ಪದ್ಯ ೧೯: ವಿರಾಟನು ಯುಧಿಷ್ಠಿರನಿಗೇಕೆ ಹೊಡೆದನು?

ಎನಲು ಖತಿ ಬಿಗುಹೇರಿ ಹಲುಹಲು
ದಿನುತ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಝರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು (ವಿರಾಟ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕಂಕನು ಹೀಗೆಂದು ಹೇಳಲು, ವಿರಾಟನಿಗೆ ಮಹಾಕೋಪವುಂಟಾಯಿತು. ತನ್ನ ಹಲ್ಲುಕಡಿದು, ಕಣ್ಣಿನಲ್ಲಿ ಉರಿಯುಗುಳುತ್ತಾ, ತುಟಿಯನ್ನು ಕಡಿದು, ಬಂಗಾರದ ಪಗಡೆಯಾಟದ ಕಾಯಿಯಿಂದ ಯುಧಿಷ್ಠಿರನ ಹಣೆಯೊಡೆಯುವಂತೆ ಹೊಡೆಯಲು, ಜಾಜಿಯ ಬೆಟ್ಟದ ನೀರಿನೊರತೆಯಂತೆ ಕೆಂಪಾದ ರಕ್ತದ ಧಾರೆಯು ಹರಿಯಿತು.

ಅರ್ಥ:
ಖತಿ: ಕೋಪ; ಬಿಗುಹೇರು: ಬಿಗಿತ ಹೆಚ್ಚಿ; ಹಲು: ಹಲ್ಲು; ಕಂಗಳು: ನಯನ; ಉರಿ: ಬೆಂಕಿ; ಉಗುಳು: ಹೊರಹಾಕು; ಕನಲು: ಸಿಟ್ಟಿಗೇಳು; ಬಿಗಿ: ಕಟ್ಟು, ಬಂಧಿಸು; ಔಡು: ಹಲ್ಲಿನಿಂದ ಕಚ್ಚು; ಒತ್ತು: ಚುಚ್ಚು; ಕನಕ: ಚಿನ್ನ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ನೆಗಹು: ಮೇಲೆತ್ತು; ಜನಪತಿ: ರಾಜ; ಹಣೆ: ಲಲಾಟ; ಒಡೆ: ಸೀಳು; ಜಾಜಿ: ಕೆಂಪುಬಣ್ಣ, ಮಾಲತಿ ಹೂವು; ಗಿರಿ: ಬೆಟ್ಟ; ನಿರ್ಝರ: ಬೆಟ್ಟದ ಹೊಳೆ; ರುಧಿರ: ರಕ್ತ; ಧಾರೆ: ಝರಿ; ಸಿಡಿ: ಚಿಮ್ಮು; ಶಿರ: ತಲೆ; ಸೆಲೆ: ಶಬ್ದ, ಧ್ವನಿ;

ಪದವಿಂಗಡಣೆ:
ಎನಲು+ ಖತಿ+ ಬಿಗುಹೇರಿ +ಹಲುಹಲು
ದಿನುತ +ಕಂಗಳಲ್+ಉರಿಯನುಗುಳುತ
ಕನಲಿ +ಬಿಗಿದ್+ಔಡೊತ್ತಿ +ಕನಕದ +ಸಾರಿಯನು +ನೆಗಹಿ
ಜನಪತಿಯ +ಹಣೆಯೊಡೆಯಲಿಡೆ +ಜಾ
ಜಿನ +ಗಿರಿಯ +ನಿರ್ಝರದವೊಲು+ ಭೋಂ
ಕೆನಲು +ರುಧಿರದ+ ಧಾರೆ +ಸಿಡಿದುದು +ಶಿರದ +ಸೆಲೆಯೊಡೆದು

ಅಚ್ಚರಿ:
(೧) ರಕ್ತದ ತೀವ್ರತೆಯನ್ನು ಹೇಳುವ ಪರಿ – ಜಾಜಿನ ಗಿರಿಯ ನಿರ್ಝರದವೊಲು ಭೋಂಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು

ಪದ್ಯ ೨೪: ದ್ರೌಪದಿಯು ಬಳಲಿದುದೇಕೆ?

