ಪದ್ಯ ೯೬: ಇಂದ್ರನ ಓಲಗವು ಹೇಗೆ ಮುಕ್ತಾಯಗೊಂಡಿತು?

ಪಾರುಖಾಣೆಯನಿತ್ತನಾ ಜಂ
ಭಾರಿಯೂರ್ವಶಿ ರಂಭೆ ಮೇನಕೆ
ಗೌರಿಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ (ಅರಣ್ಯ ಪರ್ವ, ೮ ಸಂಧಿ, ೯೬ ಪದ್ಯ)

ತಾತ್ಪರ್ಯ:
ಇಂದ್ರನು ಊರ್ವಶಿ ರಂಭೆ, ಮೇನಕೆ, ಗೌರಿ ಮೊದಲಾದ ಅಪ್ಸರೆಯರಿಗೆ ಬಹುಮಾನವನ್ನು ಕೊಟ್ಟನು. ಅಪ್ಸರೆಯರೂ, ಸಮಸ್ತ ದೇವತೆಗಳೂ ತಮ್ಮ ತಮ್ಮ ಮನೆಗಳಿಗೆ ಹೋದರು. ಓಲಗ ಮುಗಿಯಿತು. ಸಾಲು ದೀಪಗಳನ್ನು ಹಚ್ಚಿದರು. ಆರತಿಯ ಹರಿವಾಣಗಳ ಸಾಲು ಸುಳಿಯಿತು.

ಅರ್ಥ:
ಪಾರುಖಾಣೆ: ಬಹು ಮಾನ, ಉಡುಗೊರೆ; ಜಂಭ: ತಾರಕಾಸುರನ ಪ್ರಧಾನಿ; ಜಂಭಾರಿ: ಇಂದ್ರ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಪಾತ್ರ: ಅರ್ಹನಾದವನು; ಪರಮ: ಅತೀವ; ಹರುಷ: ಸಂತಸ; ನಾರಿ: ಸ್ತ್ರೀ; ನಿಖಿಳ: ಎಲ್ಲಾ; ಅಮರ: ದೇವತೆ; ಬೀಡಾರ: ತಂಗುವ ಸ್ಥಳ, ವಸತಿ; ಐದು: ಬಂದು ಸೇರು; ಹರೆದು: ತೀರಿತು; ಓಲಗ: ದರ್ಬಾರು; ಆರತಿ: ನೀರಾಜನ; ಹರಿವಣ: ತಟ್ಟೆ; ಸುಳಿ: ಕಾಣಿಸಿಕೊಳ್ಳು; ಸಾಲು: ಆವಳಿ; ಸೊಡರು: ದೀಪ;

ಪದವಿಂಗಡಣೆ:
ಪಾರುಖಾಣೆಯನಿತ್ತನಾ +ಜಂ
ಭಾರಿ+ಊರ್ವಶಿ +ರಂಭೆ +ಮೇನಕೆ
ಗೌರಿ+ಮೊದಲಾದ್+ಅಖಿಳ +ಪಾತ್ರಕೆ +ಪರಮ +ಹರುಷದಲಿ
ನಾರಿಯರು +ನಿಖಿಳ+ಅಮರರು+ ಬೀ
ಡಾರಕ್+ಐದಿತು +ಹರೆದುದ್+ಓಲಗವ್
ಆರತಿಯ +ಹರಿವಾಣ+ ಸುಳಿದುದು +ಸಾಲು +ಸೊಡರುಗಳ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುಳಿದುದು ಸಾಲು ಸೊಡರುಗಳ

ಪದ್ಯ ೨೬: ಅರ್ಜುನನು ಕರ್ಣನಿಗೆ ಹೇಗೆ ಉತ್ತರಿಸಿದನು?

