ಪದ್ಯ ೬೯: ಕೃಷ್ಣ ಶಿಶುಪಾಲರ ಕಾಳಗವನ್ನು ಯಾರು ನೋಡುತ್ತಿದ್ದರು?

ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರ್ಷಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುತಿರ್ದುದು ಸಮರ ಸಂಭ್ರಮವ (ಸಭಾ ಪರ್ವ, ೧೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಶಿಶುಪಾಲನ ಜೊತೆಯಲ್ಲಿದ್ದ ಭಂಡ ಜನರು ಶ್ರೀಕೃಷ್ಣನು ಸೋತ ಎಂಬ ಭಂಡತನದ ಮಾತನ್ನಾಡಿದರು. ಯಾದವ ಸೈನ್ಯವು ಇಬ್ಬರ ಕಾಳಗವನ್ನು ಸಂತೋಷದ ವೀಕ್ಷಿಸುತ್ತಿತ್ತು. ಶಿಶುಪಾಲನು ಹಿಂದೆ ಭೂಮಿಯಲ್ಲಿ ಪ್ರಸಿದ್ಧನಾದ ರಾವಣನಾಗಿದ್ದವ, ಇವನ ಕಾಳಗವನ್ನು ನೋಡೋಣ ಎಂದು ಆಕಾಶದಲ್ಲಿ ದೇವತೆಗಳು ವಿಮಾನದಲ್ಲಿ ಕುಳಿತು ನೋಡುತ್ತಿದ್ದರು.

ಅರ್ಥ:
ಸೋತು: ಪರಾಭವ; ಹರಿ: ಕೃಷ್ಣ; ಚೈದ್ಯ: ಶಿಶುಪಾಲ; ಬೂತು:ಭಂಡ; ಬಣ್ಣಿಸು: ವರ್ಣಿಸು; ನಿರ್ಭೀತ: ಭಯವಿಲ್ಲದ; ಸೈನ್ಯ: ಪಡೆ; ಹರ್ಷ: ಸಂತೋಷ; ಕೇಳಿ: ವಿನೋದ, ಕ್ರೀಡೆ; ಮುನ್ನ: ಹಿಂದೆ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಅಮರ: ದೇವತೆ; ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ವ್ರಾತ: ಗುಂಪು; ನೆರೆ: ಜೊತೆಗೂಡು; ನೋಡು: ವೀಕ್ಷಿಸು; ಸಮರ: ಯುದ್ಧ; ಸಂಭ್ರಮ: ಉತ್ಸಾಹ, ಸಡಗರ;

ಪದವಿಂಗಡಣೆ:
ಸೋತನೈ +ಹರಿಯೆಂದು +ಚೈದ್ಯನ
ಬೂತುಗಳು+ ಬಣ್ಣಿಸಿದರ್+ಈ+ ನಿ
ರ್ಭೀತ +ಯಾದವ +ಸೈನ್ಯವಿದ್ದುದು +ಹರ್ಷ+ಕೇಳಿಯಲಿ
ಈತ+ ರಾವಣ+ ಮುನ್ನ +ಭುವನ
ಖ್ಯಾತನೆಂದ್+ಅಮರರು +ವಿಮಾನ
ವ್ರಾತದಲಿ +ನೆರೆ +ನೋಡುತಿರ್ದುದು +ಸಮರ +ಸಂಭ್ರಮವ

ಅಚ್ಚರಿ:
(೧) ಜೋಡಿ ಪದಗಳಾಕ್ಷರ – ವಿಮಾನ ವ್ರಾತದಲಿ; ನೆರೆ ನೋಡುತಿರ್ದುದು; ಸಮರ ಸಂಭ್ರಮವ