ಹೊಳೆವ ಕಂಗಳ ಕಾಂತಿ ಬಲುಗ
ತ್ತಲೆಯ ಝಳುಪಿಸೆ ಘೋರವಿಪಿನದೊ
ಳಲಿಕುಲಾಳಕಿ ಬಂದಳೊಬ್ಬಳೆ ಮಳೆಗೆ ಕೈ ಯೊಡ್ಡಿ
ಬಲಿದು ಮೈನಡನಡುಗಿ ಹಲುಹಲು
ಹಳಚಿ ನೆನೆದಳು ವಾರಿಯಲಿ ತನು
ಹಳಹಳಿಸೆ ಬಲಲಿದಳು ಚರಣದ ಹೊನಲ ಹೋರಟೆಗೆ (ಅರಣ್ಯ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕಣ್ಣಿನ ಕಾಂತಿಯ ಕವಿದ ಕತ್ತಲನ್ನು ಬೆಳಗು ಮಾಡುತ್ತಿರಲು ಭಯಂಕರವಾದ ಕಾಡಿನಲ್ಲಿ ದ್ರೌಪದಿಯೊಬ್ಬಳೇ ಮಳೆಗೆ ಮರೆಯಾಗಿ ಕೈಯೊಡ್ಡಿ ಬಂದಳು. ಶೀತಕ್ಕೆ ಅವಳ ಮೈ ನಡುಗಿತು, ಹಲ್ಲುಗಳು ಕಟಕಟ ಸದ್ದು ಮಾಡಿದವು. ದೇಹವು ಪ್ರಕಾಶಿಸಿತು, ನೀರಿನ ಪ್ರವಾಹದಲ್ಲಿ ಕಾಲನ್ನೇಳೆಯುತ್ತಾ ಒಬ್ಬಳೇ ಆಯಾಸಗೊಂಡು ಬಂದಳು.

ಅರ್ಥ:
ಹೊಳೆ: ಪ್ರಕಾಶಿಸು, ಕಾಂತಿ; ಕಂಗಳು: ಕಣ್ಣು, ನಯನ; ಕತ್ತಲೆ: ಅಂಧಕಾರ; ಝಳು: ತಾಪ; ಘೋರ: ಉಗ್ರ, ಭಯಂಕರ; ವಿಪಿನ: ಕಾಡು; ಅಲಿಕುಳಾಲಕ: ದುಂಬಿಯಂತೆ ಮುಂಗುರುಗಳುಳ್ಳ; ಬಂದು: ಆಗಮಿಸು; ಮಳೆ: ವರ್ಷ; ಕೈ: ಹಸ್ತ; ಒಡ್ಡು: ನೀಡು; ಬಲಿ: ಹೆಚ್ಚಾಗು; ಮೈ: ತನು; ನಡುಗು: ಅದುರು, ಕಂಪನ; ಹಲು: ಹಲ್ಲು; ಹಳಚು; ಸೇರು, ಪ್ರಕಾಶಿಸು; ನೆನೆ: ಒದ್ದೆಯಾಗು; ವಾರಿ: ಜಲ; ತನು: ದೇಹ; ಹಳಹಳಿಸು: ಪ್ರಕಾಶಿಸು; ಬಳಲು: ಆಯಾಸ; ಚರಣ: ಪಾದ; ಹೊನಲು: ಪ್ರವಾಹ, ನೀರೋಟ; ಹೋರಟೆ: ರಭಸ, ವೇಗ;

ಪದವಿಂಗಡಣೆ:
ಹೊಳೆವ +ಕಂಗಳ +ಕಾಂತಿ +ಬಲು
ಕತ್ತಲೆಯ +ಝಳುಪಿಸೆ +ಘೋರ+ವಿಪಿನದೊಳ್
ಅಲಿಕುಲಾಳಕಿ +ಬಂದಳ್+ಒಬ್ಬಳೆ +ಮಳೆಗೆ +ಕೈ +ಯೊಡ್ಡಿ
ಬಲಿದು +ಮೈ+ನಡನಡುಗಿ+ ಹಲುಹಲು
ಹಳಚಿ +ನೆನೆದಳು +ವಾರಿಯಲಿ +ತನು
ಹಳಹಳಿಸೆ+ ಬಳಲಿದಳು +ಚರಣದ +ಹೊನಲ +ಹೋರಟೆಗೆ

ಅಚ್ಚರಿ:
(೧) ದ್ರೌಪದಿಯನ್ನು ಅಲಿಕುಲಾಳಕಿ ಎಂದು ಕರೆದಿರುವುದು
(೨) ದ್ರೌಪದಿಯನ್ನು ಚಿತ್ರಿಸುವ ಪರಿ – ಬಲಿದು ಮೈನಡನಡುಗಿ ಹಲುಹಲು ಹಳಚಿ ನೆನೆದಳು ವಾರಿಯಲಿ ತನು ಹಳಹಳಿಸೆ ಬಲಲಿದಳು ಚರಣದ ಹೊನಲ ಹೋರಟೆಗೆ
(೩) ಜೋಡಿ ಪದಗಳು – ನಡನಡುಗಿ, ಹಲುಹಲು, ಹಳಹಳಿಸೆ