ಪದ್ಯ ೨೮: ಬಲರಾಮನ ಎದುರು ಯಾರು ನಿಂತರು?

ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜನ ಯಮಳರ ಚಿತ್ರವಿಭ್ರಮವ
ಬಲಿಮಥನನೀಕ್ಷಿಸುತ ರಜತಾ
ಚಲವ ತರುಬುವ ನೀಲ ಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ (ಗದಾ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಬಲರಾಮನ ಉದ್ರೇಕವನ್ನೂ ಪಾಂಡವರು ಭಯಭೀತರಾದುದನ್ನೂ, ಪಾಂಡವರ ಮನಸ್ಸಿನ ಅಳುಕನ್ನೂ ಶ್ರೀಕೃಷ್ಣನು ನೋಡಿ, ರಜತಗಿರಿಯನ್ನು ಅಡ್ಡಗಟ್ಟು ನಿಲ್ಲುವ ನೀಲಗಿರಿಯಂತೆ ಬಲರಾಮನೆದುರಿಗೆ ಬಂದು ಅಳುಕದೆ ಅವನ ಬಲಗೈಯನ್ನು ಹಿಡಿದನು.

ಅರ್ಥ:
ಹಲಧರ: ಬಲರಾಮ; ಹಲ: ನೇಗಿಲು; ಮಸಕ: ಆಧಿಕ್ಯ, ಹೆಚ್ಚಳ; ಬಲ: ಸೈನ್ಯ; ಚೇಷ್ಟೆ:ವರ್ತನೆ, ನಡವಳಿಕೆ; ವಿಭ್ರಮ: ಭ್ರಮೆ, ಭ್ರಾಂತಿ; ಬಲಿಮಥನ: ಬಲಿ ಚಕ್ರವರ್ತಿಯನ್ನು ನಾಶ ಮಾಡಿದವ (ಕೃಷ್ಣ); ಈಕ್ಷಿಸು: ನೋಡು; ರಜತಾಚಲ: ಹಿಮಾಲಯ; ರಜತ: ಬೆಳ್ಳಿ; ಅಚಲ: ಬೆಟ್ಟ; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಗಿರಿ: ಬೆಟ್ಟ; ಅಳುಕು: ಹೆದರು; ಇದಿರು: ಎದುರು; ನಿಂದು: ನಿಲ್ಲು; ಹಿಡಿ: ಗ್ರಹಿಸು; ಬಲಗಯ್ಯ: ಬಲಕೈ;

ಪದವಿಂಗಡಣೆ:
ಹಲಧರನ +ಮಸಕವನು +ಪಾಂಡವ
ಬಲದ +ದುಶ್ಚೇಷ್ಟೆಯನು +ಭೀಮನ
ಫಲುಗುಣನ +ಧರ್ಮಜನ +ಯಮಳರ +ಚಿತ್ರ+ವಿಭ್ರಮವ
ಬಲಿಮಥನನ್+ಈಕ್ಷಿಸುತ +ರಜತಾ
ಚಲವ +ತರುಬುವ +ನೀಲ +ಗಿರಿಯವೊಲ್
ಅಳುಕದ್+ಇದಿರಲಿ +ನಿಂದು +ಹಿಡಿದನು +ಬಲನ +ಬಲಗಯ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಜತಾಚಲವ ತರುಬುವ ನೀಲ ಗಿರಿಯವೊಲಳುಕದಿದಿರಲಿ ನಿಂದು
(೨) ಕೃಷ್ಣನನ್ನು ಬಲಿಮಥನ ಎಂದು ಕರೆದಿರುವುದು
(೩) ಗಿರಿ, ಅಚಲ – ಸಮಾನಾರ್ಥಕ ಪದ

ಪದ್ಯ ೨೭: ಧರ್ಮಜನೇಕೆ ಭಯಗೊಂಡನು?

