ಪದ್ಯ ೨೪: ದ್ರೌಪದಿ ಮತ್ತಾರರಲ್ಲಿ ತನ್ನ ವ್ಯಥೆಯನ್ನು ಹೇಳಿಕೊಂಡಳು?

ಮಾವ ನಿಮ್ಮಯ ನೇತ್ರವಂತ
ರ್ಭಾವದಲಿ ಬೆರಸಿದೊಡೆ ವಿಜ್ಞಾ
ನಾವಲಂಬನ ದಿಟ್ಟಿ ಬೆಂದುದೆ ನಿಮ್ಮ ಹೃದಯದಲಿ
ದೇವಿಯರಿಗಿದು ಸೊಗಸಲಾ ಸ
ಖ್ಯಾವಳಿಗೆ ಸೇರುವುದಲಾ ನಿ
ರ್ಜೀವರಾದಿರೆ ನೀವೆನುತ ಹಲುಬಿದಳು ಲಲಿತಾಂಗಿ (ಸಭಾ ಪರ್ವ, ೧೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮಾವ, ನಿಮ್ಮ ಬಾಹಿರ ಕಣ್ಣು ಕುರುಡಿರಬಹುದು ಆದರೆ ನಿಮ್ಮ ಹೃದಯದ ಕಣ್ಣು ಸಹ ಕುರುಡಾಯಿತೇ? ಹೇ ಗಾಂಧಾರೀ ದೇವಿ ನಿಮಗೆ ಈ ನಡೆಯಿಂದ ಸಂತೋಷವಾಯಿತೇ? ಇದು ನಿಮಗೆ ಒಪ್ಪಿಗೆಯೇ? ನೀವು ಬದುಕಿದ್ದೂ ನಿರ್ಜೀವರಾಗಿರುವಿರಲ್ಲಾ, ಎಂದು ದ್ರೌಪದಿಯು ತನ್ನ ಅಳಲನ್ನು ಹೊರಹಾಕಿದಳು.

ಅರ್ಥ:
ಮಾವ: ಗಂಡನ ತಂದೆ; ನೇತ್ರ: ಕಣ್ಣು; ಅಂತರ್ಭಾವ: ಒಳಗೆ, ಆಂತರ್ಯ; ಬೆರಸು: ಸೇರಿಸು; ವಿಜ್ಞಾನ: ಅರಿವು, ತಿಳಿವಳಿಕೆ; ಅವಲಂಬನ: ಆಸರೆ; ದಿಟ್ಟಿ: ಕಣ್ಣು; ಬೆಂದು: ಸುಡು; ಹೃದಯ: ಎದೆ; ದೇವಿ: ಸ್ತ್ರೀಯರನ್ನು ಕರೆಯುವ ಬಗೆ; ಸೊಗಸು: ಚೆಲುವು; ಸಖ್ಯ: ಸ್ನೇಹ; ಆವಳಿ: ಗುಂಪು; ಸೇರು: ಜೊತೆ; ನಿರ್ಜೀವ: ಜೀವವಿಲ್ಲದ; ಹಲುಬು: ಗೋಳಿಡು; ಲಲಿತಾಂಗಿ: ಲತೆಯಂತೆ ದೇಹವುಳ್ಳವಳು, ಸುಂದರಿ;

ಪದವಿಂಗಡಣೆ:
ಮಾವ +ನಿಮ್ಮಯ +ನೇತ್ರವ್+ಅಂತ
ರ್ಭಾವದಲಿ +ಬೆರಸಿದೊಡೆ+ ವಿಜ್ಞಾನ
ಅವಲಂಬನ +ದಿಟ್ಟಿ +ಬೆಂದುದೆ +ನಿಮ್ಮ +ಹೃದಯದಲಿ
ದೇವಿಯರಿಗ್+ಇದು +ಸೊಗಸಲಾ+ ಸ
ಖ್ಯಾವಳಿಗೆ +ಸೇರುವುದಲಾ +ನಿ
ರ್ಜೀವರಾದಿರೆ+ ನೀವೆನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೊಗಸಲಾ ಸಖ್ಯಾವಳಿಗೆ ಸೇರುವುದಲಾ
(೨) ದ್ರೌಪದಿಯ ಪ್ರಶ್ನೆಗಳು – ದಿಟ್ಟಿ ಬೆಂದುದೆ ನಿಮ್ಮ ಹೃದಯದಲಿ; ನಿರ್ಜೀವರಾದಿರೆ ನೀವೆನುತ ಹಲುಬಿದಳು

ಪದ್ಯ ೧೦೭: ದ್ರೌಪದಿ ತನ್ನ ರಕ್ಷಣೆಗಾಗಿ ಮತ್ತೆ ಯಾರನ್ನು ಬೇಡಿದಳು?

ಎಲೆ ವಿಲಾಸಿನಿಯರಿರ ಭೂಪನ
ತಿಳಿಹಿರೌ ತಾಯ್ಗಳಿರ ನೀವಿಂ
ದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ
ತಿಳುಹಿರೌ ಶರಣಾಗತರ ತಾ
ನುಳುಹಿ ಕೊಂಬುದು ಧರ್ಮವಕಟಾ
ಕಲುಹೃದಯರೌ ನೀವೆನುತ ಹಲುಬಿದಳು ತರಳಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೦೭ ಪದ್ಯ)

ತಾತ್ಪರ್ಯ:
ಭೀಷ್ಮಾದಿಗಳಿಂದ ಸಹಾಯ ಹಸ್ತ ದೊರೆಯದ ಕಾರಣ, ದುರ್ಯೋಧನನ ಅಂತಃಪುರದ ಸ್ತ್ರೀಯರಲ್ಲಿ ಮೊರೆಯಿಟ್ಟಳು, ಎಲೆ ವಿಲಾಸಿನಿಯರೇ, ನಿಮ್ಮ ದೊರೆಗೆ ತಿಳಿಸಿ, ನನ್ನನ್ನು ಉಳಿಸಿರಿ, ಆಪ್ತಸಖೀ ಜನರೇ ನನ್ನನ್ನು ನಿಮ್ಮ ತಂಗಿಯಂದೇ ಬಗೆದು ಕೌರವನಿಗೆ ತಿಳಿಸಿರಿ, ಶರಣಾಗತರನ್ನು ಕಾಪಾಡುವುದು ಧರ್ಮಮಾರ್ಗ, ಆದರೆ ನಿಮ್ಮದು ಕಲ್ಲು ಹೃದಯ ಎಂದು ದ್ರೌಪದಿ ಕಣ್ಣೀರಿಟ್ಟಳು.

ಅರ್ಥ:
ವಿಲಾಸಿನಿ: ಒಯ್ಯಾರಿ, ಬೆಡಗಿ; ಭೂಪ: ರಾಜ; ತಿಳಿಹಿ: ತಿಳಿಸಿ, ಹೇಳು; ತಾಯಿ: ಮಾತೆ; ಪಸಾಯ್ತೆ: ಆಪ್ತಸಖಿ; ಸಹೋದರಿ: ತಂಗಿ; ಶರಣು: ಆಶ್ರಯ; ಉಳುಹು: ಕಾಪಾಡು; ಧರ್ಮ: ಧಾರಣೆ ಮಾಡಿದುದು, ನಿಯಮ; ಅಕಟ: ಅಯ್ಯೋ; ಕಲು: ಗಟ್ಟಿ, ಕಲ್ಲು; ಹೃದಯ: ಎದೆ; ಹಲುಬು: ದುಃಖಪಡು; ತರಳಾಕ್ಷಿ: ಚಂಚಲವಾದ ಕಣ್ಣುಳ್ಳವಳು (ದ್ರೌಪದಿ);

ಪದವಿಂಗಡಣೆ:
ಎಲೆ +ವಿಲಾಸಿನಿಯರಿರ+ ಭೂಪನ
ತಿಳಿಹಿರೌ+ ತಾಯ್ಗಳಿರ +ನೀವಿಂ
ದೆಲೆ+ ಪಸಾಯ್ತೆಯರಿರ+ ಸಹೋದರಿಯೆಂದು +ಕೌರವನ
ತಿಳುಹಿರೌ +ಶರಣಾಗತರ+ ತಾನ್
ಉಳುಹಿ +ಕೊಂಬುದು +ಧರ್ಮವ್+ಅಕಟಾ
ಕಲು+ಹೃದಯರೌ+ ನೀವೆನುತ+ ಹಲುಬಿದಳು+ ತರಳಾಕ್ಷಿ

ಅಚ್ಚರಿ:
(೧) ತಂಗಿಯನ್ನಾಗಿ ನೋಡಿ ಎಂದು ಅಳುವ ಪರಿ – ನೀವಿಂದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ ತಿಳುಹಿರೌ

ಪದ್ಯ ೪೩: ಯಾರ್ಯಾರು ಮೂಢರು?

