ಪದ್ಯ ೧೦೦: ಅರ್ಜುನನ ಮನದಮೇಲೆ ಯಾರು ದಾಳಿ ಮಾಡಿದರು?

ಜಗವುಘೇಯೆಂದುದು ಜಯಧ್ವನಿ
ಗಗನದಲಿ ಗಾಢಿಸಿತು ಹೂವಿನ
ಮುಗುಳ ಸರಿವಳೆ ಸುರಿದುದೀಶ್ವರನಂಘ್ರಿಕಮಲದಲಿ
ಢಗೆಯತಳಿ ಮುರಿದುದು ಮನೋರಥ
ದಗಳು ತುಂಬಿತು ನರನ ಮನ ಬು
ದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ (ಅರಣ್ಯ ಪರ್ವ, ೭ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಈ ಅಮೋಘ ಯೋಗವನ್ನು ಕಂಡು ಜಗತ್ತು ಉಘೇ ಉಘೇ ಎಂದು ಜಯಘೋಷವನ್ನು ಕೂಗಿತು, ಜಯಧ್ವನಿಯು ಆಗಸದಲ್ಲಿ ಮೊಳಗಿತು, ಹೂಮೊಗ್ಗುಗಳ ಮಳೆ ಶಿವನ ಪಾದಕಮಲಗಳ ಮೇಲೆ ಬಿದ್ದವು. ಅರ್ಜುನನ ಆಯಾಸ ಹಾರಿಹೋಯಿತು, ಅವನ ಮನೋರಥದ ಅಗಳು ತುಂಬಿತು, ಹರ್ಷೋತ್ಸವಗಳು ಅರ್ಜುನನ ಮನಸ್ಸು ಬುದ್ಧಿಗಳನ್ನು ತುಂಬಿದವು.

ಅರ್ಥ:
ಜಗವು: ಪ್ರಪಂಚ; ಉಘೇ: ಜಯ; ಧ್ವನಿ: ಶಬ್ದ, ರವ; ಗಗನ: ಆಗಸ; ಗಾಢಿಸು: ಮೊಳಗು, ತುಂಬಿಕೊಳ್ಳು; ಹೂವು: ಪುಷ್ಪ; ಮುಗುಳ: ಮೂಡು, ಮೊಳೆ; ಸರಿವಳೆ: ಸುರಿ; ಈಶ್ವರ: ಶಂಕರ; ಅಂಘ್ರಿ: ಪಾದ; ಕಮಲ: ಪದ್ಮ; ಢಗೆ: ಕಾವು, ದಗೆ; ಮುರಿ: ಸೀಳು, ಬಿರುಕು; ಮನೋರಥ: ಇಚ್ಛೆ, ಆಸೆ; ಅಗಳು: ಕೋಟೆಯ ಕಂದಕ; ತುಂಬು: ಪೂರ್ಣಗೊಳ್ಳು; ನರ: ಅರ್ಜುನ; ಮನ: ಮನಸ್ಸು, ಚಿತ್ತ; ಬುದ್ಧಿ: ತಿಳಿವು, ಅರಿವು; ನೆರೆ: ಸಮೀಪ; ಸಿಲುಕು: ಬಂಧನಕ್ಕೊಳಗಾದುದು; ಹರುಷ: ಸಂತಸ; ಉತ್ಸವ: ಹಬ್ಬ; ದಾಳಿ: ಆಕ್ರಮಣ, ಮುತ್ತಿಗೆ;

ಪದವಿಂಗಡಣೆ:
ಜಗುವ್+ ಉಘೇಯೆಂದುದು+ ಜಯಧ್ವನಿ
ಗಗನದಲಿ+ ಗಾಢಿಸಿತು+ ಹೂವಿನ
ಮುಗುಳ +ಸರಿವಳೆ+ ಸುರಿದುದ್+ಈಶ್ವರನ್+ಅಂಘ್ರಿ+ಕಮಲದಲಿ
ಢಗೆಯತಳಿ+ ಮುರಿದುದು +ಮನೋರಥದ್
ಅಗಳು +ತುಂಬಿತು +ನರನ +ಮನ +ಬು
ದ್ಧಿಗಳು+ ನೆರೆ +ಸಿಲುಕಿತ್ತು+ ಹರುಷೋತ್ಸವದ+ ದಾಳಿಯಲಿ

ಅಚ್ಚರಿ:
(೧) ಜಯ, ಉಘೇ – ಸಮನಾರ್ಥಕ ಪದ
(೨) ಮನೋರಥ ಈಡೇರಿರುವುದನ್ನು ವಿವರಿಸುವ ಪರಿ – ನರನ ಮನ ಬುದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