ಹಲಧರನ ಖತಿ ಬಲುಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು (ಗದಾ ಪರ್ವ, ೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮಜನು, ಬಲರಾಮನ ಕೋಪ ಹಿರಿದಾಗಿದೆ. ಇದಿರು ಬಿದ್ದರೆ ನಮಗೆ ಹಾನಿ ತಪ್ಪುವುದಿಲ್ಲ. ನಾವು ಹೆದ್ದು ಸೋತರೆ ಚೌಚಿತ್ಯವೇನು? ಇದು ಅಂತರಂಗದ ಪೆಟ್ಟು. ಶ್ರೀಕೃಷ್ಣನಿಗೆ ಇದು ತಿಳಿದಿದೆಯೇ? ಅವನೇಕೆ ಸುಮ್ಮನಿದ್ದಾನೆ, ನಾವು ನಾಶವಾಗುವ ಸ್ಥಿತಿಯಲ್ಲಿದ್ದೇವೆ ಎಂದು ಧರ್ಮಜನು ಭಯಗೊಂಡನು.

ಅರ್ಥ:
ಹಲಧರ: ನೇಗಿಲನ್ನು ಹಿಡಿದವ (ಬಲರಾಮ); ಖತಿ: ಕೋಪ; ಬಲುಹು: ಹೆಚ್ಚು, ಅಧಿಕ; ಕದನ: ಯುದ್ಧ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಹಾನಿ: ನಾಶ; ಗೆಲುವು: ಜಯ; ಸೋಲು: ಪರಾಭವ; ಔಚಿತ್ಯ: ಯೋಗ್ಯವಾದುದು; ಬಿದ್ದ: ಬೀಳು, ಎರಗು; ವಿಘಾತಿ: ಆಪತ್ತು; ಮುರರಿಪು: ಕೃಷ್ಣ; ತಿಳಿ: ಗೊತ್ತುಪಡಿಸು; ತವಕಿಸು: ಕಾತುರಿಸು, ಕುತೂಹಲ ಪಡು; ಅಳಿ: ನಾಶ; ನಡುಗು: ಕಂಪಿಸು, ಹೆದರು; ಸೂನು: ಮಗ;

ಪದವಿಂಗಡಣೆ:
ಹಲಧರನ +ಖತಿ +ಬಲುಹು +ಕದನಕೆ
ಮಲೆತನಾದಡೆ +ಹಾನಿ +ತಪ್ಪದು
ಗೆಲವಿನಲಿ +ಸೋಲದಲಿ +ತಾನ್+ಔಚಿತ್ಯವೇನ್+ಇದಕೆ
ಒಳಗೆ +ಬಿದ್ದ+ ವಿಘಾತಿ +ಮುರರಿಪು
ತಿಳಿವನೋ +ತವಕಿಸುವನೋ +ನಾವ್
ಅಳಿದೆವ್+ಇನ್ನೇನೆನುತ+ ನಡುಗಿದನ್+ಅಂದು +ಯಮಸೂನು

ಅಚ್ಚರಿ:
(೧) ಗೆಲುವು, ಸೋಲು – ವಿರುದ್ಧ ಪದಗಳು
(೨) ಧರ್ಮಜನು ಹೆದರಿದ ಪರಿ – ನಾವಳಿದೆವಿನ್ನೇನೆನುತ ನಡುಗಿದನಂದು ಯಮಸೂನು

ಪದ್ಯ ೫: ಭೀಮ ದುರ್ಯೊಧನರ ಗದಾಯುದ್ಧವನ್ನು ಯಾರು ಹೇಗೆ ಹೊಗಳಿದರು?

ಬೆರಳ ತೂಗಿದನಡಿಗಡಿಗೆ ಹಲ
ಧರನುದಗ್ರ ಗದಾ ವಿಧಾನಕೆ
ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು
ವರ ಗದಾಯುಧ ವಿವಿಧ ಸತ್ವಕೆ
ಪರಮಜೀವವಿದೆಂದನರ್ಜುನ
ನರರೆ ಮಝರೇ ರಾವು ಜಾಗೆಂದುದು ಭಟವ್ರಾತ (ಗದಾ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಬಲರಾಮನು ಅವರಿಬ್ಬರ ಗದಾಯುದ್ಧದ ವಿಧಾನವನ್ನು ನೋಡಿ, ಮೆಚ್ಚಿ, ಅವರಿಟ್ಟ ಒಂದೊಂದು ಹೆಜ್ಜೆಗೂ ಬೆರಳನ್ನು ತೂಗಿದನು. ಶ್ರೀಕೃಷ್ಣನು ಸಹ ಮೆಚ್ಚಿ ತಲೆಯಾಡಿಸಿದನು. ಯುಧಿಷ್ಠಿರನು ಅತಿಶಯವಾಗಿ ಮೆಚ್ಚಿದನು. ಅರ್ಜುನನು ಗದಾಯುದ್ಧದ ಹಲವು ವಿಧದ ರೀತಿಗಳಿಗೆ ಇದು ಭೂಷಣವೆಂದು ಹೊಗಳಿದನು. ಪರಿವಾರದ ಯೋಧರು ಅರರೇ, ಭಲೇ, ರಾವು, ಜಾಗು ಎಂದು ಕೊಂಡಾಡಿದರು.

ಅರ್ಥ:
ಬೆರಳು: ಅಂಗುಲಿ; ತೂಗು: ಅಲ್ಲಾಡಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಹಲಧರ: ಬಲರಾಮ; ಉದಗ್ರ: ವೀರ, ಶೂರ; ಗದೆ: ಮುದ್ಗರ; ವಿಧಾನ: ರೀತಿ; ಶಿರ: ತಲೆ; ಒಲೆ: ತೂಗಾಡು; ಶೌರಿ: ಕೃಷ್ಣ; ಮಿಗೆ: ಮತ್ತು, ಅಧಿಕ; ಮೆಚ್ಚು: ಇಷ್ಟಪಡು; ಸೂನು: ಮಗ; ವರ: ಶ್ರೇಷ್ಠ; ವಿವಿಧ: ಹಲವಾರು; ಸತ್ವ: ಸಾರ; ಪರಮ: ಶ್ರೇಷ್ಠ; ಜೀವ: ಪ್ರಾಣ; ಅರರೆ: ಆಶ್ಚರ್ಯ ಸೂಚಕ ಪದ; ಮಝ: ಭಲೇ; ರಾವು: ದಿಗ್ಭ್ರಮೆ; ಜಾಗು:ಹೊಗಳಿಕೆ ಮಾತು; ಭಟ: ಸೈನಿಕ; ವ್ರಾತ: ಗುಂಪು;

ಪದವಿಂಗಡಣೆ:
ಬೆರಳ +ತೂಗಿದನ್+ಅಡಿಗಡಿಗೆ +ಹಲ
ಧರನ್+ಉದಗ್ರ+ ಗದಾ +ವಿಧಾನಕೆ
ಶಿರವನ್+ಒಲೆದನು +ಶೌರಿ +ಮಿಗೆ +ಮೆಚ್ಚಿದನು +ಯಮಸೂನು
ವರ +ಗದಾಯುಧ +ವಿವಿಧ +ಸತ್ವಕೆ
ಪರಮ+ಜೀವವಿದ್+ಎಂದನ್+ಅರ್ಜುನನ್
ಅರರೆ +ಮಝರೇ +ರಾವು +ಜಾಗೆಂದುದು +ಭಟ+ವ್ರಾತ

ಅಚ್ಚರಿ:
(೧) ಮೆಚ್ಚುಗೆಯ ಮಾತುಗಳು – ಅರರೆ, ಮಝರೇ, ರಾವು, ಜಾಗು
(೨) ತೂಗು, ಒಲೆದು – ಸಾಮ್ಯಾರ್ಥ ಪದ
(೩) ಒಂದೇ ಪದವಾಗಿ ರಚನೆ – ಪರಮಜೀವವಿದೆಂದನರ್ಜುನ

ಪದ್ಯ ೭: ಜನಮೇಜಯ ರಾಜನಿಗೆ ಯಾವ ಪ್ರಶ್ನೆ ಕಾಡಿತು?

