ಪದ್ಯ ೧೭: ದ್ರೌಪದಿ ಏಕೆ ದುಃಖಿಸಿದಳು?

ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಮಗ್ಗುಲಾಗಿ ಎದ್ದು ತಲೆಗೂದಲಿನ ಮಣ್ಣನ್ನು ಕೊಡುವುತ್ತಾ, ಗಲ್ಲದ ಮೇಲಿನ ರಕ್ತವನ್ನು ಬೆರಳಿನಿಂದ ಮಿಡಿದು ಆ ದುಷ್ಟನು ಒಂದು ಹೆಣ್ಣನ್ನು ಬಡಿಯುತ್ತಿರುವಾಗ, ಆಸ್ಥಾನದಲ್ಲಿರುವ ಹಿರಿಯರಾದ ನೀವು ಒಂದಾದರೂ ಮಾತನಾಡಲಿಲ್ಲವಲ್ಲಾ! ಮೌನ ವ್ರತಕ್ಕೆ ನೀವು ಆರಿಸಿಕೊಂಡ ಹೊತ್ತು ಬಹಳ ಪ್ರಶಸ್ತವಾಗಿದೆ ಎಂದಳು.

ಅರ್ಥ:
ಹೊಡೆ: ಪೆಟ್ಟು; ಮರಳಿ: ಮತ್ತೆ; ಮುರಿ: ಸೀಳು; ಎದ್ದು: ಮೇಲೇಳು; ತುರುಬು: ತಲೆಗೂದಲು; ಹುಡಿ: ಮಣ್ಣು; ಕೊಡವು:ದೂಳನ್ನು ಹೊರಹಾಕು; ಮೊಲೆ: ಸ್ತನ; ಮೇಲುದು: ವಸ್ತ್ರ; ತೊಡಿಸು: ಹೊದ್ದು; ಗಲ್ಲ: ಕೆನ್ನೆ; ರಕುತ: ನೆತ್ತರು; ಬೆರಳು: ಅಂಗುಲಿ; ಮಿಡಿ: ಹೊಮ್ಮಿಸು; ನುಡಿ: ಮಾತು; ಖಳ: ದುಷ್ಟ; ಹೆಂಗುಸು: ಸ್ತ್ರೀ; ಬಡಿ: ಹೊಡೆ; ನೋಡು: ವೀಕ್ಷಿಸು; ಹಿರಿಯ: ದೊಡ್ಡವ; ಹಿಡಿ: ಗ್ರಹಿಸು; ಮೌನ: ಮಾತನಾಡದಿರುವ ಸ್ಥಿತಿ; ಹೊತ್ತು: ಉಂಟಾಗು, ಒದಗು; ಲೇಸು: ಒಳಿತು; ಹಲುಬು: ದುಃಖಪಡು, ಬೇಡು; ಅಬಲೆ: ಹೆಣ್ಣು;

ಪದವಿಂಗಡಣೆ:
ಹೊಡೆ +ಮರಳಿ +ಮುರಿದೆದ್ದು +ತುರುಬಿನ
ಹುಡಿಯ +ಕೊಡಹುತ +ಮೊಲೆಗೆ+ ಮೇಲುದು
ತೊಡಿಸಿ+ ಗಲ್ಲದ +ರಕುತವನು +ಬೆರಲಿಂದ +ಮಿಡಿಮಿಡಿದು
ನುಡಿಯಲಾಗದೆ+ ಖಳನು +ಹೆಂಗುಸ
ಬಡಿಯೆ+ ನೋಡುತ್ತಿಹರೆ+ ಹಿರಿಯರು
ಹಿಡಿದ +ಮೌನವ +ಹೊತ್ತು +ಲೇಸೆಂದ್+ಅಬಲೆ +ಹಲುಬಿದಳು

ಅಚ್ಚರಿ:
(೧) ದ್ರೌಪದಿಯು ಸಭೆಯನ್ನು ಬಯ್ದ ಪರಿ – ಹಿರಿಯರು ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು