ಪದ್ಯ ೩೧: ಭೀಮನ ಕೂಗನ್ನು ಕೇಳಿದ ದೈತ್ಯ ಏನೆಂದು ಯೋಚಿಸಿದ?

ಕಂಡು ಖಳ ಬೆರಗಾದನಿವನು
ದ್ದಂಡತನವಚ್ಚರಿಯಲಾ ಹರಿ
ಖಂಡ ಪರಶುಗಳಳುಕುವರು ತನ್ನೊಡನೆ ತೊಡಕುವರೆ
ಬಂಡಿ ತುಂಬಿದ ಕೂಳನಿವನಿಂ
ದುಂಡು ಬದುಕಲಿ ಊರ ಪಾರ್ವರ
ಹಿಂಡುವೆನು ಇವಸಹಿತೆನುತ ಹಲುಮೊರೆದನಮರಾರಿ (ಆದಿ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಭೀಮನ ಜೋರಿನ ಕೂಗು “ಎಲವೋ ಕುನ್ನಿ, ಕೂಳಿದೆ ತಿನ್ನುಬಾ” ಎಂದು ಕೇಳಿದ ಕೂಡಲೆ ಆ ರಾಕ್ಷಸ ಬೆರಗಾದ, ಯಾರು ಈತ? ಇವನ ಉದ್ದಟತನವು ಅಚ್ಚರಿಮೂಡಿಸುವಂತದಾಗಿದೆ, ಹರಿ ಹರ ಮೊದಲಾದವರು ಹೆದರುತ್ತಾರೆ, ಅಂತದರಲ್ಲಿ ಈ ಮಾನವ? ಈ ಬಂಡಿ ತುಂಬಿದ ಕೂಳನ್ನು ಇವನು ತಿಂದು ಬದುಕಲಿ,ಇವನನ್ನು ಮತ್ತು ಈ ಊರಿನ ಹಾರುವರು ಸಹಿತ ಎಲ್ಲರನ್ನೂ ಸಂಹರಿಸುತ್ತೇನೆ, ಎಂದನು.

ಅರ್ಥ:
ಕಂಡು: ನೋಡಿ; ಖಳ: ದುಷ್ಟ; ಬೆರಗಾಗು: ಆಶ್ಚರ್ಯ; ಉದ್ದಂಡ: ಗರ್ವ, ದರ್ಪ; ಅಚ್ಚರಿ: ಬೆರಗು; ಹರಿ: ವಿಷ್ಣು; ಖಂಡ: ಗುಂಪು, ಸಮೂಹ; ಪರಶು: ಕೊಡಲಿ, ಕೊಠಾರಿ;ಅಳುಕು: ಭಯ; ತೊಡಕು: ಸಿಲುಕಿಕೊಳ್ಳು, ಸಿಕ್ಕಾಗು; ಬಂಡಿ: ಗಾಡಿ; ಕೂಳು: ಅನ್ನ,ಆಹಾರ; ಉಂಡು: ತಿಂದು; ಬದುಕು: ಜೀವಿಸು; ಪಾರ್ವ: ಬ್ರಹ್ಮಜ್ಞಾನಿ, ಬ್ರಾಹ್ಮಣ; ಹಿಂಡು: ಹಿಸುಕು, ನುಲಿಚು; ಸಹಿತ: ಜೊತೆ; ಹಲುಮೊರೆ: ಹಲ್ಲನ್ನು ಕಡಿ; ಅಮರ: ದೇವತೆ; ಅರಿ: ವೈರಿ; ಅಮರಾರಿ: ದಾನವ;

ಪದವಿಂಗಡನೆ:
ಕಂಡು +ಖಳ +ಬೆರಗಾದನ್+ಇವನ್+
ಉದ್ದಂಡತನವ್+ಅಚ್ಚರಿಯಲಾ+ ಹರಿ
ಖಂಡ +ಪರಶುಗಳ್+ಅಳುಕುವರು+ ತನ್ನೊಡನೆ+ ತೊಡಕುವರೆ
ಬಂಡಿ +ತುಂಬಿದ +ಕೂಳನ್+ಇವನ್+
ಇಂದ್+ಉಂಡು+ ಬದುಕಲಿ+ ಊರ +ಪಾರ್ವರ
ಹಿಂಡುವೆನು+ ಇವ+ಸಹಿತ್+ಎನುತ +ಹಲುಮೊರೆದನ್+ಅಮರ+ಅರಿ

ಅಚ್ಚರಿ:
(೧) ದಾನವ ಎಂದು ವರ್ಣಿಸಲು ಅಮರಾರಿ ಪದದ ಪ್ರಯೋಗ
(೨) ಖಳ, ಅಮರಾರಿ – ಸಮಾನಾರ್ಥಕ ಪದ, ೧, ೬ ಸಾಲು
(೩) ಕಂಡು, ಉಂಡು, ಹಿಂಡು – ಪ್ರಾಸ ಪದಗಳು, ೧, ೫, ೬ ಸಾಲಿನ ಮೊದಲ ಪದ
(೪) ಬೆರಗು, ಅಚ್ಚರಿ – ಸಮಾನಾರ್ಥಕ ಪದ, ೧, ೨ ಸಾಲು
(೫) ಕೋಪಗೊಂಡ ಎಂದು ವರ್ಣಿಸಲು ಹಲುಮೊರೆದ ಪದದ ಪ್ರಯೋಗ