ಎಲೆಮುನೀಶ್ವರ ಪೂರ್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ (ಗದಾ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಆಗ ಜನಮೇಜಯನು ವೈಶಂಪಾಯನ ಮುನೀಶ್ವರನೇ, ಈ ಹಿಂದೆ ಯಾದವ ಬಲವನ್ನು ಭಾಗಮಾಡಿದಾಗ ಪಾಂಡವರ ಕಡೆಗೆ ಶ್ರೀಕೃಷ್ಣನೂ ಸಾತ್ಯಕಿಯೂ ಬಂದರು. ಕೌರವನ ಕಡೆಗೆ ಬಲರಾಮನೂ, ಕೃತವರ್ಮನೂ ಹೋದರು. ಹೀಗಿದ್ದು ಬಲರಾಮನು ಕೌರವನ ಕಡೆಗೆ ನಿಂತು ಯುದ್ಧವನ್ನು ಮಾಡಲಿಲ್ಲವೇಕೆ ಎಂದು ಕೇಳಿದನು.

ಅರ್ಥ:
ಮುನಿ: ಋಷಿ; ಪೂರ್ವ: ಹಿಂದೆ; ಬಲ: ಸೈನ್ಯ, ಶಕ್ತಿ; ವಿಭಾಗ: ಪಾಲು; ದೆಸೆ: ದಿಕ್ಕು; ಹಲಧರ: ಬಲರಾಮ; ಅಸುರಾರಿ: ಕೃಷ್ಣ; ಬಳಿಕ: ನಂತರ; ಹಸುಗೆ: ವಿಭಾಗ; ಸ್ಖಲಿತ: ಜಾರಿಬಿದ್ದ; ಬಿಡು: ತೊರೆ; ನುಡಿ: ಮಾತಾಡು;

ಪದವಿಂಗಡಣೆ:
ಎಲೆ+ಮುನೀಶ್ವರ+ ಪೂರ್ವದಲಿ +ಯದು
ಬಲ +ವಿಭಾಗದಲ್+ಇವರ +ದೆಸೆಯಲಿ
ಹಲಧರನು +ಕೃತವರ್ಮನ್+ಆ+ ಪಾಂಡವರಿಗ್+ಅಸುರಾರಿ
ಬಳಿಕ +ಸಾತ್ಯಕಿ+ ಈ+ ಹಸುಗೆಯ
ಸ್ಖಲಿತವ್+ಇದರಲಿ +ರಾಮನ್+ಈ+ ಕುರು
ಬಲವ +ಬಿಟ್ಟನದೇಕ್+ಎನುತ +ಜನಮೇಜಯನು +ನುಡಿದ

ಅಚ್ಚರಿ:
(೧) ಕೃಷ್ಣನನ್ನು ಅಸುರಾರಿ, ಬಲರಾಮನನ್ನು ಹಲಧರ, ರಾಮ ಎಂದು ಕರೆದಿರುವುದು

ಪದ್ಯ ೧: ಬಲರಾಮನಿಗೆ ಯಾರು ನಮಸ್ಕರಿಸಿದರು?

ಕೇಳು ಧೃತರಾಷ್ಟ್ರವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ಧರ್ಮಜನೇ ಮೊದಲಾದ ರಾಜರು ಶ್ರೀಕೃಷ್ಣನೊಡನೆ ಬಲರಾಮನಿಗೆ ವಂದಿಸಿ ಕಾಣಿಕೆಯನ್ನು ನೀಡಿದರು. ದುರ್ಯೋಧನನ ಅಪಾರ ದುಃಖವು ಅವನ ಕಣ್ಣಿನ ಕೊನೆಯಲ್ಲಿ ತುಂಬಿದ ನೀರಿನಿಂದ ಹೊರಹೊಮ್ಮುತ್ತಿತ್ತು. ಬಗಲಿನಲ್ಲಿ ಗದೆಯನ್ನಿಟ್ಟುಕೊಂಡು ಅವನು ಬಲರಾಮನ ಪಾದಗಳಿಗೆ ಹಣೆಯನ್ನು ಚಾಚಿದನು.

ಅರ್ಥ:
ಅವನಿಪ: ರಾಜ; ಸಿರಿಲೋಲ: ಲಕ್ಷ್ಮಿಯ ಪ್ರಿಯಕರ (ಕೃಷ್ಣ); ಸಹಿತ: ಜೊತೆ; ಆದಿ: ಮುಂತಾದ; ನೃಪಾಲ: ರಾಜ; ಕಾಣಿಕೆ: ಉಡುಗೊರೆ; ನಮಿಸು: ಎರಗು; ಹಲಧರ: ಹಲವನ್ನು ಹಿಡಿದವ (ಬಲರಾಮ); ದುಗುಡ: ದುಃಖ; ಮೇಲುದುಗುಡ: ತುಂಬಾ ದುಃಖ; ಮುಖ: ಆನನ; ನೀರು: ಜಲ; ಒರೆವಾಲಿ: ಕಣ್ಣಿನ ಕೊನೆ; ಕಕ್ಷ: ಕಂಕಳು; ಗದೆ: ಮುದ್ಗರ; ಭೂಪಾಲ: ರಾಜ; ಬಂದು: ಆಗಮಿಸು; ನೊಸಲ: ಹಣೆ; ಚಾಚು: ಹರಡು; ಚರಣ: ಪಾದ;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ +ಅವನಿಪ +ಸಿರಿ
ಲೋಲ +ಸಹಿತ +ಯುಧಿಷ್ಠಿರಾದಿ+ ನೃ
ಪಾಲಕರು+ ಕಾಣಿಕೆಯನಿತ್ತರು+ ನಮಿಸಿ+ ಹಲಧರಗೆ
ಮೇಲು+ದುಗುಡದ +ಮುಖದ +ನೀರ್+ಒರೆ
ವಾಲಿಗಳ +ಕಕ್ಷದ+ ಗದೆಯ +ಭೂ
ಪಾಲ +ಬಂದನು +ನೊಸಲ +ಚಾಚಿದನವರ +ಚರಣದಲಿ

ಅಚ್ಚರಿ:
(೧) ಅವನಿಪ, ಭೂಪಾಲ, ನೃಪಾಲ – ಸಮಾನಾರ್ಥಕ ಪದ
(೨) ದುಃಖವನ್ನು ವಿವರಿಸುವ ಪರಿ – ಮೇಲುದುಗುಡದ ಮುಖದ ನೀರೊರೆವಾಲಿಗಳ

ಪದ್ಯ ೨೯: ಕೃಷ್ಣ ವಿಶ್ವರೂಪದಲ್ಲಿ ಮತ್ತಾರು ತೋರಿದರು?

ಬಲದ ಭುಜದಲಿ ಪಾರ್ಥನೆಡದಲಿ
ಹಲಧರನು ಚರಣದಲಿ ಧರ್ಮಜ
ಕಲಿವೃಕೋದರ ನಕುಲ ಸಹದೇವಾದಿ ಯಾದವರು
ಲಲಿತ ಕಾಂತಿಯೊಳಖಿಳತಾರಾ
ವಳಿಗಳಮಳ ಗ್ರಹವಿರಲು ತೊಳ
ತೊಳಗಿ ಮೆರೆದನು ವಿಶ್ವರೂಪ ವಿಹಾರಿ ಮುರವೈರಿ (ಉದ್ಯೋಗ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣನ ವಿಶ್ವರೂಪದ ಬಲಭಾಗದಲ್ಲಿ ಅರ್ಜುನನು, ಎಡಭಾಗದಲ್ಲಿ ಬಲರಾಮ, ಪಾದಗಳಲ್ಲಿ ಯುಧಿಷ್ಥಿರ, ಭೀಮ, ನಕುಲ, ಸಹದೇವ ಮತ್ತು ಯಾದವರಿದ್ದರು; ಸುಂದರ ಕಾಂತಿಯಿಂದ ರಂಜಿಸುವ ಸಮಸ್ತ ನಕ್ಷತ್ರಗಳು ಮತ್ತು ಗ್ರಹಗಳು ಇರುತ್ತಿರಲು, ಶ್ರೀಕೃಷ್ಣನು ವಿಶ್ವರೂಪನಾಗಿ ವಿಹರಿಸಿ ಥಳಥಳನೆ ಪ್ರಕಾಶಿಸುತ್ತಿದ್ದನು.

