತ್ರ ಎಂದು ಕೇಳಿದನು.

ಅರ್ಥ:
ಮಗ: ಸುತ; ಅಪ್ಪು: ಆಲಿಂಗಿಸು, ತಬ್ಬಿಕೊ; ತಂದೆ: ಪಿತ; ದುಗುಡ: ದುಃಖ, ಉಮ್ಮಳ; ಬೆಡಗು: ಅಂದ, ಸೊಬಗು; ಅರಸ: ರಾಜ; ದೆಸೆ: ಗತಿ, ದಿಕ್ಕು; ದುಮ್ಮಾನ: ದುಃಖ; ಮೊಗ: ಮುಖ; ತನಿ: ಹೆಚ್ಚಾಗು; ಹಳಹಳಿಕೆ: ಕಾಂತಿ, ತೇಜಸ್ಸು; ನೇತ್ರ: ಕಣ್ಣು; ಅಂಬು: ನೀರು; ಅದ್ದು: ತೋಯು, ಒದ್ದೆಯಾಗು; ಮನ: ಮನಸ್ಸು; ವೃತ್ತಿ: ಸ್ಥಿತಿ, ನಡತೆ; ನುಡಿ: ಮಾತಾಡು; ಮುಳುಗು: ನೀರಿನಲ್ಲಿ ಮೀಯು; ಚಿತ್ರ: ಆಶ್ಚರ್ಯ, ಚಮತ್ಕಾರ;

ಪದವಿಂಗಡಣೆ:
ಮಗನನ್+ಅಪ್ಪಿದನ್+ಎನ್ನ+ ತಂದೆಗೆ
ದುಗುಡವೇಕ್+ಎನ್+ಆನೆಗ್+ಎತ್ತಣ
ಬೆಡಗಿದ್+ಎನ್+ಅರಸಂಗ್+ಇದೆತ್ತಣ+ದೆಸೆಯ+ ದುಮ್ಮಾನ
ಮೊಗದ +ತನಿ +ಹಳಹಳಿಕೆ +ನೇತ್ರಾಂ
ಬುಗಳಲ್+ಅದ್ದುದು +ನಿಜ+ಮನೋವೃ
ತ್ತಿಗಳೊಳಗೆ+ ನುಡಿ+ ಮುಳುಗಿತೇನಿದು+ ಚಿತ್ರವಾಯ್ತೆಂದ

ಅಚ್ಚರಿ:
(೧) ಎನ್ನ ತಂದೆ, ಎನ್ನಾನೆ, ಎನ್ನರಸ – ಮಗನನ್ನು ಪ್ರೀತಿಯಿಂದ ಕರೆದ ಪರಿ
(೨) ಕಣ್ಣೀರನ್ನು ವಿವರಿಸುವ ಪದ – ನೇತ್ರಾಂಬು
(೩) ದುಗುಡ, ದುಮ್ಮಾನ – ಸಮನಾರ್ಥಕ ಪದ