ಕಾಣಿಸಿದನೈ ಕೌರವನ ಹರಿ
ವಾಣದಾಯದ ಹಂತಿಕಾರನು
ಕಾಣಿಕೊಂಕನು ನಮ್ಮ ಚರಿತಕೆ ಹಾ ಮಹಾದೇವ
ಜಾಣತನವೊಳ್ಳೆಯದು ಧರ್ಮಜ
ನಾಣೆ ಬಲ್ಲೆನು ದಿಟವೆನುತ ಬಲು
ಸಾಣೆಯಲಗಿನ ಸರಿಯ ಸುರಿದನು ಸವರಿ ರಿಪುಶರವ (ಕರ್ಣ ಪರ್ವ, ೨೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭಲೇ ನಮ್ಮ ನಡತೆಯನ್ನು ಕೌರವನೊಡನೆ ಪಂಕ್ತಿಯಲ್ಲಿ ಕುಳಿತು ಹರಿವಾಣದಲ್ಲುಂಡ ಇವನು ಕೊಂಕನ್ನು ಹೊರಿಸಿದನಲ್ಲಾ! ಶಿವ ಶಿವಾ. ನಿನ್ನ ಜಾಣತನವನ್ನು ಮೆಚ್ಚಬೇಕು. ಧರ್ಮಜನಾಣೆ ನೀನು ಹೇಳಿದುದನ್ನು ಬಲ್ಲೆ, ಎನ್ನುತ್ತಾ ಅರ್ಜುನನು ಶತ್ರು ಶರಗಳನ್ನು ಕಡಿದು, ಸಾಣೆಯಲ್ಲಿ ಮೊನೆಮಾಡಿದ ಬಾಣಗಳನ್ನು ಸುರಿದನು.

ಅರ್ಥ:
ಕಾಣಿಸು: ತೋರು, ಗೋಚರಗೊಳ್ಳು; ಹರಿವಾಣ: ನೈವೇದ್ಯ, ಎಡೆ; ಹಂತಿ: ಪಂಕ್ತಿ, ಸಾಲು; ಕಾಣಿಕೊಂಕ: ಸ್ವಲ್ಪವೂ ಹಿಂಜರಿಯುವುದಿಲ್ಲ; ಚರಿತ: ಗತಿ, ನಡಿಗೆ, ಇತಿಹಾಸ; ಮಹಾದೇವ: ಶಿವ; ಜಾಣ: ಬುದ್ಧಿವಂತ; ಒಳ್ಳೆಯದು: ಸರಿಯಾದುದು; ಆಣೆ: ಪ್ರಮಾಣ; ಬಲ್ಲೆ: ತಿಳಿದಿರುವೆ; ದಿಟ: ಸತ್ಯ; ಬಲು: ತುಂಬ, ಬಹಳ; ಸಾಣೆ: ಆಯುಧವನ್ನು ಹರಿತಗೊಳಿಸಲು ಮಸೆಯುವ ಕಲ್ಲು, ಉಜ್ಜುವ ಕಲ್ಲು; ಅಲಗು: ಆಯುಧಗಳ ಹರಿತವಾದ ಅಂಚು, ಬಾಣ; ಸರಿ: ಯೋಗ್ಯವಾದುದು; ಸುರಿ: ವರ್ಷಿಸು; ಸವರು: ನಾಶಮಾಡು; ರಿಪುಶರ: ವೈರಿಯ ಬಾಣ;

ಪದವಿಂಗಡಣೆ:
ಕಾಣಿಸಿದನೈ +ಕೌರವನ +ಹರಿ
ವಾಣದಾಯದ +ಹಂತಿಕಾರನು
ಕಾಣಿಕೊಂಕನು +ನಮ್ಮ +ಚರಿತಕೆ+ ಹಾ +ಮಹಾದೇವ
ಜಾಣತನವ್+ಒಳ್ಳೆಯದು +ಧರ್ಮಜನ್
ಆಣೆ +ಬಲ್ಲೆನು +ದಿಟವೆನುತ+ ಬಲು
ಸಾಣೆ+ಅಲಗಿನ +ಸರಿಯ +ಸುರಿದನು +ಸವರಿ +ರಿಪುಶರವ

ಅಚ್ಚರಿ:
(೧) ಸ ಕಾರದ ಸಾಲು ಪದ – ಸಾಣೆಯಲಗಿನ ಸರಿಯ ಸುರಿದನು ಸವರಿ