ಅರ್ಥ:
ಬಲ: ಪಾರ್ಶ್ವ; ಭುಜ: ತೋಳು, ಬಾಹು; ಎಡ: ವಾಮ; ಹಲಧರ: ಬಲರಾಮ; ಚರಣ: ಪಾದ; ಧರ್ಮಜ: ಯುಧಿಷ್ಠಿರ; ಕಲಿ: ಶೂರ; ವೃಕ: ತೋಳ; ಉದರ: ಹೊಟ್ಟೆ; ವೃಕೋದರ: ತೋಳದ ಹೊಟ್ಟೆಹೊಂದಿರುವ (ಭೀಮ); ಆದಿ: ಮುಂತಾದ; ಲಲಿತ: ಚೆಲುವು; ಕಾಂತಿ: ಪ್ರಕಾಶ; ಅಖಿಳ: ಎಲ್ಲಾ; ತಾರ: ನಕ್ಷತ್ರ; ಆವಳಿ: ಗುಂಪು; ಅಮಳ:ಜೋಡಿ; ಗ್ರಹ: ಆಕಾಶಚರಗಳು; ತೊಳ: ಹೊಳೆ; ಮೆರೆ: ಪ್ರಕಾರವಾಗಿ, ತೋರು; ವಿಹಾರ: ಕಾಲ ಕಳೆಯುವುದು; ಮುರವೈರಿ: ಕೃಷ್ಣ; ವೈರಿ: ಶತ್ರು;

ಪದವಿಂಗಡಣೆ:
ಬಲದ +ಭುಜದಲಿ +ಪಾರ್ಥನ್+ಎಡದಲಿ
ಹಲಧರನು+ ಚರಣದಲಿ+ ಧರ್ಮಜ
ಕಲಿ+ವೃಕೋದರ +ನಕುಲ +ಸಹದೇವಾದಿ+ ಯಾದವರು
ಲಲಿತ+ ಕಾಂತಿಯೊಳ್+ಅಖಿಳ+ತಾರಾ
ವಳಿಗಳ್+ಅಮಳ +ಗ್ರಹವಿರಲು +ತೊಳ
ತೊಳಗಿ +ಮೆರೆದನು +ವಿಶ್ವರೂಪ +ವಿಹಾರಿ +ಮುರವೈರಿ

ಅಚ್ಚರಿ:
(೧) ‘ವ’ ಕಾರದ ಜೋಡಿ ಪದ – ವಿಶ್ವರೂಪ ವಿಹಾರಿ; ‘ಬ’ಕಾರ: ಬಲದ ಭುಜದಲಿ;
(೨) ಬಲ, ಎಡ – ವಿರುದ್ಧಪದ
(೩) ತೊಳತೊಳ – ಜೋಡಿ ಪದದ ಬಳಕೆ

ಪದ್ಯ ೪೨: ಅರ್ಜುನನನ್ನು ಕೊಲ್ಲಲು ಬಲರಾಮ ಯಾರ ಮೇಲೆ ಆಣೆ ಮಾಡಿದನು?

ಮುಸುಕಿದನು ನಾರಾಚದಲಿ ನಿ
ಪ್ಪಸರದಲಿ ಹಲಧರನ ಸೇನೆಯ
ಕುಸುರಿದರಿದನು ಕೊಂದನಗಣಿತ ಬಲವನಾ ಪಾರ್ಥ
ಎಸೆವನೇ ಸಂನ್ಯಾಸಿ ಮಾಡಿದ
ಹುಸಿಯುಪನ್ಯಾಸಕ್ಕೆ ಕೊಯ್ವೆನು
ರಸನೆಯನು ದೇವಕಿಯ ಮೇಲಾಣೆನುತ ಗರ್ಜಿಸಿದ (ಆದಿ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಬಾಣಗಳ ಹೊದಿಕೆಯಿಂದ ಬಹಳಷ್ಟು ಬಲರಾಮನ ಸೈನಿಕರನ್ನು ಕೊಚ್ಚಿಹಾಕಿದನು, ಇದಕ್ಕೆ ಕೋಪಗೊಂಡ ಬಲರಾಮ, ಈ ಸಂನ್ಯಾಸಿಗೆ ಇಂತಹ ಪರಾಕ್ರಮವೆ? ಇವನು ಮಾಡಿದ ಸುಳ್ಳಿನ ಉಪನ್ಯಾಸಕ್ಕೆ ಮರುಳಾದೆ, ಇಂತಹ ಹುಸಿಯನ್ನಾಡಿದ ನಾಲಿಗೆಯನ್ನು ತಾಯಿ ದೇವಕಿಯ ಮೇಲಾಣೆ ಕೊಯ್ಯುತ್ತೇನೆ ಎಂದು ಗರ್ಜಿಸಿದನು.