ಒಲಿದವಳ ಬಿಸುಟೊಲ್ಲದವಳಿಗೆ
ಹಲುಬುವವನಹಿತರಲಿ ಸಖ್ಯಾ
ವಳಿಯನೆಸಗುವನರಿಯದುದ ತಾ ಬಲ್ಲೆನೆಂಬುವನು
ಒಲಿದು ಕೇಳದೆ ಹೇಳುವವ ಕೈ
ನಿಲುಕಲರಿಯದ ಕಾರ್ಯದಲಿ ಹಂ
ಬಲಿಸಿ ಮರುಗುವನವನೆ ಮೂಢನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಮೂಢರ ಲಕ್ಷಣವನ್ನು ಇಲ್ಲಿ ವಿದುರ ಹೇಳುತ್ತಾನೆ. ಪ್ರೀತಿಯಿಂದ ಕೈಹಿಡಿದವಳನ್ನು ಬಿಟ್ಟು ಒಲ್ಲದವಳಿಗಾಗಿ ದುಃಖಿಸುವುದು, ಶತ್ರುಗಳ ಸ್ನೇಹ ಮಾಡುವುದು, ಗೊತ್ತಿಲ್ಲದುದನ್ನು ತಿಳಿದಿರುವೆ ಎಂದು ಹೇಳುವವನು, ಕೇಳದೇ ಇದ್ದರು ಹೇಳುವವನು, ಕೈಲಾಗದ ಕೆಲಸವನ್ನು ಮಾಡಬೇಕೆಂದು ಹಂಬಲಿಸಿ ದುಃಖಿಸುವವನು, ಇಂಥವರೆಲ್ಲಾ ಮೂಢರು ಎಂದು ವಿವರಿಸಿದ್ದಾನೆ ವಿದುರ.

ಅರ್ಥ:
ಒಲಿದು: ಪ್ರೀತಿಸು; ಬಿಸುಟ: ಬಿಸಾಡಿದ, ತ್ಯಜಿಸಿದ; ಹಲುಬು: ದುಃಖಪಡು, ಬೇಡಿಕೋ; ಅಹಿತರು: ಕೆಟ್ಟವರು, ಶತ್ರು; ಸಖ್ಯ: ಸ್ನೇಹ; ಆವಳಿ: ಗುಂಪು; ಎಸಗು:ವ್ಯವಹರಿಸು; ಅರಿ: ತಿಳಿ; ಬಲ್ಲೆ: ತಿಳಿದಿರುವೆ; ಕೇಳು: ಪ್ರಶ್ನಿಸು; ಹೇಳು: ಉತ್ತರಿಸು; ನಿಲುಕು: ಎಟುಕು; ಕಾರ್ಯ: ಕೆಲಸ; ಹಂಬಲಿಸು: ಇಚ್ಛಿಸು; ಮರುಗು: ತಳಮಳ, ಸಂಕಟ; ಮೂಢ: ಮೂರ್ಖ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಒಲಿದವಳ +ಬಿಸುಟ್+ಒಲ್ಲದವಳಿಗೆ
ಹಲುಬುವವನ್+ಅಹಿತರಲಿ+ ಸಖ್ಯಾ
ವಳಿಯನ್+ಎಸಗುವನ್+ಅರಿಯದುದ +ತಾ +ಬಲ್ಲೆನೆಂಬುವನು
ಒಲಿದು +ಕೇಳದೆ +ಹೇಳುವವ +ಕೈ
ನಿಲುಕಲರಿಯದ +ಕಾರ್ಯದಲಿ +ಹಂ
ಬಲಿಸಿ +ಮರುಗುವನವನೆ+ ಮೂಢನು+ ರಾಯ +ಕೇಳೆಂದ

ಅಚ್ಚರಿ:
(೧) ಮೂಢರ ೫ ಗುಣಗಳನ್ನು ತಿಳಿಸುವ ಪದ್ಯ
(೨) ಒಲಿ – ೧, ೪ ಸಾಲಿನ ಮೊದಲ ಪದ
(೩) ಕೇಳು, ಹೇಳು – ವಿರುದ್ಧ ಪದ