ಪದ್ಯ ೨೮: ಅರ್ಜುನನು ತನ್ನನ್ನು ಹೇಗೆ ಸಮರ್ಥಿಸಿಕೊಂಡನು?

ಹೇಳಲಂಜುವೆನಾ ಸುಶರ್ಮಕ
ನಾಳು ತಾಯಿಗೆ ಮಕ್ಕಳಾಗದೆ
ಬೀಳಹೊಯ್ದು ನಿಹಾರದಲಿ ತಿರುಗಿದೆನು ಹರಿಸಹಿತ
ಕೋಲಗುರುವಿನ ಮಗನಲೇ ಹರಿ
ಧಾಳಿ ಹರಿದಡಿಗಟ್ಟಿ ತಡೆದನು
ಹೇಳಿ ಫಲವಿನ್ನೇನೆನುತ ಬಿಸುಸುಯ್ದ ನಾ ಪಾರ್ಥ (ಕರ್ಣ ಪರ್ವ, ೧೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ತನ್ನನ್ನು ಹೀಗೆ ಹಂಗಿಸಿದ ಧರ್ಮಜನಿಗೆ ಅರ್ಜುನನು, ಎಲೈ ರಾಜನೇ ನಿಮಗೆ ಹೇಳಲು ಅಂಜುತ್ತೇನೆ, ಸುಶರ್ಮನ ಸೈನ್ಯದಲ್ಲಿ ತಾಯಿಗೆ ಮಕ್ಕಳ ಮೇಲೆ ವಾತ್ಸಲ್ಯ ಹಾರಿಹೋಗುವಂತೆ ಮಾಡಿ, ಬೀಳುವಂತೆ ಹೊಡೆದು ಆಗ ಉಂಟಾದ ಧೂಳಿನ ನಡುವೆ ಶ್ರೀಕೃಷ್ಣನೊಡನೆ ಹಿಂದಿರುಗಿದೆ. ಅಷ್ಟರಲ್ಲಿ ಅಶ್ವತ್ಥಾಮನು ಧಾಳಿಯಿಟ್ಟು ಅಡ್ಡಗಟ್ಟಿ ನನ್ನನ್ನು ತಡೆದನು, ಇನ್ನೇನೆಂದು ನಾನು ಹೇಳಲಿ ಎಂದು ನಿಟ್ಟುಸಿರು ಬಿಟ್ಟನು.

ಅರ್ಥ:
ಹೇಳು: ತಿಳಿಸು; ಅಂಜು: ಹೆದರು; ತಾಯಿ: ಮಾತೆ; ಮಕ್ಕಳು: ಸುತ; ಬೀಳು: ತ್ಯಜಿಸು; ಹೊಯ್ದು: ಹೊರಡು; ನಿಹಾರ: ಧೂಳು, ಮಂಜು; ತಿರುಗು: ಓಡಾಡು; ಹರಿ: ಕೃಷ್ಣ; ಸಹಿತ: ಜೊತೆ; ಕೋಲಗುರು: ಬಾಣದ ಆಚಾರ್ಯ; ಮಗ: ಸುತ; ಹರಿ: ಸಿಂಹ, ಕಡಿ, ಕತ್ತರಿಸು; ಅಡಿಗಟ್ಟು: ಮಧ್ಯಪ್ರವೇಶ; ತಡೆ: ನಿಲ್ಲಿಸು; ಫಲ: ಪ್ರಯೋಜನ; ಬಿಸುಸುಯ್: ನಿಟ್ಟುಸಿರುಬಿಡು;

ಪದವಿಂಗಡಣೆ:
ಹೇಳಲ್+ಅಂಜುವೆನಾ +ಸುಶರ್ಮಕನ್
ಆಳು +ತಾಯಿಗೆ +ಮಕ್ಕಳಾಗದೆ
ಬೀಳಹೊಯ್ದು +ನಿಹಾರದಲಿ +ತಿರುಗಿದೆನು +ಹರಿಸಹಿತ
ಕೋಲಗುರುವಿನ+ ಮಗನಲೇ +ಹರಿ
ಧಾಳಿ +ಹರಿದ್+ಅಡಿಗಟ್ಟಿ +ತಡೆದನು
ಹೇಳಿ+ ಫಲವಿನ್ನೇನೆನುತ+ ಬಿಸುಸುಯ್ದ +ನಾ +ಪಾರ್ಥ

ಅಚ್ಚರಿ:
(೧) ಹರಿಸಹಿತ, ಹರಿಧಾಳಿ, ಹರಿದಡಿಗಟ್ಟಿ – ಪದಗಳ ಪ್ರಯೋಗ