ಅರ್ಥ:
ಮುಸುಕು: ಹೊದಿಕೆ; ನಾರಾಚ: ಬಾಣ;ನಿಪ್ಪಸರ:ಅತಿಶಯ, ಹೆಚ್ಚಳ; ಹಲಧರ: ಬಲರಾಮ; ಸೇನೆ: ಸೈನ್ಯ; ಕುಸುರು:ಕೊಚ್ಚು, ಚೂರುಮಾಡು; ಕೊಂದನು: ಸಾಯಿಸಿದನು; ಅಗಣಿತ: ಬಹಳ; ಬಲವ: ಸೈನಿಕರು; ಎಸೆ: ಬಿಸಾಡು, ಬಿಡು; ಸಂನ್ಯಾಸಿ: ಋಷಿ, ಯೋಗಿ; ಹುಸಿ: ಸುಳ್ಳು; ಉಪನ್ಯಾಸ:ಬೋಧನೆ; ಕೊಯ್ವೆನು: ಸೀಳು; ರಸನೆ:ನಾಲಿಗೆ, ಜಿಹ್ವೆ; ಆಣೆ: ಪ್ರತಿಜ್ಞೆ; ಗರ್ಜಿಸು: ಕೂಗು;

ಪದವಿಂಗಡಣೆ:
ಮುಸುಕಿದನು +ನಾರಾಚದಲಿ+ ನಿ
ಪ್ಪಸರದಲಿ +ಹಲಧರನ+ ಸೇನೆಯ
ಕುಸುರಿದ್+ಅರಿದನು +ಕೊಂದನ್+ಅಗಣಿತ+ ಬಲವನಾ +ಪಾರ್ಥ
ಎಸೆವನೇ +ಸಂನ್ಯಾಸಿ +ಮಾಡಿದ
ಹುಸಿ +ಉಪನ್ಯಾಸಕ್ಕೆ +ಕೊಯ್ವೆನು
ರಸನೆಯನು +ದೇವಕಿಯ +ಮೇಲಾಣ್+ಎನುತ +ಗರ್ಜಿಸಿದ

ಅಚ್ಚರಿ:
(೧) ಮುಸುಕು, ಕುಸುರು, ಅರಿದನು, ಕೊಯ್ವೆನು – ಕೊಚ್ಚು, ಕೊಲ್ಲು ಅರ್ಥ ಕೊಡುವ ಪದ
(೨) ಸೇನೆ, ಬಲವನು – ಸೈನಿಕರನ್ನು ಸೂಚಿಸುವ ಪದ

ಪದ್ಯ ೨೭: ಬಲರಾಮನು ಆಸನದಿಂದ ಇಳಿದುದನ್ನು ಕಂಡ ಕೃಷ್ಣನು ಏನೆಂದು ಹೇಳಿದನು?

ಹಲಧರನ ಮಸಕವನು ಕಂಡನು
ನಳಿನನಾಭನಿದೇನು ಪೀಠವ
ನಿಳಿದಿರೆಲ್ಲಿಗೆ ಗಮನವಾವುದು ಕಾರ್ಯಗತಿ ನಿಮಗೆ
ತಿಳುಹಿಯೆನೆ ಬೇರೇನು ಯಂತ್ರವ
ಕಳಚಿ ಬಿಸುಟು ಲತಾಂಗಿಯನು ಹಿಡಿ
ದೆಳೆದು ತಹೆನೆನಲೈಸಲೇ ಕೇಳೆಂದನಸುರಾರಿ (ಆದಿ ಪರ್ವ, ೧೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಬಲರಾಮನು ರಭಸದಿಂದ ಪೀಠದಿಂದ ಇಳಿದುದನ್ನು ಕಂಡ ಕೃಷ್ಣನು, ಇದೇನು ಅಣ್ಣ ಪೀಠವನಿಳಿದು ಯಾವ ಕಾರ್ಯಕ್ಕೋಸ್ಕರ ಎಲ್ಲಿಗೆ ಹೊರಟಿರುವೆ ಎಂದು ಕೇಳಲು, ಬಲರಾಮನು, ನಿನಗೆ ತಿಳಿಯದೇನು, ಬೇರೇನು ಕೆಲಸ ಈ ಯಂತ್ರವನ್ನು ಸೀಳಿ ಬಿಸಾಕಿ ದ್ರೌಪದಿಯನ್ನು ಹಿಡಿದೆಳೆದು ತರತ್ತೇನೆ ಎಂದು ಹೇಳಲು ಕೃಷ್ಣನು ಅಷ್ಟೆತಾನೆ ಎಂದನು.

ಅರ್ಥ:
ಹಲ: ನೇಗಿಲು; ಹಲಧರ: ಬಲರಾಮ; ಮಸಕ: ರಭಸ, ವೇಗ; ನಳಿನ: ಕಮಲ; ನಳಿನನಾಭ: ಕೃಷ್ಣ; ಪೀಠ: ಆಸನ; ಗಮನ:ನಡೆಯುವುದು, ನಡಗೆ; ಕಾರ್ಯ: ಕೆಲಸ; ಗತಿ: ವೇಗ; ತಿಳುಹಿ: ತಿಳಿಯದೆ; ಯಂತ್ರ: ಉಪಕರಣ; ಕಳಚಿ: ಬೇರ್ಪಡಿಸಿ; ಬಿಸುಟು: ಬಿಸಾಕಿ; ಲತಾಂಗಿ: ಚೆಲುವೆ; ತಹ: ತರಲು; ಅಸುರಾರಿ: ಕೃಷ್ಣ (ಅಸುರರ ವೈರಿ); ಐಸಲೆ: ಅಷ್ಟೆ;

ಪದವಿಂಗಡಣೆ:
ಹಲಧರನ +ಮಸಕವನು+ ಕಂಡನು
ನಳಿನನಾಭನ್+ಇದೇನು +ಪೀಠವನ್
ಇಳಿದಿರ್+ಎಲ್ಲಿಗೆ+ ಗಮನವ್+ಆವುದು +ಕಾರ್ಯಗತಿ+ ನಿಮಗೆ
ತಿಳುಹಿಯೆನೆ +ಬೇರೇನು+ ಯಂತ್ರವ
ಕಳಚಿ +ಬಿಸುಟು +ಲತಾಂಗಿಯನು +ಹಿಡಿ
ದೆಳೆದು+ ತಹೆನ್+ಎನಲ್+ಐಸಲೇ +ಕೇಳೆಂದನ್+ಅಸುರಾರಿ

ಅಚ್ಚರಿ:
(೧) ನಳಿನನಾಭ, ಅಸುರಾರಿ – ಕೃಷ್ಣನ ಹೆಸರುಗಳು
(೨) ಕೃಷ್ಣನ ಪ್ರಶ್ನೆ: ಇದೇನು ಪೀಠವ ನಿಳಿದಿರೆಲ್ಲಿಗೆ ಗಮನವಾವುದು ಕಾರ್ಯಗತಿ ನಿಮಗೆ?
ಬಲರಾಮನ ಉತ್ತರ: ಯಂತ್ರವ ಕಳಚಿ ಬಿಸುಟು ಲತಾಂಗಿಯನು ಹಿಡಿದೆಳೆದು ತಹೆನ್